ಕಾವ್ಯ ಸಂಗಾತಿ
ಡಾ ಸುರೇಶ ನೆಗಳಗುಳಿ
ಬೇಗೆ
ಮಳೆಯು ಬರಲಿಲ್ಲ ಸೆಕೆಯಲ್ಲಿ ಬೆಂದು ನೊಂದು
ಇಳೆಯು ಬಿರಿದಾಗ ತಣ್ಣೀರು ಹುಡುಕಿ ಸೋಲು
ಕಳೆಯೆ ಕಾಲವ ಬಹಳಷ್ಟು ಕಷ್ಟ ನಷ್ಟ
ಸುಳಿವ ಗಾಳಿಯು ಬೆಂಕಿಯ ಹಾಗೆ ಸ್ಪಷ್ಟ
ಬಳಲಿ ಬೆಂಡಾಗಿ ತೊಂದರೆ ಬೆಟ್ಟ ದಷ್ಟು
ತೊಳೆಯಲಾಗದು ತನುವಿನ ಕೊಳಕ ಬಿಟ್ಟು
ಹಳಿವುದೇತಕೆ ದೇವರ ನಮ್ಮ ಕರ್ಮ
ಕೊಳಕು ಮನದಲಿ ಮರಗಳ ಕಡಿದ ಮರ್ಮ
ತೊಗಲೇ ಸಾಕೀಗ ಬಟ್ಟೆಯೇ ಬೇಡವಾಗಿ
ರಗಳೆ ನೀಡುವ ರಣರಣ ಬಿಸಿಲು
ಮೊಗದಿ ಧಾರಾಳ ಹರಿಯುವ ಜಲದಧಾರೆ
ಜಗದಗಲದಲ್ಲಿ ನೀರಿನ ಪಸೆಯೇ ನ್ಯೂನ
ಮೇಲೆ ಬಾನಗಲ ಕಾಣದ ಕರಿಯ ಮೋಡ
ನಾಳೆ ಬದುಕುವ ಸಂಗತಿ ತಿಳಿಯದಾಗಿ
ಕಾಲ ಕೆಟ್ಟಿತೋ ಗೊತ್ತಿಲ್ಲ ಕೆಡಲು ನಾವು
ಗೋಲ ಭೂಮಿಯ ರೂಪವೇ ನಿತ್ಯ ಸತ್ಯ
ಮನವ ಸೆಳೆದಾಕೆ ಬಳಿಯಲ್ಲಿ ಇದ್ದರೇಂತೆ
ತನುವು ಬೆಂದಿರೆ ಮತ್ತೆಲ್ಲಿ ಕಾವು ದೂರ
ಹನಿಯ ತೊಟ್ಟಿನ ಮಹಿಮೆಯೋ ಬಹಳವಿರಲು
ತಾನವಿಲ್ಲದೆ ಕಡಿದಿಹ ವೀಣೆ ತಂತಿ
ಕಾದು ಬಸವಳಿಯುತ್ತಿರುವುದೇ ಪರಿಪಾಠ
ಬಾಡಿ ಹೋದ ಬದನೆಕಾಯಿಯಂತಾ ನೋಟ
ಮೋದದಾಶಯ ಬೇಡವೇಯೆನ್ನ ಬೇಡ
ಸೀದು ಹೋದರೂ ಇಂದು ನಾಳೆ ಚಿಗುರದೇನು?
ಡಾ.ಸುರೇಶ ನೆಗಳಗುಳಿ