ಮತ್ತೆ ವಸಂತ
ತೇಜಾವತಿ.ಹೆಚ್.ಡಿ
ಮರಳ ಅಂಗಳದೊಳಗೆ
ಬಾಳರಂಗೋಲಿ ಬಿಡಿಸುವುದು
ಬೇಡ ಗೆಳೆಯ…
ಶಿಲೆಗಳಲ್ಲಿ ಕೆತ್ತೋಣ
ಶಾಶ್ವತವಾಗಿ… !
ಭುವಿಯಾಗಸ ಚಂದ್ರಾರ್ಕರ
ಸಾಕ್ಷಿ ಸಾಕು..
ತೊಟ್ಟ ಬಟ್ಟೆ ಒಳಗಿನ ಕಾಯ ಕುಳಿತ ಜಾಗ
ಕೊಚ್ಚಿಹೋಗುವ ಮುನ್ನ
ಎದ್ದು ನಡೆಯೋಣ..
ಗತದ ಕಹಿನೆನಪುಗಳ
ದೊರೆತಿರುವ ಒಲವಿನಲಿ
ಮುಳುಗಿಸಿಬಿಡು!
ಒಡಲ ದಹಿಸಿದ
ವ್ಯರ್ಥ ಮಂದಾಗ್ನಿಯ
ಉಗುಳಿಬಿಡು..
ಮತ್ತೆ ಸ್ವಚ್ಛಂದವಾಗಿ
ನಾ ನಿನಗೆ, ನೀ ನನಗೆಂದು
ಒಲವಸಾಗರದಲ್ಲಿ ಮತ್ಸ್ಯಗಳಾಗೋಣ.. !
ಬೇರೆಲ್ಲ ಬದಿಗಿರಲಿ
ಮೊದಲು ನಮ್ಮ ತನವ ಮೆರೆಯೋಣ.
.
ಹಮ್ಮು ಬಿಮ್ಮುಗಳ ದಾಟೋಣ
ಅನರ್ಥ ಮೌಢ್ಯಗಳ ತೂರೋಣ
ಜಡ ಮನಗಳಲಿ
ಕಾಂತಿಯ ದೀಪ ಬೆಳಗೋಣ
ಕೊಳಕು ಮನಸುಗಳ
ಘಮದ ಸುಮಗಳಲಿ
ಕಂಪು ಪಸರಿಸೋಣ…
ಮತ್ತೆ ಬಂದಿದೆ ವಸಂತ.. !
ಕೋಗಿಲೆಯಾಗಿ ಕೂಗೋಣ ಗೆಳೆಯ
ನವಬದುಕಿಗೆ ನಾಂದಿ ಹಾಡೋಣ
******