“ಲಾಲಾರಸ (Saliva)” ವೈದ್ಯಕೀಯ ಲೇಖನ-ಡಾ. ಅರಕಲಗೂಡು ನೀಲಕಂಠ ಮೂರ್ತಿ”

ಲಾಲಾರಸ (ಸಾಮಾನ್ಯವಾಗಿ ನಮ್ಮ ದಿನನಿತ್ಯದ ಮಾತುಗಳಲ್ಲಿ ಪ್ರಸ್ತಾಪಿಸುವ ಜೊಲ್ಲು, ಉಗುಳು), ಇಂಗ್ಲೀಷಿನಲ್ಲಿ Saliva (commonly refered to as Spit) ಎಂಬುದು ಬಾಯಿಯ ಒಳಗಿರುವ ಲಾಲಾರಸಗ್ರಂಥಿಗಳಿಂದ ಉತ್ಪತ್ತಿಯಾಗಿ, ಬಾಯಿಯ ಒಳಕ್ಕೆ ಸ್ರವಿಸುವ ಬಾಹ್ಯಕೋಶದ ದ್ರವ (Extracellular fluid). ಮಾನವರಲ್ಲಿ ಈ ದ್ರವ ಶೇಕಡ 99ರಷ್ಟು ನೀರು ಮತ್ತು ಉಳಿದಂತೆ ವಿದ್ಯುದ್ವಿಭಾಜ್ಯಗಳು (electrlytes), ಲೋಳೆ (mucus), ಬಿಳಿರಕ್ತಕಣಗಳು, ಎಪಿಥೀಲಿಯಲ್ ಕೋಶಗಳು (ದೇಹದ ಒಳಗಿನ ಎಲ್ಲ ಥರ ಗ್ರಂಥಿ, ಅಂಗ ಮತ್ತು ಇತರೆ ಭಾಗಗಳನ್ನು ರಕ್ಷಾಪೊರೆಯ ರೀತಿ ಸುತ್ತುವರಿದಿರುವ ತೆಳು ಹೊದಿಕೆಯೆ ಎಪಿಥೀಲಿಯಮ್), ಲೈಪೇಸ್ ಮತ್ತು ಅಮೈಲೇಸ್ ಎಂಬ ಕಿಣ್ವಗಳು, ಸೂಕ್ಷ್ಮಜೀವಿ ಪ್ರತಿರೋಧಕಗಳು (antimicrobial agents) ಮುಂತಾದುವು. ಲಾಲಾರಸದ ಕಿಣ್ವಗಳು ನಮ್ಮ ಆಹಾರದ ಪಿಷ್ಟ ಮತ್ತು ಕೊಬ್ಬಿನ ಪದಾರ್ಥಗಳ ಜೀರ್ಣಕ್ರಿಯೆಯ ಆರಂಭಕ್ಕೆ ಅತ್ಯಂತ ಅವಶ್ಯಕ. ಅಷ್ಟೇ ಅಲ್ಲದೆ, ಹಲ್ಲುಗಳ ಸಂದಿಗೊಂದಿಗಳಲ್ಲಿ ಸಿಕ್ಕಿಹಾಕಿಕೊಂಡ ಆಹಾರದ ತುಣುಕುಗಳನ್ನು ಛೇದಿಸಿ (ತುಂಡರಿಸಿ), ಹಲ್ಲುಗಳು ಸೂಕ್ಷ್ಮಜೀವಿಗಳ ಸೋಂಕಿಂದ ಹಾಳಾಗದಂತೆ  ಈ ಕಿಣ್ವಗಳು ಕಾಪಾಡುತ್ತವೆ. ತಿನ್ನುವ ಆಹಾರವನ್ನು ಕೀಲೆಣ್ಣೆ ಹಚ್ಚುವ ಥರದಲ್ಲಿ ಲಾಲಾರಸ ಲೇಪನಗೊಳಿಸಿ (lubrication/ಹೆರೆತ) ನುಂಗುವ ಪ್ರಕ್ರಿಯೆಯ ಆರಂಭಕ್ಕೆ ರಹದಾರಿಯಾದಂತೆ ಮಾಡುವುದಲ್ಲದೆ, ಬಾಯಿಯ ಲೋಳೆಪೊರೆಯನ್ನು ಸಹ ಒಣಗದ ಹಾಗೆ ರಕ್ಷಿಸುತ್ತದೆ.      
ಪ್ರಮುಖವಾಗಿ ಮೂರು ಜೊತೆ ಲಾಲಾರಸಗ್ರಂಥಿಗಳು ಇರುತ್ತವೆ — ಪರೋಟಿಡ್ (parotid), ಸಬ್ ಲಿಂಗ್ವಲ್ (sublingual) ಮತ್ತು ಸಬ್ ಮ್ಯಾಂಡಿಬ್ಯುಲಾರ್ (submandibular) ಗ್ರಂಥಿಗಳು ಎಂದು.

ಕೆಲವು ಪ್ರಾಣಿ ವರ್ಗಗಳಲ್ಲಿ ಲಾಲಾರಸ ಅವುಗಳ ಆರಂಭ ಜೀರ್ಣಕ್ರಿಯೆಯನ್ನೂ ಮೀರಿ, ಕೆಲವು ವಿಶೇಷ ರೀತಿಗಳಲ್ಲಿ ಉಪಯೋಗಕ್ಕೆ ಕಾರಣವಾಗಬಹುದು. ಉದಾಹರಣೆಗೆ, ಸ್ವಿಫ್ಟ್ ಎಂಬ ಹಕ್ಕಿ ತನ್ನ ಅಂಟು (gummy saliva) ಲಾಲಾರಸದ ಸಹಾಯದಿಂದ ವಾಸದ ಗೂಡನ್ನು ಕಟ್ಟುತ್ತದೆ. ವಿಷಸರ್ಪಗಳು ತಮ್ಮವಿಷದ ಹಲ್ಲುಗಳ ಜೊಲ್ಲಿನ ಸಹಾಯದಿಂದ ಬೇಟೆಯಾಡುತ್ತವೆ. ಕೆಲವು ಕಂಬಳಿಹುಳುಗಳು ಲಾಲಾರಸದಲ್ಲಿ ಸಂಗ್ರಹಿಸಿಟ್ಟ ರೇಷ್ಮೆಯ ಪ್ರೋಟೀನ್ ಮೂಲಕ ರೇಷ್ಮೆ ಎಳೆಗಳನ್ನು ಉತ್ಪಾದಿಸುತ್ತವೆ.

ಲಾಲಾರಸದ ಸಂಯೋಜನೆ:
ಲಾಲಾರಸಗ್ರಂಥಿಗಳಿಂದ ಉತ್ಪತ್ತಿಯಾಗುವ ಜೊಲ್ಲು ಶೇಕಡ 99ರಷ್ಟು ನೀರು ಮತ್ತು ಇತರೆ ಪ್ರಮುಖ ಪದಾರ್ಥಗಳಿಂದ ಕೂಡಿರತ್ತದೆ. ವೈದ್ಯಕೀಯವಾಗಿ ಜೊಲ್ಲಿನಲ್ಲಿರುವ ಘಟಕಗಳ (constituents of saliva) ಸಹಾಯದಿಂದ, ಬಾಯಿಯ ಹಾಗು ಶರೀರದ ಕಾಯಿಲೆಗಳ ನಿರ್ಣಯದ ಬಗೆಗೆ ಮುಖ್ಯವಾದ ಮಾಹಿತಿಗಳನ್ನು ಪಡೆಯಬಹುದು – ಆಕ್ರಮಣಶೀಲ ವೈದ್ಯಕೀಯ ಸಾಧನಗಳ ಸಹಾಯ ಇಲ್ಲದೆ ಕೂಡ. ಲಾಲಾರಸದಲ್ಲಿರುವ ಪ್ರಮುಖ ಅಂಶಗಳು —
…. ನೀರು 99 ರಿಂದ 99.5 ರಷ್ಟು
…. ವಿದ್ಯುದ್ವಿಭಾಜ್ಯಗಳಾದ (electrlytes) ಸೋಡಿಯಂ (ಇದು ರಕ್ತದ ಪ್ಲಾಸ್ಮಾದಲ್ಲಿ ಇರುವ ಸೋಡಿಯಂಗಿಂತ ಲಾಲಾರಸದಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ), ಪೊಟಾಸಿಯಂ (ಪ್ಲಾಸ್ಮಾ ಗಿಂತ ಹೆಚ್ಚು),
ಕ್ಯಾಲ್ಸಿಯಂ (ಪ್ಲಾಸ್ಮಾದಲ್ಲಿರುವಷ್ಟೆ)
ಮ್ಯಾಗ್ನೀಶಿಯಂ, ಕ್ಲೋರೈಡ್  (ಪ್ಲಾಸ್ಮಾಗಿಂತ ಕಡಿಮೆ), ಬೈಕಾರ್ಬೊನೇಟ್ (ಪ್ಲಾಸ್ಮಾಗಿಂತ ಹೆಚ್ಚು), ಫಾಸ್ಫೇಟ್, ಐಯೋಡಿನ್ (ಪ್ಲಾಸ್ಮಾಗಿಂತ ಸಾಮಾನ್ಯ ಹೆಚ್ಚಾಗಿದ್ದರು, ದೈನಂದಿನ ಆಹಾರದಲ್ಲಿನ ಐಯೋಡಿನ್ ಪ್ರಮಾಣದ ಮೇಲೆ ಅವಲಂಬಿತ).
…. ಲೋಳೆ/mucus (ಮುಖ್ಯವಾಗಿ ಮ್ಯೂಕೊಪಾಲಿಸ್ಯಾಕರೈಡ್ಸ್ ಹಾಗು ಗ್ಲೈಕೊಪ್ರೋಟೀನ್ಸ್)
…. ಬ್ಯಾಕ್ಟೀರಿಯ ವಿರೋಧಕಗಳು (ಥೈಯೋಸೈಯನೇಟ್, ಹೈಡ್ರೊಜನ್ ಪರಾಕ್ಸೈಡ್ ಮತ್ತು ಇಮ್ಯೂನೊಗ್ಲಾಬ್ಯುಲಿನ್)
…. ಕಿಣ್ವಗಳು —                                
    — ಆಲ್ಫಾ ಅಮೈಲೇಸ್ – ಪರೋಟಿಡ್  ಮತ್ತು ಸಬ್ ಮ್ಯಾಂಡಿಬ್ಯುಲಾರ್ ಗ್ರಂಥಗಳಿಂದ ಉತ್ಪತ್ತಿ; ಆಹಾರ ನುಂಗುವುದಕ್ಕೂ ಮೊದಲೆ ಪಿಷ್ಟಗಳ ಜೀರ್ಣಕ್ರಿಯೆಗೆ ಕಾರಣವಾಗುವುದು.
    — ಲಿಂಗ್ವಲ್ ಲೈಪೇಸ್ – ಸಬ್ ಲಿಂಗ್ವಲ್ ಗ್ರಂಥಿಯಿಂದ ಉತ್ಪತ್ತಿ; ಜಠರದ ಆಮ್ಲೀಯ ಸನ್ನಿವೇಶ ತಲಪುವವರೆಗು ಇದು ನಿಷ್ಕ್ರಿಯ.
    —  ಕ್ಯಾಲಿಕ್ರೈನ್ ಕಿಣ್ವ – ಎಲ್ಲ ಮೂರು ಗ್ರಂಥಿಳ ಉತ್ಪತ್ತಿ. ರಕ್ತನಾಳಗಳ ಹಿಗ್ಗುವಿಕೆಗೆ ಕಾರಣವಾದ ಬ್ರ್ಯಾಡಿಕೈನಿನ್ ಈ ಕಿಣ್ವದ ಉತ್ಪನ್ನ.
    — ಬ್ಯಾಕ್ಟೀರಿಯಗಳನ್ನು ಕೊಲ್ಲುವ ಪ್ರತಿರೋಧಕ ಕಿಣ್ವಗಳು – ಲೈಸೋಜೈಮ್ (lysozyme), ಲ್ಯಾಕ್ಟೊಪೆರಾಕ್ಸಿಡೇಸ್ (lactoperoxidase), ಲ್ಯಾಕ್ಟೊಫೆರಿನ್ (lactoferrin), ಇಮ್ಯೂನೊಗ್ಲಾಬ್ಯುಲಿನ್ ಎ (immunoglobuline A).
     — ಪ್ರೋಲೈನ್-ಅಧಿಕ ಪ್ರೋಟೀನ್ಸ್ (Proline-rich proteins) – ದಂತಕವಚದ (enamel) ಉತ್ಪತ್ತಿಗೆ ಕಾರಣವಲ್ಲದೆ, ಸೂಕ್ಷ್ಮಜೀವಿಗಳ ಹತಕ್ಕೆ ಮತ್ತು ಹೆರೆತಕ್ಕೆ (lubrication) ಸಹಕಾರಿ.
    — ಇವೇ ಅಲ್ಲದೆ ಇನ್ನೂ ಕೆಲವು ಕಿಣ್ವಗಳು ಕಂಡುಬರುವುವು.
…. ಕೋಶಗಳು — ಪ್ರತಿ ಮಿಲಿ ಲೀಟರ್ ಲಾಲಾರಸದಲ್ಲಿ ಸರಿಸುಮಾರು ಎಂಟು ಮಿಲಿಯನ್ (ಎಂಭತ್ತು ಲಕ್ಷ) ಮಾನವ ಜನಿತ ಕೋಶ ಹಾಗು ಐನೂರು ಮಿಲಿಯನ್ ಸೂಕ್ಷ್ಮಜೀವಕೋಶಗಳು ಇರುವ ಅಂದಾಜಿದೆ. ಹಾಗಾಗಿ, ಈ ಸೂಕ್ಷ್ಮಜೀವಕೋಶಗಳ ಉತ್ಪನ್ನಗಳು (ಸಾವಯವ ಆಮ್ಲಗಳು, ಅಮೈನ್ಸ್ ಮತ್ತು ಥೈಯೋಲ್ಸ್) ಇರುವುದರಿಂದ ಲಾಲಾರಸದ ದುರ್ವಾಸನೆಗೆ ಕಾರಣ.
…. ಓಪಿಯಾರ್ಫಿನ್ ಎಂಬ ನೋವು ಶಮನಕಾರಕ ಕೂಡ ಲಾಲಾರಸದಲ್ಲಿದೆ.
…. ಹೆಪ್ಟೊಕಾರಿನ್ ಎಂಬ ಪ್ರೋಟೀನ್, ವಿಟಮಿನ್ ಬಿ-12 ಕ್ಕೆ ಬಂಧಕವಾಗಿದ್ದು ಜಠರದಲ್ಲಿ ಅದರ (ಬಿ-12) ಅವನತಿ ಆಗದಂತೆ ತಡೆಯುವುದು.

.

ದೈನಂದಿನ ಲಾಲಾರಸದ ಉತ್ಪತ್ತಿ:
ದಿನ ಒಂದಕ್ಕೆ ಎಷ್ಟು ಲಾಲಾರಸ ಉತ್ಪತ್ತಿಯಾಗುವುದು ಎಂಬುದರ ಬಗ್ಗೆ ಸಂಪೂರ್ಣ ಅರಿವಿಲ್ಲ. ಆದರೆ ಒಂದು ದಿನದಲ್ಲಿ 1500 ಮಿ.ಲಿ. ಲಾಲಾರಸ ಉತ್ಪತ್ತಿಯಾಗುವುದು ಮತ್ತು ಮಲಗಿದ ಹೊತ್ತಿನಲ್ಲಿ ಅದರ ಉತ್ಪತ್ತಿ ಸಾಕಷ್ಟು ಕ್ಷೀಣಿಸುವುದರ ಬಗ್ಗೆ ಅರಿವಿದೆ. ಮಾನವರಲ್ಲಿ ಸಬ್ ಮ್ಯಾಂಡಿಬ್ಯುಲಾರ್ ಗ್ರಂಥಿಯು ಶೇಕಡ 70 ರಿಂದ 75 ರಷ್ಟು ಲಾಲಾರಸವನ್ನು ಉತ್ಪಾದಿಸಿದರೆ, ಪೆರೋಟಿಡ್ ಗ್ರಂಥಿಯು ಶೇಕಡ 20
 ರಿಂದ 25 ಭಾಗ ಹಾಗು ಇನ್ನುಳಿದ ಸಣ್ಣ ಸಣ್ಣ ಗ್ರಂಥಿಗಳಿಂದ ಅತ್ಯಂತ ಕಮ್ಮಿ ಉತ್ಪತ್ತಿಯಾಗುವುದು.

ಲಾಲಾರಸದ ಕಾರ್ಯನಿರ್ವಹಣೆಗಳು:
ಲಾಲಾರಸವು ಬಾಯಿಯ ಆರೋಗ್ಯ ಸಂರಕ್ಷಣೆ ಮತ್ತು ಆಹಾರ ಜೀರ್ಣಕ್ರಿಯೆಗೆ ಪ್ರಮುಖವಾಗಿ  ನೆರವಾಗುತ್ತದೆ. ಲಾಲಾರಸದ  ಈ ಸಹಜ ಕ್ರಿಯೆ ಇಲ್ಲದೆ ಇದ್ದರೆ, ಹಲ್ಲುಗಳ ಹುಳುಕು, ಒಸಡಿನ ಕಾಯಿಲೆ (ಜಿಂಜಿವೈಟಿಸ್, ಪೆರಿಡಾಂಟೈಟಿಸ್), ಮತ್ತಿತರ ಬಾಯಿ ರೋಗಗಳು ಅಧಿಕವಾಗುತ್ತವೆ. ಮೇಲಾಗಿ ಬಾಯಿಯ ರೋಗಕಾರಕ ಸೂಕ್ಷ್ಮಜೀವಾಣುಗಳ (bacterial pathogens) ಬೆಳವಣಿಗೆಗೆ ಅವಶ್ಯವಾಗಿ ಬೇಕಾದ ಆಹಾರ ಪದಾರ್ಥಗಳನ್ನು  ದೊರಕದಂತೆ ಮಾಡುವ ಜೊಲ್ಲು, ಅವುಗಳ ಬೆಳವಣಿಗೆಯಿಂದ ಹಲ್ಲುಗಳ ಆರೋಗ್ಯಕ್ಕೆ ಧಕ್ಕೆಯಾಗದ ಹಾಗೆ, ಮತ್ತು ತನ್ಮೂಲಕ ಬಾಯಿ ಹಾಗು ದೇಹಕ್ಕೆ ಸಂಬಂಧಿಸಿದ ಇತರೆ ತೊಂದರೆಗಳು ಬರುವುದನ್ನು ಸಹ ತಡೆಗಟ್ಟುತ್ತದೆ.

ಕೀಲೆಣ್ಣೆ ಕಾರ್ಯ/ಹೆರೆತ (lubrication): ಕೀಲೆಣ್ಣೆ ಹಚ್ಚುವ ರೀತಿಯಲ್ಲಿ, ಲಾಲಾರಸವು ಬಾಯಿಯ ಲೋಳೆಪೊರೆಯನ್ನು ನುಣುಪಾಗಿಸುವುದರಿಂದ, ಆಹಾರ ಜಗಿಯುವ, ನುಂಗುವ ಮತ್ತು ಮಾತನಾಡುವ  ಸಮಯಗಳಲ್ಲಿ ಬಾಯಿಯ ಒಳಗೆ ಪೆಟ್ಟು ಬೀಳದಂತೆ ತಡೆಗಟ್ಟುತ್ತದೆ. ಲಾಲಾರಸ ಉತ್ಪತ್ತಿ ಕಮ್ಮಿಯಾಗಿ ಶುಶ್ಕಬಾಯಿಯ ಪರಿಸ್ಥಿತಿ (xerostomia/ಜೀರೊಸ್ಟೋಮಿಯ) ಉಂಟಾದವರಲ್ಲಿ, ಬಾಯಿ ಹುಣ್ಣುಗಳು ಸಾಮಾನ್ಯ. ಅಲ್ಲದೆ ಶುಶ್ಕಬಾಯಿ  ಆಹಾರ, ಅದರಲ್ಲು ಒಣ ಆಹಾರ ಬಾಯೊಳಗೆ ಅಂಟಿಕೊಳ್ಳುವಂತೆ ಕೂಡ ಮಾಡುತ್ತದೆ.

ಜೀರ್ಣಕ್ರಿಯೆ: ಲಾಲಾರಸದ ಜೀರ್ಣಕ್ರಿಯೆ ಕೆಲಸಗಳಲ್ಲಿ ಆಹಾರವನ್ನು ಒದ್ದೆ ಮಾಡುವುದು ಮತ್ತು ನುಂಗಲು ಸಾಧ್ಯವಾಗುವ ಹಾಗೆ ಉಂಡೆಗಟ್ಟುವುದು ಮುಖ್ಯವಾದುವು. ಕೀಲೆಣ್ಣೆಯ ರೀತಿ ನುಣುಪಾಗಿಸುವುದರಿಂದ ಆಹಾರದ ಉಂಡೆ ಬಾಯಿಂದ ಅನ್ನನಾಳದ ಒಳಕ್ಕೆ ಇಳಿಯುವುದು ಸುಲಭಗೊಳ್ಳುವುದು. ಲಾಲಾರಸದಲ್ಲಿ ಅಮೈಲೇಸ್ ಅಥವ ಟೈಯಲಿನ್ (amylase or ptyalin) ಎಂಬ ಕಿಣ್ವವಿದ್ದು, ಅದು ಆಹಾರದ ಪಿಷ್ಟವನ್ನು ಸರಳ ಸಕ್ಕರೆ ಭಾಗಗಳಾದ ಮಾಲ್ಟೋಸ್ (maltose) ಮತ್ತು ಡೆಕ್ಸ್ಟ್ರಿನ್ (dextrin) ಗಳನ್ನಾಗಿ ಪರಿವರ್ತಿಸಿ, ಅವುಗಳು ಸಣ್ಣ ಕರುಳಲ್ಲಿ ಸುಲಭವಾಗಿ ಜೀರ್ಣವಾಗುವಂತಹ ಇನ್ನೂ ಸಣ್ಣ ಸಣ್ಣ ಭಾಗಗಳಾಗಿಸುವಲ್ಲಿ ಸಹಾಯಕ. ಪಿಷ್ಟದ ಶೇಕಡ 30 ರಷ್ಟು ಪಚನಕ್ರಿಯೆ ಬಾಯಯಲ್ಲಿಯೆ ನಡೆಯುತ್ತದೆ. ಲಾಲಾರಸದ ಗ್ರಂಥಿಗಳಿಂದ (salivay glands) ಸಲೈವರಿ ಲೈಪೇಸ್ (salivary lipase) ಎಂಬ ಅಧಿಕ ಶಕ್ತಿಯುಳ್ಳ ಕಿಣ್ವ ಉತ್ಪತ್ತಿಯಾಗುವ ಕಾರಣ ಕೊಬ್ಬಿನ ಜೀರ್ಣಕ್ರಿಯೆ ಸಹ ಬಾಯಲ್ಲೆ ಆರಂಭವಾಗುವುದು. ಈ ಸಲೈವರಿ ಲೈಪೇಸ್ ಎಂಬ ಕಿಣ್ವ ಜನನವಾದ ಹಸುಳೆಗಳಲ್ಲಿ ಕೊಬ್ಬಿನ ಜೀರ್ಣಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ರುಚಿಯ ಪಾತ್ರ:
ರುಚಿಯ ಸಂವೇದನೆಗೆ ಲಾಲಾರಸ ಬಹಳ ಅವಶ್ಯಕ. ರುಚಿಗೆ ಸಂಬಂಧಿಸಿದ ರಾಸಾಯನಿಕಗಳು ರುಚಿಗ್ರಾಹಕ ಕೋಶಗಳ (taste receptor cells) ಕಡೆಗೆ ರವಾನೆಯಾಗುವುದು ದ್ರವ ಮಾಧ್ಯಮದ (liquid medium) ಮೂಲಕ. ಹಾಗಾಗಿ, ಲಾಲಾರಸದ ಕೊರತೆಯುಳ್ಳವರು ರುಚಿಯ ಅಸ್ವಸ್ಥತೆ (dysgeusia/ಡಿಸ್ಜ್ಯೆಸಿಯ) ಅಥವ ಕೆಟ್ಟ ಮತ್ತು ಲೋಹೀಯ ರುಚಿ ಅಥವ ರುಚಿ ಸಂವೇದನೆ ಕಡಿಮೆಯಾದ ಬಗ್ಗೆ ಹೇಳಿಕೊಳ್ಳುವರು. ಅತ್ಯಂತ ಅಪರೂಪದ, ‘ಸಲೈವ ಹೈಪರ್ನ್ಯಾಟ್ರಿಯಮ್’ (ಅಂದರೆ ಜೊಲ್ಲಿನಲ್ಲಿ ಅಧಿಕ ಸೋಡಿಯಂ ಇರುವ ತೊಂದರೆ) ಎಂಬ ತೊಂದರೆಯಿಂದ, ಬೇರಾವ ಕಾಯಿಲೆ ಇಲ್ಲದಿದ್ದರೂ, ಲಾಲಾರಸದಲ್ಲಿ ಅಧಿಕ ಉಪ್ಪಿನ ಅಂಶವಿದ್ದು, ಎಲ್ಲವೂ ಉಪ್ಪುಪ್ಪಾಗಿಯೆ ರುಚಿಸುತ್ತವೆ.

ಇತರೆ ಅಂಶಗಳು:
…. ವಿದ್ಯುದ್ವಾಹಿ ಕಣಗಳು (ions) ಲಾಲಾರಸದಲ್ಲಿ ಹೇರಳವಾಗಿದ್ದು, ಆಮ್ಲೀಯತೆಯ ಸ್ಥಿತಿ (pH 6.2-7.4) ಉಂಟಾಗುವ ಕಾರಣ ಹಲ್ಲುಗಳ ಘಟ್ಟಿ ಅಂಗಾಂಶದ ಲೋಹಗಳು ಕರಗಿಹೋಗದಂತೆ ತಡೆಯುತ್ತದೆ.
…. ಜೊಲ್ಲಿನಲ್ಲಿರುವ ಕಾರ್ಬೊನಿಕ್ ಅನ್ಹೈಡ್ರೇಸ್ (gustin) ಎಂಬ ಅಂಶ ರುಚಿಮೊಗ್ಗುಗಳು (taste buds) ಬೆಳೆಯುವಂತೆ ಮಾಡುತ್ತದೆ.
…. ಲಾಲಾರಸದಲ್ಲಿ ಇರುವ ಇ.ಜಿ.ಎಫ್ (EGF) ಎಂಬ ಪಾಲಿಪೆಪ್ಟೈಡ್ ಸಹಾಯದಿಂದ ಬಾಯಿ, ಅನ್ನನಾಳ ಮತ್ತು ಜಠರಗಳ ಹುಣ್ಣುಗಳು ಗುಣವಾಗುತ್ತವೆ. ಹಾಗೆಯೆ ಜಠರಾಮ್ಲ, ಪಿತ್ತರಸ, ಪೆಪ್ಸಿನ್, ಟ್ರಿಪ್ಸಿನ್ ಮುಂತಾದ ಲೋಳೆಪೊರೆಯ ಹಾನಿಕಾರಕಗಳಿಂದ ಮತ್ತು ಇನ್ನಿತರ ಭೌತಿಕ, ರಾಸಾಯನಿಕ ಮತ್ತು ಸೂಕ್ಷ್ಮಜೀವಿಗಳಿಂದ ಇ.ಜಿ.ಎಫ್. ರಕ್ಷಿಸುತ್ತದೆ.

ಉತ್ಪಾದನೆ:
ಲಾಲಾರಸದ ಉತ್ಪಾದನೆಗೆ ಅನುವೇದಕ  (sympathetic) ಹಾಗು ಉಪಾನುವೇದಕ (parasympathetic) ನರ ವ್ಯವಸ್ಥೆಗಳಿಂದ ಉತ್ತೇಜನ ದೊರಕುತ್ತದೆ. ಅನುವೇದಕ ನರಗಳ ಮೂಲಕ ಉತ್ಪತ್ತಿಯಾದ ಜೊಲ್ಲು ಗಟ್ಟಿಯಾಗಿರುತ್ತದೆ ಮತ್ತು ಉಪಾನುವೇದಕ  ನರಗಳ ಮೂಲಕ ಬಂದದ್ದು ದ್ರವ ರೂಪದಲ್ಲಿರುತ್ತದೆ. ಅನುವೇದಕ ನರಗಳಿಂದ ಪ್ರಚೋದನೆಯಾದ ಜೊಲ್ಲಿನಿಂದ ಉಸಿರಾಟದ ವ್ಯವಸ್ಥೆಯು ಉತ್ತೇಜಿತವಾದರೆ, ಉಪಾನುವೇದಕ ನರಗಳಿಂದ ಆದದ್ದು ಜೀರ್ಣ ವ್ಯವಸ್ಥೆಗೆ ಸಹಕಾರಿಯಾಗಿದೆ.
ಲಾಲಾರಸದ ಉತ್ಪತ್ತಿಗೆ ಸೈಯಲೊಗಾಗ್ಸ್  (ಅಂದರೆ ಜೊಲ್ಲು ಸ್ರವಿಕೆಗೆ ಸಹಾಯಕಾರಕ ಔಷಧಗಳು/sialogogues) ಎಂಬ ಗುಂಪಿನ ಔಷಧಗಳು ಕೂಡ ಸಹಕಾರಿ. ಹಾಗೆಯೆ ಜೊಲ್ಲು ಉತ್ಪತ್ತಿ ವಿರೋಧಕ ಔಷಧಗಳು (antisialogogues) ಉತ್ಪಾದನೆಯನ್ನು ತಡೆಗಟ್ಟುವುವು.

ಸಾಮಾಜಿಕ ನಡವಳಿಕೆ:
ಉಗುಳುವುದು ಎಂದರೆ ಲಾಲಾರಸ ಅಥವ ಬಾಯಿಯ ಇತರ ಪದಾರ್ಥಗಳನ್ನು ಬಲವಂತವಾಗಿ ಬಾಯಿಂದ ಹೊರಹಾಕುವುದು. ಜಗತ್ತಿನ ಅನೇಕ ಕಡೆಗಳಲ್ಲಿ ಸಾರ್ವಜನಿಕವಾಗಿ ಉಗುಳುವುದು ಪ್ರತಿಬಂಧಿತವಾಗಿದೆ. ಇನ್ನು ಕೆಲವು ದೇಶಗಳಲ್ಲಿ ಉಗಿಯುವುದನ್ನು ಸಾಮಾಜಿಕ ಸಭ್ಯತೆಗಾಗಿ ಮತ್ತು ಅದರಿಂದ ಹರಡಬಹುದಾದ ಕಾಯಿಲೆಗಳನ್ನು ತಡೆಗಟ್ಟುವುದಕ್ಕಾಗಿ ನಿರ್ಬಂಧಿಸಲಾಗಿದೆ. ಉದಾಹರಣೆಗೆ, ಸಿಂಗಪುರದಲ್ಲಿ 2000 ಸಿಂಗಪುರ್ ಡಾಬರ್ ತನಕ ದಂಡ ಹಾಕಲಾಗುತ್ತದೆ ಮತ್ತು ಸರಣಿ ಅಪರಾಧಗಳಿಗೆ ಬಂಧನ ಕೂಡ ಮಾಡಬಹುದು. ಚೀನ ದೇಶದಲ್ಲಿ ಜನಸಾಮಾನ್ಯರಲ್ಲಿ ಉಗಿಯುವುದು ಸಾಮಾನ್ಯವಾಗಿ ಒಪ್ಪಿತವಾಗಿದ್ದರೂ, ಸರ್ಕಾರ ಅದನ್ನು ಕಾನೂನುಬಾಹಿರ ಎಂದು ಪರಿಗಣಿಸಿದೆ. ರಕ್ಷಣಾತ್ಮಕ ತಂತ್ರವಾಗಿ ಕೆಲವು ಪ್ರಾಣಿಗಳು ಮತ್ತು ಕೆಲವು ಕಡೆ ಮಾನವರು ಕೂಡ ಸ್ವಯಂಚಾಲಿತವಾಗಿ ಉಗಿಯುವುದನ್ನು  ಉಪಯೋಗಿಸುವುದುಂಟು. ಒಂಟೆಗಳು ಈ ಕೃತ್ಯದಲ್ಲಿ ಎತ್ತಿದ ಕೈಯಂತೆ.
ಕೆಲವು ರೀತಿಯ ರೋಗಗಳಿಂದ ಬಳಲುವವರ, ಉದಾಹರಣೆಗೆ ಸಾರ್ಸ್-ಕೋವಿಡ್-2 (SARS-Cov-2), ಉಗುಳಿನಲ್ಲಿ ಅಧಿಕತಮ ವೈರಸ್ ಸಂಖ್ಯೆ ಇರುವುದರಿಂದ ಅದು ಸಾರ್ವಜನಿಕವಾಗಿ ಹಾನಿಕಾರಕ.
ಅನೇಕ ಸಂತತಿಯ ಹಕ್ಕಿಗಳು,ಗೂಡು ಕಟ್ಟುವ ರುತುಗಳಲ್ಲಿ, ಸ್ನಿಗ್ಧ ಅಥವ ಜಿಗುಟಾದ ಉಗುಳನ್ನು ಉತ್ಪತ್ತಿಸಿ, ಅದನ್ನು ಗೂಡು ಕಟ್ಟುವ ಅಂಟಿನ ರೀತಿ ಉಪಯೋಗಸುತ್ತವೆಯಂತೆ.

ಗಾಯ ನೆಕ್ಕುವುದು: ಗಾಯಗಳನ್ನು ಉಗುಳಿನಿಂದ ನೆಕ್ಕುವುದರಿಂದ ಬಹಳ ಬೇಗ ಗುಣವಾಗುವುದೆಂಬ ಬಲವಾದ ನಂಬಿಕೆಯಿದೆ. ಸಂಶೋಧಕರ ಪ್ರಕಾರ, ಇಲಿಗಳ ಉಗುಳಿನಲ್ಲಿ ‘ನರ್ವ್ ಗ್ರೋಥ್ ಫ್ಯಾಕ್ಟರ್’ – NGF – (ನರ ಬೆಳವಣಿಗೆ ಅಂಶ) ಎಂಬ ಪ್ರೋಟೀನ್ ಇದ್ದು, ಗಾಯಗಳ ಮೇಲೆ ಈ ಎನ್.ಜಿ.ಎಫ್. ಅಂಶದಿಂದ ತೋಯಿಸಿದರೆ ಆ ಗಾಯಗಳ ಗುಣವಾಗುವಿಕೆ ಇಮ್ಮಡಿಸುವುದಂತೆ. ಆದರೆ ಮಾನವರ ಉಗುಳಿನಲ್ಲಿ ಎನ್.ಜಿ.ಎಫ್. ಅಂಶ ಇರುವುದಿಲ್ಲ. ಆದಾಗ್ಯೂ, ಮಾನವರ ಉಗುಳಿನಲ್ಲಿ ಸಹ ಕೆಲವು ಬ್ಯಾಕ್ಟೀರಿಯ ವಿರೋಧಕಗಳು ಕಂಡುಬಂದಿದೆ. ಅಲ್ಲದೆ, ಮಾನವನ ಬಾಯಿಂದ ಗಾಯಗಳನ್ನು ನೆಕ್ಕುವುದರಿಂದ ಸೋಂಕು ನಿವಾರಣೆ ಆಗುವುದಿಲ್ಲವಾದರೂ, ಹಾಗೆ ಮಾಡುವುದರಿಂದ ಗಾಯ ಶುದ್ಧಿಯಂತು ಖಂಡಿತ ಆಗಿ, ಗಾಯದ ಮೇಲಿನ ಕೊಳಕು ಮತ್ತು ಮೇಲಿರಬಹುದಾದ ಸೋಂಕಿನ ಸೂಕ್ಷ್ಮಜೀವಿಗಳನ್ನು ಕೂಡ ತೆಗೆದಹಾಗಾಗುತ್ತದೆ. ಹಾಗಾಗಿ ಒಳ್ಳೆಯ ನೀರಿಲ್ಲದ ಕಡೆ, ಗಾಯವನ್ನು ನೆಕ್ಕುವುದು ಉಪಯೋಗವಾಗುವುದು.
ಪಾವ್ಲಾವ್ ಪ್ರಯೋಗ ಒಂದರಲ್ಲಿ ನಾಯಿಗಳಿಗೆ ಘಂಟೆ ಬಾರಿಸಿದಾಗಲೆಲ್ಲ ಜೊಲ್ಲು ಸುರಿಸುವ ಹಾಗೆ ಕಟ್ಟುಪಾಡು (conditioned) ಹಾಕಿ, ಪ್ರತಿ ಬಾರಿ ಹಾಗಾದಾಗ ಆಹಾರದ ಆಸೆ ತೋರಿಸಲಾಗುತ್ತಿತ್ತು. ಓಕರಿಕೆ ಬಂದಾಗ ಸಹ ಜೊಲ್ಲು ಸ್ರವಿಸುವುದು ಸಹಜ.

ಉಪವಾಸದ ಲಾಲಾರಸ:
ಬೆಳಗಿನ ಪ್ರಥಮ ಆಹಾರ (breakfast) ಸೇವನೆಗೆ ಮುನ್ನ ಉತ್ಪನ್ನವಾದ ಲಾಲಾರಸದಿಂದ ಜನಪದ ಔಷಧೋಪಚಾರ ಮಾಡಲಾಗುತ್ತಿತ್ತು. ಜೊಲ್ಲು ಅನೇಕ ಕಾಯಿಲೆಗಳನ್ನು ಗುಣಪಡಿಸುವುದೆಂಬ ನಂಬಿಕೆಯಿತ್ತು. ಅದರಲ್ಲೂ ಉಪವಾಸದ ಹೊತ್ತಿನ ಜೊಲ್ಲು ಹೆಚ್ಚು ಪರಿಣಾಮಕಾರಿ ಎಂಬ ನಂಬಿಕೆ ಇತ್ತು. ರಕ್ತದ ಬಣ್ಣಕ್ಕೆ ತಿರುಗಿದ ಕಣ್ಣುಗಳಿಗೆ, ಮಹಿಳೆಯರ ಉಪವಾಸದ ಜೊಲ್ಲು ಬಹಳ ಉಪಯುಕ್ತ ಎಂಬ ನಂಬಿಕೆ ಸಹ ಇತ್ತಂತೆ.

ಅಂತ್ಯಕ್ಕೆ ಮುನ್ನ: ಲಾಲಾರಸಕ್ಕೆ ಆಂಗ್ಲಭಾಷೆಯಲ್ಲಿ ‘ಸಲೈವ’ (saliva) ಎಂದು. ಆದರೆ ಈ ಸಲೈವ ಎಂಬ ಪದ ಬೇರೆ ರೀತಿಯಲ್ಲಿ ಸಹ ಬಳಕೆಯಲ್ಲಿದೆ. ಅಜರ್ಬೈಜಾನ್ (Azerbaijan) ದೇಶದ ಒಂದು ಹಳ್ಳಿಯ ಹೆಸರು ಸಲೈವ. ಅಮೆರಿಕದ ರಾಕ್ ಬ್ಯಾಂಡ್ ಒಂದರ ಹೆಸರು ಸಲೈವ ಬ್ಯಾಂಡ್ (ಸಲೈವ ಆಲ್ಬಮ್). ಕೊಲಂಬಿಯ ದೇಶದ ಸ್ಥಳೀಯ ಭಾಷೆಯೊಂದರ ಹೆಸರು ‘ಸಲೈಬ’ ಅಥವ ‘ಸಲೈವ’.


Leave a Reply

Back To Top