ತನುವೆರಡು ಮನ ಒಂದಾದ….. ದೇವರ ದಾಸಿಮಯ್ಯ ಮತ್ತು ದುಗ್ಗಳೆ ದಂಪತಿಗಳು( ೧೩ಏಪ್ರಿಲ್ ದೇವರ ದಾಸಿಮಯ್ಯನವರ ಜಯಂತಿ)

ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ

ಎಂದು ತನ್ನ ಪತ್ನಿಯ ಕುರಿತು ಒಂದು ವಚನದಲ್ಲಿ ಹೇಳಿದ್ದಾರೆ. ಮನೆಗೆ ಬಂದುದನ್ನು ಅರಿತು ಅವಶ್ಯಕತೆಗೆ ತಕ್ಕಂತೆ ಬಳಸುವ ಉಳಿಸುವ ಹೆಣ್ಣುಮಗಳು ದುಗ್ಗಳೆ. ಆಕೆಯ ಜೊತೆಗಿದ್ದರೆ ಬೇರೆ ಯಾರದೇ ನೆನಪು ಬರುವುದಿಲ್ಲ ಅಂದರೆ ಬಂಧು ಬಳಗವನ್ನು ಮರೆಸುವಳು ಎಂಬ ಅರ್ಥದಲ್ಲಿ ಹೇಳಿದ್ದಾರೆ. ಇಂತಹ ದುಗ್ಗಳೆಯನ್ನು ಮದುವೆಯಾಗಿ ತನ್ನ ಬದುಕಿಗೆ ಕರೆತಂದು ನಾನು ಕೂಡ ಬದುಕಿದೆನು ಎಂದು ಅತ್ಯಂತ ಸಂತಸದಿಂದ ತಮ್ಮ ವಚನದಲ್ಲಿ ಹೇಳಿಕೊಂಡಿದ್ದಾರೆ ದೇವರ ದಾಸಿಮಯ್ಯ ನವರು.

 ದೇವರ/ಜೇಡರ ದಾಸಿಮಯ್ಯನವರು ಮೂಲತಃ ಇಂದಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದ ಜೇಡರ/ನೇಕಾರ ಮನೆತನದ ಸಾತ್ವಿಕ ದಂಪತಿಗಳಾದ ಶಂಕರಿ ಮತ್ತು ರಾಮಯ್ಯನವರಿಗೆ ಮಗನಾಗಿ ಚೈತ್ರ ಶುದ್ಧ ಪಂಚಮಿಯಂದು ಜನಿಸಿದರು. ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಬೇರೆ ಬೇರೆ ಎಂಬ ಹಲವಾರು ವಾದಗಳು ಇದ್ದರೂ ಅದಕ್ಕೆ ಮೂಲ ಪುರಾವೆಗಳು ಇನ್ನು ಸ್ಪಷ್ಟವಾಗಿ ದೊರಕಿಲ್ಲ ಎಂಬುದು ಸರ್ವವಿದಿತ.

ಮುದನೂರಿಗೆ ಸಮೀಪದಲ್ಲಿರುವ ಶ್ರೀಶೈಲದ ಶೈವ ಕೇಂದ್ರವಾದ ಚಂದ್ರಗುಂಡ ಶಿವಾಚಾರ್ಯ ಗುರುಕುಲದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದರು.ವಿದ್ಯೆಯ ಜೊತೆ ಜೊತೆಗೆ ಉತ್ತಮ ಸಂಸ್ಕಾರ ಪಡೆದ ದೇವರ ದಾಸಿಮಯ್ಯನವರು ನಿಖರ ಮತ್ತು ನಿಷ್ಠುರವಾದವನ್ನು ಸೌಮ್ಯವಾಗಿ ಪ್ರತಿಪಾದಿಸುವವರಾಗಿದ್ದರು. ಶಿವ ಭಕ್ತರಾಗಿದ್ದ ದೇವರ ದಾಸಿಮಯ್ಯನವರು ದುಗ್ಗಳೆಯನ್ನು ವಿವಾಹವಾಗಿ ಸಂತೃಪ್ತ ಜೀವನವನ್ನು ಸಾಗಿಸಿದರು. ದುಗ್ಗಳೇ ಕೂಡ ಓರ್ವ ಉತ್ತಮ ಸಂಸ್ಕಾರವಂತ ಹೆಣ್ಣು ಮಗಳಾಗಿದ್ದಳು. ದಾಸಿಮಯ್ಯನವರು ದುಗ್ಗಳೆಯನ್ನು ಮೊದಲ ಬಾರಿ ನೋಡಲು ಹೋದಾಗ ಆಕೆಗೆ ಮರಳಿನಲ್ಲಿ ಪಾಯಸ ಮಾಡಲು ಹೇಳಿದರಂತೆ. ಕೊಂಚವೂ ಬೆಚ್ಚದೆ ಬೆದರದೆ ಆಕೆ ಅದನ್ನು ಮಾಡಿ ಪೂರೈಸಿದಳು. ಮುಂದೆ ಮದುವೆಯಾದ ನಂತರ ಎಂದೂ ಪತಿಗೆ ಎದುರಾಡದ ಆಕೆ ನಿಜ ಅರ್ಥದಲ್ಲಿ ಸತಿಶಿರೋಮಣಿಯಾಗಿದ್ದಳು.

ದೇವರ ದಾಸಿಮಯ್ಯನವರು ತಮ್ಮ ಮದುವೆಯಾದ ನಂತರ ಪತ್ನಿಗೆ ಒಂದು ಬಟ್ಟಲು ಮತ್ತು ಒಂದು ಸೂಜಿಯನ್ನು ತಾವು ಪ್ರತಿದಿನವೂ ಊಟಕ್ಕೆ ಕೂರುವಾಗ ತಮ್ಮ ಪಕ್ಕದಲ್ಲಿ ಇರಿಸಲು ಕೇಳಿಕೊಂಡಿದ್ದರು. ಇದನ್ನು ಆಕೆ ತನ್ನ ಜೀವಿತದವರೆಗೂ ಪಾಲಿಸಿಕೊಂಡು ಬಂದಳು. ಇದನ್ನು ಕುರಿತು ದೇವರ ದಾಸಿಮಯ್ಯನವರನ್ನು ಕೇಳಿದಾಗ ಊಟಕ್ಕೆ ಬಡಿಸುವಾಗ ಆಕೆ ಏನಾದರೂ ಅನ್ನವನ್ನು ಚೆಲ್ಲಿದರೆ ಅದನ್ನು ಸೂಜಿಯಿಂದ ಬಟ್ಟಲಿಗೆ ಹಾಕಿ ತೊಳೆದು ತಿನ್ನುವ ಯೋಜನೆ ನನ್ನದಾಗಿತ್ತು. ಆದರೆ ಅದರ ಅವಶ್ಯಕತೆ ಎಂದೂ ಬರಲಿಲ್ಲ. ದುಗ್ಗಳೆ ಎಂದೂ ಆಹಾರವನ್ನು ಬಡಿಸುವಾಗ ತಟ್ಟೆಯ ಹೊರಗೆ ಚೆಲ್ಲಲಿಲ್ಲ ಎಂದು ಬಲು ಸಾತ್ವಿಕ ಹೆಮ್ಮೆಯಿಂದ ಹೇಳಿದ್ದಾರೆ.

ಮೂಲತಃ ನೇಕಾರ ವೃತ್ತಿಯವರಾದ ದಾಸಿಮಯ್ಯನವರು
ಒಂದು ಬಾರಿ ಶಿವನಿಗೆ ಅರ್ಪಿಸಲು ಒಂದು ಬೆಲೆ ಬಾಳುವ ರೇಷ್ಮೆಯ ದಿವ್ಯಾಂಬರವನ್ನು ನೇಯಲಾರಂಭಿಸಿದರು. ಅತ್ಯಂತ ಸುಂದರವಾಗಿ ತಯಾರಾದ ಅಂಗವಸ್ತ್ರವನ್ನು ಇನ್ನೇನು ನಾಳೆಯ ದಿನ ಅರ್ಪಿಸಬೇಕು ಎಂಬಷ್ಟರಲ್ಲಿ ಕಡು ಚಳಿಗಾಲದ ಆ ದಿನಗಳಲ್ಲಿ ಮನೆಯ ಹೊರಗೆ ಓರ್ವ ನಿರ್ಗತಿಕ ಬಂದು ನಿಂತನು. ಕಡುಚಳಿಯಿಂದ ನಡುಗುತ್ತಿದ್ದ ಮೈ ಮೇಲೆ ತುಂಡು ಬಟ್ಟೆಯನ್ನು ಮಾತ್ರ ಹೊಂದಿದ ಕೃಶದೇಹಿಯನ್ನು ಕಂಡು ಮರುಕಗೊಂಡ ದುಗ್ಗಳೆ ಮನೆಯ ಒಳಗೆ ಹೋಗಿ ಮರುದಿನ ಮಹಾದೇವನಿಗೆ ಅರ್ಪಿಸಲೆಂದು ಎತ್ತಿಟ್ಟ ದಿವ್ಯಾಂಬರವನ್ನು ತಂದು ಆತನಿಗೆ ಕೊಟ್ಟಳು. ನಡುಗುತ್ತಿದ್ದ ಆ ವ್ಯಕ್ತಿ ಆ ವಸ್ತ್ರವನ್ನು ಹೊದೆದು ಆಕೆಯನ್ನು ತುಂಬು ಹೃದಯದಿಂದ ಹಾರೈಸಿ ಹೊರಟು ಹೋದನು. ನಂತರ ಮನೆಗೆ ಬಂದ ಪತಿ ದಾಸಿಮಯ್ಯ ನವರಿಗೆ ಮಡದಿ ದುಗ್ಗಳೆ ಈ ವಿಷಯವನ್ನು ಅರುಹಿದಳು. ಎಲ್ಲವನ್ನು ಕೇಳಿದ ದಾಸಿಮಯ್ಯನವರು ಭಲೇ ದುಗ್ಗಳೇ…. ನಿನ್ನ ಭಕ್ತಿಯ ಸೇವೆ ಆ ಮಹಾದೇವನಿಗೆ ಸಂದಿತು ಎಂದು ಆಕೆಯನ್ನು ಮನದೊಂಬಿ ಹಾರೈಸಿದರು. ಇದು ಅವರಿಬ್ಬರಲ್ಲಿದ್ದ ಸಾಮರಸ್ಯಕ್ಕೆ ಮತ್ತೊಂದು ಉದಾಹರಣೆ.

ಮತ್ತೊಂದು ಘಟನೆಯಲ್ಲಿ, ಮನೆಯಲ್ಲಿ ಯಾವುದೇ ರೀತಿಯ ದವಸ ಧಾನ್ಯಗಳ ವ್ಯವಸ್ಥೆ ಇಲ್ಲದೆ ಇದ್ದಾಗ ಮನೆಗೆ ಬಂದ ಹಸಿವಿನಿಂದ ಬಳಲುತ್ತಿದ್ದ ಶಿವಶರಣರನ್ನು ಕೂರಿಸಿ ತನ್ನ ತವರಿನ ಉಡುಗೊರೆಯಾದ ಚಿನ್ನದ ಕಂಕಣವನ್ನು ಬಂಗಾರದ ಅಂಗಡಿಯಲ್ಲಿ ಮಾರಿ ಮನೆಗೆ ದವಸ ಧಾನ್ಯಗಳನ್ನು ತಂದು ಅವರಿಗೆ ಔತಣ ಮಾಡಿಸಿ ಕಳುಹಿಸಿದಳು. ಅದು ಕೂಡ ದಾಸಿಮಯ್ಯನವರ ಮೆಚ್ಚುಗೆಗೆ ಒಳಪಟ್ಟಿತು.

ದೇವರ ದಾಸಿಮಯ್ಯನವರೇ ಬರೆದ ಒಂದು ವಚನದಂತೆ

 ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ ಸತಿಪತಿಗಳೊಂದಾಗದವನ  ಭಕ್ತಿಯು ಅಮೃತದೊಳು ವಿಷ ಬೆರೆದಂತೆ ಕಾಣಾ ರಾಮನಾಥಾ

ಎಂಬಂತೆಯೇ ಅವರಿಬ್ಬರೂ  ಜೀವಿಸಿದರು. ದುಗ್ಗಳೆ ಪತಿಯ ನೆರಳಿನಲ್ಲಿಯೇ ಜೀವಿಸಿದರು ಕೂಡ ತನ್ನದೇ ಆದ ಸ್ವಂತ ವ್ಯಕ್ತಿತ್ವವನ್ನು ಹೊಂದಿದ್ದಳು. ಕಾಯಕ ದಾಸೋಹಗಳಲ್ಲಿ ಪತಿಗೆ ಸರ್ವ ರೀತಿಯ ಸಹಕಾರ ನೀಡುತ್ತಿದ್ದ ಆಕೆ ದಾಸಯ್ಯ ಪ್ರಿಯ ರಾಮನಾಥ ಎಂಬ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿದ್ದಳು.

ಬಸವಣ್ಣ ಭಕ್ತ, ಪ್ರಭುದೇವ ಜಂಗಮ
ಸಿದ್ದರಾಮಯ್ಯ ಯೋಗಿ, ಚೆನ್ನಬಸವಣ್ಣ ಭೋಗಿ
ಅಜಗಣ್ಣ ಐಕ್ಯನಾದವನು, ಇಂಥಹವರ ಕರುಣ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ, ತತ್ವದ ಮಾತು ತನಗೇಕರ ದಾಸಯ್ಯ ಪ್ರಿಯ ರಾಮನಾಥ

ಎಂದು ಆಕೆ ತನ್ನ ವಚನದಲ್ಲಿ ಹೇಳಿದ್ದಾಳೆ.

ಇಡೀ ಶರಣ ಸಂಕುಲವು ಈ ದಂಪತಿಗಳ ಅನ್ನೋನ್ಯತೆಯನ್ನು, ದಾಸೋಹ, ಕಾಯಕವನ್ನು ಮೆಚ್ಚುತ್ತಿತ್ತು. ದಾಂಪತ್ಯ ಹೇಗಿರಬೇಕು ಎಂದರೆ ಇವರಿಬ್ಬರನ್ನು ತೋರಿಸುವಂತಿತ್ತು ಅವರ ನಡವಳಿಕೆ. ಆದ್ದರಿಂದಲೇ ಅವರಿಬ್ಬರೂ ತನುವೆರಡು ಮನವೊಂದಾದ ದಂಪತಿಗಳ ಸಾಲಿನಲ್ಲಿ ಮಂಚೂಣಿಯಲ್ಲಿ ನಿಲ್ಲುತ್ತಾರೆ. ಎಲ್ಲ ದಂಪತಿಗಳಿಗೂ ಪ್ರೇರಕ ಶಕ್ತಿಯಾಗಿದ್ದಾರೆ. ಇಂಥವರ ಸಂತತಿ ಸಾವಿರವಾಗಲಿ ಎಂದು ಭಕ್ತಿಯಿಂದ ನಮಿಸುತ್ತ ಅವರು ತೋರಿದ ಹಾದಿಯಲ್ಲಿ ಸತಿಪತಿಗಳಿಬ್ಬರು ನಡೆಯಲಿ ಎಂಬ ಆಶಯದೊಂದಿಗೆ


Leave a Reply

Back To Top