ಬೆಳಕು-ಪ್ರಿಯ ಅವರ ಗಜಲ್

ಅಗಸಿಕಟ್ಟೆಯ ಟೊಂಗೆಗಳು ಎತ್ತತ್ತಲೋ ಚಾಚುತ್ತಿವೆ ನೀ ಬರಬೇಕು ಬುದ್ಧ
ಸುಣ್ಣದ ಗೋಡೆಗಳು ಬಣ್ಣ ಮೆತ್ತಿಕೊಳ್ಳುತ್ತಿವೆ ನೀ ಬರಬೇಕು ಬುದ್ಧ

ಹನುಮನ ಕಟ್ಟೆಗೂ ಪೀರಲ ಮಿಟ್ಟಿಗೂ ನಡುವೆ ಕಟ್ಟೆ ಬೆಳೆಯುತ್ತಿದೆ
ಮುತ್ತಜ್ಜನ ಮಾತುಗಳು ಸವಕಲಾಗುತ್ತಿವೆ ನೀ ಬರಬೇಕು ಬುದ್ಧ

ದನದಕ್ಕೆಯೊಳ ಕೀರಲು ಚೀತ್ಕಾರವಿಲ್ಲಿ ಕಿವಿಗಳಿಗೆ ಬೀಳುತ್ತಿಲ್ಲ
ಅಹಮ್ಮಿನ ಮಹಲುಗಳು ದಿನವಿಲ್ಲಿ ಬೆಳೆಯುತ್ತಿವೆ ನೀ ಬರಬೇಕು ಬುದ್ಧ

ಒಲೆಗಂಡಿಯ ಕಿಡಿಗಳಿಗೂ ನೆರೆಮನೆಯ ಇಣುಕಿಡುವ ಚಾಳಿ
ಹಗೆತನದ ಮಾತುಗಳು ಕೇರಿಯೋಳು ಕೇಳುತ್ತಿವೆ ನೀ ಬರಬೇಕು ಬುದ್ಧ

ಅರೆದ ಮದ್ದನು ಮುದ್ದೆ ಮಾಡಿ ತಿಂದಿರುವ ಅರಿಯದ ಮನಸುಗಳಿಲ್ಲಿ
ನನ್ನಟ್ಟಿಯ ನಟ್ಟನಡುವೆ ‘ಬೆಳಕ’ ಸುರಿದಿಟ್ಟು ನಿನ್ನತ್ತ ನೋಡುತ್ತಿವೆ ನೀ ಬರಬೇಕು ಬುದ್ಧ


3 thoughts on “ಬೆಳಕು-ಪ್ರಿಯ ಅವರ ಗಜಲ್

  1. ಹನುಮನ ಕಟ್ಟೆಗೂ ಪೀರಲ ಮಿಟ್ಟಿಗು ಬೆಳೆದ ಕಟ್ಟೆಯಲ್ಲಿ ಜಾತೀಯತೆಯನ್ನು ಕಿತ್ತೊಗೆಯುವ
    ಜಾತ್ಯಾತೀತ ಮನದ ಹಂಬಲ ಒಂದು ಎದ್ದು ಕಾಣುತ್ತಿದೆ. ಅಹಮ್ಮಿನ ಮಹಲುಗಳಲ್ಲಿ ಹಮ್ಮು ಬಿಮ್ಮುಗಳನ್ನು ಬುಡ ಸಮೇತ ಕಿತ್ತೊಗೆಯುವ ಹಂಬಲ ಗೋಚರಿಸುತ್ತಿದೆ. ಬುದ್ಧ ಬಸವ ತಿರುಗಿ ಬರುವರೋ ಇಲ್ಲವೋ ಎಲ್ಲವನ್ನು ಸರಿದೂಗಿಸುವ ಮನಸ್ಸು ಬೆಳಕಿನಲ್ಲಿ ಚೆಲ್ಲಿದೆ.

Leave a Reply

Back To Top