ಸಿಂಗಲ್ ಟಿಕ್ ಸಣ್ಣ ಕಥೆ-ಎಸ್ ನಾಗಶ್ರೀ ಅಜಯ್

“ವಿಷಯ ಗೊತ್ತಾಯ್ತಾ? ಕಡ್ಡಿದು ಡಿವೋರ್ಸ್ ಆಯ್ತಂತೆ. ಅವರಪ್ಪ ಅಮ್ಮ ಗೊಳೋ ಅನ್ನೋಕೂ ಇವಳು ಮಾಡ್ಕೊಳ್ಳೋಕೂ ಸರಿಯಾಗಿದೆ. ಈಗ ಇನ್ನೊಂದು ಮದುವೆಗೆ ಹುಡುಗನ್ನ ಹುಡುಕ್ತಿದ್ದಾರಂತೆ. ಹತ್ತಿರ ಹತ್ತಿರ ನನಗಿಂತ ನಾಲ್ಕು ವರ್ಷ ಚಿಕ್ಕವಳು.‌ ಮುವ್ವತ್ತೆರಡು ಇರಬೇಕು ಅವಳಿಗೆ. ಮೊದಲ ಮದುವೆಗೆ ಯಕ್ಷ, ಗಂಧರ್ವ ಲೋಕದಿಂದ ಹುಡುಗನ್ನ ತರ್ತೀವಿ ಅನ್ನೋ ಹಾಗಾಡಿದ್ರು. ಈಗೆಲ್ಲಿಂದ ಹಿಡಕೊಂಡು ಬರ್ತಾರೋ?” ಆಶಾ ವಟವಟ ಶುರು ಮಾಡಿದರೆ ನಿಲ್ಲಿಸುವುದು ಅವಳಿಗೆ ಸಾಕೆನಿಸಿದಾಗಲೇ. ಕಡ್ಡಿ ಮೂರು ವರ್ಷದ ಕೂಸಾಗಿದ್ದಾಗಿನ ಕಥೆಯಿಂದ ಹಿಡಿದು ಮೊನ್ನೆ ಸಿಕ್ಕಾಗ ಮಾತಾಡಿಸಲಿಲ್ಲ ಎನ್ನುವ ತನಕದ ವಿವರದವರೆಗೂ ಅಡ್ಡಾದಿಡ್ಡಿಯಾಗಿ ಮಾತಾಡುತ್ತಲೇ ಹೋದಳು. ಮಧ್ಯೆ ಬಾಯಿ ಹಾಕಿದರೆ ಇನ್ನು ಹತ್ತು ನಿಮಿಷ ಹೆಚ್ಚುವರಿ ಕೊರೆಯುತ್ತಾಳೆಂದು ಸುಮ್ಮನೆ ಕೇಳಿಸಿಕೊಳ್ಳಬೇಕಾಯಿತು. ಸೊಟ್ಟ ಕತ್ತಲ್ಲಿ ಮೊಬೈಲ್ ಸಿಕ್ಕಿಸಿಕೊಂಡು, ಪಾತ್ರೆ ತೊಳೆದು, ತರಕಾರಿ ಹೆಚ್ಚಿ ಅಡುಗೆಗಿಟ್ಟರೂ ಇವಳ ಮಾತು ಪೂರ್ತಿಯಾಗಿರಲಿಲ್ಲ.” ಆಫೀಸಿಂದ ಫೋನ್ ಬರ್ತಿದೆ ಕಣೆ.‌ಮತ್ತೆ ಮಾಡ್ತೀನಿ. ಸಿಗೋಣ” ಅಂತ ಸುಳ್ಳೇ ಅವಸರ ನಟಿಸಿ ಕರೆ ತುಂಡರಿಸಿದ ಮೇಲೆ, ಕಡ್ಡಿಯ ಕಥೆಯೇ ಆವರಿಸಿಕೊಂಡಿತ್ತು. ಕಡ್ಡಿಯ ಹೆಸರು ಸೌಪರ್ಣಿಕಾ ಅಂತ. ಅವರಪ್ಪನ ಹಳೇ ಗೆಳತಿಯ ಹೆಸರು ಅಂತ ಎಲ್ಲರೂ ಮಾತಾಡಿಕೊಳ್ಳುವುದು ಗೊತ್ತಿತ್ತು. ಸಿಕ್ಕಾಪಟ್ಟೆ ಶೋಕಿ ಮನುಷ್ಯ. ಆತನ ಬಗ್ಗೆ ರಸವತ್ತಾದ ಕಥೆಗಳು, ಅಸಹ್ಯದ ಪರಮಾವಧಿ ಎನಿಸುವ ಘಟನೆಗಳು ಸಂಬಂಧಿಕರ ಮಧ್ಯೆಯೇ ಪ್ರಸ್ತಾಪವಾಗುತ್ತಿತ್ತು. ಯಾರ ಶಾಪವೋ? ಯಾವ ದೇವರ ಸಿಟ್ಟೋ? ಅಪ್ಪ-ಅಮ್ಮ ಇಬ್ಬರ ಯಾವೊಂದು ರೂಪ, ಅಂದ ಚೆಂದದ ಅಂಶವೂ ದಕ್ಕದೆ, ಮಡಿಕೋಲಿನಂತೆ ಉದ್ದಕ್ಕೆ ಬೆಳೆದು ನಿಂತ ಸೌಪರ್ಣಿಕಾ ಎಲ್ಲರ ಬಾಯಲ್ಲಿ ‘ಕಡ್ಡಿ’ಯಾದಳು.

ಬಾಲಿವುಡ್ ನ ಹೀರೋಯಿನ್ ಗಳೆಲ್ಲ ಜೀರೋ ಫಿಗರ್ ಹಿಂದೆ ಬಿದ್ದಾಗ, ‘ಕಡ್ಡಿ’ಯನ್ನು ಹಿಡಿಯುವವರೇ ಇರಲಿಲ್ಲ. ಐದನೇ ಕ್ಲಾಸಲ್ಲಿ ಕೊಡಿಸಿದ ಬಟ್ಟೆಯೊಳಗೆ ಡಿಗ್ರಿ ಫೈನಲ್ ಇಯರ್ ಗೆ ಬಂದಾಗಲೂ ಹಾಯಾಗಿ ತೂರುತ್ತಿದ್ದ ಅವಳ ದೇಹ, ಒಬ್ಬಳೇ ಮಗಳೆಂದು ಕೂಡಿಟ್ಟ ಚಿನ್ನ, ಅಪ್ಪ ಮಾಡಿಟ್ಟಿರುವ ನಾಲ್ಕಾರು ಸೈಟು, ಇವಳ ಹೆಸರಿಗೇ ಬರೆಯಬೇಕಿರುವ ವಿಶಾಲವಾದ ಮನೆ, ಸೇರುತ್ತಲೇ ಕೈತುಂಬ ಸಂಬಳ ತುಂಬಿಕೊಡುವ ಭರವಸೆ ನೀಡಿರುವ ಉದ್ಯೋಗ…ಎಲ್ಲದರ ಬಗ್ಗೆ ಉಬ್ಬಿ ಹೋಗುತ್ತಿದ್ದಳು.ಓಹ್! ಆ ಕಾಲ ಹಾಗೆಯೇ ಇರಬೇಕಿತ್ತು. ಎರಡು ತುತ್ತು ಹೆಚ್ಚಿಗೆ ತಿಂದರೆ ದಪ್ಪವಾಗುವ ನಮ್ಮ ಕುರಿತು ಆಡಿಕೊಳ್ಳುತ್ತಿದ್ದ ಅವಳ ಮೇಲೆ ಹೊಟ್ಟೆಕಿಚ್ಚಾಗುತ್ತಿತ್ತು. ಒಂದು ಸಲಕ್ಕೆ  ಪಾವಕ್ಕಿ ಅನ್ನ ಉಣ್ಣುವ, ತಿಂಡಿಗೆ ನಾಲ್ಕೈದು ಚಪಾತಿ, ಮನಸಾದಾಗೆಲ್ಲ ಗೋಬಿ, ಪಾನಿಪುರಿ, ಐಸ್ ಕ್ರೀಂ ಅಂತ ಮನಬಂದಂತೆ ತಿಂದರೂ ಅರ್ಧ ಗ್ರಾಮ್ ತೂಕವೂ ಹೆಚ್ಚಾಗದ ಅವಳು ಮತ್ತು ಇವುಗಳ ವಾಸನೆ ಕುಡಿದರೂ ಸಹ ದಪ್ಪವಾಗಿಬಿಡ್ತೀವೇನೋ ಎಂದು ಹೆದರುವ ನಾವು ವಿರುದ್ಧ ಧ್ರುವಗಳೇ ತಾನೆ? ವಿರುದ್ಧ ಧ್ರುವಗಳು ಆಕರ್ಷಿಸುತ್ತವೆ ಎಂಬ ಮಾತು ನಮ್ಮ ವಿಷಯದಲ್ಲಿ ನಿಜವಾಗಿತ್ತು.‌ ಸ್ವಾಮಿ ವಿವೇಕಾನಂದರ ಜೀವನಚರಿತ್ರೆಯನ್ನು ದಿನಕ್ಕೊಂದು ಅಧ್ಯಾಯದಂತೆ, ಒಂದು ದಿನವೂ ತಪ್ಪಿಸದೆ ಓದುತ್ತಿದ್ದ ನಾನು ಹಾಗೂ ಅಪ್ಪನ ಧುಮುಗುಡುವ ಆಸೆಯ ಆಯಸ್ಕಾಂತದ ತುಂಡಿನ ಹಾಗೆ ಹುಡುಗರು, ಪ್ರೇಮ, ಕಾಮಗಳ ಬಗ್ಗೆ ಎಗ್ಗಿಲ್ಲದೆ ಆಸಕ್ತಿ ತೋರುತ್ತಿದ್ದ ಅವಳು ಬಿಟ್ಟಿರಲಾರದೆ ಹಚ್ಚಿಕೊಂಡಿದ್ದೆವು. ಅವಳು ಮಾತನಾಡುವಾಗ ಮುಜುಗರವೆನಿಸಿದರೂ ಆಗೀಗ ನೆನಪಾಗಿ ಕಿವಿ ಕೆಂಪಾಗುತ್ತಿತ್ತಾ? ಈಗ ನೆನಪಾಗವೊಲ್ಲದು.

ಆಶಾಳಂತೆಯೇ ಸೌಪರ್ಣಿಕಾ ನನಗೆ ಅಪ್ಪನ ಮನೆ ಬಳಗ. ವಾವೆಯಲ್ಲಿ ಏನಾಗುತ್ತಾಳೋ ಹೇಳಲು ಬಾರದಿದ್ದರೂ, ನಮ್ಮ ಮನೆಗಳ ನಡುವೆ ಹೋಗಿಬರುವ ಸಂಬಂಧವಿತ್ತು. ಅವರ ಮನೆಯೂ ನಮ್ಮನೆಯಿಂದ ಮೂರು ನಾಲ್ಕು ಬೀದಿ ಆಚೆಯಷ್ಟೇ.” ನಮ್ಮಪ್ಪ ನನಗೆ ಹೇಳಿಬಿಟ್ಟಿದ್ದಾರೆ.‌ ಇಪ್ಪತ್ತೆರಡಕ್ಕೆ ಇಂಜಿನಿಯರಿಂಗ್ ಮುಗಿಯುತ್ತೆ.‌ ವರ್ಷದೊಳಗೆ ಗಂಡು ಹುಡುಕಿ ಇಪ್ಪತ್ತಮೂರಕ್ಕೆ ಮದುವೆ ಮಾಡಿಬಿಡ್ತೀನಿ ಅಂತ.‌ ಯಾವ ಕಾಲಕ್ಕೆ ಏನಾಗಬೇಕೋ ಅದಾದರೆ ಚೆಂದ. ಬೇಗ ಎರಡು ಮಕ್ಕಳು ಹೆತ್ತು ನಮಗೆ ಕೊಟ್ಟು, ನಿನಗೆ ಬೇಕಾದ್ದು ಮಾಡ್ಕೋ. ಈಗೀಗ ಮುವ್ವತ್ತಕ್ಕೆ ಮದುವೆ, ಮಕ್ಕಳು ಮರಿ ಮಾಡ್ಕೊಳ್ಳೋದೂ ನಿಧಾನ. ಅರವತ್ತಾದರೂ ಜವಾಬ್ದಾರಿಯೇ ಮುಗಿದಿರಲ್ಲ. ಹೀಗೆ ಹೇಳ್ತಾರೆ ಕಣೆ.. ಮದುವೆಯಾದರೆ ಏನೇನು ಆಗತ್ತೆ ನಿನಗೆ ಗೊತ್ತಾ?” ಎಂದು ಸೌಪರ್ಣಿಕಾ ಕೇಳಿದಾಗ ಅವಳಿಗೆ ಹದಿಮೂರೋ ಹದಿನಾಲ್ಕೋ. ಮನೆಗೆ ಬಂದು ಪೆದ್ದುಪೆದ್ದಾಗಿ ಅಮ್ಮನಿಗೆ ವರದಿಯೊಪ್ಪಿಸಿದ್ದೆ. ” ಇವನು ಹಾಳಾಗಿದ್ದು ಸಾಲದೂಂತ ಆ ಮಗಳನ್ನು ಹಾಳುಗೆಡವ್ತಿದ್ದಾನೆ. ಮಕ್ಕಳ ಮುಂದೆ ಏನು ಹೇಳಬೇಕು ಹೇಳಬಾರದು ಅನ್ನೋ ಪರಿಜ್ಞಾನ ಇಲ್ಲದವನು.  ಈಗಲೇ ಮದುವೆ-ಮಕ್ಕಳ ಚಿಂತೆ ಯಾಕೆ? ಅವೆಲ್ಲ ತಾನಾಗಿ ಆಗೋ ಕಾಲಕ್ಕೆ ಆಗತ್ತೆ. ಹೀಗೆ ಹರಟೆ ಹೊಡ್ಕೊಂಡು ಕಾಲಹರಣ ಮಾಡೋಕಿಂತ ಪುಸ್ತಕ ಹಿಡಿದು ಓದಿದ್ರೆ ನಾಲ್ಕು ನಂಬರ್ ಹೆಚ್ಚಿಗೆ ಬರತ್ತೆ. ದೇವರು ಬುದ್ಧಿ ಕೊಟ್ಟಿರೋದು ಓದಿ ಬರೆದು ಉದ್ಧಾರ ಆಗಲೀಂತ. ಹೀಗೆ ಅಸಹ್ಯ ಮಾತಾಡ್ಕೊಂಡು ಕೂರೋಕಲ್ಲ. ಇನ್ಮೇಲೆ ಅವರ ಮನೆಗೆ ಹೋಗಬೇಡ. ಅವಳೇ ಬಂದರೆ ಇಲ್ಲೇ ಕೂತು, ಮಾತಾಡಿ ಹೋಗಲಿ.” ಅಮ್ಮ ಅವತ್ತು ಪೂರ ಸಿಡಿಸಿಡಿ ಎನ್ನುತ್ತಿದ್ದಳು. ಇವತ್ತಿನ ಕಾಲಕ್ಕೆ ನಾಲ್ಕನೇ ತರಗತಿಯ ಮಕ್ಕಳಿಗಿರುವ ಜ್ಞಾನವೂ ಆಗ ನಮಗೆ ಇರಲಿಲ್ಲ ಎಂದರೆ ಈಗ ಕಿಸಿಕಿಸಿ ನಗುತ್ತಾಳೆ.

ಆಗಲೇ ಹೇಳಿದಂತೆ ಜೀರೋ ಫಿಗರ್ ಟ್ರೆಂಡ್ ಇದ್ದಾಗ ನಾವೆಲ್ಲ ಮನೆಯಲ್ಲಿ ಎಣ್ಣೆ, ಬೆಣ್ಣೆ, ಜಿಡ್ಡು ಬಿಟ್ಟು, ಒಂದು ಚಪಾತಿ, ಅರ್ಧ ಸೌಟು ಅನ್ನ ತಿನ್ನುತ್ತಾ, ಹಸಿವಿಗೆ ಹುಚ್ಚುಚ್ಚು ಕೋಪ ತೋರುತ್ತಾ, ಅಪ್ಪ ಅಮ್ಮನ ಹೊಟ್ಟೆ ಉರಿಸಿಕೊಂಡು ಅಲೆಯುವಾಗ, ಅವಳು ಮಾತ್ರ ಹೊಟ್ಟೆಬಿರಿಯೆ ತಿಂದು ನಮ್ಮನ್ನು ಆಡಿಕೊಂಡು ಹಾಯಾಗಿ ಓಡಾಡಿಕೊಂಡಿದ್ದಳು. ಸಮಯ ಸಿಕ್ಕಾಗೆಲ್ಲ , “ಏನೇ ಪೂರಿ ತರಹ ಊದಿದ್ದೀಯ? ಹೀಗೇ ಊದ್ತಿದ್ರೆ‌ ನಿಮ್ಮನೆ ಬಾಗಿಲು ಹಿಡಿಸಲ್ಲ. ಜೋರಾಗಿ ಓಡಾಡಿದ್ರೆ ಅಸಹ್ಯ ಕಾಣತ್ತೆ. ನನ್ನ ನೋಡು ತೆಳ್ಳಗೆ ಹೇಗೆ ಬಳುಕ್ತೀನಿ? ನೀವು ಡಯಟ್ ಮಾಡಿದ್ರೂ ಇಳಿಯಲ್ಲ. ನಾನು ಏನು ತಿಂದ್ರೂ ಊದಲ್ಲ. ಅದೃಷ್ಟ ಅಂತಾರೆ ಕಣೆ ಎಲ್ಲರೂ…” ಅಂತಿದ್ದ ಅವಳು ಇದ್ದಕ್ಕಿದ್ದಂಗೆ ಮಾತು ಕಡಿಮೆ ಮಾಡಿ, ನಮ್ಮನೆಗೆ ಬರುವುದನ್ನು ಬಿಟ್ಟಳು. ಸಿಕ್ಕಾಗ ಹೆಚ್ಚು ಮಾತಿಲ್ಲದೆ ಬಿಟ್ಟರೆ ಸಾಕೆನ್ನುವಂತೆ ಓಡುತ್ತಿದ್ದಳು. ಹಂಗಿಸುವ ಇವಳ ಕಾಟವೇ ತಪ್ಪಿತೆಂಬಂತೆ ಓದು, ಉದ್ಯೋಗ, ಮದುವೆ, ಮಕ್ಕಳು ಈ ಚಕ್ರದಲ್ಲಿ ಸಿಲುಕಿದ ನಾವು ಅವಳಿಂದ ದೂರವಾಗಿದ್ದೆವು. ಆಶಾಗೆ ಮಾತ್ರ ಅವಳ ಮೇಲೆ ಜಿದ್ದು, ಆಸಕ್ತಿ , ಅಸೂಯೆ, ಸಿಟ್ಟು  ಎಲ್ಲವೂ ಕಲಸಿದ ವಿಚಿತ್ರ ಸೆಳೆತವಿತ್ತು. ಇಂಚಿಂಚು ಮಾಹಿತಿ ಸಂಪಾದಿಸಿ ಕೇಳಿದರೂ, ಕೇಳದಿದ್ದರೂ ನನ್ನ ಕಿವಿಯೊಳಗೆ ಸುರಿದು ಹೋಗುತ್ತಿದ್ದಳು.

“ವಿಪರೀತ ಸಣ್ಣ ಇದ್ದಾಳೆ ಹುಡುಗಿ ಅಂತ ಗಂಡುಗಳು ಒಪ್ತಿಲ್ಲ. ಬಂದವರು ಆಸ್ತಿ,ಹಣ ನೋಡಿಕೊಂಡು ಬರ್ತಾರೆ. ಹುಡುಗಿಯನ್ನು ಬಾಳಿಸುವ ಲಕ್ಷಣವೇ ತೋರಲ್ಲ. ಇವಳ ಓದು, ಸಂಬಳ, ಅಂತಸ್ತಿಗೆ ತಕ್ಕನಾದ ಹುಡುಗ ಸಿಗೋದೇ ಕಷ್ಟ. ಇವಳು ಕೆಳಗಿಳಿಯಲ್ಲ. ಅವರು ಮೇಲೇರಲ್ಲ. ಹೋಗಲಿ. ಮದುವೆಯಾದ ಗಂಡಿಗೆ ಇವಳ ಮೇಲೆ ಯಾವ ಆಸಕ್ತಿ ಹುಟ್ಟುತ್ತೆ ಹೇಳು?” ಎಂಬ ಪುಕಾರುಗಳು ಸಂಬಂಧಿಕರ ಮಧ್ಯೆ ಹುಲುಸಾಗಿ ಹಬ್ಬಿತ್ತು. ಮದುವೆಯ ಬಗ್ಗೆ ಏನೆಲ್ಲ ಕನಸು ಕಂಡಿದ್ದ ಹುಡುಗಿಗೆ ಇಂತಹ ಶಿಕ್ಷೆಯೇ ಎನಿಸಿ ನಿರ್ವಾತ ಕವಿಯುತ್ತಿತ್ತು. ನಮ್ಮೆಲ್ಲರ ಮದುವೆಯಾಗಿ ಏಳೆಂಟು ವರ್ಷಕ್ಕೆ ಅವಳಿಗೊಬ್ಬ ಚೆಂದದ ವರ ಗೊತ್ತಾದಾಗ, ಸದ್ಯ ಎಂದವರೇ ಹೆಚ್ಚು. ರೇಷ್ಮೆಸೀರೆಯುಟ್ಟು, ಕಂಕುಳಲ್ಲಿ ಮಗು ಹೊತ್ತು ದುಸುಬುಸು ಓಡಾಡಿ ಬಂದ ನೆನಪು ತಾಜಾ ಇದ್ದಾಗಲೇ, ಡಿವೋರ್ಸಿನ ಸುದ್ದಿ ತಲುಪಿತ್ತು. ಇಷ್ಟು ವರ್ಷ ದೂರವಿದ್ದು ಈಗ ಕಾಲ್ ಮಾಡಿದ್ರೆ, ಇದಕ್ಕೆ ಕಾಯ್ಕೊಂಡಿದ್ದು ಮಾತಾಡಿದಳು ಅನ್ನಿಸಬಹುದು. ನಾಲ್ಕು ದಿನ ಕಳೆಯಲಿ. ನಿಧಾನಕ್ಕೆ ಸೌಪರ್ಣಿಕಾ ಹತ್ತಿರ ಮಾತಾಡೋಣ ಅನ್ನುತ್ತಲೇ ಆರೆಂಟು ತಿಂಗಳು ಕಳೆದಿರಬೇಕು.

ಒಂದು ದಿನ ಮನೆಗೇ ಹುಡುಕಿಕೊಂಡು ಬಂದಿದ್ದಳು. ಹತ್ತಾರು ವರ್ಷಗಳಿಂದ ಮಾತು ಬಹುತೇಕ ನಿಂತೇ ಹೋಗಿದ್ದರೂ, ಅರ್ಧಗಂಟೆ ಕಳೆಯುವುದರೊಳಗೆ ನಾವು ಮಾತಿನ ಜಗುಲಿಯೇರಿ ಕುಳಿತಿದ್ದಾಗಿತ್ತು. ಆದಷ್ಟು ಮದುವೆ, ಮಕ್ಕಳು, ಡಿವೋರ್ಸ್, ಸಂಸಾರ ಇವುಗಳ ಬಗ್ಗೆ ಮಾತಾಡದೆ ಜಾಗರೂಕವಾಗಿ ತೂಗಿಸಬೇಕು ಎಂಬ ಎಚ್ಚರ ಹರಿದಿದ್ದೇ ತಿಳಿಯಲಿಲ್ಲ.
” ಅಲ್ವೇ ಕಡ್ಡಿ ಇದ್ದಕ್ಕಿದ್ದಂಗೆ ನಮ್ಮನೆಗೆ ಬರೋದು ಬಿಟ್ಟೆ.‌ ಮಾತಾಡಿಸೋದು ಕಡಿಮೆ ಮಾಡಿದೆ. ಒಂದೆರಡು ಸಲ ಯಾಕೆ ಅಂತ ಕೇಳಿದ ನೆನಪು. ನಿಮ್ಮ ಸಹವಾಸವೇ ಬೇಡ ತಾಯಿ ಅಂತ ಹೊರಟುಬಿಟ್ಟೆ. ಅಷ್ಟಕ್ಕೂ ಆಗ ನಾವು ಯಾಕೆ ದೂರ ಆಗಿದ್ದು?”
” ಅದೇನೋ ಗೊತ್ತಿಲ್ಲ… ಯಾರೂ ಬೇಡ.‌ಏನೂ ಬೇಡ ಅನ್ನಿಸಿಬಿಟ್ಟಿತ್ತು ಸ್ವಲ್ಪ ದಿನ. ಜಗತ್ತು ನನ್ನ ಕೈಲಿದೆ  ಅಂತ ಅಂದುಕೊಂಡವಳಿಗೆ, ನೀನು ಈ ಜಗತ್ತಿಗೇ ಬೇಕಿಲ್ಲ. ಕೈಲಿ ಹಿಡಕೊಂಡ ಮುಷ್ಟಿ ಮಣ್ಣಿಗಿರುವಷ್ಟು ಬೆಲೆಯೂ ನಿನಗಿಲ್ಲ ಎಂದರೆ ಹೇಗಾಗಿರಬೇಡ? ನಾನು ತೀರ ವರ್ತ್ ಲೆಸ್ ಅನಿಸಿದ ಕ್ಷಣಗಳು ಕಣೆ. ಮತ್ತೆ ನೆನಪು ಮಾಡ್ಕೊಳ್ಳೋಕೂ ಇಷ್ಟ ಇಲ್ಲ.”

” ಬೇಜಾರಾಗೋ ಹಾಗಿದ್ರೆ ಆ ಕಥೆಯೇ ಬೇಡ ಬಿಡು. ಈಗೇನು ಮಾಡಬೇಕಂತಿದ್ದೀಯ? ಇನ್ನೊಂದು ಮದುವೆ ಆಗಬಹುದಲ್ವಾ? ನಿನಗೆ ಬೇಕು ಅನ್ನಿಸಿದರೆ…”
” ನಾನು ಯಾವತ್ತು ತಾನೆ ಮದುವೆ ಬೇಡ ಅನ್ಕೊಂಡಿದ್ದೆ ಹೇಳು? ಎಷ್ಟೋ ಕಾದು ಆದ ಮದುವೆ ಆರು ತಿಂಗಳು ಬಾಳಲಿಲ್ಲ. ಅವನು ಗಂಡಸೇ ಅಲ್ಲ.‌ಆದರೆ ಲೋಕಕ್ಕೆ ಅದು ಬೇಕಿಲ್ಲ. ನಾನು ಸಣ್ಣ. ಇಂಟರೆಸ್ಟಿಂಗ್ ಆಗಿ ಕಾಣಲ್ಲ ಅದಕ್ಕೆ ಮದುವೆಯಾಗಲಿಲ್ಲ. ಆದ ಮದುವೆ ಉಳಿಯಲಿಲ್ಲ. ಮುಂದೆ ಗಂಡು ಸಿಗೋದೇ ಇಲ್ಲ.‌ ಖರ್ಜೂರ ತಿನ್ನು. ತುಪ್ಪ ತಿನ್ನು.‌ಹಾಲು ಕುಡಿ. ಜಿಮ್ ಗೆ ಹೋಗು. ಯಾವುಯಾವುದೋ ಪೌಡರ್ ತೊಗೋ.‌ಇಂಪ್ಲಾಂಟ್ ಮಾಡಿಸ್ಕೋ.. ಸಾವಿರ ಸಲಹೆ ಕೊಡೋಕೆ ಬರ್ತಾರೆ.‌ಆದರೆ ಏನು ಗೊತ್ತಾ? ಇವೆಲ್ಲ ಮಾಡಿಯೂ ಉಪಯೋಗ ಆಗದಿರಬಹುದು. ಹೇಳಿದ ಹಾಗೆಲ್ಲ ಕುಣಿದ ನಾನು ತಮಾಷೆ ವಸ್ತು ಆಗ್ತೀನಿ ಅಷ್ಟೇ.”
“ನಿಜ..ನಿಜ…” ಎಂದಿದ್ದೆ. ಆದರೆ ಅವಳಿಗಿಂತ ಹೆಚ್ಚು ಆಳಕ್ಕೆ ಕುಸಿದಿದ್ದೆ.
” ಹಾಗಂತ ನಾನು ಪ್ರಯತ್ನವೇ ಮಾಡಿಲ್ಲ ಅಂದ್ರೆ ಸುಳ್ಳಾಗತ್ತೆ.‌ ನೆನಸ್ಕೊಂಡ್ರೆ ಮೈ ಉರಿಯುತ್ತೆ. ಒಬ್ಬ ಡಾಕ್ಟರ್ ಹತ್ತಿರ ಹೋಗಿದ್ದೆ. ಹೆಚ್ಚು ಕಡಿಮೆ ನಮ್ಮ ವಯಸ್ಸೇ ಅನ್ಕೋ. ಮೂರರಿಂದ ಆರು ತಿಂಗಳಲ್ಲಿ ರಿಸಲ್ಟ್ಸ್ ಗ್ಯಾರೆಂಟಿ ಅಂದಳು. ಒಂದುವರೆ ಲಕ್ಷ ಖರ್ಚು ಮಾಡಿಸಿ, ಅವಳು ಮಕ್ಕಿಕ್ಕಾಮಕ್ಕಿ ಕಲಿತ ವಿದ್ಯೆಯನ್ನು ಪ್ರಯೋಗಿಸಿ, ಕೊನೆಗೆ ಇಷ್ಟೇ ನಮ್ ಕೈಯಲ್ಲಿರೋದು. ಇನ್ನೇನೂ ಮಾಡೋಕಾಗಲ್ಲ. ನೀವಿನ್ನು ಬರಬೇಡಿ ಅಂದಳು. ತೂಕ ಹೆಚ್ಚಾಗತ್ತೆ. ಆರೋಗ್ಯದಿಂದ ನಳನಳಿಸಿಬಿಡ್ತೀಯ ಅಂದಿದ್ದೆಲ್ಲ ಬೂಟಾಟಿಕೆ ಮಾತು ತಾನೆ? ಎಂದಿದ್ದಕ್ಕೆ ನೀವಾಗಿಯೇ ಎದ್ದು ಹೋದರೆ ಸರಿ. ಇಲ್ಲಾಂದ್ರೆ ಹುಡುಗರನ್ನ ಕರೆಸಿ ಓಡಿಸ್ತೀನಿ ಅಂತ ದಬಾಯಿಸಿದಳು. ಕೇಳ್ತಿದ್ಯಾ? “
ಅವಳ ಮುಖ ಕೋಪದಲ್ಲಿ ಧುಮುಗುಡುತ್ತಿತ್ತು. ಮಧ್ಯೆ ಹೂಂ ಉಹೂಂ ಅನ್ನಲು ಕೂಡ ಬಾಯಿ ತೆಗೆಯಲಾರದಷ್ಟು ಸೋತು ಹೋಗಿದ್ದೆ. ಈ ಪ್ರಪಂಚದ ಬಗ್ಗೆಯೇ ಜಿಗುಪ್ಸೆ ಹುಟ್ಟಿತ್ತು. ಕೈಲಿದ್ದ ದಾವಣಿಯ ಚುಂಗನ್ನು ಹಿಂಡಿ ಗಂಟುಕಟ್ಟುವುದು, ಬಿಡಿಸುವುದು ಮಾಡುತ್ತಿದ್ದ ಬೆರಳುಗಳ ಮೇಲೆ ಫಟ್ ಎಂದು ಹೊಡೆದಿದ್ದಳು.
” ಕೇಳಿಲ್ಲಿ. ಡಾಕ್ಟರ್ ಎಂದು ಬೋರ್ಡು ತಗುಲಿಸಿಕೊಂಡ ಮಾತ್ರಕ್ಕೆ ಕರುಣೆ, ದಯೆ ಹೃದಯಕ್ಕಿಳಿಯಬೇಕಿಲ್ಲ. ಹಣ, ಹೆಸರು, ಗಿರಾಕಿ ಸಿಕ್ಕರೆ ಸಾಕೆಂದು ಕಾದು ಕುಳಿತ ಹತಾಶ ಆತ್ಮಗಳೇ ಹೆಚ್ಚು ಅಂತ ಅವತ್ತು ರೋಸಿ ಹೋಗಿತ್ತು. ಗೂಗಲ್ ರಿವ್ಯೂ ಬರೆದೆ. ಇವರ ಸೇವೆ ಸಮರ್ಪಕವಾಗಿಲ್ಲ. ನನಗೆ ಅನುಕೂಲವಾಗಿಲ್ಲ ಅಂತ. ಅಷ್ಟಕ್ಕೇ ನನ್ನ ಇಡೀ ಪರ್ಸನಲ್ ವಿಷಯವನ್ನೇ ರಿಪ್ಲೈ ಕಮೆಂಟಿನಲ್ಲಿ ಕುಟ್ಟಿ ಹೋಗಿದ್ದಳು ಆಕೆ. ಮದುವೆ ಮುರಿದು ಬಿದ್ದ ನೋವು, ದೇಹದ ಬಯಕೆ ತೀರದ ಅತೃಪ್ತಿ ಇವುಗಳಿಂದಲೂ ತೂಕ ಹೆಚ್ಚಾಗದೆ ಇರಬಹುದು. ನಮಗೆ ತೋಚಿದ ಪ್ರಯತ್ನ ನಾವು ಮಾಡಿದ್ದೇವೆ. ರೋಗಿಗಳ ಹಿತಾಸಕ್ತಿಯೇ ನಮ್ಮ ಮುಖ್ಯ ಉದ್ದೇಶ ಹಾಗೆ ಹೀಗೆ ಅಂತ ಬಣ್ಣಿಸಿ ಬರೆದುಕೊಂಡಳು. ಇನ್ನೂ ಅಸಹ್ಯ ಹೆಚ್ಚಾಗೋಯ್ತು ಕಣೆ.. ಒಬ್ಬ ರೋಗಿಯ ಖಾಸಗಿತನಕ್ಕೆ ಗೌರವ ನೀಡದ ಇಂತಹವರಿಂದ ವೃತ್ತಿಪರತೆ ನಿರೀಕ್ಷಿಸೋದೇ ಹಾಸ್ಯಾಸ್ಪದ. ಡಿವೋರ್ಸಿಗಿಂತ ನನಗೆ ಈ ತರಹದ ಬೇರೆ ಬೇರೆ ಅನುಭವಗಳು ಹೆಚ್ಚು ನೋವು ಕೊಡ್ತಿದೆ. ಇದರ ಮುಂದೆ ಮದುವೆ, ಗಂಡ, ವಿಚ್ಚೇದನ ಎಲ್ಲ ಸಮಸ್ಯೆಯೇ ಅಲ್ಲ ಗೊತ್ತಾ? “
“ಅರ್ಥವಾಗತ್ತೆ. ಆದರೆ ಯಾರನ್ನು ತಿದ್ದೋದು? ಯಾರೊಂದಿಗೆ ಬಡಿದಾಡೋದು? ನಿನಗೆ ಹೀಗಾಯ್ತು ಅಂತ ಕೇಳಿಯೇ ಇಷ್ಟು ನೋವಾಗ್ತಿದೆ. ನೀನು ಹೇಗೆ ನಿಭಾಯಿಸ್ತಿದ್ದೀಯೆ ? ನಿನಗೆ ಯಾವ ರೀತಿ ಸಹಾಯ ಮಾಡಬಹುದು? ಏನು ಮಾಡಿದ್ರೆ ಸರಿಯಾಗತ್ತೆ? ದಿಕ್ಕೇ ತೋಚ್ತಿಲ್ಲ” ಎನ್ನುವಾಗ ಹೊಟ್ಟೆ ತೊಳೆಸುತ್ತಿತ್ತು. ಸಣ್ಣಗೆ ಕಣ್ಣ ಹಿಂಭಾಗದಿಂದ ನೋವಿನ ಎಳೆಯೊಂದು ಜಗ್ಗಿ ಅರೆತಲೆನೋವು ಹಿಡಿಯಿತು. ಊಟಕ್ಕೆ ಏಳು ಎಂದರೂ ಕೇಳದೆ,” ನಿನಗೇಂತ ಸಿಗೋ ಚೂರುಪಾರು ಸಮಯವನ್ನ ನಾನು ತೊಗೊಂಡಿದ್ದೀನಿ. ಅದಕ್ಕಿಂತ ಇನ್ನೇನು ಬೇಕು ಹೇಳು? ನನಗೆ ಎಲ್ಲಕ್ಕಿಂತ ಮನಸ್ಸಿನ ಮಾತು ಕೇಳೋ ಒಂದು ಜೊತೆ ಕಿವಿ ಬೇಕು ಅನ್ನಿಸಿತ್ತು ಕಣೆ. ನೀನೊಬ್ಬಳೇ ಇದ್ದೀನಿ ಅಂದೆಯಲ್ಲ ಸೀದಾ ಹೊರಟು ಬಂದೆ. ಥ್ಯಾಂಕ್ಯೂ. ಮತ್ತೆ ಸಿಗ್ತೀನಿ” ಎನ್ನುತ್ತಾ ಹೊರಟಳು.

ಒಮ್ಮೆ ಹಿಡಿದರೆ ಮೂರು ದಿನ ಕಾಡಿಸುವ ಅರೆತಲೆನೋವು ಹಿಂಡಿ ಹಿಪ್ಪೆ ಮಾಡಿ ಹೊರಟ ಒಂದು ವಾರಕ್ಕೆ ಆಶಾ ಕರೆ ಮಾಡಿದ್ದಳು.
” ಗೊತ್ತಾಯ್ತನೇ? ಕಡ್ಡಿ ದುಬೈಗೆ ಹೋಗ್ತಿದ್ದಾಳಂತೆ. ಅಪ್ಪ ಅಮ್ಮನ ಸಂಸಾರ ನೋಡ್ಕೊಂಡು ಕೂತಿರಲಾ ಈ ವಯಸ್ಸಲ್ಲಿ? ನನ್ನದು ಅಂತ ಒಂದು ಬದುಕಿದೆ. ನಾನೇ ಹುಡುಕಿಕೊಳ್ತೀನಿ. ನೀವು ಯಾರೂ ಯಾವುದಕ್ಕೂ ತಲೆ ಕೆಡಿಸ್ಕೊಳ್ಳೋದು ಬೇಡ. ಮೈ ಲೈಫ್‌. ಮೈ ಚಾಯ್ಸ್ ಅಂದಳಂತೆ. ಅವರಮ್ಮ ಅತ್ತುಕರೆದು ಕೇಳಿಕೊಂಡರೂ ಪಟ್ಟು ಸಡಿಲಿಸದೆ ಹೊರಟು ನಿಂತಿದ್ದಾಳೆ ಮಹಾರಾಣಿ. ನಿಮ್ಮನೆಗೂ ಬಂದಿದ್ದಳಂತಲ್ಲ. ನೀನಾದರೂ ತಿಳಿಸಿ ಹೇಳೋದಲ್ವೇನೆ? ಅವಳುದ್ದಕ್ಕೂ ದುಡ್ಡು ಸುರಿದು, ಓದಿಸಿ ಬರೆಸಿದ್ದಕ್ಕೆ ಆಯಿತಲ್ಲ ಮಂಗಳಾರತಿ ಅಂತಿದ್ದಾರೆ ಎಲ್ಲರೂ. ಅವರಪ್ಪ ಹುಡುಗೀರ ಹತ್ತಿರ ಆಡಿದ ಆಟ ಒಂದೆರಡಾ? ನೋಡು ಎಲ್ಲ ಸೇರಿಸಿ ದೋಸೆ ಮುಗುಚಿ ಹಾಕಿದ ಹಾಗೆ…” ನಂಜು ಕಾರುತ್ತಲೇ ಇದ್ದಳು.
“ಸಾಕು ಬಿಡೆ…ಪಾಪ ಅವಳು. ಎಷ್ಟು ನೊಂದಿದ್ದಾಳೆ ಅಂತ ನಿನಗೆ ಅಂದಾಜಿಲ್ಲ. ಅವರಿವರ ಮಾತಿಗೆ ಉಪ್ಪು ಖಾರ ಸೇರಿಸಿ ಹೇಳ್ಕೊಂಡು ತಿರುಗಬೇಡ. ಅವಳ ಕಿವಿಗೆ ಬಿದ್ದು, ಹೆಚ್ಚು ಕಮ್ಮಿ ಮಾಡ್ಕೊಂಡ್ರೆ ನೀನೆ ಹೊಣೆ” ಎಂದಿದ್ದಷ್ಟೇ.
” ಅಯ್ಯೋ ಪಾಪ ಅಂದರೆ ಆರು ತಿಂಗಳು ಆಯಸ್ಸು ಕಮ್ಮಿ. ಇಷ್ಟು ವರ್ಷ ಮಾತಿಲ್ಲ. ಕತೆಯಿಲ್ಲ. ಒಂದಿನ ಕಾರ್ಯವಾಸಿ ಕತ್ತೆಕಾಲು ಹಿಡಿ ಅಂತ ಅವಳು ಬಂದು ಹೋಗಿದ್ದಕ್ಕೆ, ಪರ ವಹಿಸ್ಕೊಂಡು ಮಾತಾಡ್ತಿದ್ದೀಯ? ಮನೆ-ಆಫೀಸು- ಕೆಲಸ-ಮಕ್ಕಳು ಅಂತ ಚಕ್ರ ಸುತ್ತುತ್ತಿರೋ ನಿನಗೆ ಈ ಸೂಕ್ಷ್ಮ ಅರ್ಥವಾಗಲ್ಲ ಕಣೆ. ಅವಳು ಮಾಡ್ತಿರೋದು ಸರಿಯಲ್ಲ ಅಷ್ಟೇ. ಇನ್ನೊಂದು ಸಲ ನಿನಗೆ ಸಿಕ್ಕಾಗ ಹೇಳು. ವಯಸ್ಸಾದ ಅಪ್ಪ ಅಮ್ಮನ ಮುಖ ನೋಡಿಯಾದ್ರೂ ಸೆಟಲ್ ಆಗೋಕೆ. ಇನ್ನು ಹತ್ತು ವರ್ಷ ಬಿಟ್ಟರೆ, ಅವರೂ ಇರಲ್ಲ. ಒಂಟಿ ಬಾಳಿಗೆ ಗ್ಯಾರೆಂಟಿ ಏನು? ಹೀಗೇ ಘಟ್ಟಿಸಿ ಕೇಳಬೇಕು ನೀನು.”
ಅವಳ ಮಾತಿಗೆ ಜವಾಬು ಕೊಡಲಿಲ್ಲವೆಂದೋ ಏನೋ ಆಶಾ ಮೊದಲ ಸಲ ಬೇಗನೆ ಮಾತು ಮುಗಿಸಿದ್ದಳು.
ಯಾರಿಗೆ ಯಾರು ಗ್ಯಾರೆಂಟಿ ಎಂದುಕೊಳ್ಳುತ್ತಿರುವಾಗಲೇ ಸೌಪರ್ಣಿಕಾ ಮೆಸೇಜ್ ಮಾಡಿದ್ದಳು.
” ದುಬೈಗೆ ಹೊರಟಿದ್ದೀನಿ ಕಣೆ. ಎರಡು ಮೂರು ವರ್ಷ ಇಲ್ಲಿಗೆ ಬರುವ ಯೋಚನೆಯಿಲ್ಲ. ಯಾರೋ ಬಂದು ಬಾಳು ಬೆಳಗಲಿ ಅಂತ ಕಾಯುವ ಮನಃಸ್ಥಿತಿಯೇ ತಪ್ಪು ಅನ್ನಿಸಿದೆ. ಮದುವೆಗಾಗಿ ನನ್ನ ಕಡೆಯಿಂದ ಎಲ್ಲ ಬಗೆಯ ಪ್ರಯತ್ನ ಮಾಡಿ ಆಗಿದೆ. ಇನ್ನೇನಿದ್ದರೂ ನನ್ನ ದಾರಿ ನನ್ನ ಗುರಿ ನಾನೇ ಹುಡುಕಿಕೊಳ್ಳಬೇಕು. ಸ್ವಲ್ಪ ಕಾಲ ಈ ಜನ, ಅವರ ಮಾತುಕತೆ, ಸ್ನೇಹ, ಸಂಬಂಧ, ಸಲಹೆ, ಕುಹಕ ಎಲ್ಲದರಿಂದ ವಿರಾಮ ಬೇಕು. ನನ್ನ ಬಗ್ಗೆ ಯಾರೊಂದಿಗೂ ವಾದಕ್ಕಿಳಿಯಬೇಡ. ಅವರವರ ಮಾತು ಅವರಾಡಿ ಹಗುರಾಗಲಿ. ನಾನು ಆರಾಮಾಗಿರುವೆ. ಮತ್ತೆ ಸಿಗೋಣ.‌”
“ಒಳ್ಳೆಯದಾಗಲಿ. ನೆನಪಾದಾಗೆಲ್ಲ ಕಾಲ್ ಮಾಡು. ಆಲ್ ದಿ ಬೆಸ್ಟ್” ಎಂದು ಕಳಿಸಿದ ಸಂದೇಶ ಹಲವು ದಿನಗಳ ಕಾಲ ಸಿಂಗಲ್ ಟಿಕ್ ಆಗಿಯೇ ಉಳಿದಿತ್ತು.


14 thoughts on “ಸಿಂಗಲ್ ಟಿಕ್ ಸಣ್ಣ ಕಥೆ-ಎಸ್ ನಾಗಶ್ರೀ ಅಜಯ್

  1. ಚಿಕ್ಕದಾದ ಚೊಕ್ಕದಾದ ಕಥೆ, ಓದಲು ಶುರುಮಾಡಿದಾಗಿನಿಂದಲೂ ಓದಿಸಿಕೊಂಡು ಹೋಗುತ್ತದೆ.

  2. ಬಹಳ ಸೊಗಸಾಗಿದೆ… ಒಬ್ಬರ ವ್ಯಂಗ್ಯ, ಜಡ್ಜ್‌ ಮಾಡೋ‌ ಮನಸ್ಥಿತಿ ಬಗ್ಗೆ ಯೋಚಿಸುವಂತೆ ಮಾಡುತ್ತೆ… ದೂರದಿಂದ ನಮಗೆ ಕಂಡಂತಲ್ಲ.. ಒಬ್ಬರ ಬದುಕು.. ಅವರ ಕಷ್ಟ ಅವರಿಗಷ್ಟೇ ಗೊತ್ತಿರುತ್ತೆ… ತುಂಬಾ ಚೆನ್ನಾಗಿ ಬರೆದಿದ್ದೀರಿ.. ಬರವಣಿಗೆಯಲ್ಲಿನ‌ ಸಹಜತೆ ಓದಿಸಿಕೊಂಡು ಹೋಗುತ್ತೆ… ಹೀಗೆ ಬರೆಯುತ್ತಿರಿ ನಾಗ ಶ್ರೀ….

  3. ಬಹಳ ಚಂದದ ಕಥೆ. ಯಾವ್ಯಾವ ಕಾರಣಗಳಿಗೋ ಯಾರ್ಯಾರ ಫೋನಲ್ಲೋ ನಾವು ಸಿಂಗಲ್ ಟಿಕ್ಕಾಗೇ ಉಳಿದುಬಿಡ್ತೀವಿ. ಅದು ನಮ್ಮ choice. ಹಾಗೆಯೇ ಬೇಕಾದವರ ಫೋನಲ್ಲಿ ಸಂದೇಶ ತಲುಪಿದ ಕ್ಷಣದಲ್ಲೇ ಡಬ್ಬಲ್ ಟಿಕ್ ಆಗ್ತೀವಿ. ಅದೂ ನಮ್ಮ choice. ಸುತ್ತಾಮುತ್ತಾ ಜಡ್ಜ್ ಮಾಡುವವರೇ ಇದ್ದಾಗ, ಮನಃಶ್ಯಾಂತಿಗೆ ಇದೊಳ್ಳೆ ಮದ್ದು.‌ ಕಡ್ಡಿಗೆ happy times in Dubai.

  4. ಹೆಣ್ಣು ಮಕ್ಕಳು ದಪ್ಪಗಿದ್ದರೂ ಮಾತಾಡ್ತಾರೆ
    ತೆಳ್ಳಗೆ ಇದ್ಮಾದರು ಮಾತಾಡ್ತಾರೆ
    ಅನ್ನುವ ವಿಷಯ ಇಟ್ಟುಕೊಂಡು
    ತಮ್ಮ ಬದುಕಿಗೆ ಹೇಗಿರಬೇಕು ಹಾಗಿರುವುದೇ ಉತ್ತಮ ಎಂದು ಓದಿಸಿಕೊಂಡು ಕೊಂಡು ಹೋಗುವ ಕಥೆ ತುಂಬಾ ಚೆಂದ ಮೇಡಂ ಚಪ್ಪಾಳೆ

    1. ಹೆಣ್ಣು ಮಕ್ಕಳು ದಪ್ಪಗಿದ್ದರೂ ಮಾತಾಡ್ತಾರೆ
      ತೆಳ್ಳಗೆ ಇದ್ರು ಮಾತಾಡುತ್ತಾರೆ
      ಅನ್ನುವ ವಿಷಯ ಇಟ್ಟುಕೊಂಡು
      ತಮ್ಮ ಬದುಕಿಗೆ ಹೇಗಿರಬೇಕು ಹಾಗಿರುವುದೇ ಉತ್ತಮ ಎಂದು ಓದಿಸಿಕೊಂಡು ಕೊಂಡು ಹೋಗುವ ಕಥೆ ತುಂಬಾ ಚೆಂದ ಮೇಡಂ ಚಪ್ಪಾಳೆ

  5. ತುಂಬಾ ಸಹಜವಾಗಿ ಓದಿಸಿಕೊಂಡು ಹೋಗುವ ಕಥೆ ಮತ್ತು ಶೈಲಿ ಎರಡೂ ಇಷ್ಟವಾಯಿತು.

    ಹೆಚ್.ಮಂಜುಳಾ

  6. ಸಮಯಾವಕಾಶ ಮಾಡಿಕೊಂಡು ಓದಿ, ಆತ್ಮೀಯವಾಗಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು

    1. ಇಲ್ಲ. ನನ್ನ ಕಥೆಯಲ್ಲಿ ಯಾರನ್ನೂ ಕೊಲ್ಲಲಾರೆ. ಆಕೆ ದುಬೈಯಲ್ಲೇ ಇದ್ದಾಳೆ. ಹೊಸ ಬದುಕಿನ ಸಾಧ್ಯತೆಗಳನ್ನು ಕಂಡುಕೊಳ್ಳುವ ಸಾಹಸಿಯಾಗಿದ್ದಾಳೆ. ಸ್ವಲ್ಪ ಕಾಲ ಹಳೆಯ ಬದುಕಿನ ಜನರ ಸಂಪರ್ಕದಿಂದ ದೂರವಿದ್ದಾಳೆ ಅಷ್ಟೇ

      ಧನ್ಯವಾದಗಳು

      -ಎಸ್ ನಾಗಶ್ರೀ ಅಜಯ್

  7. ತುಂಬಾ ಚೆನ್ನಾಗಿ ಸಹಜವಾಗಿ ಕಥೆ ಓದಿಸಿಕೊಂಡು ಹೋಗುತ್ತದೆ.,..ಈ ಜಗತ್ತಿನ ಇಂದಿನ ಸತ್ಯ…. ಒಳ್ಳೆಯ ಕಥೆ ಮತ್ತು ನಿರೂಪಣೆ… ಅಭಿನಂದನೆಗಳು

Leave a Reply

Back To Top