ಲಹರಿ ಸಂಗಾತಿ
ಜಯಲಕ್ಷ್ಮಿ ಕೆ.
ಯಾರು ನಮ್ಮವರು…?
ಪಿ.ಯು. ಸಿ ಮೌಲ್ಯಮಾಪನ ನಿಮಿತ್ತ ಮೈಸೂರಿಗೆ ತೆರಳಿದ್ದ ಸಂದರ್ಭ. ರಸ್ತೆಯಲ್ಲಿ ಗೆಳತಿಯ ಜೊತೆಗೆ ನಡೆಯುತ್ತಿರುವಾಗ ತಳ್ಳುಗಾಡಿಯಲ್ಲಿ ಹಣ್ಣು ಮಾರುತ್ತಿದ್ದ ತಾತನೊಬ್ಬ, “ಮಾಂಗಲ್ಯ ಸರ ಒಳಕ್ಕೆ ಹಾಕ್ಕೋವ್ವ… ಇಲ್ಲಿ ಭಾಳಾ ಕಳ್ಳತನ ಆಗ್ತದೆ.. ಎಚ್ಚರ ಇರ್ಲಿ” ಅಂದ. ಜೀವನದಲ್ಲಿ ಮೊದಲ ಬಾರಿಗೆ ಅವನನ್ನು ನೋಡಿದ್ದರೂ ಕೂಡ ಬಿರು ಬಿಸಿಲಲ್ಲಿ ಗಾಡಿ ತಳ್ಳುತ್ತಾ ಸಾಗುತ್ತಿದ್ದವನಿಗೆ ನನ್ನ ಮೇಲಿದ್ದ ಕಾಳಜಿ ನೋಡಿ ಅವನ ಮಾತು ಆಪ್ಯಾಯಮಾನವೆನಿಸಿತು. ಲಗುಬಗೆಯಲ್ಲಿ ರಸ್ತೆ ದಾಟಲು ಮುಂದಾಗಿದ್ದೆ. ಮಲ್ಲಿಗೆ ಮೊಗ್ಗುಗಳ ಚೀಲ ಹಿಡಿದು ನಿಂತಿದ್ದ ನಾರಿಯೊಬ್ಬಳು, “ಪ್ರತಿನಿತ್ಯ ಅಷ್ಟೊಂದು ಆಕ್ಸಿಡೆಂಟ್ ಆಯ್ತವೇ.. ಅಂತೂ ಇವಕ್ಕೆ ಬುದ್ದಿ ಬರಲ್ಲ.. ಏನಕ್ಕವ್ವ ಅರ್ಜೆಂಟ್ ಮಾಡ್ತಿ…? ತಡಿ ಒಸಿ.. ಆಮ್ಯಾಕೆ ದಾಟುವಂತೆ..”. ಏಕವಚನದಲ್ಲಿ ಬೈದ ಆಕೆಯ ಮಾತಿನ ಹಿಂದೆ ಒಂದು ಪ್ರೀತಿ ಕಂಡು ಖುಷಿ ಪಟ್ಟೆ. ನಾನು ಪ್ರೌಢಶಾಲೆಯಲ್ಲಿ ಓದುತ್ತಿದ್ದ ದಿನಗಳು. ಮನೆಯಲ್ಲಿ ಬಡತನ. ನಮ್ಮ ಕುಟುಂಬದವರದ್ದೇ ಒಂದು ದಿನಸಿ ಅಂಗಡಿ ಇತ್ತು. ಮನೆ ಖರ್ಚಿಗೆ ಬೇಕಾದ ಚಾಹುಡಿ, ಬೆಲ್ಲ.. ಇತ್ಯಾದಿ ವಸ್ತುಗಳನ್ನು ಅಲ್ಲಿಂದ ತರುವ ಕೆಲಸ ನನಗೆ ಖಾಯಂ ಆಗಿತ್ತು. ಅಲ್ಲಿ ಒಂದು ಪುಟ್ಟ ನೋಟ್ ಬುಕ್ ನಲ್ಲಿ ಲೆಕ್ಕ ಬರೆಸಿ ಬೇಕಾದ್ದನ್ನು ತರುವುದು. ಪೂಜೆಯೋ.. ಅಡುಗೆಯೋ.. ಅಪ್ಪನಿಗೆ ದುಡ್ಡು ಸಿಕ್ಕಾಗ ಲೆಕ್ಕ ಚುಕ್ತಾ ಮಾಡೋದು.. ಹೀಗೆ ನಡೆಯುತ್ತಿತ್ತು. ಹಲವಾರು ಬಾರಿ ಸುಳ್ಳು ಲೆಕ್ಕ ಬರೆದಿಡುತ್ತಿದ್ದ ಅವರ ಅಪ್ರಾಮಾಣಿಕತೆಯ ಬಗ್ಗೆ ನಾನು ಅಮ್ಮನೊಂದಿಗೆ ಹೇಳಿಕೊಂಡರೂ ಅಮ್ಮ “ಸುಮ್ಮನೆ ಇರು.. ನಮ್ಮವರು.. ಕಷ್ಟ ಕಾಲಕ್ಕೆ ಬೇಕಾಗುತ್ತಾರೆ. ನಿಷ್ಠುರ ಮಾಡಿಕೊಳ್ಳಬಾರದು” ಎಂದು ನನ್ನನ್ನು ತಿದ್ದುತ್ತಿದ್ದರು. ಆದರೆ ಒಂದು ತಿಂಗಳಲ್ಲಿ ಅಮ್ಮನೇ ಲೆಕ್ಕ ಬರೆದು ಇಟ್ಟುಕೊಂಡಿದ್ದರಿಂದ ಅವರು ಸಿಕ್ಕಿ ಬಿದ್ದರು. ಅಲ್ಲಿಂದ ಅವರೊಂದಿಗಿನ ವ್ಯಾಪಾರ – ವ್ಯವಹಾರ ಕಡಿಮೆ ಆಗುತ್ತಾ ಹೋಯಿತು. ತದನಂತರ ಶಾಲೆಗೆ ಹೋಗುತ್ತಿದ್ದ ನನ್ನನ್ನು “ವರ್ಷಕ್ಕೆ ಒಂದು ಜೊತೆ ಬಟ್ಟೆ ಹೊಲಿಸಿದರೆ ಭಟ್ರ ಕೆಲಸ ಮುಗೀತು.. ಅಕ್ಕನ ಹಳೆ ಬಟ್ಟೆ ತಂಗಿಗೆ ಜರತಾರಿ” ಎಂದೋ… “ಇನ್ನು ರಿಪೇರಿ ಮಾಡಲಿಕ್ಕೆ ಆಗುವುದಿಲ್ಲ” ಎಂದು ಕೊಡೆ ರಿಪೇರಿಯವ ಹೇಳಿದನೋ ಏನೋ “ಮಕ್ಕಳಿಗೆ ಹೊಸ ಕೊಡೆ ಕೊಡಿಸಿದ್ದಾರೆ ಭಟ್ರು..” ಎಂದೋ ಏನಾದರೂ ಮನಸಿಗೆ ನೋವು ಆಗುವ ಹಾಗೆ ಮಾತನಾಡುವುದು ನಡೆದೇ ಇತ್ತು. ಎಷ್ಟರಮಟ್ಟಿಗೆ ಎಂದರೆ “ದೇವರೇ, ಇವತ್ತು ಇವರು ನಮ್ಮನ್ನು ನೋಡದೆ ಇರಲಿ.. ಏನೂ ಅಪಹಾಸ್ಯ ಮಾಡದೇ ಇರಲಿ..” ಎಂದು ಬೇಡಿಕೊಳ್ಳುವಷ್ಟರಮಟ್ಟಿಗೆ!
ನಾವೆಲ್ಲ ‘ನಮ್ಮವರು’ಎನ್ನುವ ಪದಕ್ಕೆ ಬಹಳ ಆದ್ಯತೆ ನೀಡುತ್ತೇವೆ. ಯೋಗ್ಯತೆಗೂ ಮೀರಿ ಗೌರವ ಕೊಡುತ್ತೇವೆ. ಹೆಜ್ಜೆ -ಹೆಜ್ಜೆಗೂ ಅವರಿಗೆ ಹೆದರಿ ನಡೆಯುತ್ತೇವೆ. “ಹರನೇ ನಿನ್ನನು ಮೆಚ್ಚಿಸಬಹುದು.. ನರನನು ಮೆಚ್ಚಿಸಲು ಬಲು ಕಷ್ಟ” ಎನ್ನುವ ದಾಸರವಾಣಿಯನ್ನೂ ಉಪೇಕ್ಷಿಸಿ ನಮ್ಮವರಾಗದ ನಮ್ಮವರಿಗೆ ಬೆಲೆ ಕೊಡುತ್ತೇವೆ. ವಿಪರ್ಯಾಸವೆಂದರೆ “ಆಪತ್ತಿನೊಳ್ ತಿರುಗಿ ನೋಡದ ಬಂಧುವೇತಕೆ ” ಎಂದ ಕವಿ ಸೋಮನಾಥನ ವಾಣಿಯನ್ನು ಅಲ್ಲಗಳೆದು ಅವರಿಗೆ ತಗ್ಗಿ ಬಗ್ಗಿ ಬಾಳುತ್ತಿದ್ದರೂ ಸಹಾಯ ಸಹಾನುಭೂತಿ ಬಿಡಿ, ಸಂದರ್ಭಾನುಸಾರ ಒಂದು ಒಳ್ಳೆಯ ಮಾತು ಕೂಡಾ ಅವರಿಂದ ದೊರೆಯುವುದಿಲ್ಲ. ಪುಟ್ಟ ಮಗುವನ್ನೆತ್ತಿಕೊಂಡು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ. “ಮೂಡ್ ಸೀಮೆ ಹೆಂಗಸರು ಪಕ್ಕದಲ್ಲಿ ಇದ್ದಾರೆ.. ಜೋಪಾನ” ಎಂದು ಹೇಳಿ ಹೋಗಿದ್ದ ನನ್ನ ಪತಿಯ ಮಾತುಗಳಿಂದ ಪೂರ್ವಗ್ರಹ ಪೀಡಿತಳಂತೆ ಅವರನ್ನು ನೋಡುತ್ತಾ ಕುಳಿತಿದ್ದ ನಾನು ಮಗುವಿನೊಂದಿಗೆ ಯಾವಾಗ ನಿದ್ದೆಗೆ ಶರಣಾದೆನೋ ಗೊತ್ತಿಲ್ಲ. ಹುಣಸೂರು ಬಂದಾಗ “ತೆಗೊಳ್ಳವ್ವ ನಿನ್ನ ಪರ್ಸ.. ಮೊಗೀನ ಎತ್ಕೊಂಡು ಹೋಗುವಾಗ ದೊಡ್ಡ ಚೀಲದೊಳಕ್ಕೆ ರೊಕ್ಕದ್ ಚೀಲ ಇಟ್ಕೋಬೇಕು ಕಣವ್ವ” ಎಂದು ಎಚ್ಚರಿಸಿ ನನ್ನ ಕೈಗೆ ಪರ್ಸ್ ಕೊಟ್ಟು ಹೋದ ಆಕೆ ಆಗಾಗ ನೆನಪಾಗ್ತಾ ಇರ್ತಾಳೆ.
ನನ್ನ ಗೆಳತಿಯ ಕೃಪೆಯಿಂದ ಒಂದು ಪುಸ್ತಕ ಲೋಕಾರ್ಪಣೆಯ ಜವಾಬ್ದಾರಿ ಹೊತ್ತು ಮೊದಲ ಬಾರಿಗೆ ಮುಂಬೈಗೆ ಪ್ರಯಾಣ ಬೆಳೆಸಿದ್ದೆ. “ಮುಂಬೈ. ಭಾರೀ ಮೋಸ ಮಾಡ್ತಾರೆ ಜನ…” ಎಂದು ಕೆಲವರು ವಿಚಿತ್ರ ಭಯ ಮೂಡಿಸಿ ಕಳಿಸಿದ್ದರು. ಹತ್ತು ದಿನಗಳ ಕಾಲ ಅಲ್ಲಿದ್ದ ನಮಗೆ ಅಂಥ ಒಂದೇ ಒಂದು ಅನುಭವ ಆಗಿಲ್ಲ.
ನೆಂಟರು, ನಮ್ಮವರು ಎಂದರೆ ನಮಗೆ ಏನೋ ಒಂದು ಹಿಗ್ಗು… ಭಯ.. ಕಷ್ಟ -ನಷ್ಟಗಳನ್ನು ಸಹಿಸಿಕೊಂಡು.. ಎಲ್ಲವನ್ನೂ ತಾಳಿಕೊಂಡು ಬಾಂಧವ್ಯವನ್ನು ಕಾಪಿಟ್ಟುಕೊಳ್ಳುವ ಹಂಬಲ. ಆದರೆ ನೆಂಟರು ‘ನಮ್ಮವರು’ ಎನಿಸಿಕೊಂಡಾರೇ ಹೊರತು ಹೃದಯ ಬಿಚ್ಚಿ ಮಾತನಾಡುವ ಸ್ನೇಹಿತರಾಗುವುದಿಲ್ಲ (ಅಪವಾದಕ್ಕೆ ಎಂಬಂತೆ ಕೆಲವರು ಸಿಕ್ಕಾರೋ ಏನೋ) ಆಪತ್ತಿಗಾದವನೇ ನೆಂಟ.
ಬಹಳಷ್ಟು ಬಾರಿ ಯೋಚಿಸುತ್ತೇನೆ. ಉಸಿರುಕಟ್ಟಿಕೊಂಡು ‘ನಮ್ಮವರು ‘ ಎಂದು ನನ್ನ ಅಪ್ಪ-ಅಮ್ಮ ಸಹಿಸಿಕೊಳ್ಳುತ್ತಿದ್ದ ಮಂದಿಯಿಂದ ನಮಗೆ ದಕ್ಕಿದ ನೆಮ್ಮದಿ ಎಷ್ಟು? ನಮ್ಮ ಜೀವಿತದ ಬಹು ಪಾಲು ಸುಖ-ಶಾಂತಿ ನೆಮ್ಮದಿ ಕೊಡುವವರು ನಮಗೆ ಯಾವುದೇ ರೀತಿಯಲ್ಲಿ ಸಂಬಂಧಿಕರು ಎನಿಸದ ಮನಸುಗಳಾಗಿರುತ್ತವೆ. ಬದುಕಿನ ಯಾವ ಹಂತಗಳಲ್ಲಾದರೂ ಸರಿ.. ಯಾವ ವಿಷಯದಲ್ಲಾದರೂ ಸರಿ, ನಮ್ಮ ಮನಸಿಗೆ ಹಿತ ಎನಿಸುವ ಅನುಭವ ನೀಡಿದ ಜನರು ಸಂಬಂಧಿಕರು ಎನ್ನುವ ವಲಯದ ಹೊರಗಿನವರಾಗಿರುತ್ತಾರೆ.
ನಮ್ಮ ಬಾಳ ಪಯಣದಲ್ಲಿ ಎಷ್ಟೋ ತಂಗುದಾಣಗಳು… ಎಷ್ಟೋ ಸಹಪ್ರಯಾಣಿಗರು.. ನಾವೆಂಬುದೊಂದಂಶ.. ಜಗವೆಂಬುದೊಂದಂಶ… ಎನಿಸದೆ ಜಗದೊಳಗೆ ಒಂದಾಗಿ ಬಾಳಬೇಕು ಎಂದ ಹಿರಿಯರ ಮಾತಿನಂತೆ ನನ್ನವರು, ನನ್ನ ಜಾತಿ, ನನ್ನ ಧರ್ಮದವರು ಎಂಬ ಸಂಕುಚಿತ ಮನೋಭಾವ ತೊರೆದು ಈಚೆ ಬಂದಾಗ ನಿಜವಾದ ‘ ನನ್ನವರು ‘ ಯಾರು ಎನ್ನುವ ಅನುಭವ ನಮಗಾಗಲು ಸಾಧ್ಯ. ನಮ್ಮ ನೆಂಟರು ನಮ್ಮವರು.. ಇವರನ್ನು ಬಿಟ್ಟು ಸಮಾಜವೆಲ್ಲ ಕೊಳೆ – ಕಿಲುಬುಗಳಿಂದಲೇ ತುಂಬಿದೆ ಎಂದು ಭಾವಿಸುವುದಾದರೆ ಈ ಜಗತ್ತು ಇಷ್ಟು ಸುಂದರವಾಗಿರುತ್ತಿರಲಿಲ್ಲ. ಕಷ್ಟದಲ್ಲಿ ಕೈ ಹಿಡಿದು ಮೇಲೆತ್ತಿದ ಹಸ್ತ… ಹತ್ತಿದ ಏಣಿ, ಸಾಗಿ ಬಂದ ಹೆಜ್ಜೆ ಗುರುತು ಇವು ಮೂರು ಯಾರ ಚಿತ್ತ ಭಿತ್ತಿಯಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆಯೋ ಅವರು ಬದುಕನ್ನು ಪ್ರೀತಿಯಿಂದ ಅಪ್ಪಿಕೊಳ್ಳಬಲ್ಲರು. ಅಂಥವರಿಗೆ ಬಾಳಿನ ಪಯಣದ ಸಹ ಪಥಿಕರೆಲ್ಲ ನಮ್ಮವರೆನಿಸಲು ಸಾಧ್ಯ.
ಜಯಲಕ್ಷ್ಮಿ ಕೆ.
Wah ತುಂಬಾ ಚೆನ್ನಾಗಿ ಬರೆದಿದ್ದೀರಿ ಮೇಡಮ್.
ತುಂಬು ಹೃದಯದ ಧನ್ಯವಾದಗಳು