ಕಾವ್ಯ ಸಂಗಾತಿ
ಜೀವಪರಿ
ಅಲ್ಪವಿರಾಮ..
ಸಾಂತ್ವನಕೇನು? ಸಮಾಜ ಸೇವೆಯೇ ಗುರಿ!
ಯಾರು ಅತ್ತರೂ ಕಷ್ಟದಲಿದ್ದರೂ
ಓಡಿ ಬರುವುದು ತಾನೇ ಹೆಗಲು ನೀಡ್ವಂತೆ
ಕ್ಷಣಕಾಲವಷ್ಟೆ; ಮತ್ತೆ ಹೊರಟೇಬಿಡುವುದು
ಇನ್ನೊಂದು ಅಳು ಮುಖವ ಹುಡುಕಿ!….
ಕಷ್ಟ ಕಂಡವನು ಇಷ್ಟಿಷ್ಟಾಗಿಯೇ ಮೇಲೇರುವನು
ಆ ಕ್ಷಣದಲಿ ತನ್ನದೇ ಅತಿಯೆಂದನಿಸೀತಷ್ಟೇ…
ಆತ ಮತ್ತೆ ಮಾಮೂಲಿಗೆ ಹಿಂದಿರುಗುದು
ಕರುಣೆ ತೋರಿದ ಕಂಗಳ ಕಾರಣವಲ್ಲ
ಆದರಾಕಣ್ಣು ತಾನೇ ಸರಿಪಡಿಸಿದಂತೆಣಿಸಿ ಬೀಗುವುದು
ಸಾಂತ್ವನದ ಕೈಗಳಿಗೀಗ ಹಲವು ಹೆಸರುಗಳು
ಮಹಿಳಾ ಅಭಿವೃದ್ಧಿ ಇಲಾಖೆ, ಮಕ್ಕಳ ಕಲ್ಯಾಣ,
ಸೇವಾ ಸಂಘ, ಸಮಾಜ ಸೇವಕ ಜೊತೆ ಸೇವಕಿ
ಆದರದು ಹೆಸರು ಹಬ್ಬುವ ತನಕ ಮಾತ್ರ
ಎಲ್ಲವೂ ಮುಗಿದಿರಲು ಹೆಸರಿಲ್ಲದಂತೆ ಕಾಲ್ಕೀಳ್ವರು
ದು:ಖ ದುಮ್ಮಾನದಲಿ ಪಾಲು ನೀಡಲಾಗದು
ಬಂದವರು ಪ್ರೀತಿಯಲಿ ತೆಗೆದುಕೊಳ್ಳಲೂ ಆಗದು
ತೋರಿದ ಕರುಣೆ ತೂರಿದ ಪ್ರೇರಣೆ ಅಲ್ಪಕಾಲಿಕ
ಬಿದ್ದವನೇ ಎದ್ದು ನಿಲ್ಲಬೇಕು ಮುಂದೆ ನಡೆಯಬೇಕು
ಈ ನಡುವೆ ಸಾಂತ್ವನ ನೋವಿಗೊಂದು ಅಲ್ಪವಿರಾಮ…..
ಜೀವಪರಿ