‘ನೀರೊಲೆ’-ಪ್ರಬಂಧ ಗೊರೂರು ಅನಂತರಾಜು

ನಮ್ಮೂರ ಕೋಟೆಯಲ್ಲಿ ಒಂದು ರೈಸ್ ಮಿಲ್ ಇತ್ತು. ಅದರ ಹೆಸರೇನಿತ್ತು ನೆನಪಿಲ್ಲ. ಮೊನ್ನೆ ಮನೆಗೆ ಬಂದ ಯಾಕೂಬ ಅದು ಮಹಬೂಬಿಯ ರೈಸ್ ಮಿಲ್, ಅದು ನಮ್ಮ ಅಜ್ಜ ಅಜೀಜ್‌ಖಾನ್‌ರದು ಎಂದನು. ಈ ಮಿಲ್‌ಗೆ  ಸುತ್ತಲ ಹಳ್ಳಿಗಳಿಂದ ರೈತರು ಗಾಡಿಗಳಲ್ಲಿ ಭತ್ತ ಏರಿಕೊಂಡು ಮಿಲ್ ಮಾಡಿಸಲು ಬರುತ್ತಿದ್ದರು. ನಮಗೆ ಚಂಗರವಳ್ಳಿ ನಾಲೆ ಕೆಳಗೆ  ಗದ್ದೆ ಇತ್ತು. ಸುಗ್ಗಿಕಾಲದಲ್ಲಿ ನಮ್ಮ ತಂದೆ ಅಟ್ಟದಲ್ಲಿರಿಸಿದ್ದ ಬಿದಿರಿನ  ಕಣಜದಲ್ಲಿ ಭತ್ತ ತುಂಬಿಡುತ್ತಿದ್ದರು. ಮನೆಯಲ್ಲಿ ಅಕ್ಕಿ ಮುಗಿದುಹೋದಾಗ ನಾಲ್ಕೈದು ಚೀಲ ಭತ್ತ ತುಂಬಿ ಎತ್ತಿನಗಾಡಿ ಬಾಡಿಗೆಗೆ ಮಾಡಿಕೊಂಡು ರೈಸ್‌ಮಿಲ್ ಕಡೆಗೆ ಹೊರಡುತ್ತಿದ್ದರು. ನಾನು ಕೆಲವೊಮ್ಮೆ ಹಿಂಬಾಲಿಸುತ್ತಿದ್ದೆನು. ಆಗ ನಮ್ಮ ಊರಿಗೆ ಇದೇ ದೊಡ್ಡ ಇಂಡಸ್ಟ್ರಿ. ಇದನ್ನು ಮದ್ರಾಸಿನಿಂದ ದಾಂಡೇಕರ್ ಕಂಪನಿಯವರು ತಯಾರಿಸಿ ಆ ಕಂಪನಿ ಕಡೆಯವರು ಬಂದು ಮಿಷನ್ ಫಿಟ್ ಮಾಡಿ ಹೋಗಿದ್ದರೆಂಬ ವಿಷಯ ಯಾಕೂಬನಿಂದ ತಿಳಿಯಿತು. ಆ ಮಿಲ್‌ನಲ್ಲಿ ರೈತರು ತಾವು ತಂದ ಭತ್ತದ ಚೀಲಗಳನ್ನು ಇಳಿಸಿ ತಮ್ಮ ಸರದಿಗಾಗಿ ಕಾಯುತ್ತಾ ಹೊರಗೆ ಪರಸ್ಪರ ಮಾತಿನಲ್ಲಿ ತೊಡಗಿರುತ್ತಿದ್ದರು. ಒಳಗೆ ರೈಸ್‌ಮಿಲ್ಲಿನ ಶಬ್ಧದಲ್ಲಿ ಒಬ್ಬರ ಮಾತು ಇನ್ನೊಬ್ಬರಿಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ.  ನನ್ನನ್ನು ಭತ್ತದ ಚೀಲ ನೋಡಿಕೊಳ್ತಾ ಇರು ಎಂದು  ತಿಳಿಸಿ ನಮ್ಮ ತಂದೆ ಅಂಗಡಿ ವ್ಯಾಪಾರಕ್ಕೆ ಹೋಗುತ್ತಿದ್ದರು. ನಮ್ಮದು ಒಂದು ಚಿಲ್ಲರೆ ಅಂಗಡಿ ಇತ್ತು. ನಮ್ಮ ತಂದೆ ಅತ್ತ ಹೋದ ಮೇಲೆ ಇತ್ತ ನಾನು ಮಿಲ್ ಹಿಂದೆ ಉದುರಿ ಬೀಳುತ್ತಿದ್ದ ಹುಯ್ಯಿ ರಾಶಿಯಲ್ಲಿ ಬಿದ್ದು ಜಾರುಗುಪ್ಪೆ ಆಡುತ್ತಿದ್ದೆನು. ನನ್ನ ವಾರಿಗೆಯ ಹುಡುಗರ ಗುಂಪು ಅಲ್ಲಿ ಸಾಕಷ್ಟು ಇರುತಿತ್ತು. ಮಿಲ್ ಹಿಂಭಾಗ ಪುರಾತನ ಕೋಟೆಯ ಅವಶೇಷ ಇತ್ತು. ಆ ವಯಸ್ಸಿಗೆ ಆ ಕೋಟೆಯ ವಿಶೇಷತೆ ನನಗೆ ತಿಳಿದಿರಲಿಲ್ಲ. ನಾನು ಕತೆ ಕವನ  ಬರೆಯಲು ಪ್ರಾರಂಭಿಸಿ ೧೯೯೧ರಲ್ಲಿ  ಪ್ರಕಟಿತ ಗೊರೂರು ಹೇಮಾವತಿ ದರ್ಶನ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡಲು ದಿವಂಗತ ಚಂದ್ರಶೇಖರ್ ಧೂಲೇಕರ್ ಅವರಲ್ಲಿ ಕೋರಿದ್ದೆನು.  ಅವರು ಗೊರೂರು ಇತಿಹಾಸದ ಹೆಜ್ಜೆ ಗುರುತು ದಾಖಲಿಸುತ್ತಾ ‘೧೭೮೦ರಲ್ಲಿ ಕೊಡಗಿನ ಲಿಂಗರಾಜೇಂದ್ರ ರಾಜನು ಮರಣ ಹೊಂದಿದ ನಂತರ ಆತನ ಚಿಕ್ಕ ಮಗ ರಾಜ್ಯಾಡಳಿತ ನಡೆಸಲಾರನೆಂದು ತಿಳಿದ ಹೈದರಾಲಿ ಕುಯುಕ್ತಿಯಿಂದ ರಾಜರ ಕುಟುಂಬವನ್ನು ಕರೆತಂದು ಗೊರೂರಿನ ಕೋಟೆಯಲ್ಲಿ ಬಂಧಿಸಿದ್ದನೆಂದೂ ನಂತರ ೧೭೯೨ರಲ್ಲಿ ಹೈದರಾಲಿಯ ಮಗ ಟಿಪ್ಪುಸುಲ್ತಾನನು ಗೊರೂರು ಕೋಟೆಯಿಂದ ಮಡಿಕೇರಿ ರಾಜಕುಟುಂಬವನ್ನು ಪಿರಿಯಾಪಟ್ಟಣಕ್ಕೆ ವರ್ಗಾಯಿಸಿದನೆಂದೂ ಕೃಷ್ಣಯ್ಯನವರ ಮಡಿಕೇರಿ ಇತಿಹಾಸದಿಂದ ತಿಳಿದುಬರುತ್ತದೆ.. ಎಂದು ಬರೆದುಕೊಟ್ಟಿದ್ದರು.
ಈಗ ಕೋಟೆಯ ಅವಶೇಷ ಲವಲೇಶವೂ ಇಲ್ಲ. ಆದರೆ ಐವತ್ತು ವರ್ಷಗಳ ಹಿಂದೆ ಎತ್ತರದ  ದಿಣ್ಣೆಯಂತಹ
 ಮಣ್ಣಿನ ಕೋಟೆ ಇದ್ದಿದ್ದು ನಾನು ಕಣ್ಣಾರೆ ನೋಡಿದ್ದೇನೆ. ಹಳೇ ಗೊರೂರು ಗ್ರಾಮವನ್ನು ಕೋಟೆ ಮತ್ತು ಪೇಟೆ ಎಂದು ಕರೆಯಲಾಗುತ್ತಿತ್ತು. ಊರ ಮಧ್ಯೆ ಹರಿದು ಹೋಗಿದ್ದ ಚಂಗರವಳ್ಳಿ ನಾಲೆ ಕೋಟೆ ಪೇಟೆಯನ್ನು ವಿಭಾಗಿಸಿತ್ತು. ಮಣ್ಣಿನ ಕೋಟೆ ಹಿಂಭಾಗ ಹೊಯ್ಸಳರ ಕಾಲದ ಈಶ್ವರ ದೇವಸ್ಥಾನವಿತ್ತು. ಹೇಮಾವತಿ ಅಣೆಕಟ್ಟೆ ಕೆಲಸ ಪ್ರಾರಂಭವಾದ ಮೇಲೆ  ಊರಿನ ಮೇಲ್ಭಾಗ ನಮ್ಮ ತಂದೆ ಮನೆ ಕಟ್ಟಿ ನಾವು ಅಲ್ಲಿ ವಾಸವಿದ್ದವು. ನಮ್ಮ ಮನೆ ಮುಂದಿನ ಮುಖ್ಯ ರಸ್ತೆಯು ಈಶ್ವರ ದೇವಾಲಯಕ್ಕೆ ಕೊನೆಯಾಗಿತ್ತು. ಮಿಲ್‌ನಿಂದ ಈಶ್ವರ ದೇವಸ್ಥಾನದವರೆಗೆ ರಸ್ತೆ ಬದಿ ಕಳ್ಳಿಬೇಲಿ ಹಾಕಿದ್ದರು.  ಮಣ್ಣಿನ ಕೋಟೆ ಮತ್ತು ಮಿಲ್ ಮಧ್ಯೆ ಆಳವಾದ ಕಂದಕ ಇತ್ತಾಗಿ ಮಿಲ್‌ನಿಂದ ಹೊರಬಿದ್ದ ಹುಯ್ಯಿ ಸಂಗ್ರಹವಾಗಲು ಸಹಕಾರಿಯಾಗಿತ್ತು. ಹುಯ್ಯಿ ಕೆಳಗಿನಿಂದ ಮೇಲಕ್ಕೆ ತುಂಬುತ್ತಾ  ಬಂದಂತೆ ನಾವು ಹುಡುಗರು ಮೇಲಿನಿಂದ ಕೆಳಮುಖವಾಗಿ ಜಾರಿ ಮತ್ತೆ ಮೇಲೆ ಹತ್ತಿ ಬಂದು ರಿಪೀಟ್ ಮಾಡುತ್ತಿದ್ದ ಅಟ ಮರೆಯುವಂತಿಲ್ಲ. ಆಗ ಹುಯ್ಯಿಗೆ ದರ ನಿಗದಿಯಾಗಿರಲಿಲ್ಲ.  
ನಮ್ಮ ಅಜ್ಜ ಅಪ್ಪಯ್ಯಶೆಟ್ಟರ ಮನೆಯಲ್ಲಿ ಮೂರು ಸೈಜುಕಲ್ಲು ಇರಿಸಿ  ಆದರ ಮೇಲೆ ನೀರಿನ ಹಂಡೆ ಇಟ್ಟಿದ್ದು ನೋಡಿದ್ದೆನು. ನಾನು ಮೂರು ನಾಲ್ಕನೇ ಕ್ಲಾಸಿಗೆ ಬರುವಷ್ಟರಲ್ಲಿ ನಮ್ಮ ತಂದೆ ಊರಿನ ಮೇಲ್ಭಾಗ ಈಶ್ವರ ದೇವಸ್ಥಾನ ರಸ್ತೆಯಲ್ಲಿ ಯಾವಾಗ ಮನೆ ಕಟ್ಟಿದ್ದರೋ ಆಗಲೇ ನೀರೊಲೆಗೆ ಹಂಡೆ ಹೂಳಿಸಿದ್ದರು. ನಮಗೆ  ನಾಗವಾರ ಕಡೆಯಿಂದ ರಾಜ ಮತ್ತಿತರೆ ಮಂದಿ ಗಾಡಿಯಲ್ಲಿ ಸೌದೆ ತುಂಬಿ ಕೊಂಡು ಬಂದು ಊರಿನಲ್ಲಿ ಮಾರಿ  ಹೋಗುತ್ತಿದ್ದರು. ನಮ್ಮ ತಂದೆ ಮನೆ ಹಿತ್ತಿಲಿನಲ್ಲಿ ಹುಲ್ಲು ತೆಂಗಿನಗರಿಯ ಒಂದು ಶೆಡ್ ಮಾಡಿ ಬೇಸಿಗೆ ಕಾಲದಲ್ಲಿ ಸೌದೆ ಸ್ಟಾಕ್ ಮಾಡಿ ಮಳೆಗಾಲದಲ್ಲಿ ಸೌದೆಗೆ ತಾಪತ್ರಯವಾಗದಂತೆ ಎಚ್ಚರ ವಹಿಸುತ್ತಿದ್ದರು. ಚಿಕ್ಕದಾಗಿ ತುಂಡರಿಸಿದ ಸೌದೆಯನ್ನು ಅಡಿಗೆ ಮನೆ ಒಲೆಗೂ ದಪ್ಪ ತುಂಡುಗಳನ್ನು ನೀರೊಲೆಗೂ ಬಳಸುತ್ತಿದ್ದೆವು. ಅಣೆಕಟ್ಟೆ ಕೆಲಸ ಪ್ರಾರಂಭವಾಗಿ   ಸೌದೆ ಗಾಡಿಗಳು ಬರುವುದು ನಿದಾನವಾಗಿ ಕಡಿಮೆಯಾಯಿತು. ಸೌದೆಯ ಬೆಲೆಯು ಹೆಚ್ಚಾಯಿತು. ಹೀಗಿರಲು ಹುಯ್ಯಿಗೆ ಬಹುಶ: ಚೀಲಕ್ಕೆ ಹತ್ತು ರೂ. ಬೆಲೆ ನಿಗದಿಯಾಗಿ ಹುಯ್ಯಿ ತುಂಬಿಕೊಂಡು ಬರಲು ನಮ್ಮ ತಾಯಿ ಭತ್ತದ ಚೀಲ ಕೊಟ್ಟು ಕಳಿಸುತ್ತಿದ್ದರು. ಮನೆಯ ಸೌದೆ ಒಲೆಯ ಶೇಪ್ ಕೂಡ ಬದಲಾಗಿ ಗಾರೆ ಕೆಲಸದ ಬೆಳ್ಳೆ ಸೌದೆ ಮತ್ತು ಹುಯ್ಯಿ ಎರಡು ಬಗೆಯಲ್ಲೂ ನೀರು ಕಾಯಿಸುವಂತೆ ಸೂಕ್ತ ಮಾರ್ಪಡು ಮಾಡಿಕೊಟ್ಟನು.  
ಕಟ್ಟೆಯ ಹಿಂದೆ ನೀರು ನಿಂತು ಊರಿಗೆ ಸೌದೆ ಬರುವುದು ನಿಂತುಹೋಯಿತು. ಹುಯ್ಯಿ ದರವೂ ಏರುತ್ತಾ ಹೋಯಿತು. ಆಗ ಹಾಸನಕ್ಕೆ ಹೆಚ್.ಪಿ. ಗ್ಯಾಸ್ ಬಂತು. ಗೊರೂರಿಗೆ ಬಹಳ ಸಾಹಸದಿಂದ ಟೆಂಪೋದಲ್ಲಿ ಗ್ಯಾಸ್ ಸಿಲಿಂಡರ್ ತಂದು ಅಡಿಗೆ ಮಾಡುವುದು ಆರಂಭವಾಯಿತು. ಇಷ್ಟೊತ್ತಿಗೆ  ನನಗೆ ಮದುವೆಯಾಗಿತ್ತು. ಈ ಮೊದಲು ಮಳೆಗಾಲದಲ್ಲಿ ಅಡಿಗೆ ಮನೆ ಒಲೆ ಮತ್ತು ನೀರೊಲೆ  ಹತ್ತಿಸಲು ಸೀಮೆಎಣ್ಣೆ ಸುರಿದು ಬೆಂಕಿ ಹತ್ತಿಸುತ್ತಿದ್ದ ಅಮ್ಮ ನ್ಯೂಸ್ ಪೇಪರ್‌ನ್ನು ತುರುಕುತ್ತಿದ್ದರು. ಸೀಮೆಎಣ್ಣೆ ಮೊದಮೊದಲು ಗೋವಿಂದೇಗೌಡರ ಅಂಗಡಿಯಲ್ಲಿ ಯಾವಾಗಲೂ ದೊರೆಯುತ್ತಿತ್ತು. ಒಂದು ಬೀರು ಬಾಟಲಿಯಲ್ಲಿ ತಂದಿಟ್ಟುಕೊಂಡರೆ ಆ ಸೀಮೆಎಣ್ಣೆ ಒಂದು ವಾರ ಬರುತ್ರಿತ್ತು. ಮುಂದೆ ಸೀಮೆಎಣ್ಣೆಗೂ ಬರ ಬಂತು. ಕ್ಯೂನಲ್ಲಿ ನಿಂತು ತಳ್ಳಾಡಿ ಕೂಗಾಡಿ ಎರಡು ಲೀಟರ್ ಸೀಮೆಎಣ್ಣೆ ಖರೀದಿಸಲು ಹೆಣಗಾಡಿದವು. ಮುಂದೆ ಶಿವಣ್ಣನ ರೇಷನ್ ಅಂಗಡಿಯಲ್ಲಿ ಸಕ್ಕರೆ ಮತ್ತು ಸೀಮೆಎಣ್ಣೆಯನ್ನು  ತರಲು ರೇಷನ್ ಕಾರ್ಡ್ ನೆರವಾಯಿತು. ಕೆಲವೊಮ್ಮೆ ರಾತ್ರಿ ಕರೆಂಟ್ ಹೋದರೆ ಸೀಮೆಎಣ್ಣೆ ಬುಡ್ಡಿಯನ್ನು ಹಚ್ಚಿಕೊಂಡು ಅದರ ಕೆಳಗೆ ಓದಲು ಬರೆಯಲು ಕುಳಿತುಕೊಳ್ಳುತ್ತಿದ್ದೆವು.  ಉರಿದ ಬತ್ತಿಯ ಹೊಗೆ ಸೀಮೆಎಣ್ಣೆಯ ವಾಸನೆಯಿಂದ ಉಸಿರು ಕಟ್ಟಿದಂತಾಗುತ್ತಿತ್ತು. ಸೀಮೆಎಣ್ಣೆಯ ಸಹಾಯದಿಂದ ಒಲೆ ಹತ್ತಿಸಿದರೂ ಮಧ್ಯೆ ಮಧ್ಯೆ ಬೆಂಕಿ ಆರಿ ಹೋಗಿ ಮನೆ ತುಂಬಾ ಹೊಗೆ ತುಂಬಿಕೊಳ್ಳುತ್ತಿತ್ತು. ಮುಂದೆ ಸೀಮೆ ಎಣ್ಣೆಗೂ ಅಭಾವ ಎದುರಾಗಿ ನ್ಯೂಸ್ ಪೇಪರ್‌ನ್ನು ಸೌದೆ ಹಚ್ಚಿಸಲು ಬಳಸುತ್ತಿದ್ದೆವು. ನಮ್ಮ ಎಕ್ಸರ್‌ಸೈಜ್ ನೋಟ್ ಪುಸ್ತಕಗಳು ಒಲೆಯಲ್ಲಿ ಉರಿದುಹೋದವು. ಸೌದೆ ಒಲೆ ಸರಿಯಾಗಿ ಉರಿಯದೇ ಕೊಳವೆಯಲ್ಲಿ ಊದಿ ಊದಿ ಹೊಗೆಯ ಘಾಟಿಗೆ ಕೆಮ್ಮಿ ಕೆಮ್ಮಿ ತತ್ ಯಾರಿಗೆ ಬೇಕು ಈ ವಾರದ ಸ್ನಾನ ಎನಿಸುತ್ತಿತ್ತು. ವಾರಕ್ಕೆ ಎರಡು ದಿನ ಮಾತ್ರ ಸ್ನಾನ.  ಸೋಮುವಾರ ಮನೆ ದೇವರ ವಾರವಾಗಿ ಸ್ನಾನ ಮಾಡದೇ ಅಮ್ಮ ತಿಂಡಿ ಮಾಡಲು ಕೂರುತ್ತಿರಲಿಲ್ಲ. ಮನೆ ದೇವರ ಪೂಜೆ ಅಪ್ಪನದ್ದಾಗಿ ಸಮಯ ಪಾಲನೆ ಆಗುತ್ತಿತ್ತು. ಆದರೂ ಸ್ನಾನ ಪೂಜೆ ಮುಗಿದು ತಿಂಡಿಗೆ ಕೂರುವಷ್ಟರಲ್ಲಿ ನನಗೆ ಹಸಿವು ಹೆಚ್ಚಾಗಿ ತಡೆಯಲಾಗದೇ  ಅಮ್ಮನ ಮೇಲೆ ಕೂಗಾಡಿದ್ದು ಉಂಟು. ಶುಕ್ರವಾರದ ಸ್ನಾನ ಪೂಜೆಗೆ ಅಷ್ಟು ಮಹತ್ವ ಇರಲಿಲ್ಲವಾಗಿ ತಿಂಡಿಗೆ ಅಷ್ಟು ತಡವಾಗುತ್ತಿರಲಿಲ್ಲ. ಮುಂದೆ ನನ್ನ ಮಡದಿ ಶಕುಂತಲೆ ಸೋಮುವಾರ ಮತ್ತು ಶುಕ್ರವಾರದ ಪೂಜೆಯನ್ನು ಬಹು ನಿಷ್ಟೆಯಿಂದ ಮುಂದುವರಿಸಿ ನನಗೆ ಈಗಲೂ ಕಷ್ಟಕ್ಕೆ ಸಿಲುಕಿಸಿದ್ದಾಳೆ. ಇರಲಿ ನಾವು ಹಾಸನಕ್ಕೆ ಬಂದು ನೆಲೆಸಿದ ಮೇಲೆ ನಮ್ಮ ಬದುಕಿನ ರೀತಿ ಬದಲಾಯಿತು. ಮೊದಲು ಗ್ಯಾಸ್ ಮುಗಿದುಹೋದರೆ ಗ್ಯಾಸ್ ಅಂಗಡಿಗೆ ಹೋಗಿ ಬಿಲ್ ಹಾಕಿಸಿ ಗ್ಯಾಸ್ ಗೋಡೋನ್‌ಗೆ ಆಟೋ ಮಾಡಿಕೊಂಡು ಹೋಗಿ ಕೇಳಿದಷ್ಟು ಬಾಡಿಗೆ ಕೊಟ್ಟು ತರುತ್ತಿದ್ದೆವು. ಸದ್ಯ  ಗ್ಯಾಸ್ ಬುಕ್ ಮಾಡಿದರೆ ಮನೆಗೆ ಬರುವಷ್ಟು ದೇಶ ಪ್ರಗತಿಯಾಗಿದೆ. ಏನು ಮಾಡುವುದು  ಗ್ಯಾಸ್ ಬಳಕೆದಾರರು ಹೆಚ್ಚಾದಂತೆ ಗ್ಯಾಸ್ ಬೆಲೆಯೂ ಏರುತ್ತಾ ಬಂದಿದೆ.  ಹಾಸನಕ್ಕೆ ಬಂದ ಹೊಸದರಲ್ಲಿ ನೀರೊಲೆಗೆ ತೆಂಗಿನಮೊಟ್ಟೆ ಖರೀದಿಸಿ ಬಳಸುತ್ತಿದ್ದವು.  ಲಾರಿ ಟ್ರಾಕ್ಟರ್‌ಗಳಲ್ಲಿ ಮನೆ ಬಾಗಿಲಿಗೆ ಬಂದು ಮೊಟ್ಟೆ ಎಂದು ಕೂಗಿ ಕರೆಯುತ್ತಿದ್ದರು. ಕೆಲವೊಮ್ಮೆ ಕೋಳಿಮೊಟ್ಟೆ ಮಾರುವವರು ತಳ್ಳೊಗಾಡಿನಲ್ಲಿ ಇಟ್ಟುಕೊಂಡು ಬಂದು ಮೊಟ್ಟೆ ಎಂದು ಕೂಗಿ ಕರೆದು ನಾವು ಬೇಸ್ತು ಬಿದ್ದಿದ್ದು ಉಂಟು. ಒಲೆಗೆ ತೆಂಗಿನಮೊಟ್ಟೆ ಬಳಸುತ್ತಿದ್ದರಿಂದ ಬಚ್ಚಲು ಮನೆಯು ಹೊಗೆಯಿಂದ ಕಪ್ಪಾಗುತ್ತಿತ್ತು. ಜೊತೆಗೆ ಪೈಪ್‌ನಲ್ಲಿ ಕಿಟ್ಟ ಕಟ್ಟುತ್ತಿತ್ತು. ನಾವು ತೆಂಗಿನ ಮೊಟ್ಟೆಯನ್ನು ಸ್ಟಾಕ್ ಮಾಡಲು ಬಚ್ಚಲು ಮನೆಯಲ್ಲಿ ಮೇಲೆ ಬಾಕ್ಸ್ ಮಾಡಿಸಿದ್ದು ಮುಂದೆ ವೇಸ್ಟ್ ಆಯಿತು. ಈಗ ಅದು ವೇಸ್ಟೇಜ್ ಸಾಮಾನು ತುಂಬುವ ಜಾಗವಾಗಿದೆ. ನಮ್ಮ ಮುಂದುವರಿದ ಬದುಕಿನಲ್ಲಿ  ಗ್ಯಾಸ್‌ನಲ್ಲಿ ನೀರು ಕಾಯಿಸಲು ಗ್ಯಾಸ್ ಗೀಸರ್ ತಂದು ಅಳವಡಿಸಿದೆವು. ಡಬ್ಬಲ್ ಸಿಲಿಂಡರ್ ಬೇಕಾಯಿತು. ಗ್ಯಾಸ್ ಗೀಸರ್‌ನಲ್ಲಿ ತಟ್ಟನೇ ಬಿಸಿ ನೀರು ಬರುತ್ತದೆ.  ಹೀಗಾಗಿ ಈ ಹಿಂದಿನ ಮಾರ್ಗದಲ್ಲಿ ನೀರು ಕಾಯಿಸಿ ಅದು ಕಾಯ್ದು ನಂತರ ನೋಡಿ ನಾವು ಸ್ನಾನ ಮಾಡಬೇಕಾಗಿತ್ತು. ಈ ಹಿಂದೆ ಸೌದೆ ಅಂಡೆಯಲ್ಲಿ ಕಾಯ್ದ ನೀರು ಸ್ನಾನ ಮಾಡಿ ಉಳಿದು ಬಿಸಿ ನೀರು ವೇಸ್ಟ್ ಆಗುತ್ತಿತ್ತು. ಗ್ಯಾಸ್ ಗೀಸರ್‌ನಿಂದ ಅದು ತಪ್ಪಿದೆ. ಅದಿರಲಿ ಇತ್ತೀಚಿಗೆ  ಉಚಿತ ವಿದ್ಯುತ್ ಘೋಷಣೆಯಾಗಿ ಮನೆಗೆ ಕರೆಂಟ್ ಗೀಸರ್ ತಂದೆವು. ಆದರೆ ಇನ್ನೂರು ಯೂನಿಟ್ ಭಾಗ್ಯ ನಮಗಿಲ್ಲ. ಮೂರನೇ ಒಂದು ಭಾಗಕ್ಕೆ ಹಿಂದಿನ ವರ್ಷದ ಸರಾಸರಿಗೆ ಹೊಂದಾಣಿಕೆ ಆಗಿದೆ. ನಿಲ್ ಬ್ಯಾಲೆನ್ಸ್ ಹೋಗಿ ಹೆಚ್ಚುವರಿ ಪೆನಾಲ್ಟಿ ಕಿಕ್ ಬೀಳುತ್ತಿದೆ. ಮಡದಿ ಕರೆಂಟ್ ನೀರಿಗೆ ಕೂದಲು ಉದುರುತ್ತದೆ ಎಂದು ಗ್ಯಾಸ್ ಗೀಸರ್ ನೀರನ್ನೇ ಬಳಸುತ್ತಿದ್ದಾಳೆ. ಕರೆಂಟ್ ಗೀಸರ್‌ಗೆ ಹತ್ತು ಸಾವಿರ ದಂಡ ಮಾಡಿಸಿದ್ದಕ್ಕೆ ಆಕೆಯ ಮೇಲೆ ನನಗೆ ಸಿಟ್ಟಿದೆ.  ಈಗ ಸೋಲಾರ್ ಹಾಕಿಸಿ ಎನ್ನುತ್ತಿದ್ದಾಳೆ.  ಅದಕ್ಕೆ ತಕ್ಕಂತೆ ಮನೆಯ ನಲ್ಲಿ ವ್ಯವಸ್ಥೆ ಬದಲಾಯಿಸಬೇಕಾಗಿದೆ. ಮನೆಯ ರಿಪೇರಿ ಕೆಲಸ ದುಬಾರಿಯಾಗುತ್ತಿದೆ. ಕಾಲ ಬದಲಾದಂತೆ ನಾವು ಬದಲಾಗಬೇಕಿದೆ ನಿಜ. ಏನು ಮಾಡುವುದು ನಾವು ಮಧ್ಯಮ ವರ್ಗದ ಜನ. ಕಳೆದು ಕೂಡುವ ಲೆಕ್ಕಾಚಾರದಲ್ಲೇ ಬದುಕು ಸಾಗಿದೆ. ಒಂದು ಕಾಲದಲ್ಲಿ ನಮ್ಮೂರಿನ ರೈಸ್ ಮಿಲ್ ಮತ್ತು ದನಕರುಗಳ ಸಗಣಿ ನಮಗೆ ಉರುವಲಿನ ಸಂಪನ್ಮೂಲವಾಗಿತ್ತು. ನಮ್ಮೂರ  ರಥೋತ್ಸವ ಜಾತ್ರೆ ಜನವರಿ ಫೆಬ್ರುವರಿ ಮಾಹೆ ನಡುವೆ ನಡೆಯುತ್ತಿತ್ತು. ಆಗ ದನಗಳ ಜಾತ್ರೆ ವ್ಯಾಪಾರ ವಹಿವಾಟು ನಡೆಯುತ್ತಿತ್ತು. ಈ ವೇಳೆ ಸಂತೆಮಾಳದಲ್ಲಿ ಬೀಳುತ್ತಿದ್ದ  ಸಗಣಿಯನ್ನು ಮಂಕರಿಯಲ್ಲಿ ಹೆಕ್ಕಿ ತಂದು ಹುಯ್ಯಿ ಜೊತೆಗೆ ಬೆರಣಿ ತಟ್ಟಿ ತಮ್ಮ ತಾಯಿ ಉರುವಲಿಗೆ ಕೆಲ ದಿನ ಬಳಸಿದ್ದು ಉಂಟು. ದನಕರುಗಳು ಇದ್ದವರು ಗೋಬರ್ ಗ್ಯಾಸ್ ಅಳವಡಿಸಿಕೊಂಡಿದ್ದನ್ನು ಊರಿನಲ್ಲಿ ನೋಡಿದ್ದೆನು.  ನಮ್ಮ ಗ್ರಾಮ್ಯ ಬದುಕು ಸ್ಥಳೀಯ ಸಂಪನ್ಮೂಲ ಲಭ್ಯತೆಯಲ್ಲಿ  ಹೇಗೆ ಬದುಕು ನಡೆಸಿಕೊಂಡು ಬಂದಿತೆಂಬುದನ್ನು  ಸ್ಮರಿಸುತ್ತಿರಲು ಕೆಳಗಿನಿಂದ ಮಡದಿ ಕೂಗಿದಳು ‘ರೀ ಸ್ನಾನ ಮಾಡಿ ತಿಂಡಿ ತಿನ್ನಲು ಬರುವುದಿಲ್ಲವೇ..? ಬರದೇ ಎಲ್ಲಿಗೆ ಹೋಗಲಿ? ‘ಬರುವೇ ತಡಿಯೇ ಮಾರಾಯ್ತಿ.. ಎಂದು ಬರಹ ನಿಲ್ಲಿಸಿ ಟವಲ್ ಹುಡುಕಿ ಸ್ನಾನಕ್ಕೆ ಹೊರಟೆ.


Leave a Reply

Back To Top