ಕಾವ್ಯ ಸಂಗಾತಿ
ಡಾ ಗೀತಾ ಡಿಗ್ಗೆ
ತುಂಬಿ ಬಂದಿದೆ
ಮನೆ ಅಂಗಳದಲಿ
ಆಡುತಿವೆ ನಾಯಿ
ಬೆಕ್ಕು ಗಿಳಿ ಮರಿಗಳು
ದ್ವೇಷ ಮರೆತು
ಸ್ನೇಹದಿ ಬೆರೆತು ಮೈಮರೆತಿರುವದು
ಕಂಡು ಮನವು
ತುಂಬಿ ಬಂದಿದೆ
ಒಂದೇ ಕರುಳ
ಬಳ್ಳಿಗಳು ಬೆಳೆಯುತ
ದಾಯಾದಿಗಳಾಗಿ
ಕಚ್ಚಾಡುವ ಕಾಲದಲಿ
ಖಗ -ಮೃಗ ಬಾಂಧವ್ಯಕೆ
ಸೋತು ಮನವು
ತುಂಬಿ ಬಂದಿದೆ
ಗಿಡಮರ ಬಳ್ಳಿ
ಗರಿಕೆಹುಲ್ಲು ಬಿಸಿಲು
ಬಿರುಗಾಳಿ ಮಳೆ ಅಬ್ಬರ
ಎದುರಿಸಿ ಅಸ್ತಿತ್ವ
ಉಳಿಸಿಕೊಳುತ
ಹೂವು ಕಾಯಿ ಹಣ್ಣು
ನೀಡಿ ಅರಸಿ ಬಂದವರಿಗೆ
ಆಶ್ರಯ ನೀಡುತಲಿ
ಜಗದ ಉಸಿರಾದ
ಪರೋಪಕಾರಿ ಬದುಕು
ಕಂಡು ಮನವು
ತುಂಬಿ ಬಂದಿದೆ
ಮನುಜರಾಗಿ ಮೌಲ್ಯ
ಮರೆತು ಅಧಿಕಾರ
ಅಂತಸ್ತು ತನಗೇ ಎನುತ
ಅಟ್ಟಹಾಸದಿ ನಿಸರ್ಗ
ನಿರ್ನಾಮ ಮಾಡುತ
ತನ್ನದೇ ಗೋರಿ ತಾನೇ
ತೋಡುತಿರುವ
ದುರದೃಷ್ಟದ ಬದುಕು
ಕಂಡು ಭಯದಲಿ ಮನವು
ತುಂಬಿ ಬಂದಿದೆ
—————————————–[
ಡಾ ಗೀತಾ ಡಿಗ್ಗೆ
ಕವನ ಸಂಕಲನ ತುಂಬಾ ಚನ್ನಾಗಿದೆ ಮೇಡಂ