ಕೊನಾರ್ಕ ಸೂರ್ಯ ದೇವಾಲಯ ಎನ್ನುವ ಅದ್ಬುತ-ಜಿ. ಹರೀಶ್ ಬೇದ್ರೆ

ಒರಿಸ್ಸಾ ರಾಜ್ಯದ, ಪುರಿ ಜಿಲ್ಲೆಯ ಕೊನಾರ್ಕ ಎಂಬ ಪುಟ್ಟ ಗ್ರಾಮದಲ್ಲಿ ಇರುವುದೆ ಜಗದ್ವಿಖ್ಯಾತ ಸೂರ್ಯ ದೇವಸ್ಥಾನ.
ಇಪ್ಪತ್ತಾರು ಎಕ್ಕರೆ ಜಾಗದಲ್ಲಿ ತಲೆ ಎತ್ತಿ ನಿಂತಿರುವ ಈ ದೇವಾಲಯವನ್ನು ಗಂಗರ ರಾಜ ಮೊದಲನೇ ನರಸಿಂಹದೇವ ಕ್ರಿ.ಶ. 1250ನೇ ಇಸವಿಯಲ್ಲಿ ಕಟ್ಟಿಸಿದ ಉಲ್ಲೇಖವಿದೆ. ಇದು ಇತಿಹಾಸವಾದರೆ, ಶ್ರೀಕೃಷ್ಣನ ಮಗ ಸಾಂಬನು ಶಾಪಗ್ರಸ್ತನಾಗಿ ಕುಷ್ಠರೋಗದಿಂದ ಬಳಲುವಂತಾಗಿ, ಅದರಿಂದ ಹೊರಬರಲು ತನ್ನ ಇಷ್ಟ ದೈವ ಸೂರ್ಯನನ್ನು ಹನ್ನೆರಡು ವರ್ಷ ಕಾಲ ತುಂಬು ಭಕ್ತಿಯಿಂದ ಪೂಜಿಸಿ, ಅವನಿಂದ ವರ ಪಡೆದು ಶಾಪ ವಿಮೋಚನೆ ಪಡೆಯುತ್ತಾನೆ. ಹಾಗಾಗಿ ಸಾಂಬನು ಇಲ್ಲಿ ಸೂರ್ಯ ದೇವಸ್ಥಾನ ಕಟ್ಟಿಸಿದ ಎನ್ನುವ ಸ್ಥಳ ಪುರಾಣವು ಇದೆ.

ಈ ದೇವಾಲಯವನ್ನು ಕೆಂಪು ಮತ್ತು ಕಪ್ಪು ಶಿಲೆಗಳಿಂದ ನಿರ್ಮಿಸಲಾಗಿದೆ.  ಕಟ್ಟಡದ ಕೆಳಭಾಗವನ್ನು ಕೆಂಪುಕಲ್ಲಿನಲ್ಲೂ ಗೋಪುರಗಳನ್ನು ಕಪ್ಪು ಶಿಲೆಗಳಿಂದ ಕಟ್ಟಿದ್ದಾರೆ. ಗೋಪುರಗಳು ಕಪ್ಪು ಶಿಲೆಗಳಿಂದ ನಿರ್ಮಿಸಿರುವ ಕಾರಣ ಈ ದೇವಾಲಯವನ್ನು ಕಪ್ಪು ಪಗೋಡ ಎಂದೂ ಕರೆಯುತ್ತಾರೆ. ದೇವಾಲಯಕ್ಕೆ ಮೂರು ಮುಖಮಂಟಪಗಳಿದ್ದು, ನಾಲ್ಕು ಪ್ರವೇಶ ದ್ವಾರಗಳಿವೆ.



ನಿಜ ಹೇಳಬೇಕೆಂದರೆ ಕೊನಾರ್ಕ ಸೂರ್ಯ ದೇವಾಲಯವು ಇಪ್ಪತ್ತನಾಲ್ಕು ಚಕ್ರಗಳು, ಏಳು ಅಶ್ವಗಳನ್ನು ಹೂಡಿದ ಕಲ್ಲಿನ ರಥದ ರೀತಿಯಲ್ಲಿದೆ.  ಕಟ್ಟಡದ ಒಂದೊಂದು ಬದಿಯಲ್ಲಿರುವ ಹನ್ನೆರಡು ಚಕ್ರಗಳು ವರ್ಷದ ಹನ್ನೆರಡು ಮಾಸಗಳ ಸಂಕೇತವಾದರೆ, ಒಟ್ಟಿರುವ ಇಪ್ಪತ್ನಾಲ್ಕು ಚಕ್ರಗಳು ದಿನದ ಇಪ್ಪತ್ನಾಲ್ಕು ಗಂಟೆಗಳ ಸಂಕೇತ. ಹಾಗೆಯೇ ಏಳು ಕುದುರೆಗಳು ವಾರದ ಏಳು ದಿನಗಳ, ಕಾಮನಬಿಲ್ಲಿನ ಏಳು ಬಣ್ಣಗಳ ಪ್ರತಿಕವಾಗಿದೆ. ಇಲ್ಲಿರುವ ಚಕ್ರಗಳ ಮೇಲೆ ಬೀಳುವ ಬಿಸಿಲಿನ ಕಿರಣವನ್ನು ನೋಡಿ ಈಗ ಇಷ್ಟೇ ಸಮಯ ಎಂದು ನಿಖರವಾಗಿ ಹೇಳಬಹುದು. ಅಧಿಕೃತವಾಗಿ ಗಡಿಯಾರವನ್ನು  ಕಂಡುಹಿಡಿಯದಿದ್ದ ಕಾಲದಲ್ಲಿ ನಮ್ಮವರು ಮಾಡಿದ ಈ ಕೆಲಸ ಹೆಮ್ಮೆಯನ್ನು ತರುತ್ತದೆ. ಹಾಗೆಯೇ ದೇವಸ್ಥಾನದ ಗೋಪುರದ ಮೇಲೆ ಮೂರು ಬೇರೆ ಬೇರೆ ಸೂರ್ಯ ದೇವನ ವಿಗ್ರಹಗಳಿದ್ದು ಅದು ನಮ್ಮ ಬಾಲ್ಯ, ಮಧ್ಯ ವಯಸ್ಸು ಮತ್ತು ಮುಪ್ಪನ್ನು ಪ್ರತಿಬಿಂಬಿಸುತ್ತವೆ. ಮೊದಲನೆಯದು ಬಾಲ ಸೂರ್ಯ, ಎರಡನೇಯದು ಮಧ್ಯವಯಸ್ಸಿನ ಸೂರ್ಯ ಹಾಗೂ ಮೂರನೆಯದು ವಯಸ್ಸಾದ ಸೂರ್ಯನ ಮೂರ್ತಿ. ಮೊದಲನೇ ಮೂರ್ತಿಯ ಮುಖದಲ್ಲಿ ಯಾವುದೇ ಚಿಂತೆ, ಜವಾಬ್ದಾರಿಗಳು ಇಲ್ಲದ ಮಗುವಿನ ಮುಗ್ಧ ನಗುವಿದ್ದರೆ ಎರಡನೇ ಮೂರ್ತಿಯ ಮುಖದಲ್ಲಿ ಜವಾಬ್ದಾರಿಯನ್ನು ಹೊತ್ತ ಗಾಂಭೀರ್ಯವಿದೆ. ಹಾಗೆಯೇ ಮೂರನೇ ಮೂರ್ತಿಯ ಮುಖದಲ್ಲಿ ಎಲ್ಲಾ ಜವಾಬ್ದಾರಿಗಳನ್ನು ನೇರವೇರಿಸಿದ ನೆಮ್ಮದಿಯನ್ನು ಕಾಣಬಹುದು.



ದೇವಾಲಯದ ಗೋಡೆಗಳ ಹೊರಭಾಗದ ತಳದಲ್ಲಿ ವನ್ಯಜೀವಿಗಳಿದ್ದರೆ ಅದರ ಮೇಲಿನ ಸಾಲಿನಲ್ಲಿ ಒಡಿಸ್ಸಿ ನೃತ್ಯ ಪ್ರಕಾದರ ಭಾವ ಭಂಗಿಗಳು ಇದೆ. ಇದರ ಮೇಲಿನ ಸಾಲಿನಲ್ಲಿ ಮಿಥುನ ಶಿಲ್ಪಗಳಿದ್ದು ನಂತರದ ಸಾಲುಗಳಲ್ಲಿ ಸಾಧು ಸಂತರು ಎಲ್ಲವನ್ನೂ ತ್ಯಜಿಸಿ ಮುಕ್ತಿಯೆಡೆಗೆ ಸಾಗುವ ಶಿಲ್ಪಕಲೆಯನ್ನು ನೋಡಬಹುದು.  ಗರ್ಭಗುಡಿಯ ಮೇಲ್ಭಾಗದ ಗೋಪುರವನ್ನು ಕಪ್ಪು ಶಿಲೆಯಲ್ಲಿ ಕಟ್ಟಲಾಗಿದೆ. ಇದರ ಜೊತೆಗೆ ಅಯಸ್ಕಾಂತವನ್ನು ಬಳಸಿ ದೇವರ ಮೂರ್ತಿಯು ನೆಲದಿಂದ ಮೇಲೆ ಛಾವಣಿಯ ಕೆಳಗೆ ನಡುವಿನಲ್ಲಿ ಗಾಳಿಯಲ್ಲಿ ತೇಲುವಂತೆ ಮಾಡಿದ್ದರಂತೆ.  ಅಷ್ಟೇ ಅಲ್ಲದೆ ಉದಯಿಸುವ ಸೂರ್ಯನ ಪ್ರಥಮ ಕಿರಣ ಸ್ವಾಮಿಯ ಪಾದಗಳ ಮೇಲೆ ಬೀಳುವಂತೆ ಮಾಡಿದ್ದರಂತೆ. ಈಗ ಇದನ್ನೆಲ್ಲಾ ನೋಡಲು ಅಲಭ್ಯ, ಏಕೆಂದರೆ ಜಹಂಗಿರನ ರಾಯಭಾರಿ ಸಾಕಷ್ಟು ಧ್ವಂಸ ಮಾಡಿದ್ದರೆ, ದೇವಾಲಯವು ಸಮುದ್ರದ ತಟದಲ್ಲಿ ಇರುವ ಕಾರಣ ಪ್ರಕೃತಿಕವಾಗಿಯೂ ಕುಸಿದಿದೆ. ದೇವಾಲಯದ ಎಪ್ಪತ್ತೈದು ಭಾಗ ಹಾಳಾಗಿದ್ದು ನಮಗೆ ನೋಡಲು ಸಿಗುವುದು ಕೇವಲ ಇಪ್ಪತ್ತೈದು ಭಾಗ ಮಾತ್ರ. ಕಳಿಂಗ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡು ಉಳಿದಿರುವ  ಇಪ್ಪತ್ತೈದು ಭಾಗವೇ ನಮ್ಮ ಮನಸೂರೆಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ.



ಕೆಲಸದ ಒತ್ತಡ, ಬದುಕಿನ ಜಂಜಾಟಗಳು ಇದ್ದದ್ದೆ, ಅವುಗಳಿಗೆ ಅಲ್ಪವಿರಾಮ ಕೊಟ್ಟು ಇಂತಹ ಸ್ಥಳಗಳಿಗೆ ಹೋಗಿ ಬಂದರೆ ಮನಸ್ಸಿಗೆ ಸಂತೋಷದ ಜೊತೆಗೆ ಬದುಕಿನಲ್ಲಿ ಹೊಸ ಹುರುಪು ಮೂಡುವುದು ಖಚಿತ.

————————–

One thought on “ಕೊನಾರ್ಕ ಸೂರ್ಯ ದೇವಾಲಯ ಎನ್ನುವ ಅದ್ಬುತ-ಜಿ. ಹರೀಶ್ ಬೇದ್ರೆ

  1. Super message and fantastic temple .thank you for information sharing Harish ji. We will also try to visit .

Leave a Reply

Back To Top