ಹನಮಂತ ಸೋಮನಕಟ್ಟಿ ಕವಿತೆ-ಖಾಕಿ ಖದರ್

ಕಂಡಕ್ಟರ್ ಕಾಕಾ ತಂದ
ಹದಿನಾಲ್ಕಿಂಚಿನ ಡಬ್ಬಿಯಲ್ಲಿ
ಏನೋ ಒಂದು ಕುತೂಹಲ

ಐದು ರೂಪಾಯಿ
ರಿನಲ್ಡ್ಸ ಪೆನ್ನಿನ್ಯಾಗ ಬಂಧೈತಿ
ಅನ್ನೋ ಖುಷಿ ಊರಿಗೆ
ಸಕ್ಕರಿ ಅಷ್ಟು ಸಿಹಿ ಆಗಿತ್ತು

ಎಲ್ಲರೂ ಪೆನ್ನು
ಹುಡಕಿದ್ದೆ ಹುಡಕಿದ್ದು

ಎಲ್ಲರ ಮನೆಯಲ್ಲಿ
ಕರೆಂಟ ಪಿಟ್ಯಾಪ್ ಇಲ್ಲಂದ್ರು
ಅಲ್ಲೊಂದು ಇಲ್ಲೊಂದು
ಸೀಟ್ ಲೈಟ್ ಇದ್ದದ್ದು ಸತ್ಯ

ಮಸೂತಿ ಮೈಕ್
ಮಟದನ್ ಟೇಪ್ ರಿಕಾರ್ಡ್ ಹತ್ತಿತೆಂದ್ರ
ಕರೆಂಟ್ ಪಕ್ಕಾ

ಓಡಿದ್ದೆ ಓಡಿದ್ದು
ಎಲ್ಲರೂ ಹಟ್ಟಿ ಬಿಟ್ಟ ಕುರಿಯಂತೆ
ಅಮ್ಮ ಮನೆಬಾಗಿಲ ಮುಂದೆ ಪೊಲೀಸ್
ಎಲ್ಲರಿಗಿಲ್ಲ ಪ್ರವೇಶ
ಬೇಕಾದವರಿಗೆ,ಅದು ನನ್ನ ರೆಕ್ಮೆಂಡೇಶನ್

ಕರೆಂಟು ಬಂದರೆ ಸಾಕು
ಬಟನ್ ಒತ್ತಿ
ಕಪ್ಪು ಬಿಳುಪಿನ
ಡಬ್ಬಿಯಲಿ ಬಿಳಿ ಹುಳುಗಳ ಹಾರಾಟ
ಅಯ್ಯೋ
ಮತ್ತೊಂದು ದಾರಿ
ಏಳು ಬಣ್ಣದ ಕಾಮನ ಬಿಲ್ಲು
ಇಲ್ಲಿ ಕರೆಂಟಿದ್ದರೆ
ಇನ್ನೆಲ್ಲಿಯೂ ಕರೆಂಟು ಹೋಗಿದ್ದು
ಟಂಯ ಟುಂಯ ಎನ್ನುವ ಧ್ವನಿ

ಪರದೆ ಮೇಲೆ ಪೂರ್ತಿ
ಚಿತ್ರಗಳು ಕಾಣುತ್ತಿದ್ದರು ಒಂದೇ ಬಣ್ಣ
ಧ್ವನಿ ಬದಲು
ಒಮ್ಮೊಮ್ಮೆ
ಗಾಳಿಯಲ್ಲಿ ತೇಲುವ
ಪೆಟ್ಟಿಗೆಯಲ್ಲಿ ನಿಂತವರು,
ನಡೆವವರು, ಓಡುವವರು ಕುಣಿಯುವವರು,
ಕರಾಟೆ ಕುಸ್ತಿ ಆಡಿದರು
ಒಬ್ಬರ ದೇಹಕ್ಕೆ
ಇನ್ನೊಬ್ಬರ ಕೈಕಾಲು ಸೇರಿದಂತೆ
ಮುಖವು,ಹೊಟ್ಟೆಯೂ ಅಷ್ಟೇ
ಅಂಕು ಡೊಂಕಾಗಿ

ಮನೆಯಿಂದ ಎತ್ತರದಲ್ಲಿ
ಕಟ್ಟಿದ ಎಂಟೆನ್
ಅಲುಗಾಡಿಸಿ ಬಂತಾ ಬಂತಾ
ಎಂದು
ಆ ಕಡೆ ಈ ಕಡೆ ತಿರುಗಿಸಿ
ನೋಡಿದ ಕಾಕಾ
ಒಬ್ಬ ತಂತ್ರಜ್ಞಾನಿಯಂತೆ
ಮಾತು ಬೇರೆ, ಎಲ್ಲರ ಮುಂದೆ ನೋಡಬೇಕಿತ್ತು

ನಡುಗುವವರ ನೆಟ್ಟಗೆ ಕಾಣುವಂತೆ
ಮಾಡಿದ್ದು
ಮನೆಯವರಿಗೆ ಹರಸಾಹಸ
ಅಲ್ಲದಿದ್ದರೂ ಜಂಬ ಅನ್ನುವವರು
ಕುಳಿತ ಗೆಳೆಯರು

ರೆಪ್ಪೆ ಮಿಟುಕಿಸದೆ ನೋಡುವಾಗ
ಕರೆಂಟ್ ಹೋದರೆ,
ಅಡವಿಟೇಜ್
ವಾಸಿಂಗ್ ಪಾವಡ್ರ್ ನಿರ್ಮ್, ಉಜಾಲ್,
ವಾರ್ತೆ ಬಂದರೆ
ಎಲ್ಲರ
ಬಾಯಲಿ ಛ ಛ ಎನ್ನುವ ಧ್ವನಿ
ಮನೆ ತುಂಬಿ
ಬಾಗಿಲು ಕುಡಕಿಯ ಮೂಲಕ
ಹೊರ ಓಣಿಗೆ ಬೀಳುತ್ತಿತ್ತು

ಒಂದಕ್ಕೆ ಎರಡಕ್
ಎದ್ದೋಗಲು
ನೀರ ಕುಡಿಯಲು
ವಿಶ್ರಾಂತಿ

ಮತ್ತೆ ಬಂದರೆ ಕುಳಿತ ಜಾಗಕ್ಕೆ
ಮಹಾಯುದ್ಧ,ಮಲ್ಲಯುದ್ಧ,ಮಾತಿನ ಯುದ್ದ
ಶಾಲೆಯಲ್ಲಿ ಸಿಗು ಎನ್ನುವ ಆವಾಜ್

ಕಾಕಾ
ಕುಳಿತ ಆರಾಮ ಕುರ್ಚಿ
ಅವನ ಕಣ್ಣುಗಳು ಭರ್ಚಿ
ನಮ್ಮೆಲ್ಲರಿಗೂ
ವೈರಿ ರಾಷ್ಟ್ರಕ್ಕಿಂತ ಹೆದರಿಕಿ
ಚಲನಚಿತ್ರ,ಮಹಾಭಾರತ,ಶನಿವಾರದ ಹಿಂದಿ ಪ್ರಚಾರ
ಜೈ ಹನುಮಾನ್,ಐತ್ವಾರದ ಕನ್ನಡದ ಪಿಚ್ಚರ್
ಮುಗಿಯುವವರೆಗೆ

ಕಾಕಾ ತಂದ
ಡಬ್ಬಿ ಇತ್ತಿತ್ತಲೂ ಊರ ತುಂಬೆಲ್ಲ
ಮನೆಗೊಂದು
ಎಂಟನೇ ಅದ್ಭುತ ಎಂಟೆನಾ ಇಲ್ಲ
ಕೇಬಲ್ ಒಳಗಿಂದ
ಕಲರ್ ಕಲರ್ ಆಗಿ
ಹೋಗಿ
ಕೆಲಸ ಬಗಸಿ,ಓದು ಹಾಳು ಮಾಡಿದ್ದು
ಮೂರ್ಖರ ಪೆಟ್ಟಿಗೆ
ಟಿವಿ ಅಲ್ಲ ಅಲ್ಲ ಜಾದು ಪೆಟ್ಟಿಗೆ,ಡಬ್ಬಿ
ಇನ್ನೂ ಏನೇನೋ


Leave a Reply

Back To Top