ಬರವಣಿಗೆ ಮತ್ತು ಅದರ ಪ್ರಕಟಣೆಯ ಸುತ್ತ…ಮಾಧುರಿ ದೇಶಪಾಂಡೆ

ಬರವಣಿಗೆ ಒಂದು ವಿಶೇಷ ಕಲೆ ಎಲ್ಲರಿಗೂ ಒಲಿಯುವುದಿಲ್ಲ.  ಆದರೆ ಅಭ್ಯಾಸ ಮಾಡಿದರೆ ಕಲಿಯಬಹುದು ಬೆಳೆಸಿಕೊಳ್ಳಬಹುದು.  ಬರಹಗಾರನ ಉದ್ದೇಶ ತನ್ನ ಬರವಣಿಗೆ ಹೆಚ್ಚು ಜನರನ್ನು ತಲುಪಲಿ, ನಾಲ್ಕು ಜನ ಅದರ ಕುರಿತು ಚರ್ಚೆ ಮಾಡಲಿ, ಪ್ರಸಾರ-ಪ್ರಚಾರ ಆಗಲಿ, ಪ್ರಸಿದ್ಧಿಯ ಜೊತೆಗೆ ಪ್ರಶಸ್ತಿ ಬರಲಿ ಇವು ಸಾಮಾನ್ಯವಾದ ಆಸೆಗಳು. ಹಿಂದಿನ ಕಾಲದಲ್ಲಿ ಸಮಾಜದ ಒಳಿತಿಗಾಗಿ ಆಗುತ್ತಿದ್ದ ಸಾಹಿತ್ಯ ಇಂದು ಆದಾಯ ಮತ್ತು ಪ್ರಸಿದ್ಧಿಗಾಗಿ ಎಂಬಂತೆ ಆಗಿದೆ.

6-8 ದಶಕಗಳ ಹಿಂದೆ ಬರವಣಿಗೆ ಒಂದು ತಪಸ್ಸಿನಂತೆ ಇತ್ತು.  ಬರಹಗಾರರಿಗೆ ಅವಕಾಶಗಳು ಸುಲಭವಾಗಿ ಸಿಗುತ್ತಿರಲಿಲ್ಲ. ಪಕ್ವವಾದ ಸತ್ವಯುತ ಸಾಹಿತ್ಯಕ್ಕೆ ಮಾತ್ರ ಮನ್ನಣೆ ಇತ್ತು.  ಆ ಸಮಯದಲ್ಲಿ ವಾರ್ತಾ ಪತ್ರಿಕೆ, ವಾರ ಪತ್ರಿಕೆ ಮಾಸ ಪತ್ರಿಕೆಗಳು ಮಾತ್ರ ಜನರನ್ನು ತಲುಪುವ ಮಾಧ್ಯಮಗಳಾಗಿದ್ದವು. ಪುಸ್ತಕವನ್ನು ಪ್ರಕಟ ಮಾಡುವುದು ಎಲ್ಲರ ಕೈಗೆಟಕುವ ಮಾತಾಗಿರಲಿಲ್ಲ.  ಸಾಹಿತಿ ಎಂದರೆ ಬಡ ಸಾಹಿತಿಯೇ ಆಗಿರುತ್ತಿದ್ದರು.

ಪ್ರಸ್ತುತ ಸಮಯದಲ್ಲಿ ಸಾಕಷ್ಟು ಹಣ ಮಾಡುವ ಮಾಧ್ಯಮ ಆಗದೇ ಹೋದರೂ ಬರವಣಿಗೆಯಲ್ಲಿ ಸೃಜನಶೀಲತೆ ಇದ್ದಾಗ ಪ್ರಚಾರ ಪ್ರಸಾರದ ಜೊತೆಗೆ ಆದಾಯದ ಮಾರ್ಗವೂ  ಆಗಬಹುದು.  ಬರೆಯುವವರು ಯಾವ ರೀತಿಯ ಬರವಣಿಗೆಯನ್ನು ಆಯ್ದುಕೊಳ್ಳುತ್ತಾರೆ ಮತ್ತು ಭಾಷಾ ಶೈಲಿಯ ಗುಣಮಟ್ಟ ಜೊತೆಗೆ ನಿರೂಪಣೆಯ ಶೈಲಿ, ಜನರನ್ನು ಆಕರ್ಷಿಸುವ ವಿಷಯಗಳು ಬರಹಗಾರರಿಗೆ ಮನ್ನಣೆಯನ್ನು ಅಥವಾ ತಿರಸ್ಕಾರವನ್ನೋ ಕೊಡಿಸುತ್ತದೆ.

ಮೊದಲಿಗೆ ಕೆಲವೇ ಇದ್ದ ಪತ್ರಿಕೆಗಳು ಇಂದು ಬಹು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ.  ಹಳೆಯ ಪ್ರಸಿದ್ಧ ಪತ್ರಿಕೆಗಳಲ್ಲಿಲೇಖನ ಬರುವುದು ಹೆಮ್ಮೆಯ ವಿಷಯ.  ಆದರೂ ಕೆಲವು ಸಲ ಉತ್ತಮ ಬರಹಗಳು ಅವರನ್ನು ತಲುಪಿರದೇ ಇರಬಹುದು, ಇದ್ದುದರಲ್ಲಿ ತಮಗೆ ಹಾಕಬೇಕು ಅನಿಸುವವರ ಲೇಖನ ಹಾಕುವುದು ಪ್ರಸಿದ್ಧಿ ಪಡೆದ ಲೇಖನ ಹಾಕುವುದು ಅಥವಾ ಮುಲಾಜಿಗೆ ಸಿಲುಕಿ ಲೇಖನ ಪ್ರಕಟ ಮಾಡುವುದು ಇಂದಿನ ಮಾಧ್ಯಮದ ರೀತಿಯಾಗಿದೆ. ಹೀಗಾಗಿ ಅನೇಕ ಉತ್ತಮ ಸಾಹಿತಿಗಳು ಲೇಖಕರು ಎಲೆ ಮರೆ ಕಾಯಿಯಂತೆ  ಉಳಿದಿದ್ದಾರೆ ಹಾಗೂ ಪ್ರಚಾರ ದೊರೆತಿರುವುದಿಲ್ಲ.

ಪತ್ರಿಕೆಯ ಸರ್ಕ್ಯೂಲೇಷನ್‌ ಆಧಾರದ ಮೇಲೆ ಲೇಖನ ಕಳಿಸುವ ಸಾಹಿತಿಗಳು ಇದ್ದಾರೆ.  ಇಂದು ಎಲ್ಲ ಕಡೆಗೂ ನಾಲ್ಕು ಅಕ್ಷರ ಗೀಚಿ ನಾಲ್ಕಾರು ಪದ್ಯಗಳನ್ನು ಬರೆದು ಕವಿಗಳು ಎಂದು ಕೊಳ್ಳುವವರು ಮತ್ತು ಒಂದು ಕವನ/ಪದ್ಯವನ್ನು ನಾಲ್ಕಾರು ಪತ್ರಿಕೆಗಳಿಗೆ ಕಳುಹಿಸಿ ಅದನ್ನೇ ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾದುದನ್ನು ಹಂಚಿಕೊಂಡು ತಮ್ಮ ಸಾಹಿತ್ಯದ ಪ್ರಚಾರ ಪ್ರಸಾರ ಮಾಡುತ್ತಾರೆ. ಪತ್ರಿಕೆಗಳಿಗೆ ಕಳುಹಿಸುವುದಕ್ಕೂ ನಿಯಮಗಳಿರುತ್ತವೆ. ಒಂದೇ ಬರಹವನ್ನು ನಾಲ್ಕಾರು ಪತ್ತಿಕೆಗಳಿಗೆ ಕಳುಹಿಸಬಾರದು.  ಪತ್ರಿಕೆಗೆ ಕಳುಹಿಸಿದ ಲೇಖನವನ್ನು ಮೊದಲಿಗೆ ಬೇರೆ ಮಾಧ್ಯಮದಲ್ಲಿ ಪ್ರಕಟಿಸಬಾರದು ಎಂಬೆಲ್ಲ ನಿಯಮಗಳನ್ನು ಪಾಲಿಸಿದರೆ ಒಳ್ಳೆಯದು. ಪತ್ರಿಕೆಯವರು ತಾವೇ ಲೇಖನವನ್ನು ಮೆಚ್ಚಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡದ್ದನ್ನು ಮುದ್ರಿಸಿದರೆ ತೊಂದರೆ ಇಲ್ಲ ಕೆಲವರಿಗೆ ಇಂತಹ ವಿಷಯಗಳ ಬಗೆಗೆ ತಿಳುವಳಿಕೆ ಇರುವುದಿಲ್ಲ ಅದನ್ನು ತಿಳಿದವರು ತಿಳಿಸಬೇಕು. ಕೇವಲ ಬರೆಯುದು ಪತ್ರಿಕೆಯಲ್ಲಿ ಪ್ರಕಟಣೆ ಮಾಡುವುದನ್ನು ಮಾತ್ರ ಯೋಚಿಸದೇ ಸರಿಯಾದ ಮಾರ್ಗದಲ್ಲಿ ಬರಹಗಳನ್ನು ಪ್ರಕಟಣೆ ಮಾಡಿಸಿಕೊಳ್ಳುವುದನ್ನು ಕಲಿಯಬೇಕು.

ಇನ್ನೊಂದು ಮಹತ್ವದ ವಿಚಾರವೆಂದರೆ ಕೆಲವರಿಗೆ ಪ್ರಸಿದ್ಧಿ ಹೊಂದಿರುವ ಪತ್ರಿಕೆ ಅಥವಾ ರಾಜ್ಯದ್ಯಂತ ಸರ್ಕೂಲೇಷನ್‌ ಇರುವ ಪತ್ರಿಕೆಗಳಿಗೆ ಮತ್ರ ಬರೆಯಬೇಕು ಎಂಬ ವಿಚಾರ ಇರುತ್ತದೆ.  ಈ ರೀತಿಯ ವಿಚಾರ ಸಾಂಪ್ರದಾಯಿಕ ವಿಚಾರವೆನಿಸಬಹುದು ಆದರೆ ಯಾವೊದೋ ಪತ್ರಿಕೆ ಅಥವಾ ಮ್ಯಾಗಜೇನ್‌ ಬೆಳೆಯಬೇಕಾದರೆ ಮೊದಲಿಗೆ ಅವುಗಳಿಗೆ ನಾವು ನಮ್ಮ ಲೇಖನ ಕಳುಹಿಸಬೇಕು.  ಈಗ ಪ್ರಸಿದ್ಧಿ ಪಡೆದಿರುವ ಪತ್ರಿಕೆ ಅಥವಾ ಮ್ಯಾಗಜೇನ್‌ಗಳು ಮೊದಲು ಆರಂಭವಾದಾಗ ಯಾರೂ ಕಳುಹಿಸದೇ ಇದ್ದರೆ ಇಂದು ಅವು ಪ್ರಸಿದ್ಧವಾಗಿರುತ್ತಿದ್ದವೇ ಎಂಬ ಪ್ರಶ್ನೆಯನ್ನು ಕೂಡ ನಾವು ಮಾಡಿಕೊಳ್ಳಬೇಕು. ಹೀಗಾಗಿ ನಮ್ಮ ಆಯ್ಕೆ ಮತ್ತು ಪ್ರಾಧಾನ್ಯತೆಯ ಆಧಾರದ ಮೇಲೆ ಬರಹಗಳನ್ನು ಪತ್ರಿಕೆಗೆ ಕಳುಹಿಸುವ ಅಭ್ಯಾಸ ಮಾಡಿಕೊಳ್ಳಬೇಕು.

ಬಹಳಷ್ಟು ಪತ್ತಿಕೆಗಳು ಮ್ಯಾಗಜೇನ್‌ಗಳು ಮೊದಲಿಗೆ ಬರವಣಿಗೆಗೆ  ಪ್ರೋತ್ಸಾಹ ನೀಡಲು ಇಷ್ಟು ಸಂಭಾವನೆಯೆಂದು ಹಣವನ್ನು ಸಂದಾಯ ಮಾಡುತ್ತಿದ್ದರು. ಈಗ ಮೊದಲಿನ ಪದ್ಧತಿಗೆ ತದ್ವಿರುದ್ಧವಾಗಿ ಹಣವನ್ನು ಕೊಟ್ಟು ಲೇಖನ ಬರಹಗಳನ್ನು ಪ್ರಕಟ ಮಾಡಿಸಿಕೊಳ್ಳುವ ಸಮಯ ಬಂದಿದೆ. ಹೀಗಾಗಿ ನಮ್ಮ ವಿಚಾರಗಳನ್ನು ಪತ್ರಿಕೆ ಮ್ಯಾಗಜೇನ್‌ಗಳಲ್ಲಿ ಪ್ರಕಟ ಮಾಡುವ ಸಂದರ್ಭದಲ್ಲಿ ಸಂಭಾವನೆಯನ್ನು ಬಯಸದೇ ನಮ್ಮ ವಿಚಾರ ಜನರನ್ನು ತಲುಪಲಿ ಎಂಬ ಉದ್ದೇಶದಿಂದ ಪ್ರಸಿದ್ಧರಾಗಲು ಬಳಸಿದರೆ ತೊಂದರೆ ಇಲ್ಲ. ಬರವಣಿಗೆಯ ಸಂಭಾವನೆ ಸಿಗುವುದೇ ಇಲ್ಲ ಎಂದರೂ ತಪ್ಪಿಲ್ಲ.   ನಮ್ಮ ಆದ್ಯತೆ ಮತ್ತು ಉದ್ದೇಶ ಹಾಗೂ ಗುರಿಯ ಸಾಧನೆಗೆ ಅನುಕೂಲವಾಗುವಂತೆ ಬರಹಗಳ ಪ್ರಕಟಣೆಯ ನಿರ್ಧಾರ ಮಾಡಬೇಕು.

ಇನ್ನು ಕೆಲವರಿಗೆ ದೊಡ್ಡ ಪತ್ರಿಕೆಯಲ್ಲಿ ಬರೆಯುವ ಅವಕಾಶ ಸಿಕ್ಕಿದೆ ಎಂಬ ಹಮ್ಮು ಬಹಳವಾಗಿರುತ್ತದೆ.  ಪತ್ರಿಕೆ ದೊಡ್ಡದೇ ಇರಲಿ ಸಣ್ಣದೇ ಇರಲಿ ನಮ್ಮ ಬರವಣಿಗೆಯಲ್ಲಿ ವೈವಿಧ್ಯತೆ ಮತ್ತು ಸೃಜನಶೀಲತೆ ಇದ್ದಾಗ ಮಾತ್ರ ನಮಗೆ ಮನ್ನಣೆ ದೊರಕುತ್ತದೆ.  ಸೀಮಿತವಾದ ವಿಷಯ ಮತ್ತು ಪ್ರಕಾರಗಳಲ್ಲಿ ಬರೆಯುವುದು ನನ್ನ ಅಂಕಣ ಇಂತಹ ದೊಡ್ಡ ಪತ್ರಿಕೆಯಲ್ಲಿ ಬರುತ್ತದೆ ಎಂದು ಹೆಳಿಕೊಳ್ಳುವುದು ದೊಡ್ಡ ಮಾತಲ್ಲ. ಉತ್ತಮ ಸಾಹಿತಿ ಎಲ್ಲ ರೀತಿಯ ಬರಹಗಳನ್ನು ಸಾಹಿತ್ಯ ಪ್ರಕಾರಗಳನ್ನು ಅಳವಡಿಸಿಕೊಂಡು ಬರೆದು ತಮಗೆ ಪ್ರಬುತ್ವ  ಇರುವ ವಿಷಯದಲ್ಲಿ ಗುರುತಿಸಿಕೊಳ್ಳುತ್ತಾರೆ.

ನಾಲ್ಕು ಬರಹ, ಒಂದು ಅಂಕಣ ಅಥವಾ ಯಾರೋ ಒಬ್ಬರು ಗುರುತಿಸಿದಾಗ ತಾವು ಶ್ರೇಷ್ಠ ಬರಹಗಾರರು ಎಂಬ ಭ್ರಮೆಗೆ ಬಹಳ ಜನರು   ಆದರೆ ಬರವಣಿಗೆ ದೊಡ್ಡ ಸಾಗರ ನಾವು ಒಂದು ಹನಿ, ಒಂದು ಬೊಗಸೆ ಒಂದು ಲೋಟ ಅಥವಾ ಒಂದು ದಿಂಬಿಗೆ ತುಂಬಿಕೊಳ್ಳಬಹುದು. ನಮ್ಮ ರಚನೆಗಳು ಹೆಚ್ಚಾದಂಥೆ ಜನರು ನಮ್ಮನ್ನು ಗುರುತಿಸಲೂ ಬಹುದು ಆದರೆ ಸಾಗರದ ವ್ಯಾಪ್ತತೆ ನಮ್ಮ ಬರವಣಿಗೆಗೆ  ಬರಲು ಸಾಧ್ಯವೇ? ಎಂಬ ಅರಿವು ನಮಗೆ ಬಂದಾಗ ವಾಸ್ತವದಲ್ಲಿ ಸಮಕಾಲೀನರ ಮಧ್ಯ ಗುರುತಿಸಿಕೊಳ್ಳಬಹುದು.

ಬರವಣಿಗೆ ನಮ್ಮನ್ನು ಸತ್ತ ನಂತರವೂ ಬದುಕಿಸುತ್ತದೆ ಆದರೆ ನಮ್ಮ ಬರವಣಿಗೆಯಲ್ಲಿ ಸತ್ವವಿರಬೇಕು.  ಸಾರ್ವಕಾಲಿಕ ವಿಷಯಗಳು, ತತ್ವಗಳು, ಪ್ರಮೇಯಗಳನ್ನು ಬರೆದಾಗ ಶಾಶ್ವತ ಕೊಡುಗೆ ನೀಡುವುದರ ಜೊತೆಗೆ  ಬಹಳಕಾಲದವರಗೆ ಉಳಿಯುವ  ಹೆಸರನ್ನು ಗಳಿಸಬಹುದು.  ಆದ್ದರಿಂದ  ಉತ್ತಮ ಬರಹಗಾರರಿಗೆ ಅಹಂಕಾರ ಮತ್ತು ಬೇರೆ ಲೇಖಕರೊಂದಿಗೆ ಹೋಲಿಸಿ ನೋಡಿ ತಾವು ಶ್ರೇಷ್ಠ ಎಂಬ ಕೆಟ್ಟಗುಣ ಬೆಳವಣಿಗೆಯ ಹಾದಿಯಲ್ಲಿ ದೊಡ್ಡ ಕಲ್ಲು ಇದ್ದಂತೆ.

ವಿನಮ್ರತೆ ಮತ್ತು ಸ್ನೇಹಪರ ಸ್ವಭಾವ ಉತ್ತಮ ಸಾಹಿತಿಯ ಗುಣವಾಗಿರುತ್ತದೆ.  ತಮ್ಮ ಬರವಣಿಗೆಯನ್ನು ಎಲ್ಲರೂ ಮೆಚ್ಚಲಿ ಅನ್ನುವುದು ಆಸೆ, ಬೇರೆಯವರಿಗಿಂತ ತನ್ನ ಬರಹ ಚಂದ ಇದೆ ಎಂದು ಹೇಳಲಿ ಎಂದು ಬಯಸುವುದು ಸ್ವಾರ್ಥ,   ಬೇರೆ ಎಲ್ಲರೂ ನಿಷ್ಪ್ರಯೋಜಕರು ತಾವು ಬರೆದದ್ದು ಮಾತ್ರ ಸಾಹಿತ್ಯ ಎನ್ನುವುದು ಅಹಂಕಾರ ಉತ್ತಮ ಸಾಹಿತ್ಯದ ರಚನೆಗೆ ಬೇರೆಯವರೊಂದಿಗೆ ಸ್ಪರ್ದೆಗೆ ಇಳಿಯದೇ ನಮ್ಮ ಹಿಂದಿನ ಬರವಣಿಗೆಗೆ ಇಂದಿನ ಬರವಣಿಗೆಗೆ ಹೋಲಿಸಿಕೊಂಡು ಮುನ್ನಡೆಯಬೇಕು. ಆಗ ಉತ್ತಮ ಸಾಹಿತ್ಯದ ಹಾಗೂ ಸಾಹಿತಿಯ ಉದಯವಾಗುತ್ತದೆ.

ಫೇಸ್‌ಬುಕ್‌, ಈ ಪೇಪರ್‌ಗಳಲ್ಲಿ ಸಾಹಿತಿಗಳೇ ಇಲ್ಲ ಹಿಂದೆ ಬರೆದವರು ಮಾತ್ರ ಸಾಹಿತಿಗಳು ಎನ್ನುವುದು ತಪ್ಪು ಕಲ್ಪನೆ, ಆದರೆ ಎಲ್ಲೇ ಬರೆಯಲಿ ನಾನು ಬರೆದ್ದು  ಉತ್ತಮ  ಎಂಬುದು ಭ್ರಮೆ.  ಬರಹಗಾರರು ವೃತ್ತಿಪರರಾಗಿದ್ದು ಅದೇ ವೃತ್ತಿಯಲ್ಲಿರುವವರು ಮತ್ರ ಬರಹಗಾರರಾಗುವುದಿಲ್ಲ ಎಲ್ಲ ಕ್ಷೇತ್ರಗಳಲ್ಲಿರುವ  ಕೆಲಸ ಮಢುವವರು ಸಾಹಿತ್ಯಾಸಕ್ತಿಯಿಂದ ಸಾಹಿತ್ಯ ರಚನೆಗೆ ತೊಡಗಬಹುದು.  ಆದರೆ ಒಬ್ಬರ ವೃತ್ತಿಯ ಬಗೆಗೆ ಬರವಣಿಗೆಯ ಬಗೆಗೆ ಅವಹೇಳನ ಮಾಡದೇ ಉತ್ತಮವಾಗಿದ್ದಲ್ಲಿ ಪ್ರಶಂಸೆ ಮಾಡುವುದರ ಜೊತೆಗೆ ಅದರಿಂಧ ನಾವು ಏನು ಕಲಿಯಬಹುದೆಂದು ವಿಚಾರ ಮಡಬಹದು.  ಬರವಣಿಗೆಯ ಗುಣಮಟ್ಟ ಕಡಿಮೆ ಮಟ್ಟದ್ದು ಇದ್ದಾಗ ಆಡಿಕೊಂಡು ನಗದೇ ಹೇಗೆ ತಿದ್ದಿ ಅವರಲ್ಲಿರುವ ಪ್ರತಿಭೆಗೆ ಅವಕಾಶ ಸಿಗಲಿ ಎಂದು ಹರಸುವುದು ಪ್ರಯತ್ನ ಮಾಡುವುದು ದೊಡ್ಡ ಗುಣವೇ .  ತೋಟದಲ್ಲಿ ಹೇಗೆ ನಾನಾ ವಿಧದವಾದ ಪುಷ್ಪಗಳು ದೊರೆಯುತ್ತವೆಯೋ ಅದೇ ರೀತಿ ಅನೇಕ ರೀತಿಯ ಸಾಹಿತಿಗಳು ಬರಹಗಾರರು ದೊರೆಯುತ್ತಾರೆ. ಎಲ್ಲರಿಗೂ ಅವರದ್ದೇ ಆದ ಸ್ಥಾನ ಮತ್ತು ಗುರುತು ಇರುತ್ತದೆ.  

ಬರೆಯವುದು ಅದನ್ನು ಜನರಿಗೆ ತಲುಪಿಸುವುದು ನಮ್ಮ ವಿಚಾರವನ್ನು ಹಂಚಿಕೊಳ್ಳುವುದು ನಮ್ಮ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆಸಕ್ತಿ ಹೀಗಾಗಿ ಬೇರೆಯವರ ಬರವಣಿಗೆ ಮತ್ತು ಅದರ ಪ್ರಕಟಣೆಯ ಬಗೆಗೆ ಮಾತನಾಡಿಕೊಳ್ಳುವುದು ಮತ್ತು ಶ್ರೇಷ್ಠತೆಯ ಬಗೆಗೆ ಚರ್ಚೆ ಮಾಡುವುದು ಅರ್ಥಹೀನ


Leave a Reply

Back To Top