ವಿಶೇಷ ಲೇಖನ
ಸುರೇಶ ತಂಗೋಡ
ಕನ್ನಡದ ಚೆಂಬೆಳಕಿನ
ಕವಿ ಚೆನ್ನವೀರ ಕಣವಿ….
‘ಏನಾದರೂ ಇರಲಿ ಹಾಡು ನಿಲ್ಲಿಸಬೇಡ
ದೀಪ ಪಟ್ಟನೆ ಆರಿ ಹೋಗಬಹುದು
ನನ್ನೆದೆಯ ಕತ್ತಲೆಯ ಕಣ್ಣುಕಪ್ಪಡಿ ಮತ್ತೆ
ಮೂಲೆ ಮೂಲೆಗೆ ಹೋಗಿ ಹಾಯಬಹುದು…’
ಕನ್ನಡ ಸಾಹಿತ್ಯದ “ಸಮನ್ವಯ ಕವಿ”,” ಚೆಂಬೆಳಕಿನ ಕವಿ” ಎಂದೇ ಖ್ಯಾತರಾದ ನಾಡೋಜ ಚೆನ್ನವೀರ ಕಣವಿಯವರು,ನವೋದಯ ಸಾಹಿತ್ಯ ಕಾಲದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ಹೊಂಬೆಳಕನ್ನು ಹರಿಸಿದ ಕವಿ.ಚೆನ್ನವೀರ ಕಣವಿಯವರು ಬದುಕಿದ್ದರೆ ಅವರು ಜನಿಸಿ ಇಂದಿಗೆ (ಜೂನ್ ೨೮ )ತೊಂಭತ್ತಾರು ವರ್ಷಗಳು ತುಂಬುತ್ತಿದ್ದವು.ಅವರ ಗಂಭೀರವಾದ ಸಾಹಿತ್ಯದ ಜೊತೆಗೆ ಕಾಡುವ ಕವನಗಳ ಮೂಲಕ ಜನಕ್ಕೆ ಹತ್ತಿರವಾದವರು.ಈಗೀನ ಗದಗ ಜಿಲ್ಲೆಯ ಹೊಂಬಳದಲ್ಲಿ ಜೂನ್ ೨೮,೧೯೨೮ ರಲ್ಲಿ ತಂದೆ ಸಕ್ಕರಪ್ಪ ಅತ್ತು ತಾಯಿ ಪಾರ್ವತವ್ವ ದಂಪತಿಯ ಮಗನಾಗಿ ಜನಿಸಿದ ಚೆನ್ನವೀರ ಕಣವಿಯವರು ಬಾಲ್ಯದ ವಿಧ್ಯಾಭ್ಯಾಸವನ್ನು ಅಲ್ಲೆ ಮಾಡಿದರು.ಅವರ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು.ಕಣವಿಯವರ ಮಾಧ್ಯಮಿಕ ಮತ್ತು ಕಾಲೇಜ್ ಶಿಕ್ಷಣವು ಧಾರವಾಡದಲ್ಲಿಯೇ ಆಯಿತು.ಈ ಕಾಲದಲ್ಲಿ ನವೋದಯದ ನಡುಹಗಲಿನಲ್ಲಿ ಪು.ತಿ.ನ_ಬೇಂದ್ರೆ,ಕುವೆಂಪು,ಮಧುರಚೆನ್ನ ಇವರ ಸಾಹಿತ್ಯದಿಂದ ಪ್ರಭಾವಿತರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದರು.ಅದರ ಫಲವಾಗಿ ೧೯೪೯ರಲ್ಲಿ ಅವರ ಮೊದಲ ಕವನ ಸಂಕಲನ “ಕಾವ್ಯಾಕ್ಷಿ”ಹೊರತು.ಅಧ್ಯಯನ ಮತ್ತು ಅನುಭವದ ಮೂಸೆಯಲ್ಲಿ ಸಮ್ಮಿಳಿತವಾಗಿ ಪ್ರತಿಮಾನಿಷ್ಠೆ ಕವಿತೆಗಳು ಕಣವಿಯವರಿಂದ ರಚಿತವಾಗ ತೊಡಗಿದವು.ಅದಕ್ಕೆ ತಾಜಾ ಉದಾಹರಣೆ ಎಂಬಂತೆ “ಆಕಾಶ ಬುಟ್ಟಿ”ಪ್ರಕಟಗೊಂಡದ್ದು.
ನವೋದಯ ಕಾಲಘಟ್ಟ್ದಲ್ಲಿ ಅತೀ ಹೆಚ್ಚು ಜನರಿಗೆ ತಲುಪುವ ನಿಟ್ಟಿನಲ್ಲಿ ಸಾಹಿತ್ಯ ಕೃಷಿ ಕೈಗೊಂಡವರಲ್ಲಿ ಕಣವಿಯವರು ಅಗ್ರ ಗಣ್ಯರು.ಅವರ ಸಾಹಿತ್ಯ ರಚನೆಯಲ್ಲಿ ಸುನೀತಗಳು ಅವರಿಷ್ಟದ ಪ್ರಕಾರವೆಂದರೆ “ಸುನಿತಗಳು(ಸಾನೆಟ್)ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.ಅಂತಯೇ ಅವರನ್ನು ಕನ್ನಡ ಸಾಹಿತ್ಯದ ಸುನೀತಗಳ ಸಾಮ್ರಾಟ ಎಂದು ಅನ್ವರ್ಥಿಸಲಾಗುತ್ತದೆ. ವಿಶೇಷವಾಗಿ ರೋಮ್ಯಾಂಟಿಕ್ ಮನೋಧರ್ಮದ ಚೆನ್ನವೀರಕಣವಿ ಅವರು ಈ ಹೊಸ ಕಾವ್ಯ ಸಂದರ್ಭದೊಂದಿಗೆ ಬೇರೊಂದು ರೀತಿಯಲ್ಲಿ ಸಂಘರ್ಷಕ್ಕೆ ತೊಡಗಿದ್ದೇ ಅವರ ಕಾವ್ಯ ಜೀವನದ ಮುಂದಿನ ಅಧ್ಯಾಯ. ಅಡಿಗರ ನವ್ಯ ಮಾರ್ಗದೊಂದಿಗೆ ಕಣವಿ ಅವರ ಸಂಬಂಧ ಅನ್ಯೋನ್ಯವಾದುದಾಗಿರಲಿಲ್ಲ.ಹೀಗೆ ನವೋದಯ ಕಾಲದ ಹೊಡತಕ್ಕೆ ಸಿಲುಕಿ ಅದರಾಚೆಗೆ ಕಾವ್ಯ ರಚಿಸಿದ ಕಣವಿಯವರು ೧೯೬೦ರಲ್ಲಿ ಪ್ರಕಟವಾದ “ಮಣ್ಣಿನ ಮೆರವಣಿಗೆ “ಹೊತ್ತಿಗೆ ಕಣವಿಯವರ ಕಾವ್ಯ ಮತ್ತು ವ್ಯಕ್ತಿತ್ವ ಮಾಗಿತ್ತು.
ಕಣವಿ ಅವರ ಗೀತೆಗಳಲ್ಲಿ ಸಹಜ ಕವಿಯೊಬ್ಬ ಬರೆದಾಗ ಮಾತ್ರ ಕಾಣಿಸಿಕೊಳ್ಳಬಲ್ಲ ಅನೇಕ ಕಾವ್ಯಾತ್ಮಕ ಹೊಳಹುಗಳು ವಿಶೇಷವಾಗಿ ಕಂಡು ಬರುತ್ತವೆ.
1. ವಿಶ್ವಭಾರತಿಗೆ ಕನ್ನಡದಾರತಿ,
2. ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ,
3. ಹೂವು ಹೊರಳುವುವು ಸೂರ್ಯನ ಕಡೆಗೆ
4. , ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ
ಹೀಗೆ ಕವಿಯೊಬ್ಬ ಕಾಣುವ ಎಲ್ಲ ಸಾಧ್ಯತೆಗಳನ್ನು ಕಣವಿಯವತು ತಮ್ಮ ಕವಿತೆಯ ಮೂಲಕ ಜೀವಿಸಿ ಆದರ್ಶರಾಗಿದ್ದಾರೆ.ಅವರ ಸುನಿತಗಳು ೨೦೦೨ರಲ್ಲಿ ಪ್ರಕಟಗೊಂಡ “ಸುನೀತ ಸಂಪದ “ಕನ್ನಡದ ಸುನಿತಗಳಿಗೆ ನೀಡಿದ ಕೈಪಿಡಿ ಎಂದರೆ ಅತಿಶಯೋಕ್ತಿಯೇನಲ್ಲ.
ಹೀಗೆ ಸಂತೃಪ್ತಿ ಜೀವನ ನಡೆಸಿದ ಸಮನ್ವಯ ಕವಿ ೨೦೨೨ರಲ್ಲಿ ನಮ್ಮನ್ನಗಲಿದ್ದು ಕನ್ನಡ ಸಾಹಿತ್ಯಕ್ಕೆ ತುಂಬಲಾರದ ನಷ್ಟ.ಅವರೇ ಹೇಳಿದಂತೆ “ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ”ಎಂದು ಅವರ ಸಾಹಿತ್ಯವನ್ನು ಅಧ್ಯಯನಿಸುವ ಮತ್ತು ಅವರ ಚಿಂತನಗಳ ಬಗ್ಗೆ ಯೋಚಿಸುವ ಕಾರ್ಯವನ್ನು ಮಾಡೋಣ.ಆ ಮೂಲಕ ಅವರ ಜನ್ಮ ದಿನಕ್ಕೆ ಶುಭ ಹಾರೈಸೋಣ.
ಸುರೇಶ ತಂಗೋಡ