ಕಾವ್ಯ ಸಂಗಾತಿ
ಡಾ ಅನ್ನಪೂರ್ಣ ಹಿರೇಮಠ
‘ಏನವ್ವಾ ಹಡೆದವ್ವ’
[ ಹಡೆದು ಬಿಟ್ಟೆ ಏನಿತು ಜೀವಿಗಳ
ಕೊಡವಿಕೊಳ್ಳಲಾಗದಷ್ಟು
ಸಲುಹಲಾಗದಷ್ಟು ನಿರ್ಗತಿಗಳು ನೀನಾಗಿದ್ದರೆ
ಹಡೆದು ಚೆಲ್ಲೊ ಹುಚ್ಚು ನಿನಗೇಕೇ
ಅದೇ ರಕ್ತ ಅದೇ ಮಾಂಸ ಮಜ್ಜೆಯಲ್ಲಿ
ಬಿದ್ದು ಒದ್ದಾಡಿ ಹೊರಬಂದ ಕೂಸುಗಳಗೆ
ಕುಂತಿ ಗಾಂಧಾರಿಯಂತೇಕೇ ತೋರುವೆ ?
ಯಾವುದೋ ಕ್ಷಣಿಕ ಸುಖದ ಆಸೆಗೆ
ಕರ್ಮ ಧರ್ಮ ತಿಳಿಯದೆ
ಸಾಕಿ ಸಲಹುವ ಶಕ್ತಿಯನರೆಯದೆ
ಶಕ್ತ ಅಶಕ್ತ ಅಬಲರನ್ನು ಹರವಿ
ಮೋಸ ಹಗೆ ವಂಚನೆ ಪ್ರೀತಿ ಜೊತೆ ಇಟ್ಟು
ಬೇಧ ಭಾವದ ವಿಷಬಿಜವನೂ ಬಿತ್ತಿ
ತುತ್ತು ಮುತ್ತು ನೀಡಲಾಗದ ಬಡವಿ
ಎತ್ತಿ ಆಡಿಸಲಾಗದ ಹೇಡಿ ಆದೊಡೆ
ಬೇಕಿತ್ತೆ ಇದೆಲ್ಲಾ ನಿನಗೆ?
ಜೀವ ಜಗತ್ತಿನ ಮಾತೆಯಾಗಿ
ದೈವ ದಾನವರನ್ನು ಹುಡುಕಿ
ಭೂತ ಪ್ರೇತಗಳ ಜೊತೆಗಿಟ್ಟು
ಕಿತ್ತು ತಿನ್ನುವ ಬಡತನದ ಬೇಗೆ
ಕತ್ತರಿಸುವ ರಾಕ್ಷಸರು ಕೂಟ ಕೀಚಕರ ಹಾವಳಿ
ಇದೂ ನಿನ್ನದೇ ಬಳುವಳಿ
ಹುಟ್ಟುತಲೇ ಚಳುವಳಿ ಕ್ರಾಂತಿ ಕಹಳೆ
ಹೊಟ್ಟೆ ಹೊರೆಯಲು ಬೊಗಳೆ ಬಡಾಯಿ//
ಅಮೃತದ ಜೊತೆ ಜೊತೆ ವಿಷ
ಜೇನ ಸಿಹಿಯೊಂದಿಗೆ ಬೇವ ಕಹಿ
ಬಂಟ ಬಲಭೀಮರು ಜಟ್ಟಿ ಶೂರರು
ಕೃಷ ಕಾಯ ಕುರುಡ ಕಿವುಡ ಕುಂಟ
ರಚ್ಚೆ ರಾಡಿಯಲ್ಲೆ ರೊಚ್ಚಿಗೇಳುವ ಹುಚ್ಚರು
ಬವಣೆ ಬ್ರಾಂತಿ ಕಿಚ್ಚು ಹಚ್ಚುತ ಉರಿಸುವೆ//
ಏನೆಲ್ಲಾ ಇತ್ತೂ ಅತ್ತು ಕರೆವಂತೆ ಮಾಡಿ
ಗುಡುಗು ಸಿಡಿಲಿನ ಭಯದೊಡನೆ ಹಕ್ಕಿ ಇಂಚರ
ಮುಳ್ಳು ಪೊದೆಯೊಳು ಸುವಾಸಿತ ಹೂರಾಸಿ
ಕಲ್ಲು ಕವಣೆ ಹುಲ್ಲು ಹಾಸು ಸೂಸೋ ತಂಗಾಳಿ
ಬಿರುಗಾಳಿ ಜ್ವಾಲಾಮುಖಿ ಅತಿವೃಷ್ಟಿ ಅನಾವೃಷ್ಟಿ
ಹೋರಾಟಕೆ ಇಳಿಸಿ ಮಚ್ಚು ಬಂದೂಕುಗಳ ಕೈಲಿಟ್ಟು
ಮೋಜ ನೋಡುವ ತಾಯಿ ಹೃದಯ ನಿನದು ಕಲ್ಲೇ//
ಮಲತಾಯಿಯಂತೆ ಮೇಲು ಕೀಳುಗಳಾ ವ್ಯವಸ್ಥೆ
ಕೈಕೇಯಿಯಂತೆ ಕಾಡಿಗಟ್ಟುವ ಹಟ
ಒಂದು ಕಣ್ಣಿಗೆ ಸುಣ್ಣ ಮತ್ತೊಂದಕ್ಕೆ ಬೆಣ್ಣೆ
ಹಟ ಚಟ ವ್ಯಸನಗಳ ರಾರಾಜಿಸಿ ರಂಜಿಸಿ
ಸತ್ಯಕ್ಕೆ ಸುಳ್ಳಿನ ಕತ್ತರಿ ಒತ್ತರಿಸಿ
ಒಡಲ ಕಿಚ್ಚು ರೊಚ್ಚಿಗೇಳುವಂತ ರಂಪ
ತಂಪ ತಾಪ ಕೋಪ ಹಲವು ರೂಪ
ಎಲ್ಲ ನಿನ್ನ ಕರುಣೆಯ ವರವೇ
ಮತ್ತೆಕೇ ಮರುಗುವ ನಾಟಕ ಅಯ್ಯೋ ಅಕಟಕಟ//
ಆಸೆ ಆಮಿಷಗಳ ತುಂಬಿ ದುರಾಸೆಯ ಹೊತ್ತಿಸಿ
ಸಾವು ನೋವಿನ ಕೀವು ಸೋರುವ ತೂತು
ಹರಿದ ಬಟ್ಟೆಯ ತೇಪೆಗೆ ಸೂಜಿಯ ಕಾಟ
ಸತ್ಯದ ಹುಡುಕಾಟ ಲಪಂಗರ ಹಾರಾಟ
ಕುದಿಯುತಿದೆ ಹಣದಾಹ ಓಟು ಸೀಟು ನೋಟು
ಎಲ್ಲ ತಾಳುವ ಸಹನಾಶೀಲೆ ಎಂಬೆಸರಿಗೆ
ತಾಳುತಿರುವೆಯಾ ಟೀಕೆ ಮೋಜು ಮಸ್ತಿ
ಏಟು ಕೊಡುವ ಛಾಟಿ ಮರೆತೆಯಾ?//
———————————————
ಡಾ ಅನ್ನಪೂರ್ಣ ಹಿರೇಮಠ
ಚೆಂದದ ಕವನ ಮೇಡಂ.. ಹೆಣ್ಣಿನ ಬದುಕಿನ ಅಳವಾದ ಕವನ.. ಹೆಣ್ಣೆಂದರೇ ಹಾಗೆ, ಒಮ್ಮೆ ನಗೆ ಒಮ್ಮೆ ಬೇಗೆ.
ಮಾನಸ ಕೆ ಕೆ
ಕವಯತ್ರಿ, ಲೇಖಕಿ.
ಬೆಂಗಳೂರು..