ನಗೆಯ ಮಾರಿತಂದೆ – ೨-ನಂರುಶಿ ಕಡೂರು

ಬೀಜವೊಡೆದು ಮೊಳೆಯಂಕುರಿಸುವಾಗ ಎಲೆ ಎಲ್ಲಿದ್ದಿತ್ತು?
ಎಲೆ ಸುಳಿಬಿಟ್ಟು ಕಮಲುವಾಗ ಶಾಖೆಯೆಲ್ಲಿದ್ದಿತ್ತು?
ಶಾಖೆ ಒಡೆದು ಕುಸುಮ ತೋರುವಾಗ ಫಲವೆಲ್ಲಿದ್ದಿತ್ತು?
ಫಲ ಬಲಿದು ರಸ ತುಂಬುವಾಗ ಸವಿಯೆಲ್ಲಿದ್ದಿತ್ತು?
ಸವಿಯ ಸವಿದು ಪರಿಣತೆಗೊಂಬಾಗ ಅದೇತರೊದಗು?ಇಷ್ಟರಿ ನೀತಿಯನರಿ, ಆತುರವೈರಿ ಮಾರೇಶ್ವರಾ.

       ಈ ವಚನದಲ್ಲಿ ಯಾರೋ ಕಷ್ಟಪಟ್ಟು ಮಾಡಿದ ಕೆಲಸಗಳನ್ನು ನಾನೇ ಮಾಡಿಸಿದ್ದು, ಮಾಡಿದ್ದು, ಎನ್ನುವವರನ್ನ ನೋಡಿಯೇ ಹೇಳಿರಬೇಕು. ಕಷ್ಟಪಟ್ಟು ಮಾಡಿದವನೆ ಬೇರೆ, ಹೆಸರು ಬಂದಿದ್ದು ಯಾರಿಗೋ? ಈಗಿನ ದಿನಮಾನಗಳಲ್ಲಿರುವ ವಿಷಯವೇ, ಇದರಲ್ಲಿ ಅತಿಶಯೋಕ್ತಿಯೇನು ಇಲ್ಲ. ಅದಕ್ಕಾಗಿಯೇ ಹೇಳುವುದು, ವಚನಗಳು ಎಲ್ಲಾ ಕಾಲಕ್ಕೂ ಸಲ್ಲುತ್ತವೆ. ಆಯಾ ಕಾಲದಲ್ಲಿ ಅದರ ತಾತ್ಪರ್ಯ ಪ್ರಸ್ತುತತೆಗೆ ಕನ್ನಡಿ ಹಿಡಿದಂತಾಗುತ್ತದೆ. ಇದೇ ಮಾತಿಗನುಗುಣವಾಗಿ ಡಿವಿಜಿ ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಒಂದು ಮುಕ್ತಕವನ್ನು ಹೇಳುತ್ತಾರೆ. ಇಳೆಯಿಂದ ಮೊಳಕೆಯೊಗೆವೊಂದು ತಮಟೆಗಳಿಲ್ಲ, ಫಲಮಾಗುವಂದು ತುತ್ತೂರಿ ಧ್ವನಿಯಿಲ್ಲ, ಸೂರ್ಯ ಚಂದಿರದೊಂದು ಸದ್ದಿಲ್ಲ, ಹೊಲಿ ನಿನ್ನ ತುಟಿಗಳನು -ಮಂಕುತಿಮ್ಮ.   ಇದರಲ್ಲಿ ಕೂಡ ಕವಿ ಎಲ್ಲರೂ ಅವರವರು ಮಾಡುವ ಕೆಲಸಗಳನ್ನ ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡುತ್ತಿರುವಾಗ ನೀನು ಮಾಡಿರುವ ಅಲ್ಪ ಕಾರ್ಯವ ಊರು ತುಂಬ ಸಾರುತ್ತಿರುವೆ? ಗುರು, ಲಿಂಗ, ಜಂಗಮ ಈ ಮೂರು ಸ್ಥಿತಿಗಳನ್ನು ಅರಿತೊಡೆ ಮಾತ್ರ ಏನನ್ನಾದರೂ ಸಾಧಿಸಬಹುದು. ಇಲ್ಲದಿದ್ದರೆ ಬೇರೆಯಾರೋ ಮಾಡಿದ ಕಾಯಕವ ನಾನೇ ಮಾಡಿದ್ದು ಎಂದು ನೀತಿ ಬಿಟ್ಟು ಊರು ತುಂಬ ಡಂಗೂರು ಸಾರಿದರೆ, ಇಂದಲ್ಲ ನಾಳೆ ಆ ಸತ್ಯ ಎಲ್ಲರಿಗೂ ತಿಳಿಯುತ್ತದೆ. “ಬೆಂಕಿಯುಂಡೆಯ ಮಡಿಲಲ್ಲಿ ಹೆಚ್ಚು ಸಮಯ ಕಟ್ಟಿಕೊಳ್ಳಲಾಗದು”.
          ಬೀಜ ಅಂಕುರಿಸುವಾಗ ಎಲೆ ಎಲ್ಲಿತ್ತೋ?, ಎಲೆ ಟಿಸಿಲೊಡೆದು ಕಾಂಡವಾಗಿ ಸುಳಿಬಿಟ್ಟು ಶಾಖೆಗಳಾಗಿ ಅಗಲವಾಗಿ ಮೈತಾಳಿದಾಗ ಮೊಗ್ಗು ಎಲ್ಲಿದ್ದೀತು?, ಮೊಗ್ಗು ಹೂವಾಗಿ ಅರಳಿದಾಗ ಕಾಯಿ ಎಲ್ಲಿದ್ದೀತು? ಕಾಯಿ ರಸಭರಿತ ಹಣ್ಣಾಗಿ ಸವಿಯಾಗಿದ್ದಾಗ ಅದನ್ನ ಸವಿಯುವ ಆ ಜಿಹ್ವೆಯು ಯಾವುದೋ? ತಿಂದಾಗ ಹೇಳುವುದು ಇದೆಂತಹ ಹಣ್ಣೋ? ಅಷ್ಟೊಂದು ಸವಿಯಿಲ್ಲ. ಜನಗಳ, ಪ್ರಕೃತಿಯ, ಕ್ರಿಮಿ – ಕೀಟಗಳ ನಡುವೆ ಹಣ್ಣಾಗಿ ಬೆಳೆದಿರುವ ಕಷ್ಟ ಆ ಹಣ್ಣಿಗೆ ಮಾತ್ರವೇ ಗೊತ್ತು. ದೂರದಿಂದ ದೇವಸ್ಥಾನದ ಶಿಖರಕ್ಕೆ ಇಟ್ಟಿರುವ ಕಳಶ ನೋಡಿದಾಗ ತುಂಬಾ ಸೊಗಸಾಗಿಯೇ ಕಾಣುತ್ತದೆ. ಆದರೆ, ಅಲ್ಲಿಂದ ಅದನ್ನ ಹಿಡಿದಿರುವ ದೇವಸ್ಥಾನದ ಅಡಿಪಾಯವಾಗಲಿ ಇಲ್ಲಾ ಅದನ್ನ ಹೊತ್ತು ನಿಂತಿರುವ ಗರ್ಭದ ಗುಡಿಯ ಕಟ್ಟಡವಾಗಲಿ ಗೋಚರಿಸದು.
    ಒಬ್ಬ ವ್ಯಕ್ತಿ ಏನಾದರೂ ಸಾಧಿಸಿರುವನೆಂದರೇ ಅವನ ಹಿಂದಿನ ದಿನಗಳಲ್ಲಿ ಮಾಡಿದ ಕಸರತ್ತು ಹಾಗೂ ಶ್ರದ್ಧೆ, ಏಕಾಗ್ರತೆ ಬಗ್ಗೆಯೂ ನೋಡಬೇಕು. ಆದರೆ ಅದಾವುದು ಗೆಲುವಿನ ಮುಂದೆ ಕಾಣುವುದಿಲ್ಲ. ಗೆದ್ದವನಿಗೆ ಮಾತ್ರವೇ ಗೊತ್ತು ಅವನು ಸವೆಸಿದ ಕಲ್ಲು ಮುಳ್ಳುಗಳ, ಏರಿಳಿತದ ಹಾದಿ. ಮನೆಯಲ್ಲಿ ಯಾವುದೋ ಕೆಲಸವನ್ನು ಮೊದಲಿನಿಂದ ಪ್ರಾರಂಬಿಸಿ ಕೊನೆಯವರೆಗೂ ಮಾಡಿಕೊಂಡು ಬಂದಾಗ, ಇದನ್ನ ಈಗೆ ಮಾಡಬಾರದಿತ್ತು?, ಆಗೆ ಮಾಡಬಹುದಿತ್ತ, ಇದು ಒಂದು ಸ್ವಲ್ಪ ಸರಿಮಾಡಬಹುದಿತ್ತು, ಇನ್ನು ನೋಡಬಹುದಿತ್ತು, ಕಾಯಬಹುದಿತ್ತು, ಎಂಬಂತಹ ಉದಾಸೀನ ಮಾತುಗಳಿಗೇನು ಕೊರತೆ ಇಲ್ಲ. ಇಲ್ಲಿಗೆ ಬರಲು ಪಟ್ಟ ಕಷ್ಟ ಕಾರ್ಪಣ್ಯಗಳು ಯಾರೀಗೂ ಕಾಣುವುದಿಲ್ಲ. ಆಗಿರುವ ಅನ್ನಕ್ಕೆ ಬರುವವರೇ ಎಲ್ಲರೂ. ಮಾಡಿಕೊಡುವವರ ಕಷ್ಟ ಅವರಿಗೇನು ತಿಳಿದಾತು? ಭತ್ತ ಬೆಳೆದು, ಕುಟ್ಟಿ, ಅಕ್ಕಿ ಮಾಡಿ, ಆ ಅಕ್ಕಿ ಅನ್ನವಾಗಿ ರೂಪಾಂತರವಾಗಿ ತಿಂದಾಗ ಅದರ ಅರಿವು ಬರುತ್ತೆ. ಉತ್ತು ಬೆಳೆದ ಕಷ್ಟ ರೈತರಿಗೆ ತಿಳಿದರೆ, ಅಕ್ಕಿಯ ಅನ್ನವಾಗಿಸಿದ ಕೀರ್ತಿ ಬಳೆಯ ಕೈಗಳಿಗೆ ಸಲ್ಲಬೇಕು. ಇವರ ಬಗ್ಗೆ ಮಾತನಾಡುವವರು ತಮ್ಮ ಮನಗಳಲ್ಲಿ ಒಂದು ನಿಮಿಷ ವಿಚಾರ ಮಾಡಿ ಆತ್ಮಸಾಕ್ಷಿಯನು ಮೀರದಂತೆ ನುಡಿದರೆ ಅವರೆಲ್ಲರು ಮಾಡಿದ್ದು ಸಾರ್ಥಕ. ಮಾಡದೆ ಹಾಡುವವನು ಅದಮನು ಎಂಬ ಶರಣರ ಸೂಳ್ನುಡಿಗಳಂತೆ ಯಾವುದೇ ಕೆಲಸವನ್ನು ಪೂರ್ಣ ಮಾಡಿದಾಗ ಮಾತ್ರ ಆ ಕಾರ್ಯದ ಬೆಲೆ, ವಸ್ತುವಿನ ಬೆಲೆ, ಸಮಯ, ಸಾಮಾರ್ಥ್ಯದ ಬೆಲೆಗಳು ಮಾರೇಶ್ವರನಿಗೆ ತಿಳಿಯುವುದೆಂದು ವಚನಕಾರರಾದ ನಗೆಯಮಾರಿತಂದೆ ದಾರ್ಶನಿಕರಿಸಿದ್ದಾರೆ.

————————–

Leave a Reply

Back To Top