ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ನಾಲ್ಕು ಗಳಿಗೆಗಳು..
ಆ ನಾಲ್ಕು ಗಳಿಗೆಗಳಲ್ಲಿ
ನಾವು ಏನೆಲ್ಲ
ಮಾತಾಡಿರಬಹುದು
ಗಳಿಗೆಗಳಾಗಿದ್ದರೂ
ಜೀವನ ಪೂರ್ತಿ
ಉಳಿಯುವಂತಹ ಮಾತು
ಪಲಕು ಉಳಿದವಲ್ಲ….
ಬಾಳಿನುದ್ದಕ್ಕೂ ನೆನಪೊಂದು
ಭದ್ರವಾಗಿ ಮನೆಮಾಡಿತಲ್ಲ
ಮನದೊಳಗೆ…!
ಹೆಸರಿಸದ ಹೆಸರು ಇಷ್ಟೊಂದು
ನಂಟಾಗಿ ಉಳಿದು ಬಿಡುತ್ತದೆ
ಅನ್ನುವುದು ಇಂದ್ರಜಾಲ ನನಗೆ…!
ಆ ಹಂಬಲ.. ನೆನಿಕೆ ..ತಲ್ಲಣ..
ಕಾತರ..ತುಡಿತ..ಮಿಡಿತ
ಉಮ್ಮಳಿಸುವ ಬಿಕ್ಕುಗಳು
ಭಯದಿ ನುಂಗುವ ಮಾತುಗಳು
ಬಾಗಿಲಿ ಹೊರಗೆ ಇದ್ದ
ನಿರೀಕ್ಷಿತವಲ್ಲದ
ಮೌನವಿರದ ಮಾತುಬರದ..
ಹುದುಗಿದ ರವ…!!
ಆ..ದನಿ..,
ಒಳ ಹೇಗೆ ನುಸುಳಿತು ?
ಏಕೆ ನುಸುಳಿತು ?
ಇಂದಿಗೂ ಪ್ರಶ್ನೆಯಾಗಿಯೇ
ಕಾಡುತ್ತದೆ..
ಹಾಗೆ ಬರುವಾಗ
ಯಾರ ಅಪ್ಪಣೆ ಕೇಳಿತು..
ಅಪ್ಪಣೆ ಇಲ್ಲದೆ ಹೇಗೆ
ಒಳ ಹೊಕ್ಕಿತು
ಜಿಜ್ಞಾಸೆ ನನಗೆ…!!
ಇಂದಿಗೂ ರಿಂಗಣಿಸುವ
ಮಧುರ ಪಲಕುಗಳು
ಇಟ್ಟಿಗೆ ಕಲ್ಲಿಗಿಂತಲೂ
ಗಟ್ಟಿಗೊಂಡವೇಕೆ..?!
ಗಟ್ಟಿ ಮನವ ಬೆಣ್ಣೆಯಂತೆ
ಕರಗಿಸಿದವೇಕೆ?!..
ಎಲ್ಲೋ ಮಾನವೀಯ
ಎಳೆಗಳು ಬಂಧಿಸಿರಬೇಕು..
ಟೆಲಿಪತಿ ಯ ಮನಃಶ್ಯಾಸ್ತ್ರದ
ಉಲ್ಲೇಖ ಇರಬೇಕು…
ಗಾಳಿಯಲಿ ಹರಿದ
ಮಾತಿನ ಕಂಪನಗಳು
ಕಿವಿಯಿಂದ ಕಿವಿಗೆ
ಸೋರಿ ಹೋಗದೇ
ಎದೆಯಾಳದಲ್ಲಿ
ಸ್ಥಾನವೊಂದನ್ನು
ಗಿಟ್ಟಿಸಿಕೊಂಡಿರಬೇಕು..
ಅಥವಾ…,
ಬಹು ಹಿಂದಿನ ನಂಬಿಕೆಯಂತೆ
ಅದು ಆಕಸ್ಮಿಕವಾಗಿರದೆ
ಸಕಾರಣ ಆಗಿರಬೇಕು..
ಋಣಾನುಬಂಧವಿರಬೇಕು…
ಅಥವಾ ಸಂಧಿಸಿದ
ಆ ಗಳಿಗೆಗಳ ಅದೃಷ್ಟವಿರಬೇಕು…
ಅದೃಶ್ಯದ ಅದೃಷ್ಟವನ್ನೂ..,
ಕಾಣದ ಋಣಾನು ಬಂಧವನ್ನೂ..,
ಆಕಸ್ಮಿಕವಾಗಿರದ ಸಕಾರಣವನ್ನು
ದೈವ ಒದಗಿಸಿದ ಅವಶ್ಯಕತೆಯನ್ನು
ಹಾಗೆಯೇ ವಿವಶತೆಯನ್ನು
ನೆನೆಯಲೇಬೇಕಿದೆ
ಅಥವಾ..,
ಈ ಗಳಿಗೆಯ
ಹಿಂದಿನ ಕಾಲವನ್ನು
ತಪವಾಗಿ ..
ಮುಂದಿನ ಕಾಲವನ್ನು
ಜಪವಾಗಿ
ಪರಿವರ್ತಿಸಿದ
ಆ ನಾಲ್ಕು ಗಳಿಗೆಗೆ
ಕೃತಜ್ಞತೆ ಸಲ್ಲಿಸಬೇಕು ನಾವು.
ಬದುಕು ನಾಲ್ಕು ಗಳಿಗೆ
ಇರುವಾಗಲೇ..!
ಅನಸೂಯ ಜಹಗೀರದಾರ .
Super madam
Thanks madamji.☺