ಗಾಳೇರ ಬಾತ್

ಗಾಳೇರ ಬಾತ್-06

ಆ ದಿನಗಳ ದಸರಾ……

kulasekarapattinam: Kulasekarapattinam basks in colourful Dussehra ...

ಆ ದಿನಗಳ ದಸರಾ……

        ದಸರಾ ಹಬ್ಬಕ್ಕೆ ನಮ್ಮ ಕಡೆಯ ಹಳ್ಳಿಗಳಲ್ಲಿ  ಮಾರ್ನಮಿ ಹಬ್ಬ ಅಂತ ಕರೀತಾರೆ. ಮಾರ್ನಮಿ ಹಬ್ಬ ಅಂದ್ರೆ ಸಾಕು, ನಮಗೆ ಎಲ್ಲಿಲ್ಲದ ಖುಷಿ, ಎಲ್ಲಿಲ್ಲದ ಆನಂದ. ಯಾಕಂದ್ರೆ ಈ ಹಬ್ಬಕ್ಕೆ ನಮಗೆಲ್ಲಾ ಹೊಸಬಟ್ಟೆಗಳು! ಆ ಬಟ್ಟೆಗಳನ್ನ ನೆನಸಿಕೊಂಡ್ರೆ ಇವತ್ತಿಗೂ ನಗು ತಡಿಯೋಕೆ ಆಗಲ್ಲ ಕಣ್ರಿ. ಆಗ ನಮಗೆ ಚಡ್ಡಿ ಮತ್ತೆ ಅಂಗಿ, ಆಗಿನ ಚಡ್ಡಿಗಳನ್ನ ಇವತ್ತಿನ ಬರ್ಮುಡಾ ಗಳಿಗೆ ಹೋಲಿಸಬಹುದು ನೋಡ್ರಿ. ಯಾಕಪ್ಪಾ ಇಷ್ಟು ದೊಡ್ಡದು ಅಂತ ಕೇಳೋಕೆ ಹೋಗಬೇಡ್ರಿ ; ಯಾಕೆಂದ್ರೆ ಬೆಳೆ ಮಕ್ಕಳು ನೋಡು ನೋಡುತ ಮಾರುದ್ದ ಬೆಳಿತಾರ ದೊಡ್ಡವಾದ್ರಾ ಒಂದನಾಲ್ಕು ವರ್ಷ ಹಾಕೊಬಹುದಂತ future plan ನಮ್ಮ ಹೆತ್ತವರದು

.

       ನಿನ್ನೆ ನಾನು, ಒಬ್ಳು ಫೇಸ್ಬುಕ್ ಫ್ರೆಂಡ್ ದೀಪ ಅಂತ; ಅವ್ಳಿಗೆ ಕಾಲ್ ಮಾಡಿದೆ. “ಹಾಯ್ ಮೇಡಂ ಹಬ್ಬ ಜೋರ”. ಆ ಕಡೆಯಿಂದ “ಹಾಯ್ ಸರ್ ಹೇಗಿದ್ದೀರಾ, ಯಾವ ಹಬ್ಬ! ಅಷ್ಟೇನಿಲ್ಲ ಬಿಡಿ ಮಾಮೂಲಿ ಇದ್ದಿದೇ”. ಮತ್ತೆ ನಾನು “ಯಾಕ್ ಮೇಡಂ ಮೈಸೂರಿಗೆ ಹೋಗ್ಲಿಲ್ವಾ ದಸರಾಕ್ಕೆ” ಆ ಕಡೆಯಿಂದ “ಹೇ ಏನು ದಸರಾ ನಾ, ಏನೋ ಬಿಡ್ರಿ, ಈ ಟೈಮಲ್ಲಿ ಮೈಸೂರು ನೋಡೋಕಾಗುತ್ತಾ, ಫುಲ್ ಜನ ಇರುತ್ತೆರಿ, ಇವಾಗ್ ಏನಾದ್ರೂ ಹೋದರೆ, ಮೈಕೈ ನೋವು ಮಾಡಿಕೊಂಡು ಸುಸ್ತಾಗಿ ಬರಬೇಕಾಗುತ್ತೆ, ಅಷ್ಟೇ ಕಥೆ”. ಈ ಮಾತುಗಳನ್ನು ಕೇಳಿ ನನಗೆ ಏನು ಹೇಳಬೇಕು ಅಂತ ತೋಚದೆ ನನ್ನ ಮುಖಕ್ಕೆ ನಾನೇ ಹೊಡಕಂಡಂಗಾಯಿತು. ಅದು ಕ್ಷಣ ಮಾತ್ರಕ್ಕೆ ನೋಡ್ರಿ ಯಾಕಂದ್ರಾ ನಾನು ಪಕ್ಕಾ village boy ಅಂತ ನಿಮಗೆ ಹೇಳೋ ಅವಶ್ಯಕತೆ ಇಲ್ಲ ಅನ್ಕೊಂಡಿನಿ. ಪಾಪ ಇದು ಅವರ ತಪ್ಪಲ್ಲ. ಬೃಹತ್ ಬೆಂಗಳೂರಿನ ತಪ್ಪು. ಮತ್ತೆ ನಾನು ಹೇಳಿದೆ “ನೋಡಿ ಮೇಡಂ, ಮೈಕೈ ನೋವು ಮಾಡಿಕೊಂಡು ನೋಡದರಲ್ಲಿ ಇರುವಂತ ಮಜ, ಮತ್ಯಾವುದರಲ್ಲಿಲ್ಲ ರೀ. ” ಅದಕ್ಕ ಆ ಕಡೆಯಿಂದ “ಹೇ ಬಿಡ್ರಿ ದಸರಾ ನೋಡಾಕ ಮೈಸೂರಿಗೆನಾ ಹೋಗಬೇಕಾ. ಇಲ್ಲೇ ಟಿ.ವಿಯಲ್ಲಿ ಅಲ್ಲಿಗಿಂತ ಚೆನ್ನಾಗಿ ಕಾಣ್ತಾದ, ಎನ್ನಬೇಕಾ! ಆಯಾಮ್ಮ” ಇದನ್ನ ಕೇಳಿ ನಂಗೆ ತಲೆ ತಿರುಗಿ ಬಿಳೋದೊಂದೆ ಬಾಕಿ ಇತ್ತು. ಯಪ್ಪ ಉಸ್ಸಾ ಅಂತ ಪೋನ್ ಇಟ್ಟು ನನ್ ಗೆಳೆಯನೊಬ್ಬನಿಗೆ ಪೋನ್ ಮಾಡಿದೆ.

          “ಏನೋ ಮಗ, ಊರಿಗೆ ಬರಲೇನೋ. ನಮ್ಮ  old ಡೌವ್ ಗಳೆಲ್ಲಾ ಬಂದಾರ; ಬಾರಲೇ ಎನ್ನಬೇಕಾ ಬಡ್ಡಿ ಮಗಾ”. Old ಡೌವ್ ಗಳು ಅಂದ ತಕ್ಷಣ ನಂಗೆ ಇವತ್ತಿಗೂ ನೆನಪಿಗೆ ಬರೋದಂದ್ರೆ; ಸರ್ಕಾರದವರು ಕೊಡತಿದ್ದ ಕಡು ನೀಲಿ, ತಿಳಿ ನೀಲಿ, ಲಂಗ ಮೇಲೊಂದಿಷ್ಟು ಅಂಗಿ ಅಂತ ಚೋಲಿ ಹಾಕೊಂಡು ನಮ್ಮ ಜೊತೆ ಎಮ್ಮಿಕರಗಳನ್ನ ಮೇಯಿಸೋಕೆ ಎರಡು ಜಡೆ ಇಳಿಬಿಟ್ಟು ಬರೋ ಹಳ್ಳಿ ಹುಡುಗಿರು. ಮತ್ತೆ “ಲೇ ಮೂಗ ಮಾತಾಡಲೇ ಆ ರೆಡ್ ಇಂಕ್ ನೆನಪಾದ್ಲ್ ಅನ್ನಬೇಕಾ”. ಯಪ್ಪ ಇದೇನೋ ಮಾತಡತಾನೋ ಇವನೌನ್; ಬಿಟ್ರೆ  ಪ್ರೈಮರಿ ಸ್ಕೂಲಲಿ ಓದಿರೋ ಹುಡುಗಿರನೆಲ್ಲಾ ನನ್ ಕೊಳ್ಳಿಗೆ ಕಟ್ಟಾಂಗ್ ಇದಾನ ಅನಿಸಿತು. ಆದ್ರೆ ಅವನೇನೋ ಕಟ್ಟಬಹುದು, ಕಟ್ಕೋಳಾಕೆ ಹುಡುಗಿರು ಬೇಕಲ್ಲ. ಎಲ್ರೂ ಕರಿಮಣಿ ಕಟ್ಕೋಂಡು; ಕೈಯಲ್ಲೊಂದು ಬ್ಯಾಗ್, ಕುಂಕಳದಲ್ಲೊಂದು ಮಗು. ಹೀಗೆ ನಮ್ಮ ಹಳ್ಳಿ ಹುಗಿಯರ ಬದುಕಿನ ಬಣ್ಣವೇ ಬದಲಾಗಿತ್ತು. ಅಷ್ಟ್ರಲ್ಲಿ ನೋ ಹೊರಗಡೆ ಶಬ್ದ!  ಹೋಗಿ ನೋಡಿದ್ರೆ ಬಡ್ಡಿ ಮಗಂದು ಬೆಕ್ಕು ಇಲಿ ತಿನ್ನಾಕ ಓಡಾಡುತ್ತಿತ್ತು. ಆ ನನ್ ಗೆಳೆಯಗ ಮತ್ತೆ phone ಮಾಡೋ ಗೋಜಿಗೆ ಹೋಗಲಿಲ್ಲ.

       ನಾನು ದಸರಾ ಬಗ್ಗೆ ಹೇಳ್ತಾ ಇದ್ದೆ ಅಲ್ವಾ! ಹೌದು ನಮ್ಮ ಹಳ್ಳಿಗಳ ದಸರಾವನ್ನು ನೋಡೋದೇ ಒಂದು ಚಂದ. ಚಂದಚಂದದ ಲಂಗ ದಾವಣಿ ಹಾಕಿಕೊಂಡು ಹಳ್ಳಿ ಹುಡುಗೇರು, ಎದುರುಗಡೆ ಮನೆ ಹುಡುಗರು ನೋಡಲಿ ಅಂತ ಹಲ್ಲಕಿಸ್ಕಂಡು ನಿಂತಾಗ ಹಿಂದಿನಿಂದ ಅವರಜ್ಜ ಬಂದು “ಏ ಇಲ್ಲೇನು ಮಾಡ್ತೀಯಾ,  ಯಾಕ ಹಲ್ಲುಕಿಸಗೊಂಡ ನಿಂತೀಯಾ! ಅವನಿಗೆ ಹೇಳಿದೆ ಹೆಣ್ಮಕ್ಕಳಿಗೆ ಜಾಸ್ತಿ ಕಲಿಸೋದು ಬೇಡಂತ; ಎಲ್ಲಿ ಕೇಳ್ತಾನ, ನನ್ನ ಮಾತು, ಬಿದ್ದಾಡದೋನು”, ಅಂತ ಎಚ್ಚರಿಸೋ ಅರವತ್ತು ದಾಟಿದ ಮುದಕರು ಸಹ ನನ್ನ ಹಳೆ ಡವ್ ಬಂದಿರಬಹುದಾ ಅಂತ ಕುತೂಹಲ ಕೆರಳಿಸೋ ದಸರಾ ಕಣ್ರೀ ಇದು. ನನಗೆ ಇನ್ನೂ ಸರಿಯಾಗಿ ನೆನಪಿದೆ; ನಮ್ಮ ಮನೆಯಲ್ಲಿ ಆಗ ನವಣೆ ಅನ್ನ ಮಾಡ್ತದ್ವಿ. ಅದು ನಮ್ಮ ದೈನಂದಿನ ಆಹಾರ ಆಗಿತ್ತು. ನೆಲ್ಲಕ್ಕಿ ಅನ್ನ ಮಾಡೊದು, ಹಬ್ಬ ಹರಿದಿನಗಳಲ್ಲಿ ಮಾತ್ರ. ಅದು ಸೋಸೈಟಿಯಲ್ಲಿ ಕೊಡೋ ನೆಲ್ಲಕ್ಕಿ, ಅದರಲ್ಲಿ ಬಹುಪಾಲು ಶಾಲಿ ಹುಡುಗರಿಗೆ ಕೊಡೋ ಅಕ್ಕಿನೇ ಹಬ್ಬಕ್ಕೆ ಶೇಖರಣೆ ಮಾಡಿಡತಿದ್ರು ಮನಿಗೆ ಹಿರೆ ತಲೆ ಅನಿಸಿಕೊಂಡ  ಅಜ್ಜಿಗಳು. ನೆಲ್ಲಕ್ಕಿ ಅನ್ನ, ಗೋದಿ ಹುಗ್ಗಿ, ಆಕಳ ತುಪ್ಪ, ಜೊತೆಗೆ ಒಲೆಯಲ್ಲಿ ಹಾಕಿ ಸುಟ್ಟ ಹಪ್ಪಳ. ಮನೆಯ ಎಲ್ಲಾ ಗಂಡಸರು, ಮಕ್ಕಳಿಗೆ ಉಣ್ಣಾಕ ನೀಡಿ. ಅಡುಗೆ ಹೇಗಿದೇನೋ ಏನೋ! ಅಂತ ಸೆರಗನ್ನ ತಲೆ ತುಂಬಾ ಹೊದ್ಕೊಂಡು, ಆಕಾಶವೇ ನೆಲದ ಮೇಲೆ ಬಿದ್ದಿರೋ ತರ ನಮ್ಮ ಹಳ್ಳಿ ಸೊಸೆಯಂದಿಯರ ಮಾರಿಗಳನ್ ನೋಡೋದೆ ಒಂದು ಚೆಂದ.

        ಇನ್ನೂ ದಸರಾದಲ್ಲಿ ಆಯುಧಪೂಜೆಯನ್ನುವುದು. ಇಂದಿಗೂ ಹಳ್ಳಿಗಳಲ್ಲಿ ವಿಶೇಷ ಸ್ಥಾನಮಾನವನ್ನು ಪಡೆದುಕೊಂಡಿದೆಂದರೆ ತಪ್ಪಾಗಲಾರದು. ಮನೆಯಲ್ಲಿರುವ ಎಲ್ಲಾ ಆಯುಧಗಳು ಬೆಳಕಿಗೆ ಬರುತ್ತವೆ. ಅಜ್ಜ ಹಂದಿ ಓಡಿಸಲೆಂದು ತಂದಿದ್ದ ಭರ್ಚಿ, ಅಪ್ಪನ ಗಳೆಸಮಾನುಗಳು, ಕುಡುಗೋಲು, ಕುರ್ಚಿಗಿ, ಚಾಕು, ಚೂರಿ, ಒಳಕಲ್ಲು, ಬೀಸೋ ಕಲ್ಲು, ಗುಂಡಕಲ್ಲು, ಇವೆಲ್ಲವೂ ದಸರಾ ದಿನ ದೇವರಾಗಿ ಹೊಸ ರೂಪ ಪಡೆದು ಕೊಂಡಿರುತ್ತವೆ. ಇನ್ನೂ ನಮ್ಮಜ್ಜಿ ಪೂಜೆ ಹೇಳೋದೆ ಒಂದು ಚೆಂದ ಕಣ್ರೀ. ವರ್ಷಗಟ್ಟಲೆ ಮನೆಯ ಮೂಲೆಯೊಂದರಲ್ಲಿ ನೇತಾಡುತ್ತಾ ಜಾಡು ಮೆತ್ತಿ, ಕಪ್ಪು ಹಿಡಿದಿದ್ದ ಮಣ್ಣಿನ ಕುಡಿಕೆಯನ್ನು ತೊಳೆದು,  ಬಳಿದು , ಸಿಂಗರಿಸಿ ಅದಕ್ಕೆ, ಊರಿನ ಕರಿಯಮ್ಮ ದೇವಿ ಅಂತ ಬಿರುದು ನೀಡಿ. ಸಿಹಿ ಪದಾರ್ಥದ ಹೆಡೆ ಇಟ್ಟು. ನಂತರ ಅದನ್ನು ಹುಡಿಯಲ್ಲಿ ತುಂಬಿಕೊಂಡು; ಕರಿಯಮ್ಮ ನಿನ್ನಾಲಿಕೆಗೆ ಉಧೋ ಉಧೋ ಎಂದು ದೇವರ ಕೇಲ್ನ್ ನಮ್ಮೂರ ಹಳೆ ಬಾವಿಗೆ ಕಳಿಸಿ ಬರಲಿಕ್ಕೆ ಹೊರಡುವುದು. ಇಂತಹ ಎಷ್ಟೊಂದು ವಿಸ್ಮಯ ಆಚರಣೆಗಳು ಹಳ್ಳಿಯಲ್ಲಿ ಈಗಲೂ ಲಭ್ಯ.

       ನಮ್ಮೂರ ದಸರಾ ಅಂದರೆ, ಬನ್ನಿ ಮುಡಿಯುವುದು ಹೇಳದೇ ಇದ್ರೇ ಹಬ್ಬ ಪೂರ್ತಿಯಾಗಲ್ಲ. ಏಕೆಂದರೆ ಬನ್ನಿಗೂ ಇವತ್ತಿಗೂ ಪವಿತ್ರವಾದ ಸ್ಥಾನವಿದೆ. ಅಂತ ಬನ್ನಿಯನ್ನು ಹಿರಿಯರು ಕಿರಿಯರು ವಿನಿಮಯ ಮಾಡಿಕೊಂಡು. ಕಿರಿಯರು ಹಿರಿಯರ ಕಾಲಿಗೆ ನಮಸ್ಕರಿಸಿದಾಗ, ಹಿರಿಯರು ಅದಕ್ಕೆ ಪ್ರತಿ ಬನ್ನಿ ನೀಡಿ. “ಬನ್ನಿ ತಗೊಂಡು ಬಂಗಾರದಂಗ ಇರು” ಎನ್ನುವ ಆರ್ಶೀವಾದ. ಇನ್ನೂ ಎಷ್ಟೆಷ್ಟೋ ಸಂಗತಿಗಳು, ಆಚರಣೆಗಳು ಈ ಹಬ್ಬ ನಮ್ಮ ಹಳ್ಳಿಯ ವಾತಾವರಣವನ್ನು ಇನ್ನು ಹಿಡಿದಿಟ್ಟುಕೊಂಡಿದೆ. ಹೀಗೆ ನನ್ನ ಆ ದಿನಗಳ ದಸರಾ ಆಚರಣೆಗಳನ್ನು ನೆನಪಿಸಿಕೊಂಡರೆ ಇಂದಿಗೂ ಮೈಯ್ಯಲ್ಲಿ ರೋಮಾಂಚನವಾಗುತ್ತದೆ. ಈ ನನ್ನ ಬರವಣಿಗೆ ನಿಮಗೆ ಮೆಚ್ಚುಗೆಯಾದರೆ ನನ್ನ ಈ ಲೇಖನಕ್ಕೆ ಹೊಸ ಕಳೆ ಎಂದು ಭಾವಿಸುವೆ.

********************

ಮೂಗಪ್ಪ ಗಾಳೇರ

Leave a Reply

Back To Top