ಲಹರಿ

ಎಮ್ಮೆ ಮತ್ತು ಜೋತಿಷ್ಯ

Indian Breed Murrah Buffalo at Best Price in Karnal, Haryana ...

ಅನುಸೂಯ ಎಂ.ಆರ್.

ನಮ್ಮ ಅಮ್ಮ ಗಟ್ಟಿ ಮುಟ್ಟಾಗಿರುವ ತನಕ ನಾವು ಹಾಲು ಕೊಂಡು ಕೊಳ್ಳುತ್ತಿರಲಿಲ್ಲ.ನಮ್ಮ ಮನೆಯಲ್ಲಿ ಹಾಲು ಕರೆಯುವ ಒಂದು ಎಮ್ಮೆ ಸದಾ ಇದ್ದೇ ಇರುತ್ತಿತ್ತು. ಬೆಳಿಗ್ಗೆ ನಾಲ್ಕೈದು  ಲೀಟರ್ ಮತ್ತು ಸಂಜೆ ಅಷ್ಟೇ ಪ್ರಮಾಣದಹಾಲು ಕೊಡುವಂತಹವು.ಆಗ ನಮ್ಮ ಮನೆಯಲ್ಲಿ ಸದಾಹಾಲು,ಮೊಸರು,ತುಪ್ಪಗಳ ಸಮೃದ್ಧಿಯ ಸುವರ್ಣಯುಗ. ನಮ್ಮಮ್ಮ ಹಸುಗಳನ್ನು ಸಾಕುತ್ತಿರಲಿಲ್ಲ,ಹಸು ನಮಗೆ ಆಗಿ ಬರುವುದಿಲ್ಲ ಎಂದು ಹೇಳುತ್ತಿದ್ದರು. ನಮ್ಮಮ್ಮನ ದಿನಚರಿ ಆರಂಭವಾಗುವುದೆ,  ಹಾಲು ಕರೆಯುವುದರಿಂದ ಸೌದೆ ಒಲೆಯ ಸಣ್ಣ ಉರಿಯಲ್ಲಿ ಹಾಲು ಕಾಯಿಸುತ್ತಿದ್ದ ಕಾರಣ ರೊಟ್ಟಿಯಂತೆ ಕೆನೆ ಕಟ್ಟುತ್ತಿತ್ತು.ನಂತರ ಮಜ್ಜಿಗೆ ಕಡೆಯುವುದು.ಪ್ರತಿದಿನ ಒಂದು ಮುದ್ದೆ ಗಾತ್ರದ ಬೆಣ್ಣೆ ತೆಗೆಯುತ್ತಿದ್ದರು.ನಮ್ಮ ಅಕ್ಕ ಪಕ್ಕದ ಮನೆಯವರಿಗೆಲ್ಲಾ ಮಜ್ಜಿಗೆ ದಾನ. ನಮ್ಮ ಮನೆಯಲ್ಲಿ ಇಡ್ಲಿ, ರೊಟ್ಟಿ, ಚಟ್ನಿ ಯೊಂದಿಗೆ ಬೆಣ್ಣೆಸಹಾ.ಬೆಣ್ಣೆ ಕಾಯಿಸುವಾಗ ಮನೆಯೆಲ್ಲಾ ಘಮಘಮ. ಬೆಣ್ಣೆ ಕಾಸುವಾಗ ಹಾಕುವ ವೀಳ್ಯದೆಲೆಗೆ  ಭಾರಿ ಬೇಡಿಕೆ. ಹಾಗಾಗಿ ನಮ್ಮ ಮನೆಯಲ್ಲಿ ತುಪ್ಪವಿಲ್ಲದೆ  ತುತ್ತು ಎತ್ತುತಿರಲಿಲ್ಲ.ನಮ್ಮಮನೆಯಲ್ಲಿದ್ದ ಮಹಿಷಿಯರು ಸದಾ ಹೆಣ್ಗರುಗಳನ್ನೇ ಕೊಡುತ್ತಿದ್ದುದ್ದು ನಮ್ಮಮ್ಮನಿಗೆ ಒಂದು ರೀತಿಯ ಹೆಮ್ಮೆ.

ನಮ್ಮಮನುಷ್ಯ ಜಾತಿಯ ಲೆಕ್ಕಚಾರವೇ ಹಾಗೆ,ಹಸು, ಎಮ್ಮೆಗಳಲ್ಲಿ ಮಾತ್ರ ಹೆಣ್ಗರು ಬೇಕು.ಏಕೆಂದರೆ ಅದರಿಂದ ಹಾಲು ತುಪ್ಪಗಳ ಜೊತೆಗೆ ಕರುಗಳ ಲಾಭ.ಆದರೆ ಇದನ್ನು ಮಾನವ ಕುಲಕ್ಕೆಅನ್ವಯಿಸುವಾಗ ಗಂಡೇ ಬೇಕು ! ನನ್ನ ಮಗ ಹುಟ್ಟುವ ಮುಂಚೆ ಅಂದರೆ ಒಂದು ವಾರದ ಮುಂಚೆ ಕೊಟ್ಟಿಗೆಯಲ್ಲಿ ಎಮ್ಮೆ ಹೆಣ್ಗರು ಹಾಕಿತ್ತು. ಆಗ ನಮ್ಮತೋಟದ ಕೆಲಸಗಾರ ಹಟ್ಟೀಲಿ ಹೆಣ್ಣು ಮನೇಲೀ ಗಂಡು ಹುಟ್ಟುತ್ತೆ ಅಂದಿದ್ದರು. ಅದು ನಿಜವಾದರೂ ಕಾಕತಾಳೀಯವಿರಬಹುದು. ಇಷ್ಟೆಲ್ಲ ಸಮೃದ್ಧವಾದ  ಕ್ಷೀರಧಾರೆ  ಹರಿಸುತ್ತಿದ್ದ ನಮ್ಮ ಮನೆಯ ಮಹಿಷಿಯರು  ಮತ್ತೇರಿದಾಗ ಕೆಲವೊಮ್ಮೆ ನಮಗೆ ತಲೆ ನೋವಾಗುತ್ತಿದ್ದ ಪ್ರಸಂಗಗಳೇನು ಕಡಿಮೆಯಿಲ್ಲ.

ನಮ್ಮಮನೆ ಪಕ್ಕದ ತೋಟದಲ್ಲೆ ಮೇಯಲು ಬಿಡುತ್ತಿದ್ದು ದರಿಂದ ಅವುಗಳ ಹಸಿರು ಮೇವಿಗೇನು ಕೊರತೆಯಿಲ್ಲ. ಆದರೂ ಈ ಮಹಿಷಿಯರು  ಒಮ್ಮೊಮ್ಮೆಅದ್ಯಾವ ಮಾಯದಲ್ಲೋ ತೋಟದಿಂದ ಪರಾರಿಯಾಗುತ್ತಿದ್ದವು. ಕೆಲವೂಮ್ಮೆ ಸಂಜೆ ಆದರೂ ಸುಳಿವಿರುತ್ತಿರಲಿಲ್ಲ. ರಾತ್ರಿ ಕಳೆದು ಬೆಳಗಾದರೂ ಬರದಿದ್ದರೆ ನಮ್ಮಮ್ಮ ಮೊರೆ ಹೋಗುತ್ತಿದ್ದುದು ಕೇವಲ ಇಬ್ಬರಲ್ಲಿ ಮಾತ್ರ. ಒಬ್ಬರು ಧರ್ಮಸ್ಥಳದ ಮಂಜುನಾಥಸ್ವಾಮಿ. ಆ ದೇವರಲ್ಲಿ ನಮ್ಮಮ್ಮನಿಗೆ ವಿಶೇಷ ನಂಬಿಕೆ. ಇನ್ನೊಬ್ಬರು ಸಂಗೀತ ಮೇಷ್ಟ್ರು ಅಂದ್ರೆ ಅವರು ಹೇಳುವ ಜ್ಯೋತಿಷ್ಯ.ಅವರು ಸ.ಹಿ. ಪ್ರಾ. ಶಾಲೆಯಲ್ಲಿ ಸಂಗೀತ ಮೇಷ್ಟ್ರಾಗಿದ್ದರಿಂದ ಅದೇ ಅವರ ಅನ್ವರ್ಥನಾಮವಾಗಿತ್ತು. ಅವರಲ್ಲಿ ತುಂಬಾ ಜನರು ಜೋತಿಷ್ಯ ಕೇಳಲು, ಜಾತಕ ಬರೆಸಲು ಹೋಗುತ್ತಿದ್ದರು. ಸದಾ ಗಿಜಿಗುಡುವ ಜನರು.

ನಮ್ಮ ತಾಯಿ ಎಮ್ಮೆ ಓಡಿ ಹೋದಾಗಲೆಲ್ಲಾ  ಎಲೆ,ಅಡಿಕೆ . ಬಾಳೆ ಹಣ್ಣು ದಕ್ಷಿಣೆಯನ್ನು ಕೊಟ್ಟು  ಯಾರನ್ನಾದರೂ ನಂಬಿಕಸ್ಥರನ್ನು ದೂತನನ್ನಾಗಿಸಿ  ಎಮ್ಮೆಯ ಅನ್ವೇಷಣಾ  ಕಾರ್ಯಕ್ಕೆ ಕಳಿಸುತ್ತಿದ್ದರು.  ಸಂಗೀತ ಮೇಷ್ಟ್ರು ನಮಗೆ ಗುರುಗಳಾಗಿದ್ದವರು.  ಮನೆ ಬಿಟ್ಟು  ಓಡಿಹೋಗುತ್ತಿದ್ದ ಮಹಿಷಿಯನ್ನು ಪತ್ತೆ ಹಚ್ಚುವಲ್ಲಿ ಅವರು ಹೇಳುತ್ತಿದ್ದ ಶಾಸ್ತ್ರ 90 % ನಿಖರವಾಗಿರುತ್ತಿತ್ತು. ಒಮ್ಮೆ ಅವರು ಒಂದು ನಿರ್ದಿಷ್ಟವಾದ ದಿಕ್ಕನ್ನು ಸೂಚಿಸಿ ಆ ಕಡೆ ಹೋದರೆ ನಿಮ್ಮ ಎಮ್ಮೆ ಸಿಗುತ್ತದೆ ಎಂದು ಹೇಳಿದಾಗ ನಮ್ಮ ದೂತರು ಆ ಜಾಡನ್ನಿಡಿದು ಹೊರಟಾಗ ಅಲ್ಲಿದ್ದ ದೊಡ್ಡಿಯೊಂದರಲ್ಲಿ ಕೂಡಿ ಹಾಕಿದ್ದರು. ದೂತರು ದಂಡ ಕಟ್ಟಿ ಬಿಡಿಸಿಕೊಂಡು ಸೆರೆವಾಸದಿಂದ  ಮುಕ್ತಗೊಳಿಸಿದರು. ಮಹಿಷಿ ಮರಳಿ ಮನೆಗೆ ಬಂದಳು. ಮತ್ತೊಮ್ಮೆ ಮಹಿಷಿ ಮನೆ ಬಿಟ್ಟಾಗ ಸಂಗೀತ ಮೇಷ್ಟ್ರು ಹೇಳಿದ  ಶಾಸ್ತ್ರ ನಿಜವಾಯಿತು. ನಿರ್ದಿಷ್ಟ ದಿಕ್ಕಿನಲ್ಲಿರುವ ಹಳ್ಳಿಯ ರೈತರೊಬ್ಬರ ತೋಟದ ಮನೆಯಲ್ಲಿದೆಯೆಂದು ಹೇಳಿದರು. ಹಳ್ಳಿ ಹಾಗೂ ರೈತರಹೆಸರಿನ ಪ್ರಸ್ತಾಪವಿರಲಿಲ್ಲ. ಈ ಬಾರಿ ನಮ್ಮ ದೂತರು ಬಾತ್ಮಿದಾರರೊಂದಿಗೆ ಬೇಹುಗಾರಿಕೆ ನಡೆಸಿ  ಹಳ್ಳಿಯ ತೋಟದ  ಮನೆಯಲ್ಲಿದ್ದ ಮಹಿಷಿಯನ್ನು ಅಶೋಕ ವನದಲ್ಲಿದ್ದ ಸೀತೆಯನ್ನು ಕರೆತರುವಂತೆ ಕರೆತರಲಾಯಿತು

ಆ ರೈತರು ಹೊಟ್ಟೆ ತುಂಬಾ ಮೇವನ್ನು ಹಾಕಿ ಹಾಲನ್ನು ಕರೆದು ಕುಡಿದಿದ್ದರು. ಕಟ್ಟಿ ಹಾಕಿ ಮೇಯಿಸುವಂತೆ ಬಿಟ್ಟಿ ಸಲಹೆ ನೀಡಿ ಬೀಳ್ಕೊಟ್ಟಿದ್ದರು. ಮಗದೊಮ್ಮೆ ಮಹಿಷಿ ಕಣ್ಮರೆಯಾದಾಗ ಯಥಾ ಪ್ರಕಾರ ಸಂಗೀತ ಮೇಷ್ಕ ಮನೆ ಬಾಗಿಲಿಗೆ ಹೋದಾಗ ಎಲ್ಲಿ ಹುಡುಕಿದರೂ ಸಿಗುವುದಿಲ್ಲ.ತಾನೆ ತಾನಾಗಿ ಮನೆಗೆ ಮರಳುವುದೆಂದು ಹೇಳಿದರು.  ಮನಸ್ಸು ತಡೆಯದೆ ನಮ್ಮಮ್ಮ ಮಂಜುನಾಥ ಸ್ವಾಮಿಗೆ ಹರಕೆ ಕಟ್ಟಿಕೊಂಡಿದ್ದು ಆಯ್ತು. ಎರಡು ದಿನ ಕಳೆದರೂ ಬಾರದಿದ್ದಾಗ ಈ ಬಾರಿ ಸಿಕ್ಕಿದರೆ ಮಾರಾಟ ಮಾಡಿ  ಕೈತೊಳೆದುಕೊಳ್ಳಬೇಕು ಅನ್ನುವಷ್ಟರ ಮಟ್ಟಿಗೆ ಮಾತುಕತೆ ನಡೆಯಿತು. ಮೂರನೆ ದಿನ ಮಹಿಷಿ ಸೋತು ಸುಣ್ಣವಾಗಿ ಮೇವಿಲ್ಲದೆ ಸೊರಗಿ ಬಂದಿದ್ದಳು. ಕದ್ದು ಓಡಿ ಹೋಗಿದ್ದ ಕಾರಣ ಒಂದು ವಾರ ಗೃಹ ಬಂಧನದಲ್ಲಿದ್ದಳು. ಆಗಲೇ ಧರ್ಮಸ್ಥಳದ  ಮಂಜುನಾಥ ಸ್ಟಾಮಿಗೆ ಹರಕೆಯ ಹಣ ಸಂದಾಯವಾಯಿತು.

ವರ್ಷಕ್ಕೆರಡು ಮೂರು ಬಾರಿ ಮನೆ ಬಿಡುವ ಚಾಳಿ ಅವಳದು. ಕರು ದೊಡ್ಡವಾದ ಮೇಲೆಯೇ ಇಂತಹ ಪ್ರಸಂಗಗಳು ಹೆಚ್ಚು   ಎಳೆಗರುವನ್ನು ಬಿಟ್ಟು ಹೋಗುವಂಥ ಕೆಟ್ಟ ತಾಯಿ  ಅವಳಂತೂ ಅಲ್ಲ !

ಕರು ಹಾಕಿದ ಎರಡನೆ ದಿನದ  ಹಾಲಿನಿಂದ ಮಾಡುವ ಗಿಣ್ಣು ಈಗ ನಮಗೆ  ಅಪರೂಪ.  ಹಾಲು ಕರೆಯುವ ಮುನ್ನ ಎಳೆಗರುವಿಗೆ ಕುಡಿಸಿ, ತಾಯಿ ಮುಂದೆ ಕರುವನ್ನು ಕಟ್ಟಿದಾಗ  ಕರುವಿನ ಮೈಯನ್ನು ನಾಲಿಗೆಯಿಂದ ನೆಕ್ಕುವ ಆ ಮಮತೆಗೆ ಸಾಟಿ ಇಲ್ಲವೇ ಇಲ್ಲ.  ಹಾಲು ಕರೆದ ನಂತರ ಕರುವಿಗಾಗಿ ಬಿಡುವ  ಹಾಲನ್ನು ಇನಿತೂ ಬಿಡದೆ ಕುಡಿದ  ಆ ಎಳೆಗರುವಿನ  ನೆಗೆದಾಟ, ಕುಣಿದು ಕುಪ್ಪಳಿಸುವಾಟ ಓಡುವ  ಚಿನ್ನಾಟದ ಸೊಗಸನ್ನು ಕಂಡವರು ಮರೆಯಲು

ಸಾಧ್ಯವೇ !  ಕರು  ಕುಡಿಯುವ ತನ್ನ ತಾಯಿ  ಹಾಲಲ್ಲೂ ಪಾಲು ಕೇಳುವ ನಾವು ನಮ್ಮ ಮಕ್ಕಳಿಗೆ ಸ್ತನ್ಯ ಪಾನ ಅತಿ ಶ್ರೇಷ್ಟವೆಂದೂ ಸಾರಿ ಸಾರಿ ಹೇಳುತ್ತೇವೆ !   ಅಮ್ಮನಿಗೆ ಶಕ್ತಿಗುಂದಿದ ಮೇಲೆ  ತೋಟದ ಕೆಲಸಗಾರರ ಕೊರತೆಯ ನಂತರ  ಎಮ್ಮೆಗಳ ಪಾಲನೆಗೆ ಪೂರ್ಣ ವಿರಾಮ ಬಿತ್ತು

*********

Leave a Reply

Back To Top