ಅತಿನಿದ್ರಾರೋಗ (Narcolepsy) ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

ಅತಿನಿದ್ರಾರೋಗ ಅಥವ ನಾರ್ಕೊಲೆಪ್ಸಿ ಎಂಬುದೊಂದು ನಿದ್ರೆಯ ಅಸ್ವಸ್ಥತೆಯ ಕಾಯಿಲೆ. ಈ ತೊಂದರೆ ಇರುವ ಜನರು ಹಗಲು ಹೊತ್ತಿನಲ್ಲಿ ಅತಿ ಮಂಪರಿನಿಂದ ಬಳಲುತ್ತಾರೆ. ಅಂತಹವರಿಗೆ ಹೆಚ್ಚು ಸಮಯದವರೆಗೆ ಎಚ್ಚರವಾಗಿರುವುದು ಕಷ್ಟಸಾಧ್ಯ. ಇದ್ದಕ್ಕಿದ್ದ ಹಾಗೆ ನಿದ್ದೆ ಮಾಡಿಬಿಡುವುದು ಅವರ ಲಕ್ಷಣ. ಅಂಥವರಿಗೆ ನಿತ್ಯದ ದಿನಚರಿಯಲ್ಲಿ ಗಂಭೀರ ಸಮಸ್ಯೆಗಳು ಬರಬಹುದು.

ಕೆಲವೊಮ್ಮೆ ಅತಿನಿದ್ರಾರೋಗದಿಂದ ಬಳಲುವವರ ಸ್ನಾಯುಗಳ ಬಿಗಿಪು (muscles tone) ಹಠಾತ್ತಾಗಿ ಹಾನಿಯಾಗಬಹುದು; ಇದನ್ನು ಕ್ಯಾಟಪ್ಲೆಕ್ಸಿ (cataplexy) ಅಥವ ಅವಘಾತ ಎನ್ನುವರು. ಅತಿಯಾದ ಭಾವೋದ್ರೇಕಗಳಿಂದ ಇದು ಉಂಟಾಗುತ್ತದೆ – ಮುಖ್ಯವಾಗಿ ನಗುವಿನ  ಕಾರಣ. ನಾರ್ಕೊಲೆಪ್ಸಿಯಲ್ಲಿ ಎರಡು ವಿಧಗಳಿವೆ. ಒಂದನೆ ಮಾದರಿಯ ಅತಿನಿದ್ರಾರೋಗದವರಲ್ಲಿ ಅವಘಾತ (cataplexy) ಸಹ ಕಂಡುಬರುತ್ತದೆ. ಅವಘಾತ ಇಲ್ಲದವರು ಎರಡನೆ ಮಾದರಿ ನಾರ್ಕೊಲೆಪ್ಸಿಯವರು.

ಗುಣವಾಗದಂತಹ ಅತಿನಿದ್ರಾರೋಗವು ಜೀವನವಿಡೀ ಬಾಧಿಸುವ ಕಾಯಿಲೆ. ಆದಾಗ್ಯೂ ಔಷಧೋಪಚಾರ ಹಾಗು ಜೀವನಶೈಲಿಯ ಬದಲಾವಣೆಗಳಿಂದ ರೋಗಲಕ್ಷಣಗಳನ್ನು ಹತೋಟಿಯಲ್ಲಿ ಇಡಬಹುದು. ಕುಟುಂಬ ಸದಸ್ಯರ, ಸ್ನೇಹಿತರ, ಉಪಾಧ್ಯಾಯರುಗಳ ಮತ್ತು ಉದ್ಯೋಗದಾತರುಗಳ ಸಹಕಾರವು ರೋಗಿಗಳಿಗೆ ಸಹಾಯವಾಗುತ್ತದೆ.

ರೋಗಲಕ್ಷಣಗಳು:
ಆರಂಭಿಕ ಕೆಲವು ವರ್ಷಗಳಲ್ಲಿ ಅತಿನಿದ್ರಾರೋಗ ಉಲ್ಬಣವಾಗುವ ಸಾಧ್ಯತೆ ಇದೆ. ಕ್ರಮೇಣ ಇಡೀ ಜೀವಮಾನ ಮುಂದುವರೆಯುವ ಲಕ್ಷಣಗಳೆಂದರೆ —

… ಮುನ್ಸೂಚನೆ ಕೊಡದೆ ನಾರ್ಕೊಲೆಪ್ಸಿ ರೋಗಿಗಳು ನಿದ್ದೆಗೆ ಜಾರಿಬಿಡುವರು. ಅದು ಎಲ್ಲಿ ಬೇಕಾದರೂ ಮತ್ತು ಯಾವ ಸಮಯದಲ್ಲಾದರೂ ಆಗಬಹುದು; ಬೇಸರವಾದಾಗ ಅಥವ ಯಾವುದಾದರು ಕೆಲಸದಲ್ಲಿದ್ದಾಗ. ಉದಾಹರಣೆಗೆ ಗೆಳೆಯರೊಡನೆ ಮಾತನಾಡುತ್ತಿದ್ದಾಗ ಅಥವ ಮುಖ್ಯ ಕೆಲಸದಲ್ಲಿದ್ದಾಗ ದಿಢೀರಂತ ನಿದ್ದೆ ಹತ್ತಬಹುದು. ವಾಹನ ಚಲಾಯಿಸುವ ಸಮಯದಲ್ಲಾದರೆ ಅದು ಆಪತ್ತಿಗೆ ಕಾರಣವಾಗಬಹುದು. ಕೇವಲ ಕೆಲವು ನಿಮಿಷಗಳ ಅಥವ ಒಂದರ್ಧ ಘಂಟೆ ಸಮಯದ ನಿದ್ದೆ. ಎದ್ದ ನಂತರ ಚೈತನ್ಯ ಬಂದು ನಂತರ, ಮತ್ತೆ ನಿದ್ದೆ ಹೋಗಬಹುದು. ಜಾಗರೂಕತೆಯಲ್ಲಿ ಮತ್ತು ಗಮನ ಇಡುವುದರಲ್ಲಿ ದಿನವಿಡಿ ಹಿನ್ನಡೆಯ ಅನುಭವ ಕೂಡ ಆಗಬಹುದು. ಹಗಲು ನಿದ್ದೆ ಸಾಮಾನ್ಯವಾಗಿ ಇದರ ಪ್ರಥಮ ಲಕ್ಷಣ. ಹಾಗಾಗಿ ನಿದ್ದೆ ಮಾಡಬೇಕೆನ್ನಿಸಿದಾಗ, ಗಮನ ಹರಿಸುವುದು ಮತ್ತು ಕೆಲಸಕಾರ್ಯ ಮಾಡುವುದು ಕಷ್ಟವಾಗುತ್ತದೆ. ಇನ್ನೊಂದು ವಿಚಿತ್ರ ಎಂದರೆ, ಕೆಲವು ನಾರ್ಕೊಲೆಪ್ಸಿ ರೋಗಿಗಳು, ಸಣ್ಣ ನಿದ್ದೆ ಮಾಡುವಾಗ ಕೂಡ ತಮ್ಮ ಕೆಲಸ ಕಾರ್ಯ ಮುಂದುವರೆಸುವರು. ಉದಾಹರಣೆಗೆ, ಟೈಪ್ ಮಾಡುವಾಗ, ವಾಹನ ಚಲಾವಣೆ ಮಾಡುವಾಗ ಮತ್ತು ಬರೆಯುವಾಗ ನಿದ್ದೆ ಮಾಡಬಹುದು. ಆ ಕಾರ್ಯವನ್ನು ನಿದ್ದೆಯಲ್ಲಿ ಮುಂದುವರೆಸಬಹುದು. ಆದರೆ, ನಿದ್ದೆಯಿಂದ ಎದ್ದಾಗ ಏನು ಮಾಡಿದ್ದರು ಎಂಬುದನ್ನು ಮರೆತಿರುವರು  ಮತ್ತು ಆ ಕೆಲಸವು ನೆಟ್ಟಗೂ ಆಗಿರುವುದಿಲ್ಲ.

… ಸ್ನಾಯುವಿನ ಬಿಗಿಪುವಿಗೆ ದಿಢೀರ್ ಹಾನಿಯಾಗುವುದು. ಈ ಸ್ಥಿತಿಗೆ ಕ್ಯಾಟಪ್ಲೆಕ್ಸಿ ಎನ್ನುವರು. ಶರೀರದ ಎಲ್ಲ ಸ್ನಾಯಗಳ ದುರ್ಬಲತೆ ಉಂಟಾಗಿ, ಮಾತುಗಳು ಸಹ ತೊದಲಬಹುದು. ಈ ಲಕ್ಷಣಗಳು ಕೆಲವು ನಿಮಿಷಗಳವರೆಗು ಇರಬಹುದು. ಇಂತಹ ಅವಘಾತವನ್ನು ತಡೆಯುವುದು ಅಸಾಧ್ಯ ಮತ್ತು ತೀಕ್ಷ್ಣ ಭಾವೋದ್ವೇಗ ಇದರ ಪ್ರಚೋದನೆಗೆ ಕಾರಣ. ಸಾಮಾನ್ಯವಾಗಿ ಕ್ಯಾಟಪ್ಲೆಕ್ಸಿ ಉಂಟುಮಾಡುವ ಭಾವೋದ್ವೇಗಗಳು ಸಕಾರಾತ್ಮಕವಾದವು — ನಗೆ, ಅತ್ಯುತ್ಸಾಹ ಮುಂತಾಗಿ. ಆದರೆ, ಕೆಲವೊಮ್ಮೆ ಭಯ, ಆಶ್ಚರ್ಯ ಅಥವ ಕೋಪ ಮುಂತಾದುವು ಸಹ ಸ್ನಾಯುಗಳ ಬಿಗಿಪನ್ನು ನಷ್ಟಮಾಡಬಹುದು. ಉದಾಹರಣೆಗೆ, ನಕ್ಕಾಗ ತಲೆಯು ಹಿಡಿತ ಇಲ್ಲದೆ ಕೆಳಕ್ಕೆ ಕುಸಿದ ಹಾಗಾಗಬಹುದು. ಅಥವ ಮಂಡಿಗಳು ಇದ್ದಕ್ಕಿದ್ದ ಹಾಗೆ ಶಕ್ತಿ ಇಲ್ಲದಂತಾಗಿ, ಕೆಳಗೆ ಬೀಳಬಹುದು.
ಈ ರೋಗದ ಕೆಲವರು ವರ್ಷಕ್ಕೆ ಒಂದು ಅಥವ ಎರಡು ಇಂಥ ಪ್ರಸಂಗಗಳಿಗೆ ತುತ್ತಾಗಬಹುದು. ಇನ್ನು ಕೆಲವರು ದಿನದಲ್ಲಿ ಹಲವು ಬಾರಿ ಇಂಥ ಪ್ರಕರಣಗಳಿಂದ ಬಳಲಬಹುದು. ಅಲ್ಲದೆ ನಾರ್ಕೊಲೆಪ್ಸಿ ಇರುವ ಎಲ್ಲರೂ ಈ ಸ್ಥಿತಿಯನ್ನು ಅನುಭವಿಸುವುದಿಲ್ಲ.

… ನಿದ್ರಾನಿಶ್ಚೇಷ್ಟತೆ (sleep
 paralysis). ಅತಿನಿದ್ರಾರೋಗದವರು ನಿದ್ದೆಯಲ್ಲಿ ಪಾರ್ಶ್ವವಾಯು ಅಥವ ನಿಶ್ಚೇಷ್ಟತೆಗೆ ತುತ್ತಾಗಬಹುದು. ಅಂತಹ ಸಂದರ್ಭದಲ್ಲಿ ರೋಗಿಯು, ನಿದ್ದೆಗೆ ಜಾರುವಾಗ ಹಾಗು ಎಚ್ಚರಗೊಂಡಾಗ ಮಾತನಾಡಲಾರ ಮತ್ತು ಚಲಿಸಲಾರ. ಆದರದು ಅಲ್ಪಕಾಲಿಕ – ಕೆಲವು ಸೆಕೆಂಡುಗಳು ಅಥವ ಕೆಲವು ನಿಮಿಷಗಳು. ಆದರೆ ಅಷ್ಟರಲ್ಲಿ ಭಯ ಹುಟ್ಟಿಸಬಹುದು. ರೋಗಿಗೆ ಹಾಗಾದದ್ದು  ಗೊತ್ತಿರಬಹುದು ಮತ್ತು ನಂತರ ಜ್ಞಾಪಕ ಮಾಡಿಕೊಳ್ಳಬಹುದು. ಹಾಗಂತ, ಪ್ರತಿ ನಿದ್ರಾನಿಶ್ಚೇಷ್ಟತೆಯ ರೋಗಿಗೂ ಅತಿನಿದ್ರಾರೋಗ ಇಲ್ಲದೆ ಇರಬಹುದು.

… ಭ್ರಾಂತಿ. ಕೆಲವು ಬಾರಿ ರೋಗಿಗಳು ಇಲ್ಲದೆ ಇರುವ ವಸ್ತುಗಳನ್ನು ಕಾಣುತ್ತಾರೆ. ನಿದ್ರಾನಿಶ್ಚೇಷ್ಟತೆ ಇಲ್ಲದೆ ಸಹ ಹಾಸಿಗೆಯಲ್ಲಿ ಭ್ರಮಿಸಬಹುದು. ನಿದ್ದೆಗೆ ಜಾರುವ ಸಮಯದಲ್ಲಿ ಭ್ರಾಂತತೆ ಉಂಟಾದರೆ ಅದನ್ನು ಹಿಪ್ನೊಗಾಗಿಕ್ ಭ್ರಾಂತಿಗಳು (hypogogic hallucinations) ಎಂದು ಮತ್ತು ಎಚ್ಚರಗೊಳ್ಳುವ ಸಮಯದಲ್ಲಿ ಭ್ರಾಂತತೆ ಉಂಟಾದರೆ ಅದನ್ನು ಹಿಪ್ನೋಪಾಂಪಿಕ್ ಭ್ರಾಂತಿಗಳು (hypnopompic hallucinations) ಎನ್ನುವರು. ರೋಗಿಯು ತನ್ನ ಕೊಠಡಿಯಲ್ಲಿ ಯಾರೊ ಆಗಂತುಕ ಇದ್ದ ಹಾಗೆ ಭಾವಿಸಬಹುದು. ಈ ರೀತಿಯ ಭ್ರಮೆಗಳು ಎದ್ದು ಕಾಣುವ ಹಾಗಿದ್ದು ಭಯಾಜನಕ ಕೂಡ ಆಗಿರಬಹುದು; ಏಕೆಂದರೆ ಹೀಗೆ ಕನಸು ಕಾಣುವ ಸಂದರ್ಭ ರೋಗಿಯು ಸಂಪೂರ್ಣ ನಿದ್ದೆ ಮಾಡಿರುವುದಿಲ್ಲ.

… ಕಣ್ಣಿನ ಕ್ಷಿಪ್ರ ಚಲನಾ ನಿದ್ದೆಯಲ್ಲಿ ಬದಲಾವಣೆ (REM – rapid eye movement). ಜನರು, ಕಣ್ಣಿನ ಕ್ಷಿಪ್ರ ಚಲನಾ ನಿದ್ದೆಯ ಸಮಯದಲ್ಲಿ ಹೆಚ್ಚಾಗಿ ಕನಸು ಕಾಣುವುದು. ವಿಶಿಷ್ಟವಾಗಿ ಜನರು ನಿದ್ದೆಗೆ ಜಾರಿದ 60 ರಿಂದ 90 ನಿಮಿಷಗಳ ನಂತರ ‘ಕಣ್ಣಿನ ಕ್ಷಿಪ್ರ ಚಲನಾ ನಿದ್ದೆ’ಗೆ ಪ್ರವೇಶಿಸುತ್ತಾರೆ. ಆದರೆ, ಅತಿನಿದ್ರಾರೋಗ ಇರುವವರು ಅತಿ ಬೇಗ ‘ಕಣ್ಣಿನ ಕ್ಷಿಪ್ರ ಚಲನಾ ನಿದ್ದೆ’ಗೆ ಜಾರಿಬಿಡುತ್ತಾರೆ – ಸಾಮಾನ್ಯವಾಗಿ 15 ನಿಮಿಷಗಳ ಒಳಗೆ. ಕಣ್ಣಿನ ಕ್ಷಿಪ್ರ ಚಲನಾ ನಿದ್ದೆಯು ದಿನದ ಯಾವ ಸಮಯದಲ್ಲಿ ಕೂಡ ಆವರಿಸಬಹುದು.

ಅಷ್ಟಲ್ಲದೆ, ಅತಿನಿದ್ರಾರೋಗ ಇರುವ ರೋಗಿಗೆ ಇನ್ನಿತರ ನಿದ್ದೆಯ ತೊಂದರೆ ಸಹ ಇರಬಹುದು. Obstructive sleep apnea ಅಥವ “ನಿದ್ರಾ ವಿಘ್ನ ಶ್ವಾಸ ಸ್ತಂಭ” ಎಂಬ ತೊಂದರೆಯಿಂದ ರಾತ್ರಿಯ ನಿದ್ದೆಯಲ್ಲಿ ಉಸಿರಾಟ ಇದ್ದಕ್ಕಿದ್ದ ಹಾಗೆ ನಿಂತು ಮತ್ತೆ ಆರಂಭ ಆಗವುದು. ಅಥವ ಅವರ ಕನಸುಗಳನ್ನು ನಿಜವಾಗಿ ನಟಿಸಿ ತೋರಿಸಬಹುದು (REM sleep behavior disorder). ಅಥವ ನಿದ್ದೆಗೆ ಜಾರುವುದು ಕಷ್ಟವಾಗಬಹುದು ಮತ್ತು ನಿದ್ದೆ ಮಾಡಿದ ನಂತರ ನಿದ್ದೆಯಲ್ಲೆ ಇರುವುದೂ ಕಷ್ಟವಾದಾಗ ಇನ್ಸಾಮ್ನಿಯ ಎನ್ನುವರು – ಅಂದರೆ ನಿದ್ರಾಹೀನತೆ.
ಹಗಲಿನಲ್ಲಿ ಅತಿಯಾದ ನಿದ್ದೆ ಕಾಡುತ್ತದ್ದು ಅದರಿಂದ ವೈಯಕ್ತಿಕ ಹಾಗು ವೃತ್ತಿಯ ಬದುಕಿಗೆ ತೊಂದರೆಯಾದಾಗ ತಕ್ಷಣ ವೈದ್ಯರನ್ನು ಕಾಣಬೇಕಾದೀತು.

ಕಾರಣಗಳು:
ಅತಿನಿದ್ರಾರೋಗಕ್ಕೆ ನಿಖರವಾದ ಕಾರಣ ತಿಳಿದಿಲ್ಲ. ಹೈಪೊಕ್ರೆಟಿನ್ ಎಂಬ ಮೆದುಳಿನ ರಾಸಾಯನಿಕವು ಎಚ್ಚರ ಇರುವುದಕ್ಕೆ ಸಹಾಯಕ ಮತ್ತು ಕಣ್ಣಿನ ಕ್ಷಿಪ್ರ ಚಲನಾ ನಿದ್ದೆಯನ್ನು ತಡೆಗಟ್ಟುತ್ತದೆ.
ಕ್ಯಾಟಪ್ಲೆಕ್ಸಿ ಅನುಭವಿಸುವವರಲ್ಲಿ ಹೈಪೊಕ್ರೆಟಿನ್ ಅಂಶ ಕಡಿಮೆ ಇರುತ್ತದೆ. ಯಾವ ಕಾರಣದಿಂದ ಹೈಪೊಕ್ರೆಟಿನ್ ಉತ್ಪತ್ತಿಸುವ ಮೆದುಳಿನ ಕೋಶಗಳ ನಷ್ಟ ಆಗುವುದು ಎಂಬುದು ತಿಳಿದಿಲ್ಲ. ಆದರೆ, ತಜ್ಞರ ಪ್ರಕಾರ ಅದೊಂದು ಸ್ವಯಂರಕ್ಷಣೆಯ ಪ್ರತಿಕ್ರಿಯೆ (Autoimmune reaction). ಅಂದರೆ ದೇಹದ ರಕ್ಷಣಾವ್ಯವಸ್ಥೆಯೆ ಸ್ವತಃ ತನ್ನ ಕೋಶಗಳನ್ನು ನಾಶ ಮಾಡುವುದು.

ಅಲ್ಲದೆ, ಆನುವಂಶಿಕತೆ ಸಹ ಅತಿನಿದ್ರಾರೋಗಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ. ಆದರೆ, ಹೆತ್ತ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಈ ರೋಗವನ್ನು ವರ್ಗಾಯಿಸುವ ಸಾಧ್ಯತೆ ಅತಿ ಕಮ್ಮಿ – ಕೇವಲ ಶೇಕಡ ಒಂದರಿಂದ ಎರಡರಷ್ಟು.
ಸಂಶೋಧಕರ ಪ್ರಕಾರ ಇಂತಹ ಕೆಲವು ಪ್ರಕರಣಗಳಿಗೆ ಹಂದಿ ಜ್ವರದ ವೈರಸ್ (swine flu virus or H1N1 flu) ಕಾಯಿಲೆ ಕೂಡ ಕಾರಣ ಇರಬಹುದು. ಹಾಗು ಹೆಚ್1ಎನ್1 ಕಾಯಿಲೆಯ ಲಸಿಕೆಗೆ ಮತ್ತು ಅತಿನಿದ್ರಾರೋಗಕ್ಕೆ ಸಂಬಂಧ ಇದ್ದಿರಬಹುದು ಎಂದಿದ್ದಾರೆ.

ವಿಶಿಷ್ಟ ನಿದ್ದೆಯ ಮಾದರಿ ಮತ್ತು ನಾರ್ಕೊಲೆಪ್ಸಿ:
ವ್ಯಕ್ತಿಯು ನಿದ್ದೆಗೆ ಜಾರುವ ವಿಶಿಷ್ಟ ಪ್ರಕ್ರಿಯೆ ಕಣ್ಣಿನ ಕ್ಷಿಪ್ರರಹಿತ ಚಲನಾ ನಿದ್ದೆಯ (NREM – Non-rapid eye movement) ಹಂತದಿಂದ ಆರಂಭ ಆಗುತ್ತದೆ. ಈ ಹಂತದಲ್ಲಿ, ಮೆದುಳಿನ ತರಂಗಗಳು ನಿಧಾನಗತಿಯಲ್ಲಿರುತ್ತವೆ. NREM ನಿದ್ದೆಯ ಸುಮಾರು ಒಂದು ಘಂಟೆಯ ನಂತರ, ಮೆದುಳಿನ ಕಾರ್ಯಕ್ಷಮತೆ ಬದಲಾಗಿ, REM (ಕಣ್ಣಿನ ಕ್ಷಿಪ್ರ ಚಲನಾ ನಿದ್ದೆ) ನಿದ್ದೆ ಆರಂಭವಾಗುತ್ತದೆ. ಈ ಹಂತದಲ್ಲಿ ಬಹುತೇಕ ಕನಸುಗಳು ಜರುಗುತ್ತವೆ.

ಆದರೆ, ನಾರ್ಕೊಲೆಪ್ಸಿ ರೋಗಿಯು ‘ಕಣ್ಣಿನ ಕ್ಷಿಪ್ರರಹಿತ ಚಲನಾ ನಿದ್ದೆ’ಗೆ ಹೋಗದೆ, ನೇರವಾಗಿ ‘ಕಣ್ಣಿನ ಕ್ಷಿಪ್ರ ಚಲನಾ ನಿದ್ದೆ’ಗೆ ಹಠಾತ್ತಾಗಿ ಹೋಗಿಬಿಡುವನು. ಇದು ರಾತ್ರಿ ಹಾಗು ಹಗಲುಗಳಲ್ಲು ಆಗಬಹುದು. ನಾರ್ಕೊಪ್ಲೆಕ್ಸಿ ರೋಗಿಯಲ್ಲಿ ನಿದ್ರಾನಿಶ್ಚೇಷ್ಟತೆ, ಭ್ರಾಂತಿ ಹಾಗು ಕ್ಯಾಟಪ್ಲೆಕ್ಸಿ ಎಚ್ಚರ ಇದ್ದಾಗ ಅಥವ ತೂಕಡಿಕೆಯಲ್ಲಿ ಸಹ ಆಗಬಹುದು.

ಅಪಾಯದ ಅಂಶಗಳು:
ನಾರ್ಕೊಲೆಪ್ಸಿ ರೋಗದ ಅಪಾಯದ ಅಂಶಗಳು ಹೆಚ್ಚಿಲ್ಲ —
… ಸಾಮಾನ್ಯವಾಗಿ ಅತಿನಿದ್ರಾರೋಗ 10 ರಿಂದ 30ರ ವಯಸ್ಸಿನವರಲ್ಲಿ ಆರಂಭ ಆಗುತ್ತದೆ.
… ಕುಟುಂಬಸ್ಥರಲ್ಲಿ ಈ ರೋಗ ಇದ್ದುದೆ ಆದರೆ, ಅಂಥವರಲ್ಲಿ 20 ರಿಂದ 40 ರಷ್ಟು ಅಧಿಕ ಸಾಧ್ಯತೆ ಇದೆ.

ತೊಡಕುಗಳು:
… ಸಮಾಜದಲ್ಲಿ ತಪ್ಪು ತಿಳಿವಳಿಕೆ — ಅತಿನಿದ್ರಾರೋಗ ವ್ಯಕ್ತಿಗತವಾಗಿ ಮತ್ತು ಕೆಲಸದ ಕಛೇರಿಯಲ್ಲಿ ರೋಗಿಗೆ ಸಮಸ್ಯೆಯಾಗಬಹುದು. ಶಾಲೆಯಲ್ಲಿ ಮತ್ತು ಕೆಲಸದಲ್ಲಿ ಸಾಮರ್ಥ್ಯ ಕುಂದಬಹುದು. ನೋಡುಗರ ಕಣ್ಣಿಗೆ ಅಂಥವರು ಸೋಮಾರಿಗಳು ಮತ್ತು ನಿರಾಸಕ್ತರು ಎಂದು ಕಾಣಬಹುದು.

… ನಿಕಟ ಸಂಬಂಧಗಳ ಮೇಲಿನ ಪರಿಣಾಮಗಳು — ಅತೀವ್ರ ಭಾವನಾತ್ಮಕ ಸ್ಥಿತಿಗಳಾದ ಕೋಪ, ಖುಷಿ, ದುಃಖ ಮುಂತಾದುವು ರೋಗದ ಪ್ರಚೋದಕಗಳು. ಹಾಗಾಗಿ, ಅತಿನಿದ್ರಾರೋಗದ ರೋಗಿಗಳು ಭಾವನಾತ್ಮಕ ಸಂವಹನಗಳಿಂದ ದೂರ ಉಳಿಯಬಹುದು.

… ದಿಢೀರಂತ ನಿದ್ದೆ ಮಾಡುವುದು ಹಾನಿಕಾರಕ — ದಿಢೀರಂತ ನಿದ್ದೆ ಹೋಗುವುದರಿಂದ ಘಾತಕಗಳು ಆಗಬಹುದು. ವಾಹನ ಚಾಲನೆಯ ಸಮಯದಲ್ಲಿ ನಿದ್ದೆಗೆಹೋದರೆ ಅಪಘಾತಗಳ ಸಾಧ್ಯತೆ ಹೆಚ್ಚು. ಅಡಿಗೆ ಮಾಡುವಾಗ ಸುಟ್ಟುಕೊಳ್ಳುವ ಮತ್ತು ಚಾಕು ಮುಂತಾದವುಗಳಿಂದ ಕೊಯ್ದುಕೊಳ್ಳುವ ಸಾಧ್ಯತೆ ಹೆಚ್ಚು.

… ಬೊಜ್ಜು — ಅತಿನಿದ್ರಾರೋಗದವರು ಅಧಿಕ ಬೊಜ್ಜುಳ್ಳವರಾಗಿರುವ ಸಾಧ್ಯತೆ  ಹೆಚ್ಚು. ಕೆಲವುಸಲ ನಿದ್ದೆಯ ಲಕ್ಷಣಗಳು ಹೆಚ್ಚಾದಾಗ, ತೂಕವು ತ್ವರಿತವಾಗಿ ಹೆಚ್ಚಾಗುತ್ತದೆ.

ರೋಗನಿರ್ಣಯ:
ರೋಗಿಯು ಹಗಲು ಹೊತ್ತು ಹೆಚ್ಚು ನಿದ್ದೆ ಮಾಡುವ ಲಕ್ಷಣವನ್ನು ತಿಳಿದ ವೈದ್ಯರು ಅತಿನಿದ್ರಾರೋಗವನ್ನು ಶಂಕಿಸುತ್ತಾರೆ; ಅಲ್ಲದೆ, ಇದ್ದಕ್ಕಿದ್ದಂತೆ ಸ್ನಾಯುವಿನ ಬಿಗಿಪು ನಷ್ಟವಾದಾಗ ಅವಘಾತವನ್ನು ಶಂಕಿಸುವುದೂ ಸಾಮಾನ್ಯ. ಆಗ ಅವರು ಆ ರೋಗಿಯನ್ನು ನಿದ್ರಾತಜ್ಞರಲ್ಲಿಗೆ (sleep specialist) ಕಳಿಸಬಹುದು. ಕ್ರಮಬದ್ಧ ರೋಗನಿರ್ಣಯ ಮಾಡಲು ರೋಗಿಯು ನಿದ್ರಾಕೇಂದ್ರದಲ್ಲಿ (sleep center) ಒಂದು ರಾತ್ರಿ ಇದ್ದರೆ ನಿದ್ದೆಯ ಸುದೀರ್ಘ ವಿಶ್ಲೇಷಣೆ ಸಾಧ್ಯ.

ನಿದ್ರಾತಜ್ಞರು ಕೆಲವು ಪರೀಕ್ಷೆಗಳ ಸಹಾಯದಿಂದ ರೋಗಿಯ ಅತಿನಿದ್ರಾರೋಗ ಮತ್ತು ಅದರ ತೀವ್ರತೆಯ ಬಗೆಗೆ ಅರಿಯಬಹುದು —

… ರೋಗಿಯ ನಿದ್ದೆಯ ಚರಿತ್ರೆ – ನಿದ್ದೆಯ ಮಾದರಿಯ ಸಂಪೂರ್ಣ ಮಾಹಿತಿಯು ರೋಗನಿರ್ಣಯಕ್ಕೆ ಸಹಾಯಕ. ಅದಕ್ಕಾಗಿ ಎಪ್ವರ್ತ್ ನಿದ್ರಾ ಮಾನದಂಡ (Epworth Sleepiness Scale) ಎಂಬ ಒಂದು ಪ್ರಶ್ನಾವಳಿಗೆ ಉತ್ತರಿಸಬೇಕಾಗುತ್ತದೆ. (ಇದರ ಬಗ್ಗೆ ಕುತೂಹಲ ಇದ್ದವರಿಗಾಗಿ ಲೇಖನದ ಅಂತ್ಯದಲ್ಲಿ ವಿವರಿಸಲಾಗಿದೆ).          

… ರೋಗಿಯ ನಿದ್ದೆಯ ದಾಖಲೆ – ಒಂದು ಅಥವ ಎರಡು ವಾರಗಳ ರೋಗಿಯ ನಿದ್ದೆಯ ಮಾದರಿಯನ್ನು ಬರೆದು ತರಲು ವೈದ್ಯರು ಹೇಳಬಹುದು. ಇದರಿಂದ ತಜ್ಞರಿಗೆ ರೋಗಿಯ ನಿದ್ದೆಯ ಮಾದರಿಯ ಅರಿವಾಗಿ, ರೋಗಿಯು ಎಷ್ಟು ಎಚ್ಚರ ಇದ್ದಾನೆ ಎಂಬುದು ತಿಳಿಯುವುದು.

ಅಲ್ಲದೆ ಆಕ್ಟಿಗ್ರಾಫ್ (actigraph) ಎಂಬ ಸಾಧನವನ್ನು ಕೈಯಲ್ಲಿ ಗಡಿಯಾರದ ಹಾಗೆ ಕಟ್ಟಿಕೊಳ್ಳಲು ಹೇಳುವರು. ಅದು ರೋಗಿಯ ಎಚ್ಚರ ಮತ್ತು ವಿಶ್ರಾಂತ ಅವಧಿಗಳನ್ನು ಅಳೆಯುತ್ತದೆ. ಹಾಗಾಗಿ, ರೋಗಿಯು ಹೇಗೆ ಮತ್ತು ಯಾವಾಗ ನಿದ್ದೆ ಮಾಡುವನು ಎಂಬುದನ್ನು ತಿಳಿಸುತ್ತದೆ.                

ಪಾಲಿಸಾಮ್ನೊಗ್ರಫಿ (Polysomnography) ಎಂಬ ನಿದ್ದೆಯ ಅಧ್ಯಯನ – ಈ ಪರೀಕ್ಷೆಯಲ್ಲಿ ವಿದ್ಯೂದ್ವಾರಗಳನ್ನು (electrodes) ರೋಗಿಯು ನಿದ್ದೆಯಲ್ಲಿದ್ದಾಗ ಆತನ  ನೆತ್ತಿಯ ಮೇಲಿಟ್ಟು, ಮೆದುಳಿನ ಸಂಜ್ಞೆಗಳನ್ನು ಅಳತೆ ಮಾಡಲಾಗುತ್ತದೆ. ಇದಕ್ಕಾಗಿ ರೋಗಿಯು ಒಂದು ರಾತ್ರಿ ವೈದ್ಯಕೀಯ ಕೊಠಡಿಯಲ್ಲಿ ಇರಬೇಕು. ಈ ಪರೀಕ್ಷೆಯು ಮೆದುಳಿನ ತರಂಗಗಳು, ಹೃದಯ ಬಡಿತಗಳು, ಉಸಿರಾಟ, ಮತ್ತು ಕಾಲು ಹಾಗು ಕಣ್ಣಿನ ಚಲನೆಗಳನ್ನು ಅಳತೆ ಮಾಡುತ್ತದೆ.

… ಅಗೋಚರ ನಿದ್ದೆಯ ಪರೀಕ್ಷೆಗಳು (multiple sleep latency tests) – ಈ ಪರೀಕ್ಷೆಯಿಂದ ಹಗಲಲ್ಲಿ ವ್ಯಕ್ತಿಗೆ ನಿದ್ದೆ ಹೋಗಲು ಎಷ್ಟು ಸಮಯ ಬೇಕೆಂಬುದನ್ನು ತಿಳಿಸುತ್ತದೆ. ಎರಡೆರಡು ಘಂಟೆಯ ಅಂತರದಲ್ಲಿ ವ್ಯಕ್ತಿಯು ನಾಲ್ಕೈದು ಬಾರಿ ಹಗುರ ನಿದ್ದೆಮಾಡಬೇಕಾಗುತ್ತದೆ. ಆ ಸಂದರ್ಭದಲ್ಲಿ ತಜ್ಞರು ಆತನ ನಿದ್ದೆಯ ಮಾದರಿಯನ್ನು ವೀಕ್ಷಿಸುತ್ತಾರೆ. ಅತಿನಿದ್ರಾರೋಗದ ವ್ಯಕ್ತಿಯು ಸುಲಭವಾಗಿ ನಿದ್ದೆಗೆ ಜಾರುವುದಲ್ಲದೆ, ಕಣ್ಣಿನ ಕ್ಷಿಪ್ರ ಚಲನಾ ನಿದ್ದೆಗೆ ತ್ವರಿತವಾಗಿ ಪ್ರವೇಶಿಸುತ್ತಾರೆ.

… ಒಮ್ಮೊಮ್ಮೆ ಆನುವಂಶಿಕ ಪರೀಕ್ಷೆ ಮಾಡುವುದರಿಂದ, ವ್ಯಕ್ತಿಗೆ ಒಂದನೆ ಮಾದರಿ ನಾರ್ಕೊಲೆಪ್ಸಿಯ ಅಪಾಯವಿದ್ದರೆ ಅದನ್ನು ಖಚಿತಪಡಿಸಿಕೊಂಡು, ಅಂತಹ ಸಂದರ್ಭದಲ್ಲಿ ಮೆದುಳಿನ ಹೈಪೊಕ್ರೆಟಿನ್ ಮಟ್ಟವನ್ನು ಅಳತೆ ಮಾಡಿಸಿ ಕೂಡ ಅರಿತುಕೊಳ್ಳಬಹುದು.

ಈ ಎಲ್ಲ ಪರೀಕ್ಷೆಗಳಿಂದ ಅತಿನಿದ್ರಾರೋಗಕ್ಕೆ ಬೇರೆ ಯಾವ ಕಾರಣಗಳಾದರು ಇದ್ದರೆ ಅವುಗಳ ಬಗ್ಗೆ ಸಹ ತಿಳಿಯಬಹುದು. ಉದಾಹರಣೆಗೆ, ಹಗಲಿನ ಅತಿ ನಿದ್ದೆ ಮಾಡುವವರಿಗೆ, ರಾತ್ರಿ ಹೊತ್ತಿನಲ್ಲಿ ನಿದ್ದೆ ಇಲ್ಲದೆ ಇರಬಹುದು, ನಿದ್ದೆಯ ಮಾತ್ರೆ ಸೇವನೆ ಕೂಡ ಇರಬಹುದು ಮತ್ತು ಸ್ಲೀಪ್ ಆಪ್ನಿಯ ಎಂಬ ಕಾರಣ ಸಹ ಇರಬಹುದು.

ಚಿಕಿತ್ಸೆ:
ಅತಿನಿದ್ರಾರೋಗವನ್ನು ಗುಣಪಡಿಸಲು ಆಗದ ಕಾಯಿಲೆ. ಕೆಲವು ಔಷಧಗಳಿಂದ ಮತ್ತು ಜೀವನ ಶೈಲಿಯ ಬದಲಾವಣೆಯಿಂದ ಕೆಲವು ಲಕ್ಷಣಗಳನ್ನು ಹತೋಟಿಗೆ ತರುವುದು ಸಾಧ್ಯ.

… ಔಷಧೋಪಚಾರ – ಕೇಂದ್ರ ನರವ್ಯೂಹವನ್ನು ಉದ್ದೀಪನಗೊಳಿಸುವ ಔಷಧಗಳು ಅತಿನಿದ್ರಾರೋಗಿಗಳು ಹಗಲಿನಲ್ಲಿ ಎಚ್ಚರ ಇರುವ ಹಾಗೆ ಮಾಡುತ್ತವೆ. ಇತ್ತೀಚಿನ ಕೆಲವು ಔಷಧಗಳಲ್ಲಿ, ಹಿಂದಿನ ಔಷಧಗಳ ಹಾಗೆ, ಹೆಚ್ಚು ಅಡ್ಡ ಪರಿಣಾಮ ಇರುವುದಿಲ್ಲ. ತಲೆನೋವು, ಓಕರಿಕೆ ಮತ್ತು ಆತಂಕ ಮುಂತಾದುವು ಸಾಧ್ಯ.
ಇನ್ನು ಕಣ್ಣಿನ ಕ್ಷಿಪ್ರ ಚಲನಾ ನಿದ್ದೆಗೆ (REM sleep) ತಡೆಹಿಡಿಯುವ ಔಷಧಗಳು, ಖಿನ್ನತೆ ಶಮನಕಾರಕ ಔಷಧಗಳು, ಅವಘಾತ ಅಥವ ಕ್ಯಾಟಪ್ಲೆಕ್ಸಿ ಉಪಶಮನ ಮಾಡುವ ಔಷಧಿಗಳು ಮುಂತಾದುವುಗಳನ್ನು ಸಹ ಉಪಯೋಗ ಮಾಡುವರು.

ಜೀವನಶೈಲಿ:
ಕೆಲವು ಜೀವನಶೈಲಿಯ ಬದಲಾವಣೆಗಳಿಂದ ಉಪಯೋಗ ಸಾಧ್ಯ–
… ವೇಳಾಪಟ್ಟಿ ಅನುಸರಣೆ – ಪ್ರತಿದಿನ, ರಜಾದಿನವೂ ಸೇರಿದಂತೆ ಸರಿಯಾದ ವೇಳೆಗೆ ಮಲಗುವ ಮತ್ತು ಎದ್ದೇಳುವ ಅಭ್ಯಾಸ ಮಾಡುವುದು.
… ಸಣ್ಣ ಸಣ್ಣ ನಿದ್ದೆ – ಹಗಲಿನಲ್ಲಿ ಸಣ್ಣ ಪ್ರಮಾಣದ ನಿದ್ದೆ ಮಾಡುವುದು; ಉದಾಹರಣೆಗೆ ಇಪ್ಪತ್ತು ನಿಮಿಷಗಳಷ್ಟು ಅಥವ ಸ್ವಲ್ಪ ಹೆಚ್ಚಿನ ಚಿಕ್ಕ ನಿದ್ರೆ. ಅದರಿಂದ ಒಂದರಿಂದ ಮೂರು ಘಂಟೆಯವರೆಗೆ ನಿದ್ದೆ ಕಡಿತ ಆಗಬಹುದು.
… ಧೂಮಪಾನ ಮತ್ತು ಮದ್ಯಪಾನ – ನಿಕೊಟಿನ್ ಮತ್ತು ಮದ್ಯದ ಉಪಯೋಗ, ಅದರಲ್ಲು ರಾತ್ರಿಯ ಸಮಯ ರೋಗಲಕ್ಷಣಗಳನ್ನು ಉಲ್ಬಣ ಮಾಡುವ ಸಾಧ್ಯತೆ.
… ನಿಯಮಿತ ವ್ಯಾಯಾಮ – ಮಿತವಾದ ಮತ್ತು ನಿಯಮಿತವಾದ ವ್ಯಾಯಾಮವನ್ನು ನಿದ್ದೆಗೆ ಮುನ್ನ ಮಾಡುವುದರಿಂದ ರಾತ್ರಿ ಉತ್ತಮ ನಿದ್ದೆ ಮಾಡಿ, ಹಗಲಿನಲ್ಲಿ ಹೆಚ್ಚಿನ ಎಚ್ಚರದಿಂದ ಇರಬಹುದು.

(ಕುತೂಹಲಿ ಓದುಗರಿಗಾಗಿ — ಎಪ್ವರ್ತ್ ನಿದ್ರಾ ಮಾನದಂಡ (Epworth Sleepiness Scale): ಇದು ಕೆಲವು ಅವಸ್ಥೆಗಳಲ್ಲಿ ವ್ಯಕ್ತಿಯು ನಿದ್ದೆಗೆ ಜಾರಬಹುದಾದ ಸಾಧ್ಯತೆಯನ್ನು ತಿಳಿಸುತ್ತದೆ. ಇವು ವ್ಯಕ್ತಿಯ ದೈನಂದಿನ ಸಾಮಾನ್ಯ ಚಟುವಟಿಕೆಗಳ ಮೇಲೆ ಅವಲಂಬಿತ. ಅದರಲ್ಲಿ ರೋಗಿಯ ನಿದ್ದೆಯ ಬಗ್ಗೆ ಎಂಟು ಸಣ್ಣ ಸಣ್ಣ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತಿ ಪ್ರಶ್ನೆಗೆ 0 ಇಂದ 3  ರವರೆಗೆ ಉತ್ತರಿಸಬೇಕು. ಅವುಗಳು –
0 = ತೂಕಡಿಕೆ ಬರುವುದಿಲ್ಲ
1 = ಸ್ವಲ್ಪ ತೂಕಡಿಕೆ
2 = ಮಧ್ಯಮ ತೂಕಡಿಕೆ
3 = ಅತಿಯಾದ ತೂಕಡಿಕೆ
ಇದರಲ್ಲಿ 0 ಇಂದ 10 ಸಾಮಾನ್ಯ ಮತ್ತು 10 ರಿಂದ 24 ಅಸಾಮಾನ್ಯ ಹಾಗು ಅತಿನಿದ್ದೆ.
ವ್ಯಕ್ತಿಗೆ ಕೇಳಲ್ಪಡುವ ಪ್ರಶ್ನೆಗಳು –
(ತೂಕಡಿಸಬಹುದು 0 ಇಂದ 3)
…ಕುಳಿತಿರುವಾಗ ಮತ್ತು ಓದುವಾಗ
… ಟಿ.ವಿ. ನೋಡುವಾಗ
… ಸಾರ್ವಜನಿಕ ಸ್ಥಳದಲ್ಲಿ ನಿಷ್ಕ್ರಿಯವಾಗಿ ಕುಳಿತಾಗ (ಉದಾಹರಣೆಗೆ, ಸಿನಿಮಾ ಥಿಯೇಟರಿನಲ್ಲಿ ಅಥವ ಸಭೆಯಲ್ಲಿ)
… ಕಾರಿನಲ್ಲಿ ಪ್ರಯಾಣಿಕನಾಗಿ ಒಂದು ಘಂಟೆ ಬಿಡುವಿಲ್ಲದೆ ಕುಳಿತಾಗ
… ಮಧ್ಯಾಹ್ನ ಸುಮ್ಮನೆ ವಿಶ್ರಾಂತಿ ಮಾಡುವಾಗ
… ಕುಳಿತು ಇನ್ನೊಬ್ಬರೊಡನೆ ಮಾತನಾಡುವಾಗ
… ಊಟದ ನಂತರ ಸುಮ್ಮನೆ ಕುಳಿತಿದ್ದಾಗ (ಮದ್ಯಪಾನ ಮಾಡದೆ)
… ಟ್ರಾಫಿಕ್ಕಿನಲ್ಲಿ ಕಾರಿನಲ್ಲಿ ಕುಳಿತು ಕಾಯುವಾಗ)


2 thoughts on “ಅತಿನಿದ್ರಾರೋಗ (Narcolepsy) ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ

  1. ಅತಿ ನಿದ್ರಾರೋಗ article ಚೆನ್ನಾಗಿದೆ. ರೋಗ ಲಕ್ಷಣ, ರೋಗ ನಿದಾನ, ರೋಗದಿಂದ ಆಗುವ ತೊಂದರೆಗಳು, ಚಿಕಿತ್ಸಾ ಸಲಹೆಗಳನ್ನು ಸಮರ್ಥವಾಗಿ ಸಕಲರಿಗೂ ಅರ್ಥವಾಗುವಂತೆ ತಿಳಿಸಿದ್ದೀರಿ.Good and congratularions

Leave a Reply

Back To Top