“ಆರದಿರಲಿ ಬೆಳಕು”ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ನೆನ್ನೆ ತಾನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಾಚ್ಚ್ಯಾಣ ಎಂಬ ಪುಟ್ಟ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದ ಸಾತ್ವಿಕ್ ಎಂಬ ಪುಟ್ಟ ಮಗು ಪವಾಡ ಸದೃಶ ರೀತಿಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಎಸ್ ಡಿ ಆರ್ ಎಫ್ ತಂಡಗಳ ಕಾರ್ಯಾಚರಣೆಯೊಂದಿಗೆ ಬದುಕುಳಿದು ಬಂದಿದೆ. ವೈದ್ಯರು ಕೇವಲ ಎರಡು ವರ್ಷದ ಮಗುವಾದ್ದರಿಂದ ಆ ಮಗುವಿಗೆ ಭಯ ಇಲ್ಲವೇ ಆತಂಕದ ಅರಿವಾಗದ ವಯಸ್ಸಾಗಿರುವುದರಿಂದ ಅಲ್ಲಲ್ಲಿ ತರಚಿದ ಗಾಯಗಳನ್ನು ಬಿಟ್ಟರೆ ಸಂಪೂರ್ಣ ಆರೋಗ್ಯವಾಗಿದೆ ಎಂದು ಹೇಳಿದ್ದಾರೆ. ಮಗುವಿನ ಅದೃಷ್ಟ ಚೆನ್ನಾಗಿತ್ತು ಎಂಬುದು ಎಲ್ಲರ ಅಂಬೋಣ.ಮಗು ಬದುಕಿ ಬರಲಿ ಎಂದು ಹಾರೈಸಿದ ಎಲ್ಲಾ ಜನರ ಹಾರೈಕೆ ಫಲಿಸಿದೆ.

 ಆದರೆ ಎಲ್ಲರ ಬದುಕು ಇಷ್ಟೇ ಸುರಳಿತವಾಗಿ ಇರುವುದಿಲ್ಲ, ಹಾರೈಕೆಗಳು ಫ. ಎಷ್ಟೋ ಬಾರಿ ನಮಗೆ ಗೊತ್ತಿಲ್ಲದೆ ಆಗುವ ಅವಘಡಗಳು ಬದುಕನ್ನು ಅಂಧಕಾರದೆಡೆ ದೂಡುತ್ತವೆ.
ಈ ಹಿಂದೆ 2008 ಮತ್ತು 2014ರಲ್ಲಿ ಅದೇ ಬಿಜಾಪುರ ಜಿಲ್ಲೆಯಲ್ಲಿ ಎರಡು ಬೇರೆ ಬೇರೆ ಪ್ರಕರಣಗಳಲ್ಲಿ ಕೊಳವೆ ಬಾವಿಯಲ್ಲಿ ಬಿದ್ದ ಮಕ್ಕಳು ಆಡಳಿತ ಯಂತ್ರದ ಅಪಾರ ಪ್ರಯತ್ನದ ಹೊರತಾಗಿಯೂ ಬದುಕಿ ಬರಲಿಲ್ಲ.

ಇನ್ನು ಬೇಸಿಗೆಯ ಬಿಸಿಲ ಝಳ ತಡೆಯದೆ ಮಕ್ಕಳು ಮನೆಯಲ್ಲಿ ಪಾಲಕರು ತಡೆದಾರೆಂದು ಅವರಿಗೆ ಹೇಳದೆ ಕೇಳದೆ ನೀರಿರುವ ತಾವುಗಳಾದ ಕೆರೆ ಹೊಳೆ ಹಳ್ಳಗಳಲ್ಲಿ ಈಸಾಡಲು ಹೋಗಿ ಜೀವ ಕಳೆದುಕೊಂಡ ಘಟನೆಗಳು ಆಗಾಗ ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇರುತ್ತವೆ. ಇವು ಒಂದು ರೀತಿಯ ಆಕಸ್ಮಿಕ ಘಟನೆ ಎಂದು ಹೇಳುವುದಾದರೆ ಮಕ್ಕಳನ್ನು ಕಳೆದುಕೊಂಡ ತಂದೆ ತಾಯಿಯ ಅಳಲು ಜೀವಿತದ ಕೊನೆಯವರೆಗೂ ಇರುತ್ತದೆ.

ಇನ್ನು ಕೆಲವು ಜನ ಬಡತನದ ಬೇಗೆ ತಡೆಯಲಾರದೆ, ಗಂಡ, ಅತ್ತೆ-ಮಾವರ ಕಿರುಕುಳ ತಡೆಯಲಾರದೆ, ಅನಾರೋಗ್ಯದ ಬಾಧೆ ಸಹಿಸದೆ ಹೀಗೆ ಒಂದಿಲ್ಲೊಂದು ಕಾರಣಗಳನ್ನು ಒಡ್ಡಿ ತಮ್ಮೊಂದಿಗೆ ತಮ್ಮ ಮಕ್ಕಳನ್ನು ಕರೆದುಕೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ.

ಮತ್ತೆ ಕೆಲ ಹದಿಹರೆಯದ ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ ಎಂಬ ಭಯದಿಂದಲೂ ಅಥವಾ ಕಡಿಮೆ ಅಂಕ ಬರುತ್ತವೆ ಮೆಡಿಕಲ್ ಸೀಟು ಸಿಗುವುದಿಲ್ಲ, ಸಂಬಂಧಿಕರಲ್ಲಿ ಅವಮಾನವಾಗುತ್ತದೆ ಎಂದು ಆತ್ಮಹತ್ಯೆಯತ್ತ ಎಳಸುತ್ತಾರೆ. ಮತ್ತೆ ಕೆಲವರು ಸ್ನೇಹಿತರು ಮಾಡುವ ಅವಮಾನಗಳನ್ನು  ತಡೆಯಲೂ ಆಗದೇ ಪಾಲಕರಲ್ಲಿ ಹೇಳಿಕೊಳ್ಳಲು ಆಗದೆ ಆತ್ಮಹತ್ಯೆಗೆ ಶರಣಾಗುತ್ತಾರೆ.

ಇನ್ನು ಕೆಲವರು ಪ್ರೀತಿ ಪ್ರೇಮದ ಬಲೆಯಲ್ಲಿ ಬಿದ್ದು ಪ್ರೀತಿಯೇ ಜೀವನದ ಪರಮೋದ್ದೇಶ ಎಂಬ ಭಾವಕ್ಕೆ ಬಲಿಯಾಗಿ ಒಂದೊಮ್ಮೆ ತಮ್ಮ ಪಾಲಕರು ತಮ್ಮ ಪ್ರೀತಿಗೆ ವಿರೋಧ ವ್ಯಕ್ತಪಡಿಸಬಹುದು ಎಂಬ ಭಾವನೆಯಿಂದ ಆತ್ಮಹತ್ಯೆಗೆ ಎಳಸುತ್ತಾರೆ. ತಮ್ಮ ಪ್ರೀತಿ ಅಜರಾಮರ, ತಾವು ಈ ಸಮಾಜಕ್ಕೆ ಬುದ್ಧಿ ಕಲಿಸುತ್ತೇವೆ ಎಂಬ ಭ್ರಮೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡರೆ ಅದು ಅವರ ಮೂರ್ಖತನವಲ್ಲದೆ ಮತ್ತೇನೂ ಅಲ್ಲ. ಅವರು ತಂದೆ ತಾಯಿಗೆ ಶಾಶ್ವತವಾದ ನೋವನ್ನು,ಮರೆಯಲಾಗದ ಅವಮಾನವನ್ನು ಕೊಡುತ್ತಾರೆ. ಇಡೀ ಸಮಾಜಕ್ಕೆ ಬುದ್ಧಿ ಕಲಿಸುತ್ತೇವೆ, ಪ್ರೇಮಿಗಳ ಇತಿಹಾಸದಲ್ಲಿ ಶಾಶ್ವತವಾಗಿರುತ್ತೇವೆ ಎಂದು ಹೇಳಿ ಪ್ರಾಣ ಕಳೆದುಕೊಳ್ಳುವ ಅವರ ಹೆಸರುಗಳು ಪೊಲೀಸ ಸ್ಟೇಷನ್ ಕಡತಗಳಲ್ಲಿ ಮಾತ್ರ ಉಳಿಯುತ್ತವೆ ಎಂಬುದರ ಅರಿವು ಅವರಿಗೆ ಇರುವುದಿಲ್ಲ. ಪ್ರೀತಿ ತಪ್ಪಲ್ಲ ಆದರೆ ಪ್ರೀತಿಯ ಹೆಸರಿನಲ್ಲಿ ತಮ್ಮ ಜೀವನವನ್ನೇ ಬಲಿಕೊಡುವುದು ತಪ್ಪು. ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿಗಳು, ಒಡಹುಟ್ಟಿದವರು, ಸ್ನೇಹಿತರು ಎಲ್ಲರನ್ನೂ ನೋವಿನ ಆಳವಾದ ಕೂಪಕ್ಕೆ ನೂಕಿ ಎಂದು ಬಾರದ ಲೋಕಕ್ಕೆ ಹೊರಟು ಹೋದರೆ ಜೀವನ ಸಾರ್ಥಕವಾಗುತ್ತದೆಯೇ??

ಇನ್ನು ಕೆಲವರು ತಾವು ಬಯಸಿದ ಬದುಕು ಸಿಗಲಿಲ್ಲವೆಂದೂ, ತಮಗೆ ದೊರೆತ ಅವಕಾಶಗಳು ಕಡಿಮೆ ಎಂದೂ, ಸಾವು ಬದುಕಿರುವುದೇ ವ್ಯರ್ಥ, ತಾವು ಬಯಸಿದ ಕೋರ್ಸ್ ತಮಗೆ ದೊರೆಯದೆ ಇದ್ದರೆ ಅದು ಬದುಕಿನ ಅತಿ ದೊಡ್ಡ ವೈಫಲ್ಯ ಎಂಬಂತೆ ಬಿಂಬಿಸಿಕೊಂಡು ಆತ್ಮಹತ್ಯೆಯ ಮೊರೆ ಹೋಗುತ್ತಾರೆ ಅಂತಹವರಿಗೆ ಪೈಲೆಟ್ ಆಗಬೇಕೆನ್ನುವ ಕನಸು ಹೊತ್ತು ಮುಂದೆ ಅತಿದೊಡ್ಡ ಭಾರತ ದೇಶದ ಅತ್ತ್ಯುನ್ನತ ಕ್ಷಿಪಣಿ ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಮಕ್ಕಳ ಪ್ರೀತಿಯ ಕಲಾಂ ಆಗಿ ಇಡೀ ಜಗತ್ತಿಗೆ ಮಾದರಿಯಾದ ಓರ್ವ ಅತಿ ದೊಡ್ಡ ಮಾನವತಾವಾದಿಯಾಗಿ ಬೆಳೆದ ಕಲಾಂ ಅವರು ಮಾದರಿಯಾಗಬೇಕು. ಸ್ಯಾಂಡರ್ಸನ್ ಎಂಬ ವ್ಯಕ್ತಿ ತಾನು ಮಾಡುವ ಸ್ವಾದಿಷ್ಟಕರವಾದ ಚಿಕನ್ ಖಾದ್ಯವನ್ನು ಮಾರಲು ಸಾವಿರಾರು ಹೋಟೆಲ್ಗಳ ಮೆಟ್ಟಿಲನ್ನು ಏರಿ ಇಳಿದಿದ್ದ. ಅದಕ್ಕೂ ಮುನ್ನ ಆತ ತನ್ನ ಬದುಕಿನಲ್ಲಿ ನೂರಾರು ಕೆಲಸಗಳನ್ನು ಮಾಡಿ ಎಲ್ಲದರಲ್ಲಿಯೂ ವಿಫಲತೆಯನ್ನು ಕಂಡರೂ ಬೆಂಬಿಡದ ಆತ ಎಂದೂ ನಿರಾಶೆಗೊಳ್ಳಲಿಲ್ಲ. ಸತತ ಒಂದು ಸಾವಿರದ ಆರು ರೆಸ್ಟೋರೆಂಟ್ಗಳಿಗೆ ಭೇಟಿ ನೀಡಿ ತನ್ನ ಆಹಾರದ ರೆಸಿಪಿಯನ್ನು ಮಾರಲು ಪ್ರಯತ್ನಿಸಿದ ಆತನ ತಾಳ್ಮೆ ಅಪಾರ. ಇದೀಗ ಕೇವಲ ಅಮೆರಿಕ ಮಾತ್ರವಲ್ಲದೆ ಇಂಗ್ಲೆಂಡ್, ಫಿಲಿಪೈನ್, ಭಾರತ ಮುಂತಾದೆಡೆ ಸುಮಾರು 60,000ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿರುವ ಕೆ ಎಫ್ ಸಿ ಎಂಬ ಬಹುದೊಡ್ಡ ಆಹಾರ ಮಳಿಗೆಗಳ ಮೂಲಪುರುಷ ಈ ಸ್ಯಾಂಡರ್ಸನ್ ಎಂದರೆ ನಿಮಗೆ ಅಚ್ಚರಿಯಾಗಬಹುದು.

ಹುಟ್ಟಿದ ಪ್ರತಿ ಮನುಷ್ಯನು ಸಾವನ್ನು ತನ್ನ ಬೆನ್ನಿಗೆ ಕಟ್ಟಿಕೊಂಡೆ ಬಂದಿರುತ್ತಾನೆ. ಪ್ರತಿದಿನ, ಪ್ರತಿ ಕ್ಷಣ ನಾವು ಸಾವಿಗೆ ಹತ್ತಿರವಾಗುತ್ತೇವೆ. ಬದುಕಿನ ಈ ನಾಗಾಲೋಟದಲ್ಲಿ ಮನುಷ್ಯ ತನ್ನ ಜೀವನದ ಎಲ್ಲಾ ಘಳಿಗೆಗಳನ್ನು ಸವಿಯಬೇಕು. ಜೀವನದಲ್ಲಿ ಅತ್ಯಂತ ನೊಂದ ವ್ಯಕ್ತಿಯೇ ಮುಂದೆ ಅತಿದೊಡ್ಡ ತತ್ವಜ್ಞಾನಿಯಾಗಬಲ್ಲ. ಅತ್ಯಂತ ಕಷ್ಟ ನಿಷ್ಟುರಗಳನ್ನು ಸಹಿಸಿದ ವ್ಯಕ್ತಿಯೇ ಓರ್ವ ಸಾಧಕನಾಗಬಲ್ಲ. ಸಾಧನೆಯ ಹಿಂದೆ ನೂರಾರು,ಸಾವಿರಾರು ನೋವಿನ, ಕಷ್ಟದ ಕಥೆಗಳು ಇವೆ ಆದರೆ ಸಾಧಿಸುವ ಛಲ ಇರುವ ಮನಕ್ಕೆ ಸಾವು ಎಂದೂ ಕಾಡದು ಎಂಬ ಸತ್ಯವನ್ನು ಅರಿಯಬೇಕು.

ಇನ್ನು ಬಹಳಷ್ಟು ಹೆಣ್ಣು ಮಕ್ಕಳು ಕೌಟುಂಬಿಕ ಹಿಂಸೆಗಳನ್ನು ತಡೆಯದೆ ಸಾಮಾಜಿಕ ಅವಮಾನಗಳು ನೋವು ಭರ್ತ್ಸನೆಗಳನ್ನು ಸಹಿಸದೆ ಸಾವಿನ ಮನೆಯ ಬಾಗಿಲು ತಟ್ಟುತ್ತಾರೆ. ಅಂತಹ ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತು ಹುಟ್ಟುವಾಗಲು ನಾವು ಕೇವಲ ಒಬ್ಬರೇ ಸಾಯುವಾಗಲು ಒಬ್ಬರೇ, ಬದುಕಿನ ಕೆಲ ಘಳಿಗೆಗಳು ನಾವು ಬೇರೊಬ್ಬರೊಂದಿಗೆ ಹೆಜ್ಜೆ ಹಾಕುತ್ತೇವೆ. ಆದರೆ ಬದುಕಿನ ಎಲ್ಲಾ ಸಮಯದಲ್ಲಿಯೂ ಎಲ್ಲರೂ ನಮಗೆ ಜೊತೆಯಾಗಿರುವುದಿಲ್ಲ ಕೇವಲ ಸಾಮಾಜಿಕ ಭಯದಿಂದ ಅತಿಯಾದ ನೋವನ್ನು ಸಹಿಸುವುದು ನಿಂದನೆಗಳನ್ನು ತಾಳುವುದು ನಮಗೆ ನಾವೇ ಮಾಡಿಕೊಳ್ಳುವ ಅತಿ ದೊಡ್ಡ ಅನ್ಯಾಯ. ಬೇರೆಯವರು ಮಾಡುವ ಅನ್ಯಾಯಗಳನ್ನು ಸಹಿಸಿಕೊಳ್ಳುವುದಕ್ಕಿಂತ ನಮ್ಮ ಆತ್ಮ ಗೌರವವನ್ನು ಕೊಂದುಕೊಂಡು ಮರ್ಯಾದೆಗಾಗಿ ಬದುಕುತ್ತಿದ್ದೇನೆ ಎನ್ನುವುದು ಮೂರ್ಖತನ. ಇನ್ನು ಸ್ವಾನುಕಂಪದ ಬೇಗೆಯಲ್ಲಿ ಬೇಯುವುದು ಕಾಲಿಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಬಿದ್ದಂತೆ. ಅಂತಹ ಸಮಯದಲ್ಲಿ ನಿಮ್ಮ ಪರಿಸ್ಥಿತಿಯನ್ನು ನಿಮ್ಮ ಹೆತ್ತವರಿಗೂ ಒಡಹುಟ್ಟಿದವರಿಗೂ ಇನ್ನಿತರ ಬಂಧು ಬಾಂಧವರಿಗೂ ವಿವರಿಸಿ ಹೇಳಿ ನಿಮ್ಮ ಸಮಸ್ಯೆಯಿಂದ ಹೊರಬರಲು ಮಾನಸಿಕ, ಆರ್ಥಿಕ ಬೆಂಬಲವನ್ನ ಕೋರಿ, ತಮ್ಮ ಮನೆಯ ಹೆಣ್ಣು ಮಗಳ ಯೋಗ ಕ್ಷೇಮದ ಕುರಿತು ಅವರು ಅಷ್ಟಾಗಿಯೂ ತೊಂದರೆ ನೀಗದಿದ್ದರೆ ಬದುಕಲು ನಮ್ಮ ಘನ ಸರಕಾರಗಳು ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಮಹಿಳಾ ಸಾಂತ್ವನ ಕೇಂದ್ರಗಳನ್ನು ಅಬಲಾಶ್ರಮಗಳನ್ನು ತೆರೆದಿದ್ದಾರೆ. ಎಲ್ಲೋ ಒಂದು ಕಡೆ ಬದುಕಿನ ದಾರಿಯನ್ನು ಕಂಡುಕೊಳ್ಳಿ ಮುಂದೆ ನಿಮ್ಮ ಬದುಕು ಉನ್ನತ ಶ್ರೇಣಿಗೆ ಏರದಿದ್ದರೂ ಪರವಾಗಿಲ್ಲ, ಸ್ವಂತ ಮಕ್ಕಳನ್ನು ಸಾವಿನ ದವಡೆಗೆ ದೂಡುವುದಕ್ಕಿಂತ ಬದುಕಿನ ಬಾಣಲೆಯಲ್ಲಿ ಬೇಯುವುದು ಉತ್ತಮ…. ಯಾರಿಗೆ ಗೊತ್ತು…. ಪ್ರತಿ ಅಂಧಕಾರದ ಹಿಂದೆಯೂ ಒಂದು ಹೊನ್ನ ಕಿರಣ ಇದ್ದೇ ಇರುತ್ತದೆ ಅಂತೆಯೇ ಮುಂದೆ ಬದುಕು ಉನ್ನತ ಸ್ತರಕ್ಕೆ ಏರಲೂಬಹುದು. ಮತ್ತೊಬ್ಬರಿಗೆ ಮಾದರಿಯಾಗುವಂತೆ ಬದುಕಲೂ ಬಹುದು.

ಇನ್ನು ಅವಘಡಗಳ ಕುರಿತು ಹೇಳುವುದಾದರೆ ಯಾರೂ ಬೇಕೆಂದೇ ಈ ಅವಘಡಗಳಿಗೆ
ಈಡಾಗುವುದಿಲ್ಲ ಆದರೆ ಎಲ್ಲಾ ಸಮಯ ಸಂದರ್ಭ ನಮ್ಮ ಪರವಾಗಿ ಇರುವುದಿಲ್ಲ. ಆದ್ದರಿಂದ ನಮ್ಮ ನಮ್ಮ ಮನೆಯ ಮಕ್ಕಳ ಮೇಲೆ ವಿಶ್ವಾಸವಿಟ್ಟು ಅವರಿಗೆ ಏನೇ ತೊಂದರೆಗಳು ಬಂದರೂ ನಮ್ಮೊಂದಿಗೆ ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವಂತಹ ಮನಸ್ಥಿತಿ ಮತ್ತು ಮನೆ ಸ್ಥಿತಿಯನ್ನು ಇಟ್ಟುಕೊಳ್ಳಬೇಕು. ಹಾಗೆ ಮಕ್ಕಳು ನಮ್ಮೊಂದಿಗೆ ಏನನ್ನಾದರೂ ಹಂಚಿಕೊಂಡಾಗ ತಕ್ಷಣ ಪ್ರತಿಕ್ರಿಯೆ ನೀಡದೆ ಸಾವಧಾನವಾಗಿ ಕುಳಿತು ಯೋಚಿಸುವಂತೆ ಕೆಲ ಸಮಯವನ್ನು ಕಳೆದು ಯಾವುದು ಸೂಕ್ತ ಎಂಬುದನ್ನು ಅವರೊಂದಿಗೆ ಕುಳಿತು ಸಮಾಲೋಚಿಸಬೇಕು.
ಮಕ್ಕಳು ಸಾಹಸ ಕ್ರೀಡೆಗಳಿಗೆ, ಈಜು ಸುತ್ತಾಟಗಳಿಗೆ ಆಸಕ್ತಿ ತೋರಿಸಿದರೆ ಅವರಿಗೆ ಸೂಕ್ತ ಮಾರ್ಗದರ್ಶನದ ಜೊತೆ ಜೊತೆಗೆ ನಿಮ್ಮ ಸಾಂಗತ್ಯವನ್ನು ನೀಡಿ. ಅವರ ಎಲ್ಲ ನೋವು ನಲಿವುಗಳನ್ನು ಆಲಿಸಿ ಅವರಿಗೆ ಸೂಕ್ತ ಸಲಹೆ ನೀಡಿ.
ಅಂತಿಮವಾಗಿ ಸಾಯಲು ಬದುಕಬಾರದು ಎಂಬ ಹತಾಶ ಭಾವನೆ ಹುಟ್ಟಲು ಸಾವಿರಾರು ಕಾರಣವಿದ್ದರೆ ಬದುಕಲು …. ಬದುಕಲೇಬೇಕು ಎಂಬ ಏಕೈಕ ಕಾರಣ ಸಾಕು.

ನಮ್ಮ ಬದುಕು ಎಣ್ಣೆ ತೀರುವವರೆಗೂ ಪ್ರಶಾಂತವಾಗಿ ಉರಿಯುವ ದೀಪದಂತೆ ಇರಬೇಕು. ಎಣ್ಣೆಯು ಇದ್ದು ಬತ್ತಿಯೂ ಇದ್ದು ಆಕಸ್ಮಿಕ ಗಾಳಿಯ ಹೊಡೆತಕ್ಕೆ ಸಿಲುಕದೆ ಇರುವಂತಹ ಇನ್ನೂ ಆಯಸ್ಸು ಇದ್ದೂ ಅವಕಾಶಗಳು ಇದ್ದೂ ಜಂಜಾಟ ಎಂಬ ಬಿರುಗಾಳಿಯ ಹೊಡೆತಕ್ಕೆ ತತ್ ಕ್ಷಣಕ್ಕೆ ಸಿಲುಕಿದರೂ ಪಾರಾಗಿ ಬರುವ ಅಸೀಮ ಭರವಸೆ ನಮ್ಮಲ್ಲಿರಬೇಕು.
ಮಕ್ಕಳೆಂಬ ನಂದಾದೀಪಗಳು ಎಲ್ಲರ ಮನೆ ಮನೆಯಲ್ಲಿ ಪ್ರಜ್ವಲಿಸಿ ಬೆಳಕು ನೀಡಬೇಕು ಎಂಬ ಆಶಯದೊಂದಿಗೆ.


Leave a Reply

Back To Top