‘ದೈವದತ್ತ ಕೊಡುಗೆಗಳು’ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್

ಐಷಾರಾಮಿ ಹಾಸಿಗೆಯ ಮೇಲೆ ಮಲಗಬಹುದು…. ನಿದ್ದೆಯನ್ನು ಕೊಳ್ಳಲು ಸಾಧ್ಯವಿಲ್ಲ,
ಮೃಷ್ಟಾನ್ನ ಭೋಜನ ತಟ್ಟೆಯಲ್ಲಿಹುದು….. ಆದರೆ ಹಸಿವಿಲ್ಲ,
ಜಗತ್ತಿನ ಎಲ್ಲ ಸುಖಗಳು ಅಂಗೈಯಲ್ಲಿ ಸಿಗಬಹುದು…..ಅನುಭವಿಸಲು ಆರೋಗ್ಯವಿಲ್ಲ

ಹಾಗಾದರೆ ಓರ್ವ ವ್ಯಕ್ತಿಗೆ ಬದುಕಿನಲ್ಲಿ ಮುಖ್ಯವಾಗಿ ಬೇಕಾದದ್ದು ಯಾವುದು?? ಎಲ್ಲವೂ ಇದ್ದು ಏನೂ ಇಲ್ಲದಂತಹ ಮಾನಸಿಕ ವಿಷಣ್ಣತೆ ಮನುಷ್ಯನನ್ನು ಕಾಡುವುದಾದರೂ ಏಕೆ?
 ಇದಕ್ಕೆ ಪರಿಹಾರಗಳು ಉಂಟೆ?
 ಖಂಡಿತವಾಗಿಯೂ… ಒಂದು ಸೂಕ್ಷ್ಮ ಜೀವಕೋಶದಿಂದ ಉದಿಸಿದ,ಒಂದು ಹತ್ತಾಗಿ ಹತ್ತು ಇಪ್ಪತ್ತಾಗಿ ಲಕ್ಷಾಂತರ ಜೀವಕೋಶಗಳ ಹೊಂದಿರುವ ಮನುಷ್ಯನ ನಿಜವಾದ ಅವಶ್ಯಕತೆಗಳು ಬಹಳವೇ ಕಡಿಮೆ. ತಾನು ತನ್ನದು ತನಗಾಗಿ ಎಂದು ಆತ ವೈಯುಕ್ತಿಕ ಪರಿಧಿಯಲ್ಲಿ ಯೋಚಿಸಲಾರಂಭಿಸಿದರೆ ಈ ಭೂಮಿಯ ಮೇಲಿರುವ ಎಲ್ಲವೂ ಆತನ ಬೇಡಿಕೆಯ ಪರಿಧಿಯಲ್ಲಿ ಬರುತ್ತದೆ.

 ಮೂಲಭೂತವಾಗಿ ಮನುಷ್ಯನಿಗೆ ಮುಖ್ಯವಾಗಿ ಬೇಕಾಗಿರುವುದು… ಒಂದೊಳ್ಳೆಯ ಆರೋಗ್ಯ, ಸೊಂಪಾದ ನಿದ್ರೆ, ಪೌಷ್ಟಿಕ ಆಹಾರ, ಪ್ರಕೃತಿಯೊಂದಿಗೆ ಒಡನಾಟ, ತನ್ನವರ ಪ್ರೀತಿ ವಿಶ್ವಾಸ, ಸಮಯ ಮತ್ತು ತನ್ನಿಚ್ಛೆಯಂತೆ ಬದುಕುವ ಸ್ವಾತಂತ್ರ್ಯ….  ಇವುಗಳಲ್ಲಿ ಕೆಲವನ್ನು ವೈಯುಕ್ತಿಕ ಸಾಧನೆಯ ಮೂಲಕ ಸಂಪಾದಿಸಿಕೊಂಡರೆ ಮತ್ತೆ ಕೆಲವು ದೈವದತ್ತ ಕೊಡುಗೆಗಳು. ಆದರೆ ಇವುಗಳ ನಡುವೆ ಪರಸ್ಪರ ಸಂಬಂಧವಿದೆ.

 ಅದೆಷ್ಟೇ ಒಳ್ಳೆಯ ವಿದ್ಯೆ ಉದ್ಯೋಗಗಳನ್ನು ಹೊಂದಿದ್ದರೂ, ಸಾಮಾಜಿಕವಾಗಿ ಉನ್ನತ ಸ್ಥಾನಮಾನಗಳನ್ನು ಹೊಂದಿದ್ದರೂ ನಾವು ಮಾಡುವ ಕೆಲಸದಲ್ಲಿ ತೃಪ್ತಿ, ಸಮಾಧಾನಗಳು ದೊರೆಯದೆ  ಹೋದಾಗ ತನ್ನಿಚ್ಛೆಯಂತೆ ಕಾರ್ಯನಿರ್ವಹಿಸುವ ಸ್ವಾತಂತ್ರ್ಯ ತನಗಿಲ್ಲದೆ ಹೋದಾಗ ಮನುಷ್ಯ ಅಶಾಂತಿಗೀಡಾಗುತ್ತಾನೆ.  
 ಈ ಅಶಾಂತಿ ಆತನ ಮಾನಸಿಕ ನೆಮ್ಮದಿಯನ್ನು ಕಸಿಯುತ್ತದೆ, ನಾನು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರದಲ್ಲಿ ತೊಂದರೆಯನ್ನು ಅನುಭವಿಸುವ ಆತ ಕಂಗೆಡುತ್ತಾನೆ. ಔದ್ಯೋಗಿಕವಾಗಿ ತನ್ನ ಹಿನ್ನಡೆಯನ್ನು ವೈಯುಕ್ತಿಕವಾಗಿಸಿಕೊಂಡು  ನಿಧಾನವಾಗಿ ಧೂಮಪಾನ, ಮದ್ಯಪಾನಗಳಂತಹ ದುಶ್ಚಟಗಳಿಗೀಡಾಗುತ್ತಾನೆ. ಇದು ಆತನ ಮನೋ ದೈಹಿಕ ಆರೋಗ್ಯ ಕೆಡಲು ಕಾರಣವಾಗುತ್ತದೆ. ಈ ಹಿಂದೆ ಗಳಿಸಿ ಬಾಚಿ ಎತ್ತಿಟ್ಟ ಹಣ ಆತನ ಆತನ ಚಟಗಳಿಗೆ ಆತನ ಆರೋಗ್ಯ ಸುಧಾರಿಸಲು ವ್ಯಯವಾಗುತ್ತದೆ.
 ಇನ್ನು ಆತನ ಕುಟುಂಬಸ್ಥರಿಗೆ ಇದರ ಅರಿವಾಗುವ ಹೊತ್ತಿಗೆ ಕಾಲ ಮಿಂಚಿ ಹೋಗಿರುತ್ತದೆ…. ಇಲ್ಲಿಯೂ ಕೂಡ ತಮ್ಮ ಅಹಮ್ಮಿನ ಕೋಟೆಯನ್ನೊಡೆದು ಯಾರಿಗೂ ತನಗಾಗುತ್ತಿರುವ ನೋವು ತೊಂದರೆಯನ್ನು  ತಿಳಿಸದೇ ಇದ್ದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.
ಇದು ಉದ್ಯೋಗಸ್ಥ ಪುರುಷರ ಕಥೆಯಾದರೆ
 ಹೆಣ್ಣುಮಕ್ಕಳದು ಮತ್ತೊಂದು ರೀತಿ.
 ಹುಟ್ಟುವಾಗಲೇ ಅಯ್ಯೋ ಹೆಣ್ಣು ಮಗು ಎಂಬ ಭಾವ ಹುಟ್ಟಿದ ಮನೆಯಲ್ಲಿದ್ದರೆ ಆಕೆ ಕೇವಲ ಆ ಮನೆಯ ಮಗಳಾಗುತ್ತಾಳೆ…. ಮುಂದೆ ಪರರ ಮನೆಗೆ ಹೋಗುವ ಸ್ವತ್ತು ಎಂಬಂತೆ ಜವಾಬ್ದಾರಿಯ ಹೊರೆಯಾಗುತ್ತಾಳೆ. ಒಂದು ಹಂತದ ವಿದ್ಯಾಭ್ಯಾಸ ಮುಗಿಸಿದ ನಂತರ ಆಕೆಗೆ ಯೋಗ್ಯ?? ವ್ಯಕ್ತಿಯೊಂದಿಗೆ ವಿವಾಹ ಮಾಡಿ ಗಂಡನ ಮನೆಗೆ ಕಳುಹಿಸಿ ಬಿಟ್ಟರೆ ತಮ್ಮ ಜವಾಬ್ದಾರಿ ಮುಗಿದಂತೆ ಎಂದು ಭಾವಿಸುವ ತಂದೆ ತಾಯಿಯ ಮಗಳಾದರೆ ಆಕೆ ಸಹಜವಾಗಿಯೇ ಕೀಳರಿಮೆಯಿಂದ ಬಳಲುತ್ತಾಳೆ. ಹುಟ್ಟಿದ ಮನೆಗೆ ಪರಕೀಯಳಾಗುವ ಆಕೆಯನ್ನು ಗಂಡನ ಮನೆಯವರು ಮತ್ತೊಂದು ಮನೆಯಿಂದ ಬಂದವಳು, ತಮ್ಮ ಮನೆಯ ತೊಟ್ಟು ಎಂಬಂತೆ ಭಾವಿಸಿದರೆ ಆಕೆಯ ಬದುಕು ಬಾಣಲಿಯಿಂದ ಬೆಂಕಿಗೆ ಬಿದ್ದಂತಾಗುತ್ತದೆ. ಇದ್ದುದರಲ್ಲಿಯೇ ತಕ್ಕಮಟ್ಟಿಗೆ ವಿದ್ಯಾಭ್ಯಾಸ ಮಾಡಿ ಒಂದೊಳ್ಳೆಯ ಉದ್ಯೋಗ ಹೊಂದಿರುವ ಹೆಣ್ಣು ಮಕ್ಕಳ ಸ್ಥಿತಿ ಕೊಂಚ ಉತ್ತಮ. ತವರು ಮತ್ತು ಗಂಡನ ಮನೆ ಎರಡರಲ್ಲಿಯೂ ಪರಕೀಯ ಪ್ರಜ್ಞೆ ಅನುಭವಿಸುವ ಹೆಣ್ಣುಮಗಳ ಮುಂದೆ ಇರುವುದು ಕೇವಲ ಎರಡು ಆಯ್ಕೆಗಳು. ಮೆಟ್ಟಿದ ಮನೆಯ ಎಲ್ಲ ಜನರ ಮನವೊಲಿಸಿ ಅವರಿಗೆ ಬೇಕು ಬೇಕಾದಂತೆ ಮಾಡಿ ಬಡಿಸಿ ಅವರ ಚಾಕರಿ ಮಾಡುವುದು ಇಲ್ಲವೇ ತನಗೆ ಬೇಕಾದಂತೆ ಅವರನ್ನು ಒಪ್ಪಿಸಿ ಬದುಕುವುದು. ಭಾರತೀಯ ಸಾಮಾಜಿಕ ಸ್ಥಿತಿಗತಿಗಳಲ್ಲಿ ಮೊದಲನೆಯ ಆಯ್ಕೆ ಅತ್ಯಂತ ಸುಲಭವಾಗಿದ್ದು ಬಹುತೇಕ ಹೆಣ್ಣು ಮಕ್ಕಳು ಸೊಲ್ಲೆತ್ತದೇ ಮೊದಲನೇ ಆಯ್ಕೆಯನ್ನು ಮಾಡಿಕೊಳ್ಳುತ್ತಾರೆ…. ಸಂಘರ್ಷಕ್ಕೆ ಎಡೆ ಮಾಡಿಕೊಡುವುದೇ ಇಲ್ಲ. ಅವರು ಕೂಡ ಜೀವನದ ಒಂದು ಹಂತದಲ್ಲಿ ಅಯ್ಯೋ ನಾವು ತಪ್ಪು ಮಾಡಿದೆವು ಎಂದು ಹಲುಬುತ್ತಾರೆ,ಸ್ವಯಂ ಕೃತ ಅಪರಾಧವಾದರೂ ಪಶ್ಚಾತಾಪ ತಪ್ಪಿದ್ದಲ್ಲ. ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಯೋಚಿಸಿ.

 ಆದ್ದರಿಂದ ನಾವು ಮುಖ್ಯವಾಗಿ ಯೋಚಿಸ ಬೇಕಾಗಿರುವುದು ಇಷ್ಟು…. ಈ ಭೂಮಿಗೆ ನಾವು ಬರುವಾಗ ಏನನ್ನು ತಂದಿಲ್ಲ ಹೋಗುವಾಗ ಏನನ್ನು ಒಯ್ಯುವುದಿಲ್ಲ ಇರುವವರೆಗಿನ ಈ ಜೀವನದಲ್ಲಿ ಆಯ್ಕೆ ನಮ್ಮದು…. ಕೈಗೆಟುಕದ್ದಕ್ಕೆ ಆಸೆ ಪಡದೆ ಇದ್ದುದರಲ್ಲಿಯೇ ಜೀವನ ಸಾಗಿಸಬೇಕು. ಸಾಧನೆಯ ಹಾದಿಯಲ್ಲಿ ಬರುವ ಎಲ್ಲ ಎಡರು ತೊಡರುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು.
 ಭಗವದ್ಗೀತೆಯಲ್ಲಿನ
“ಕರ್ಮಣ್ಣೇ ವಾಧಿಕಾರಸ್ತೆ ಮಾಫಲೇಶು ಕದಾಚನ” ಎಂಬ ಉಪ್ಪಿನಂತೆ ನಮ್ಮ ಪಾಲಿಗೆ ಬಂದ ಕೆಲಸಗಳನ್ನು ಪಲಾ ಫಲದ ನಿರೀಕ್ಷೆಯಿಲ್ಲದೆ  ನಾವು ಮಾಡಬೇಕು.
 ನೆನ್ನೆ ನಮ್ಮ ಕೈಯಲ್ಲಿಲ್ಲ… ನಾಳೆ ಏನಾಗುವುದು ಗೊತ್ತಿಲ್ಲ. ಆದರೆ ವರ್ತಮಾನ ಖಂಡಿತವಾಗಿಯೂ ನಮ್ಮದು ಎಂಬ ಹೊನ್ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಆರೋಗ್ಯ,ಸುಖಕರ ನಿದ್ದೆ, ಆಹಾರ, ಕೌಟುಂಬಿಕ ಪ್ರೀತಿ, ಸ್ನೇಹಿತರ ಸಾಂಗತ್ಯ, ನಿಮ್ಮಿಷ್ಟದಂತೆ ಬದುಕುವ ಸ್ವಾತಂತ್ರ್ಯದಂತಹ ದೈವದತ್ತ ಕೊಡುಗೆಗಳನ್ನು ನಮ್ಮದಾಗಿಸಿಕೊಂಡು ಸಾರ್ಥಕ ಬದುಕನ್ನು
 ಸಾಗಿಸೋಣ.


Leave a Reply

Back To Top