ಕಾವ್ಯಸಂಗಾತಿ
ಪ್ರೇಮಾ ಟಿ ಎಂ ಆರ್ .
‘ಎಲೆ ಹಸಿರೇ ನೀನು ನನಗಿಂತ ಜಾಣೆ’
ಎಲೆ ಹಸಿರೇ ನೀನು ನನಗಿಂತ ಜಾಣೆ
ಕಲ್ಲನ್ನೂ ಕರಗಿಸಿ ಮೈತುಂಬಾ
ಹಸಿರ ಮೆತ್ತಿ ನಗುವೆಯಲ್ಲೇ ಮುಗುದೆ….
ಯಾವ ಮೋಡಿಯ ಮಾಡಿದೆ ಹೇಳು
ನಾ ನಡೆವ ಹಾದಿಯ ತುಂಬಾ
ಕಲ್ಲುಗಳೇ ತುಂಬಿವೆಯಲ್ಲೇ
ಅದೆಷ್ಟು ನೀರು ಹನಿಸಿದೆನೋ ಲೆಕ್ಕವಿಲ್ಲ
ಇನಿತು ಕರಗಿಲ್ಲ ನೋಡು ಕಲ್ಲೆದೆಗಳು……
ನಗುತ್ತೇನೆ ನಗಿಸುವ ಪ್ರಯತ್ನದಲ್ಲಿ ಸೋಲುತ್ತೇನೆ ಮತ್ತೆ ಕಾರಣವಿಲ್ಲದೆಯೂ
ನಗುತ್ತೇನೆ ನಗುತ್ತಲೇ ಅತ್ತಿದ್ದು
ಅದೆಷ್ಟು ಬಾರಿಯೋ…..
ಸೋತು ಸೊರಗಿದರೂ ಮತ್ತೆ ಗೆಲುವಾಗುತ್ತೇನೆ
ಮೆದುವಾಗುತ್ತೇನೆ ಹುದುಗುತ್ತೇನೆ
ಬುದುಗುತ್ತೇನೆ
ಒಲವಾಗುತ್ತೇನೆ ಒಲಿಸಿಕೊಳ್ಳಲು
ಹೆಣಗುತ್ತೇನೆ……
ಬುಡುಬುಡುಕಿಯೂ ಆಗಿದ್ದಿದೆ ಒಮ್ಮೊಮ್ಮೆ
ಅಳುತ್ತೇನೆ ಕಣ್ಣೀರಾಗುತ್ತೇನೆ
ನೆನೆಯುತ್ತೇನೆ ನಯವಾಗುತ್ತೇನೆ ನುಳಿಯಾಗುತ್ತೇನೆ
ನಾದುತ್ತೇನೆ ನಿಯತ್ತಿನಿಂದ
ನೇಯುತ್ತೇನೆ ಹಸೆಯಂತೆ ಹದವಾಗಿಸಲು
ಗುನುಗುತ್ತೇನೆ
ಗಿಳಿಯಾಗಿ ಉಲಿಯುತ್ತೇನೆ
ಕೋಗಿಲೆಯಾಗಿ ಹಾಡುವದು
ನವಿಲಾಗಿ ನಲಿಯುವದು
ನಾನಲ್ಲವೇನೆ…….?
ಹೆಜ್ಜೆಯಿಟ್ಟಲೆಲ್ಲ ಹೂವಾಗಿ
ಹಾಸಿಕೊಳ್ಳುತ್ತೇನೆ ನಲುಗುತ್ತೇನೆ
ಭಾವಗಳ ನುಲಿಯುತ್ತೇನೆ
ನಿನಾದವಾಗುತ್ತೇನೆ
ಹೊಗಳುತ್ತೇನೆ
ಹೊಗಳಿಸಿಕೊಂಡು ಅಭ್ಯಾಸವಿಲ್ಲ ಬಿಡು
ಎದೆತುಂಬಿ ಹರಸುತ್ತೇನೆ ಹಾರೈಸುತ್ತೇನೆ
ಹೀಗಿದ್ದರೂ ಸೋಲುತ್ತೇನೆ
ಅಥವಾ ಸೋತಂತೆ ನಟಿಸುತ್ತೇನೆ
ನಟಿಸಿ ಕಲ್ಲುಗಳೆದೆಯ ಅಹಮ್ಮು
ಮನ್ನಿಸುತ್ತೇನೆ
ಮತ್ತೇನಮಾಡಲಿ ಹೇಳು……..?
ಬವಣೆಯಲ್ಲೂ ಬದುಕುತ್ತೇನೆ ಬಾಳುತ್ತೇನೆ
ಬಾಳಿಸುತ್ತೇನೆ ಬಾಳಿಸಿದರೂ
ಹೆರರ ಹಂಗಲ್ಲಿರುವಂತೆ ಬಳುಕುತ್ತೇನೆ
ಬಾಗುತ್ತೇನೆ
ಚಿಗುರಾಗುತ್ತೇನೆ ತಳಿರಾಗುತ್ತೇನೆ
ಕವಿಗಳಂಗಳದ ಬಾಲೆ ಬಾಳೆ ಬಿಳಲು ಬಳ್ಳಿ
ಗುಲಾಬಿ ಮಲ್ಲಿಗೆ ಮೃದು
ಮಧುರ ಎಲ್ಲವೂ ನಾನೇ
ಹೊಟ್ಟೆಯಲ್ಲಿಟ್ಟುಕೊಂಡು ಹೊರುತ್ತೇನೆ
ಉಸಿರು ನೀಡುತ್ತೇನೆ
ಹೆರುತ್ತೇನೆ ತೊಟ್ಟಿಲಾಗುತ್ತೇನೆ
ತೊಟ್ಟಿಲಿಗೆ ತೂಗುವ ದಾರವೂ ನಾನೇ
ಮೇಲೇರುವ ಮೆಟ್ಟಿಲಾಗುತ್ತೇನೆ
ಹೊಲಿಯುತ್ತೇನೆ ತೇಪೆ ಹಚ್ಚುವದು
ನನಗೆ ತೀರಾ ಸಲೀಸು
ಇಲ್ಲದಿದ್ದರೆ ಅದೆಷ್ಟು ಮನೆ ಮನೆತನಗಳು
ಚೂರಾಗಿ ಬೀರಾಡುತ್ತಿದ್ದವೋ
ತುಂಬುತ್ತೇನೆ ತುಳುಕುತ್ತೇನೆ
ತುಳುಕಿದಾಗೆಲ್ಲ ಪಶ್ಚಾತ್ತಾಪದಿ ತೊಳಲಿ
ಬಳಲಿದ್ದೇನೆ ಮತ್ತೆ ಬೆಳಕಾಗಿದ್ದೇನೆ
ಬೆಳಗಿ ಬಯಲಾಗಿದ್ದೇನೆ
ತಿಕ್ಕುತ್ತೇನೆ ತೊಳೆಯುತ್ತೆನೆ
ಕುದಿಸುತ್ತಲೇ ಕುದಿದಿದ್ದೇನೆ
ತಣಿಸಿಕೊಂಡು ತಣ್ಣೆ ಅಂಬಲಿಯಾಗಿದ್ದೇನೆ
ಗಂಗೆ ಯಮುನೆ ತುಂಗೆ ಭದ್ರೆ
ನೀರಾಗಿ ಹರಿದಿದ್ದೇನೆ
ಹೊಳೆಯೊಳಗೆ ಸುಳಿಯಾಗಿದ್ದೇನೆ
ಹರಿವ ತೊರೆಯೊಳಗಣ ಮೀನು?
ಅನ್ನುತ್ತಾರೆ ನನ್ನ ಕಣ್ಣ ಕಂಡವರು
ಮೀನಾಕ್ಷಿ ನೀನೆಂದು
ಅವರು ನನ್ನ ಮುಖದೊಳಗಿನ
ಕಣ್ಣುಗಳನ್ನಷ್ಟೇ ಕಂಡರು
ಒಮ್ಮೆ ಒಳಗಣ್ಣನ್ನೂ ಕಂಡಿದ್ದರೆ……
ಮತ್ತೆ ನಾನು ನೀನು ಒಂದೇಯೇನೆ……?
ಉಹುಂ………, ನೀನು ನನಗಿಂತಲೂ ನಿಪುಣೆ
ಶಿಲೆಯೆದೆ ಸೀಳಿ ನೆಲೆಯಾದ
ಪರಿಯ ಹೇಳೆಲೆ ಜಾಣೆ…..
ನಿನ್ನಂತೆ ಮೈತುಂಬಾ ಚಿಗುರಿಕೊಂಡು
ಹಸಿರಾಗಲು ಹೆಸರಾಗಲು
ನಾನು ನಾನಾಗಲು ಏನ ಮಾಡಲಿ ಹೇಳು ಹಸಿರ ಹಂದರವೇ……..
ಪ್ರೇಮಾ ಟಿ ಎಮ್ ಆರ್