ಕಂಸ (ಕಂಚುಗಾರನಹಳ್ಳಿ ಸತೀಶ್) ಅವರ ಗಜಲ್ ಸಂಕಲನ ‘ನನ್ನವಳು ನಕ್ಕಾಗ’ ಒಂದು ಅವಲೋಕನ ಆನಂದ ಭೋವಿ

ನನ್ನವಳು ನಕ್ಕಾಗ
ಸಾಹಿತ್ಯ ಪ್ರಕಾರ : ಗಜಲ್
ಲೇಖಕರು : ಕಂಸ (ಕಂಚುಗಾರನಹಳ್ಳಿ ಸತೀಶ್ )
ಪುಸ್ತಕದ ಬೆಲೆ :110/-
ಪುಟಗಳ ಸಂಖ್ಯೆ : 104
ಪುಸ್ತಕಕ್ಕಾಗಿ ಸಂಪರ್ಕಿಸಿ : 9972932126

ಅರೇಬಿಕ್ ಕಾವ್ಯದಲ್ಲಿ ಹುಟ್ಟಿಕೊಂಡ ಗಝಲ್ ಇಂದು ಕನ್ನಡದಲ್ಲಿ ಅಭಿವ್ಯಕ್ತಿಯಾಗಿ ಬೆಳೆಯುತ್ತಿದೆ. ಶೇರ್ ಎಂದು ಕರೆಯುವ ದ್ವಿಪದಿಗಳು ಪ್ರಾಸಬದ್ಧ ಕಾವ್ಯನಾತ್ಮಕ ಸೃಜನಶೀಲ ನುಡಿಗಳ ಮಿಶ್ರಣದಿಂದ ಕೇಳುಗರ ಓದುಗರ ಹೃದಯ ತಟ್ಟುವ ಜನಪ್ರಿಯವಾಗುವ ಮಟ್ಟಕ್ಕೆ ಬೆಳೆದು ನಿಂತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಕನ್ನಡ ಸಾಹಿತ್ಯದ ಕವಿತೆ ಕಟ್ಟುವ ಯುವ ಕವಿಗಳು ಗಝಲ್ ಕಾರರಾಗಿ ಗುರುತಿಸಿಕೊಳ್ಳುತ್ತಿರುವುದು ಸೋಜಿಗವೇ ಆಗಿದೆ. ಮಕ್ತಾ ಎಂದು ಕರೆಯುವ ಗಝಲ್ ನ ಕೊನೆಯ ದ್ವಿಪದಿಯಲ್ಲಿ ಕವಿಯ ಹೆಸರನ್ನು ಬರೆಯುವ ರೂಢಿ ಗಝಲ್ ಗಳಲ್ಲಿದೆ. ಗಝಲ್ ಗಳನ್ನು “ಉರ್ದು ಕವಿತೆಗಳ ರಾಣಿ” ಎಂದು ಕರೆಯುವುದು ಸಹ ಅದರ ಜನಪ್ರಿಯತೆಯ ಪ್ರತೀಕವಾಗಿದೆ. ಪ್ರೀತಿ, ಪ್ರೇಮ, ವಿರಸ, ಮಧು, ಸಾಕಿ….. ಭಾವನಾತ್ಮಕ ಅಂಶಗಳಿಂದ ಇಂದು ಗಝಲ್ ಬಂಡಾಯ, ಬದುಕು, ಸಾಂಗತ್ಯದ, ಸಾಹಿತ್ಯದ ಲಯಗಳು ಇತ್ತೀಚಿಗೆ ಗಝಲ್ ರಚನೆಯ ಅಂಶಗಳಾಗಿ ಬೆಳೆಯುತ್ತಿರುವುದು ಆಶಾದಾಯಕ. ಅಭಿಲಾಷೆಯ ಸಂಗತಿಯೊಡನೆ ಮಾತನಾಡುವ, ಸಂಭಾಷಿಸುವ ಗಝಲ್ ಇಂದು ಜನರ ನೋವುಗಳನ್ನು ಪ್ರಾಸ ಬದ್ಧವಾಗಿ ಸಂಗೀತಮಯ ಧ್ವನಿಯಲ್ಲಿ ವ್ಯಕ್ತಪಡಿಸಲು ವೇದಿಕೆಯಾಗುತ್ತಿರುವುದು ಸಂತೋಷದ ವಿಷಯ.
ಶಾಂತರಸರು ಕನ್ನಡದ ಮಟ್ಟಿಗೆ ಗಝಲ್ ಗಳನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗುತ್ತಾರೆ. ಅವರ ಪ್ರಸಿದ್ಧ ಗಝಲ್ ಒಂದರ ಶೇರ್ ಹೀಗಿದೆ.
“ಚುಕ್ಕೆ ಚಂದ್ರ ಗಾಳಿ ನೇಸರುಗಳ ಸ್ನೇಹ ಮುಗಿದಾಗ
ತೆರೆದು ತಿರೆ ಬಾನುಗಳ ಅಗಲಿ ಹೋಗಬೇಕಲ್ಲ”
ಬಂದವರು ಒಂದು ದಿನ ಮರಳಿ ಹೋಗಬೇಕಲ್ಲ. ಪ್ರತಿ ಮನುಷ್ಯನ ಅಸ್ತಿತ್ವಕ್ಕೆ ಕೊನೆಯು ಇದೆ ಎಂಬುದನ್ನು ಸೂಕ್ಷ್ಮವಾಗಿ ಚಿಂತಿಸುವ ಚಿತ್ರಣ ನಮ್ಮ ಮುಂದಿದೆ.
ಇತ್ತೀಚಿಗೆ ನಮ್ಮ ಅಭಿಪ್ರಾಯ ಹಂಚಿಕೆಯ ವೇದಿಕೆಗಳಾದ ಸಾಮಾಜಿಕ ಜಾಲತಾಣಗಳು ಪ್ರತಿಯೊಬ್ಬರ ಅಭಿವ್ಯಕ್ತಿಗಳನ್ನು ವ್ಯಕ್ತಪಡಿಸಲು ಅವಕಾಶ ಒದಗಿಸಿದ್ದು ಸುಳ್ಳಲ್ಲ. ಹೀಗಾಗಿ ಹಲವಾರು ಯುವ ಕವಿಗಳು ಈಗ ಗಝಲ್ ರಚನೆಯಲ್ಲಿ ತೊಡಗಿದ್ದಾರೆ. ಕಾವ್ಯದ ಸೂಕ್ಷ್ಮತೆ, ಕಟ್ಟುವ ಕಲೆ, ವಿಸ್ತಾರವಾದ ಹರವು, ಚೌಕಟ್ಟು, ತಂತ್ರ ವಿನ್ಯಾಸ…. ಇವುಗಳ ಆಳವಾದ ಅಧ್ಯಯನ ಇತ್ತೀಚಿನ ಕಾಲಘಟ್ಟದಲ್ಲಿ ಕಡಿಮೆಯಾಗಿದ್ದರೂ, ಜನಪ್ರಿಯತೆಯ ಹಂಗಿಗೆ ಯುವಕವಿಗಳಾಗಿ ಒಳಗಾಗುತ್ತಿರುವುದು ಮಾತ್ರ ವಿಷಾದನೀಯ. ಇವುಗಳನ್ನೆಲ್ಲ ಮೀರಿ ಅಲ್ಲಲ್ಲಿ ಹೊಸ ಭರವಸೆಗಳು ಮೂಡುತ್ತಿರುವುದು ಮಾತ್ರ ಆಶಾದಾಯಕವಾಗಿದೆ.
“ಕಂಸ” ಕಾವ್ಯನಾಮದಿಂದ ಬರೆಯುತ್ತಿರುವ ಸ್ನೇಹಿತ ಕಂಚುಗಾರನಹಳ್ಳಿ ಸತೀಶ್ ಭರವಸೆಯ ಕವಿ, ಕಥೆಗಾರ, ಕಾದಂಬರಿಕಾರರಾಗಿ ಹೊರ ಹೊಮ್ಮತ್ತಿರುವುದು ನಮ್ಮ ಹೆಮ್ಮೆ.
“ಜನನ ಮರಣದ ನಡುವೆ ಬದುಕಲು ಸ್ನೇಹ ವಿಶ್ವಾಸ ಬೇಕು
ಮನದಲ್ಲೇ ಮೌನವಾಗಿ ಪ್ರೇಮ ಸೌಧವ ಕಟ್ಟಿದರೂ ಹೇಳಲಿಲ್ಲ ಸಾಕಿ”
ಸುಂದರವಾದ ಸರಳವಾದ ಶೇರ್ ಗಳ ಮೂಲಕ ತಮ್ಮ ನವಿರಾದ ಭಾವನೆಗಳನ್ನು ಸತೀಶ್ ಈ “ನನ್ನವಳು ನಕ್ಕಾಗ” ಗಝಲ್ ಸಂಕಲನದಲ್ಲಿ ವ್ಯಕ್ತಪಡಿಸಿದ್ದಾರೆ.
“ಇಂದಿನ ಸುಖ ಮುಂದಿನ ಕನಸುಗಳಿಗೆ ನಾಂದಿ ಆದೀತೇ
ದನಕರುಗಳನ್ನೆಲ್ಲ ಮೈ ತೊಳೆದು ಕಿಚ್ಚು ಹಾಯಿಸುವ ಸಂಕ್ರಾಂತಿ”
ಕವಿ ತನ್ನ ಕನಸುಗಳ ಬಗ್ಗೆ ಬರೆಯುತ್ತ ವರ್ತಮಾನದ ತಲ್ಲಣಗಳ ಕಡೆಗೆ ಗಮನ ನೀಡುತ್ತಿರುವುದನ್ನು ನಾವು ಕಾಣಬಹುದು. ಸತೀಶ್ ರವರ ಕವಿತೆಗಳನ್ನು ಗಮನಿಸಿದಾಗ ವಾಸ್ತವ ಅಂಶಗಳ ಬಗ್ಗೆ ಅವರಿಗೆ ಸೂಕ್ಷ್ಮ ಜ್ಞಾನ ಮತ್ತು ತಿಳುವಳಿಕೆ ಇರುವುದನ್ನು ಗುರುತಿಸಬಹುದು.
ಪ್ರೀತಿ ಕವಿಯ ಮೊದಲ ಕವಿತೆ ಪ್ರೇಮ ಕಾವ್ಯ ಆಗಿರುತ್ತದೆ ಎಂಬ ಮಾತೊಂದಿದೆ. ಸತೀಶ್ ರವರ ಬಹಳಷ್ಟು ಗಝಲ್ ಗಳು ಪ್ರೀತಿ-ಪ್ರೇಮ-ವಿರಹಗಳ ಸಾಲಿನಲ್ಲಿ ತೊಯ್ದು ಮುಳುಗುವುದನ್ನು ಕಾಣಬಹುದು.
“ಗೆಳತಿ ಮದುವೆಯ ಮಮತೆಯ ಕರೆಯೋಲೆ ಕಳಿಸಲೇ
ನಾ ಬಿಟ್ಟರೂ ನೀ ಮರೆಯಲಿಲ್ಲ ಹುಡುಕುತ್ತಿರುವೆ ಏಕೆ”
ಒಮ್ಮೆ ಒಪ್ಪಿದ ಮನಸ್ಸುಗಳು ಬದುಕಿನುದ್ದಕ್ಕೂ ಕಳೆದುಕೊಂಡ ವ್ಯಸನಗಳು ಇಲ್ಲಿ ಕಂಡು ಬಂದಿವೆ.
“ನೀನಿದ್ದಾಗ ಕೂಸುಮರಿ ಮಾಡಿ ಹೊತ್ತು ತಿರುಗುವೆ
ನೀನಿಲ್ಲದ ಹೊತ್ತು ಕಮರಿ ಹೋಗಿ ಅತ್ತು ಮರುಗುವೆ”
ಪ್ರಿಯತಮೆಯು ನೀಡಿದ ಬೊಗಸೆಯಲ್ಲಿ ಮುಳುಗೆದ್ದ ಹೃದಯ ಪ್ರಲಾಪಿಸುವ ಪ್ರೇಮ ನಿವೇದನೆಗಳು ತುಂಬಾ ಮಧುರವಾಗಿ ಇಲ್ಲಿ ಮೂಡಿಬಂದಿವೆ. ಸತೀಶ್ ತುಂಬಾ ಗಂಭೀರವಾದ ವಿಷಯಗಳ ಬಗ್ಗೆ ಬಹಳ ನಾಜೂಕಾಗಿ ಸರಳ ಶಬ್ದಗಳಲ್ಲಿ ನೇರವಾಗಿ ಕಟ್ಟುವ ಕವಿತೆಗಳ ಮಾಧುರ್ಯವನ್ನು ನಾವು ಇಲ್ಲಿ ಸವಿಯಬಹುದು.
ಗಝಲ್ ಮಾಧುರ್ಯವನ್ನು ಸೂಚಿಸುವ ಕಾವ್ಯ ಪ್ರಕಾರ. ಗಝಲ್ ಜನಪ್ರಿಯತೆಗೆ ಈ ಮಾಧುರ್ಯಗಳ ನುಡಿ ಜೋಡಣೆಯು ಕಾರಣವಾಗಿರಬಹುದು. ಇಂತಹ ಗಂಭೀರ ಚಿಂತನೆಯ ಬಗ್ಗೆ ಸತೀಶ್ ಅಭ್ಯಾಸಿಸುವ ಅನಿವಾರ್ಯತೆ ಇದೆ.
ಕನ್ನಡದ ಕಾವ್ಯ ಪರಂಪರೆ ಇಂದು ತುಂಬಾ ಚರ್ಚಿತ ವಿಶ್ಲೇಷಣೆಗಳ ದಾಟಿ ಹೊಸ ಚಿಂತನೆಗಳನ್ನು ಹೊರಹೊಮ್ಮಿಸುತ್ತಿರುವ ಸಮಯದಲ್ಲಿ ಸತೀಶ್ ರಂತಹ ಬರಹಗಾರರಿಗೆ ಕವಿಯಾಗಿ, ಕಥೆಗಾರರಾಗಿ ಕಾದಂಬರಿಕಾರರಾಗಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ, ಅವಕಾಶಗಳನ್ನು ವ್ಯಕ್ತಪಡಿಸುವ, ಮಾರ್ಮಿಕವಾದ ಸಾಹಿತ್ಯ ರಚಿಸುವ ಉತ್ಸಾಹವಿದೆ. ಈ ದೃಷ್ಟಿಕೋನದಲ್ಲಿ ಸತೀಶ್ ರವರು ಈ ಸಂಕಲನದ ಮುಖಾಂತರ ತಮ್ಮ ಸೂಕ್ತವಾದ, ಸೋಜಿಗವಾದ ಕೃತಿಗಳ ಮೂಲಕ ನಮ್ಮನ್ನೆಲ್ಲ ಬೆರಗುಗೊಳಿಸಲೆಂದು ಆಶಿಸುತ್ತೇನೆ.
ಸಮಕಾಲೀನ ಆತಂಕಗಳು ನೆರಳಾಗಿ ಮಾಯವಾಗುತ್ತಿರುವ ಹೊತ್ತಿನಲ್ಲಿ ಕಾವ್ಯ ಖಡ್ಗವಾಗಿ ವರ್ತಮಾನದ ನೋವುಗಳ ಧ್ವನಿಯಾಗಿ ಹೊರಹೊಮ್ಮಿ, ನಮ್ಮೆಲ್ಲರ ಹೃದಯದ ಉಸಿರಾಗಿ ಚಿಮ್ಮಲಿ.


Leave a Reply

Back To Top