ಕಾವ್ಯಸಂಗಾತಿ
ನಾಗರಾಜ್ ಹರಪನಹಳ್ಳಿ
ಹೆರಳ ಒಣಗಿಸಲು ನಿಂತಂತಿದೆ
ದಂಡೆ ,ಸಮುದ್ರ ಒಮ್ಮೆಲೆ ಮಳೆಯಲ್ಲಿ ಮಿಂದೆದ್ದಿವೆ
ಥೇಟ್ ನಿನ್ನ ಹಾಗೆ
ನೀನು ಸೆರಗು ಹೊದ್ದು, ನೀರಿಗೆ ಚಿಮ್ಮಿಸಿ ನಡೆದಂತೆ
ಮಳೆ ಸಮುದ್ರದ ಮೇಲೆ ನಡೆದಿದೆ
ಸಮುದ್ರ ಮೊಟ್ಟ ಮೊದಲಿಗೆ ತಲೆ ಸ್ನಾನ ಮಾಡಿ,
ಕಡಲ ಜಗುಲಿಗೆ
ಹೆರಳ ಒಣಗಿಸಲು ನಿಂತಂತಿದೆ
ಒಂದೇ ಸಮನೆ ಸುರಿವ ಮಳೆಗೆ
ನದಿ ಕುದಿಯುತ್ತಿದೆ
ವಯ್ಯಾರದಿ ನಗುತ್ತಿದೆ ;
ನಿನ್ನ ಹಾಗೆ
ಮುಗಿಲು ಕಡಲು ಒಂದಾದ ಸಮಯ
ನಾವು ತುಟಿಗೆ ತುಟಿ ಸೇರಿಸಿದಂತೆ
ಬಿಸಿಲೆಗೆ ಕಾದ ಭೂಮಿ
ಮುಂಗಾರಿಗೆ
ಮೈಚೆಲ್ಲಿ , ಹೊಸ ಸೀರೆಯುಟ್ಟಿದೆ
ಮಳೆಗೆ ಹಗಲಾದರೇನು
ಇರುಳಾದರೇನು ?
ಸುರಿಯುವುದೇ ಸುಖ ;
ಮಿಲನದ ಹಾಗೆ
ಮಳೆಯ ಧ್ಯಾನಿಸುವ ಕಡಲು , ಭೂಮಿ, ಆಗಸ
ಮತ್ತು ನೀನು
ಎಲ್ಲರೂ ಒಂದೇ
ಮಳೆ ಬರುವಾಗ
ನಾನು ನೀನು
ಮತ್ತು
ಜಗತ್ತಿಗೆ ಒಂದೇ ಧ್ಯಾನ
‘ಮಳೆ ಸುರಿಯುತ್ತಿರಲಿ ‘
ಮುಗಿಲು ಕಪ್ಪಾಗಿತ್ತು
ಮೋಡ , ವಿಶಾಲ ಸಮುದ್ರ ಮೈಥುನಕ್ಕಿಳಿದವು
ದೋಣಿ ಮೇಲೆ ಕುಳಿತಿದ್ದ ಹಕ್ಕಿ
ಸಂಗಾತಿಯತ್ತ ತಿರುಗಿ
ಕಣ್ಮಿಟುಕಿಸಿತು
ನಾಗರಾಜ್ ಹರಪನಹಳ್ಳಿ
ಚೆಂದದ ಕವಿತೆ