‘ನಲವತ್ತರ ನಂತರದ ಸ್ಥಿತ್ಯಂತರದ ಬದುಕು ಮತ್ತು ನಿರ್ವಹಣೆ’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ಪತ್ನಿ ಸೂಜಿಯಲ್ಲಿ ದಾರವನ್ನು ಫೋಣಿಸಲು ಒದ್ದಾಡುತ್ತಿದ್ದಾಗ ನಸುನಕ್ಕ ಆಕೆಯ ಪತಿ ಆಯ್ತಲ್ಲ ನಿನಗೂ ಚಾಲಿಸು… ತಗೋಬೇಕಾಯ್ತು ಚಾಳೀಸು ಅಂತ ತಮಾಷೆ ಮಾಡಿದ. ಹೆಂಡತಿಯೇನು ಕಡಿಮೆಯೇ!? ಸೇರಿಗೆ ಸವಾಸೇರು ಎಂಬಂತೆ ನಿಮಗಿನ್ನೇನು ಕಮ್ಮಿ ಅನ್ಕೊಂಡ್ರ?? ನೆತ್ತಿ ಮೇಲಂತೂ ಕೂದಲಿಲ್ಲ… ಉಳಿದಿರೋ ತಲೆ ಕೂದಲಿಗೆ ಬಣ್ಣ ಹಚ್ಚೋಕೆ ಶುರುವಾಗಿ ವರ್ಷಗಳೇ ಕಳೆದು ಹೋಯಿತು, ಕನ್ನಡಕ ಇಲ್ದೆ ಪರದಾಡ್ತಿರಿ, ನೀವೇ ಇಟ್ಟ ವಸ್ತುಗಳು ಸಿಗದೇ ಇದ್ದಾಗ ಮನೆ ಮಂದಿ ಮೇಲೆ ಹರಿಹಾಯ್ತಿರಿ… ಆಗ್ತಾ ಬಂತು ನಿಮಗೂ ಹತ್ತತ್ರ ಐವತ್ತು…. ಸುಮ್ನೆ ಮಾತಾಡಿ ತಂದ್ಕೋಬೇಡಿ ಇಲ್ಲದ ಆಪತ್ತು ಎಂದು ಉತ್ತರಿಸಿದಳು.

ಮೇಲಿನ ಪತಿ ಪತ್ನಿಯರ ಸಂಭಾಷಣೆ ಮನಸ್ಸಿಗೆ ಮುದ ನೀಡಿದರೂ ಬದುಕಿನ ನಗ್ನ ಸತ್ಯವನ್ನು ತಿಳಿಸಿ ಹೇಳುತ್ತದೆ. ಬದುಕಿನ ಅರ್ಧ ಆಯಸ್ಸು ಮುಗಿದುಹೋಗುವ ಈ ಗಳಿಗೆಯಲ್ಲಿ ಬಾಲ್ಯ ಸಹಜ ತುಂಟಾಟ, ಯೌವನದ ಚೆಲ್ಲಾಟ ಮತ್ತು ಹೊಯ್ದಾಟಗಳು, ಬದುಕಿನ ಗುರಿಯತ್ತ ಓಟ, ನೌಕರಿಗಾಗಿನ ಅಲೆದಾಟ, ಸಂಗಾತಿಯ ಹುಡುಕುವಿಕೆಗಾಗಿ ಪರದಾಟ ಹೀಗೆ ಹತ್ತು ಹಲವು ಹಂತಗಳನ್ನು ದಾಟಿ ಬಂದು ಒಂದು ಪುಟ್ಟ ಮಧ್ಯಂತರ ವಿರಾಮಕ್ಕೆ ನಾಂದಿ ಹಾಡುತ್ತದೆ .

ಇದೀಗ ಅಪ್ಪ ಅಮ್ಮ ಗತಿಸಿ ಹೋಗಿದ್ದರೆ ಮನೆಯ ಆಗುಹೋಗುಗಳ ಜವಾಬ್ದಾರಿ ತಲೆಯ ಮೇಲೆ ಇರುತ್ತದಾದರೂ ಸ್ಥಿರವಾದ ಉದ್ಯೋಗ, ಕೌಟುಂಬಿಕ ಬದುಕು, ಮಕ್ಕಳ ಶಾಲೆ ಕಾಲೇಜುಗಳ ವಿದ್ಯಾಭ್ಯಾಸ, ಖರೀದಿಸಿದ ಇಲ್ಲವೇ ಕಟ್ಟಿದ ಮನೆಯ ಕೊನೆಯ ಕಂತುಗಳು, ನೆಮ್ಮದಿಯ ಬದುಕಿನ ಸಂಕೇತವಾಗಿ ತುಸುವೇ ಭಾರವಾದ ಶರೀರ, ತಲೆಯ ಮೇಲೆ ವಿರಳವಾಗುತ್ತಿರುವ ಕೂದಲುಗಳು ಕಣ್ಣಿಗೆ ಕನ್ನಡಕ,ನಿಧಾನವಾಗಿ ಅಡಿಯಿಟ್ಟು ಬರಲು ಸಣ್ಣಪುಟ್ಟ ದೈಹಿಕ ತೊಂದರೆಗಳು, ಬಿಪಿ, ಶುಗರ್ ಥೈರಾಯಿಡ್ ನಂತಹ ಕಾಯಿಲೆಗಳು ನಾವು 40ರ ಗಡಿಯನ್ನು ದಾಟುತ್ತಿದ್ದೇವೆ ಎಂದು ಸಣ್ಣದಾಗಿ ಎಚ್ಚರಿಸುತ್ತವೆ.

ಈ ಸಮಯದಲ್ಲಿ ನಾವು ಅರಿಯಬಹುದಾದ ಕೆಲವು ವಿಷಯಗಳು ಇಂತಿವೆ

ಬೇರೊಬ್ಬರು ನಮಗಿಂತ 10 ಪಟ್ಟು ಹೆಚ್ಚು ಕೆಲಸವನ್ನು ನಿರ್ವಹಿಸುತ್ತಾರೆ ಎಂದರೆ ಅವರಿಗೆ ಅವರ ಕೆಲಸದ ಮೇಲೆ ಹೆಚ್ಚು ಹತೋಟಿ ಇದೆ ಎಂದರ್ಥ… ಅವರು ಮಾಡಿಕೊಳ್ಳಲಿ ಬಿಡಿ.

ಯಶಸ್ಸಿನ ದಾರಿಯಲ್ಲಿ ವಿಚಲಿತರಾಗುವುದರಿಂದ ನಮ್ಮ ಮೆದುಳು ತನ್ನ ಶ್ರದ್ಧೆ ಮತ್ತು ಸಾಮರ್ಥ್ಯವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಬಹಳ ಹೆಚ್ಚು.

ನೀನು ತಲುಪಬೇಕಾದ ಗುರಿಯ ಕುರಿತು ಕಿಂಚಿತ್ತು ಮಾಹಿತಿ ಇಲ್ಲದವರ ಸಲಹೆಗಳನ್ನು ಪರಿಗಣಿಸುವ ಅವಶ್ಯಕತೆ ಇಲ್ಲ… ಅವರಿಗೆ ನಿನ್ನ ಕಾಳಜಿ ಇರುತ್ತದೆಯೇ ಹೊರತು ನಿನ್ನ ಗುರಿಯ ಯಶಸ್ಸಿನ ಕುರಿತಲ್ಲ.

ನಿನ್ನ ಜೀವನಕ್ಕೆ ಶೇಕಡ ನೂರರಷ್ಟು ನೀನೇ ಜವಾಬ್ದಾರ… ನಿನ್ನ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಬೇರೆಯವರತ್ತ ನೋಡಬೇಡ.

ಶಿಸ್ತು, ಶ್ರದ್ಧೆ ಮತ್ತು ಕಾರ್ಯಪರತೆಗಳು ನಿನ್ನ ಯಶಸ್ಸಿನ ಮೂಲ ಬೇರುಗಳಾಗಿರಬೇಕು. ನೂರಾರು ವ್ಯಕ್ತಿತ್ವ ವಿಕಸನದ ಪುಸ್ತಕಗಳು ನಿನ್ನ ನಂಬಿಕೆಯನ್ನು ಬಲಪಡಿಸುತ್ತವೆಯೇ ಹೊರತು ಕಾರ್ಯಪ್ರವೃತ್ತರಾಗದ ಹೊರತು ಬೇರೆ ದಾರಿಯಿಲ್ಲ ಎಂಬುದನ್ನು ಅರಿ.

ವಿಶೇಷ ವೃತ್ತಿಪರ ಕೋರ್ಸುಗಳನ್ನು ನೀನು ಕಲಿತಿದ್ದರೆ ಪರವಾಗಿಲ್ಲ ಆದರೆ ಅದಾವುದನ್ನು ನೀನು ಕಲಿತಿರದಿದ್ದರೆ ಉತ್ಪಾದನೆ ಮತ್ತು ಮಾರಾಟ ಕ್ಷೇತ್ರದಲ್ಲಿ ನಿನ್ನನ್ನು ನೀನು ತೊಡಗಿಸಿಕೊಳ್ಳಬಹುದು.

ನಿನ್ನ ಭವಿಷ್ಯದ ಕುರಿತು ನಿನ್ನ ಹೊರತು ನಿನ್ನನ್ನು ಬಿಟ್ಟು ಬೇರಾರೂ ಚಿಂತಿಸಲಾರದು.. ಆದ್ದರಿಂದ ಹಿಂಜರಿಯದೆ,ಬೆದರದೆ ಬೆಚ್ಚಗೆ ನಿನ್ನ ಅವಕಾಶಗಳನ್ನು ಸೃಷ್ಟಿಸಿಕೊಂಡು ಬದುಕಿನಲ್ಲಿ ಮುಂದುವರೆಯಬೇಕು

ನಿನಗಿಂತ ಹೆಚ್ಚು ಸಾಮರ್ಥ್ಯ ಉಳ್ಳವರೊಂದಿಗೆ ಕಾರ್ಯನಿರ್ವಹಿಸುವ ಅವಕಾಶಗಳನ್ನು ಕಳೆದುಕೊಳ್ಳಬೇಡ… ಆದರೆ ಅವರೊಂದಿಗೆ ಸ್ಪರ್ಧೆ ಬೇಡ.

ದುಶ್ಚಟಗಳು ನಿನ್ನ ಜೀವನದಲ್ಲಿ ಯಾವುದೇ ಲಾಭವನ್ನು ತಂದುಕೊಡುವುದಿಲ್ಲ ಬದಲಾಗಿ ನಿನ್ನ ಯೋಚನಾ ಶಕ್ತಿಯನ್ನು ಕುಂಠಿತಗೊಳಿಸಿ ನಿನ್ನ ಗಮ್ಯದೆಡೆಗಿನ ಆಸಕ್ತಿಯನ್ನು ಕ್ಷೀಣಿಸುವಂತೆ ಮಾಡುತ್ತವೆ.

ಅತಿಯಾದ ಸುರಕ್ಷತಾಭಾವವು ಕೂಡ ಒಂದು ರೀತಿಯಲ್ಲಿ ಕಾಲಿಗೆ ಕಟ್ಟಿದ ಸಂಕೋಲೆಯಂತೆ. ದುಶ್ಚಟ,ಖಿನ್ನತೆಗೆಳಸುವ ಸುಲಭದ ಮಾರ್ಗವಾಗಿದೆ.

ಧೂಮ್ರಪಾನ ಮತ್ತು ಮಧ್ಯಪಾನದಂತಹ ಚಟಗಳು ನಿಮ್ಮ ಯೋಚನಾ ಶಕ್ತಿಯನ್ನು ಕುಂಠಿಸುತ್ತದೆ ಮತ್ತು ನಿಮ್ಮ ಗುರಿಯ ಕಡೆಗಿನ ನಿಮ್ಮ ಲಕ್ಷ್ಯವನ್ನು ವಿಚಲಿತಗೊಳಿಸುತ್ತದೆ.

ಅತಿಯಾದ ಸುರಕ್ಷತಾ ಭಾವವು ಒಂದು ರೀತಿಯ ವ್ಯಸನದಂತೆ… ಇದು ಹೆಚ್ಚಾದರೆ ಖಿನ್ನತೆಗೆಳಸುತ್ತದೆ.

ನಿಮ್ಮ ಖಾಸಗಿತನವನ್ನು ಗೌರವಿಸಿ ಜನರಿಗೆ ನಿಮ್ಮ ವೈಯುಕ್ತಿಕ ವಿಚಾರವೆಲ್ಲವನ್ನು ಹೇಳಬೇಡಿ.

ನಿಮ್ಮಆಯ್ಕೆಯ ಮಟ್ಟ ಅತ್ಯುನ್ನತವಾಗಿರಲಿ.. ಎಂದೂ ನಿಮ್ಮ ಯೋಗ್ಯತೆಗೆ ಕಡಿಮೆ ಇರುವುದು ಸುಲಭ ಲಭ್ಯವಾಗುತ್ತಿದೆ ಎಂಬ ಕಾರಣಕ್ಕೆ ಆಯ್ದುಕೊಳ್ಳದಿರಿ.

ಸಾಧ್ಯವಾದಷ್ಟು ಕುಟುಂಬಕ್ಕಾಗಿ ಸಮಯವನ್ನು ಮೀಸಲಿಡಿ. ನಿಮ್ಮ ಬದುಕಿನ ಅತ್ಯುತ್ತಮ ಹೂಡಿಕೆ ಎಂದರೆ ಅದು ನಿಮ್ಮ ಕುಟುಂಬ ಎಂಬ ಅರಿವು ನಿಮ್ಮಲ್ಲಿರಲಿ.ನೀವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ನಿಮಗಿಂತ ಮೇಲಿನ ಹುದ್ದೆಯಲ್ಲಿರುವವರನ್ನು ಸಂಪ್ರೀತಗೊಳಿಸುವುದಕ್ಕಿಂತ ಹೆಚ್ಚಿನ ಜವಾಬ್ದಾರಿ ನಿಮ್ಮ ಕುಟುಂಬದವರನ್ನು ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುವುದರಲ್ಲಿದೆ ಎಂಬುದು ಸದಾ ನೆನಪಿನಲ್ಲಿರಲಿ.

40 ರ ನಂತರ ಇಂತಹ ಹತ್ತು ಹಲವಾರು ವಿಷಯಗಳನ್ನು ಮನದಟ್ಟು ಮಾಡಿಕೊಂಡು ಬದುಕನ್ನು ನವೊಲ್ಲಾಸದಿಂದ ಸ್ವೀಕರಿಸುವುದು ನಮ್ಮ ಕೈಯಲ್ಲಿದೆ.ಬದುಕು ಮತ್ತು ಆಯ್ಕೆ ಎರಡೂ ನಮ್ಮ ಕೈಯಲ್ಲಿವೆ…. ಚೂಸ್ ವೈಸ್ ಲಿ


Leave a Reply

Back To Top