“ಅಂಗುಲಿಮಾಲ” ದಲಿತ ಹೋರಾಟಗಾರನ ಬದುಕೇ ಒಂದು ಕೃತಿಯಾಗಿದೆ.

ಅನಾದಿ ಕಾಲದಿಂದ ಉಳ್ಳವರ ತುಳಿತಕ್ಕೆ ಒಳಗಾಗಿ, ಅವರ ಮನೆಯ ಜೀತದಾಳುಗಳಾಗಿ, ಅವರಿಂದ ಒದೆಸಿಕೊಂಡು, ಬೈಯಿಸಿಕೊಂಡು, ಮುಟ್ಟಿಸಿಕೊಳ್ಳಲಾರದ ಜನರೆಂದು ಊರ ಹೊರಗೊಂದು ಗುಡಿಸಲು ಹಾಕಿಕೊಂಡು ಅದನ್ನು ಹಟ್ಟಿಯೆಂದು ಕರೆದು ಅದರಲ್ಲಿ ವಾಸಿಸುವವರು ಪಂಚವರೆಂದು ಕರೆಯಿಸಿಕೊಂಡು, ಅವರ ಮನೆಯೊಳಗೆ, ಹೊಲದೊಳಗೆ, ಜೀತದಾಳುವಾಗಿ ದುಡಿಯುತ್ತಾ, ಆವರು ಕಟ್ಟುವ ಹೊಸ ಮನೆಗೆ, ಅವರು ಕಟ್ಟುವ ದೇವಸ್ಥಾನಕ್ಕೆ, ರಕ್ತ ಸುರಿಸಿ ಬಂಡೆಯನು ತುಂಡು ಕಲ್ಲನ್ನಾಗಿ ಮಾಡಿ ಅದನ್ನು  ಹೊತ್ತು ಬೇವರು ಹರಿಸಿ, ಬಣ್ಣ ಬಳೆದು ಕೊನೆಗೆ ತಾವೇ ಕಟ್ಟಿದ ಆ ದೇವಸ್ಥಾನಕ್ಕೆ ಹೋದರೆ ಮೈಲಿಗೆಯೆಂದು ಅವರನ್ನು ದೂರವಿಟ್ಟು, ದೇವಸ್ಥಾನದ ಮುಂದೆ ಚಪ್ಪಲಿ ಕಾಯುವ ಕೆಲಸವನ್ನು ಅವರಿಗೆ ಕೊಟ್ಟು, ಅವರನ್ನು  ಊರಿನಲ್ಲಿ ಸತ್ತ ಪ್ರಾಣಿಗಳನ್ನು ಎಳೆಯುವ, ಅವರು ತುಂಬಿಸಿರುವ ಕಕ್ಕಸ್ಸಿನ ಗುಂಡಿಗೆ ಇಳಿದು ಮಲವನ್ನು ತಲೆಯ ಮೇರೆ ಹೊರುವತ್ತಾ, ಅಸ್ಪೃಶ್ಯರೆನಿಸಿಕೊಂಡವರ ಹೊಟ್ಟೆಯಲ್ಲಿ ಹುಟ್ಟಿದ ಕುಡಿಗಳು ತಮ್ಮತಂದೆತಾಯಿಗಳು, ಅಣ್ಣ ತಮ್ಮಂದಿರು, ಅಕ್ಕತಂಗಿಯರು ಅನುಭವಿಸುತ್ತಿರುವ ನೋವು, ತನ್ನ ಜನಾಂಗದ ಅಕ್ಕತಂಗಿಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರಗಳನ್ನು ಕಂಡು ಉಳ್ಳವರ ಎದರು ಪ್ರತಿಭಟಿಸಲು ಸಾಧ್ಯವಾಗದೆ, ಮರೆಯಲ್ಲಿ ನಿಂತು ಕಣ್ಣೀರು ಸುರಿಸಿ ಹೋಗುತ್ತಿದ್ದ ಕಾಲಘಟ್ಟದಲ್ಲಿ ಶೂದ್ರ ಜನಾಂಗಕ್ಕೆ ವಿದ್ಯೆಯನ್ನೆ ನೀಡಿದೆ ಅವರನ್ನು ಗುಲಾಮರಂತೆ ಸದಾ ಕಾಲ ನಮ್ಮ ಕಾಲಕೆಳಗೆ ಇರಬೇಕೆಂದು ಬಯಸಿದ ಬ್ರಾಹ್ಮಣ್ಯ ಪರಂಪರೆಯು ಊರಿನ ಕರೆಬಾವಿಯಲ್ಲಿ ಕುಡಿಯಲು ನೀರನ್ನು ಕೂಡ ಮುಟ್ಟಿಸದೇ ಇದ್ದಂತಹ ಕಾಲದಲ್ಲಿ ಬಾಬಾ ಸಾಹೇಬ್  ಅಂಬೇಡ್ಕರ್ ಎಂಬ ಸೂರ್ಯ ಹುಟ್ಟಿ ದಲಿತರ ಬದುಕಿಗೆ ಬೆಳಕನ್ನು ನೀಡಿದರು.

 ತನ್ನ ಜನಾಂಗದಂತೆಯೇ ತಾನು ಜಾತಿಯ ಶೋಷಣೆಗೆ ಒಳಪಟ್ಟು ನೂರಾರು ನೋವು, ಹಿಂಸೆಯನ್ನು ಅನುಭವಿಸಿ ಕಷ್ಟಪಟ್ಟು ಛಲದಿಂದಲೇ ಓದಿ ತನ್ನ ಜನಾಂಗಕ್ಕೆ ಆಗುತ್ತಿರುವ ಅನ್ಯಾಯ ಶೋಷಣೆಯ ವಿರುದ್ಧ ಹೋರಾಡಿ ಭಾರತ ದೇಶಕ್ಕೆ ಸಂವಿಧಾನವನ್ನು ಬರೆದು ಕೊಟ್ಟು, ಸವ೯ರಿಗೂ ಶಿಕ್ಷಣದ ಹಕ್ಕುಗಳನ್ನು ಕೊಟ್ಟಾಗ ಅಸ್ಪೃಶ್ಯ ಜನಾಂಗದ ಮಕ್ಕಳು ಒಬ್ಬೊಬ್ಬರಾಗಿ ಶಾಲೆಯ ಹಾದಿ ಹಿಡಿದರೂ ಆ ಶಾಲೆಯಲ್ಲೂ ಕೂಡ ಶೋಷಣೆ ತಪ್ಪಲಿಲ್ಲ,  ಜಾತಿಯ ಮನಸ್ಸಗಳು ಅವರು ಅಕ್ಷರ ಕಲಿಯುವುದನ್ನು ತಿರಸ್ಕರಿಸಿ ಮೂದಲಿಸುತ್ತಲೇ ಬಂದರು. ಒಂದೊಂದೇ ಅಕ್ಷರವನ್ನು ಕಲಿಯುತ್ತಾ ತನ್ನ ಜನಾಂಗಕ್ಕೆ ಆದ ಅನ್ಯಾಯವನ್ನು ನೆನೆಯುತ್ತಾ ವಿದ್ಯಾವಂತರಾಗ ತೊಡಗಿದರು ಅಸ್ಪೃಶ್ಯ ಜನಾಂಗ.

ಭಾರತ ದೇಶಕ್ಕೆ  ಸ್ವಾತಂತ್ರ್ಯ ಬಂದು, ಸಂವಿಧಾನ ಜಾರಿಗೆ ಬಂದಾಗ, ಸಂವಿಧಾನದಲ್ಲಿ  ದಲಿತರಿಗೆ  ವಿಶೇಷವಾದ ಕಾನೂನುಗಳು ಬಂದು ಅವಕಾಶಗಳನ್ನು ನೀಡಲಾಯಿತಾದರು. ಅದನ್ನು ಅನುಷ್ಠಾನ ಮಾಡುವರು ಉನ್ನತ ಜಾತಿಯವರಾದ್ದರಿಂದ ಹಿಂದುಳಿದ ಜನರ ಹಕ್ಕುಗಳು ಅವರಿಗೆ ತಲುಪಲೇ ಇಲ್ಲ. ದಲಿತ ಜನಾಂಗದ ಶೋಷಣೆ ನಿಲ್ಲಲೇ ಇಲ್ಲ. ಅಸ್ಪೃಶ್ಯತೆಯ  ಆಚರಣೆ ಮತ್ತಷ್ಟು ತಾಂಡವಾಡ ತೊಡಗಿತು.

ಎಂಬತ್ತರ ದಶಕದಲ್ಲಿ ಅಕ್ಷರಗಳನ್ನು ಕಲಿತ ಅಸ್ಪೃಶ್ಯ ವಿದ್ಯಾವಂತ ಜನರು ಅಂಬೇಡ್ಕರ್  ರ ಆಶಯದಂತೆ ಶಿಕ್ಷಣ ಪಡೆದು, ತನ್ನವರು ಮತ್ತು ತಮ್ಮಂತೆ ನೊಂದ ಮನಸ್ಸುಗಳನ್ನು ಸಂಘಟನೆ ಮಾಡಿ, ತನ್ನವರ ಹಕ್ಕುಗಳಿಗಾಗಿ, ಶೋಷಣೆಯ ವಿರುದ್ಧವಾಗಿ ಹೋರಾಟ ಮಾಡಲು ಪ್ರಾರಂಭಿಸಿದರು. ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ದಲಿತ್ ಪ್ಯಾಂಥರ್ಸ್ ಎಂಬ ಸಂಘಟನೆ ಸ್ಥಾಪನೆಯಾಯಿತು. ಅದು ತನ್ನ ಜನಾಂಗಕ್ಕೆ ಸಂವಿಧಾನದಲ್ಲಿ ದಲಿತರಿಗಾಗಿ ಹಿಂದುಳಿದವರಿಗಾಗಿ ಶೋಷಿತರಿಗಾಗಿ ಕೊಟ್ಟಂತಹ ಹಕ್ಕುಗಳು ಮತ್ತು ಅವರಿಗಾಗಿ ಮೀಸಲಾದ ಅವಕಾಶಗಳನ್ನು ದೊರಕಿಸಿ ಕೊಡಲು, ದಲಿತರ ಮೇಲಿನ ದಬ್ಬಾಳಿಕೆ  ಆ ಜನಾಂಗಕ್ಕೆ ಆಗುತ್ತಿರುವ ಅನ್ಯಾಯಕ್ಕಾಗಿ ಹೋರಾಟ ಪ್ರಾರಂಭಿಸಿತು ಮತ್ತು ಯಶಸ್ವಿಯಾಯಿತು ಆ ಬದಲಾವಣೆಯ ಹೋರಾಟದ ಗಾಳಿ ಕರ್ನಾಟಕದ ಮೇಲೂ ಬೀಸಿತು.

ಎಂಬತ್ತರ ದಶಕದಲ್ಲಿ ಕರ್ನಾಟಕದಲ್ಲಿ ದಲಿತರ ಶೋಷಣೆ, ದಲಿತ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ, ಜಾತಿಪದ್ದತಿ ಮುಂತಾದ ಕಾರಣಗಳಿಂದಾಗಿ ಹಲವಾರು ವಿದ್ಯಾವಂತ ಜನರು ಎಚ್ಚೆತ್ತು ದಲಿತ ಸಂಘಷ೯ ಸಮಿತಿಯನ್ನು ಕಟ್ಟಿ ಹೋರಾಟಕ್ಕಿಳಿದರು. ದಲಿತ ವಿಧ್ಯಾರ್ಥಿ ಒಕ್ಕೂಟವು ಕೂಡ ಆರಂಭವಾಯಿತು. ಈ ಸಂಘಟನೆಯ ಉದ್ದೇಶ, ಹೋರಾಟ, ಬರೀ ದಲಿತರ ಪರವಾಗಿ ಮಾತ್ರ ಅಲ್ಲ. ಎಲ್ಲಾ ಜಾತಿಯ ಬಡವರ ಪರವಾಗಿ ಎಂಬ ಘೋಷಣೆಯೊಂದಿಗೆ ಸಾಗಿದ ಸಂಘಟನೆ ಪ್ರೋ ಬಿ ಕೃಷ್ಣಪ್ಪ ಮತ್ತು ಸಮಕಾಲೀನ  ದಲಿತ ವಿದ್ಯಾವಂತರು ಸಮಿತಿಯ ಸಂಚಾಲಕರಾದರು. ಎಲ್ಲಿ ಆನ್ಯಾಯವಾದರೂ ಅಲ್ಲಿ ದಲಿತರ ದಂಡು ಸಾಗಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು. ಆರೆ ಬೆತ್ತಲೆ ಮೆರವಣಿಗೆ ಮಾಡುತ್ತಿದ್ದರು ರಸ್ತೆ ತಡೆ ಚಳುವಳಿಯನ್ನು ಉಪವಾಸ ಸತ್ಯಾಗ್ರಹ ಚಳಿವಳಿಯನ್ನು ಮಾಡುತ್ತಾ ಇಡೀ ಕರ್ನಾಟಕ ರಾಜ್ಯದಲ್ಲಿ ಬಹುಜನರು ಹೆಮ್ಮೆ ಪಡುವಂತಹ ಸಂಘಟನೆಯನ್ನು ರೂಪಿಸಿದರು. ಡಿ ಎಸ್ ಎಸ್ ಆ  ಹೆಸರು ಕೇಳಿದೊಡನೆ ಭೂಮಾಲೀಕರು, ಜಾತಿವಾದಿಗಳು ಸರ್ಕಾರಿ ಅಧಿಕಾರಿಗಳು ಭಯ ಪಡುವಂತಹ ಮಟ್ಟಕ್ಕೆ ಈ ಸಂಘಟನೆ ಬೆಳೆಯಿತು. ಯಾಕೆಂದರೆ ಆಗಿನ ದಲಿತ ನಾಯಕರಲ್ಲಿ ಸ್ವಾರ್ಥಪರತೆ ಇರಲಿಲ್ಲ. ಬಡವರ ನೋವು ಅನ್ಯಾಯಕ್ಕೆ ನ್ಯಾಯ ಕೊಡಿಸುವ ಮನಸ್ಥಿತಿ ಇರುವ ಮನಸ್ಸುಗಳು ಮಾತ್ರ ಒಂದಾಗಿದ್ದವು. ನನಗೆ ಜ್ಞಾಪಕ ಇರುವ ಹಾಗೇ ನಾನು ಬಿ ಕೃಷ್ಣಪ್ಪನವರನ್ನು ನೋಡಿಲ್ಲವಾದರೂ ನಾನು ನೋಡಿದ ಹೋರಾಟಗಾರರು ದಲಿತ ಕವಿ ಸಿದ್ದಲಿಂಗಯ್ಯ, ಕೋಟಿಗಾನಳ್ಳಿ ರಾಮಯ್ಯ, ಮುನಿಸ್ವಾಮಿ, ವಿಜಯ್ ಕುಮಾರ್ , ಮು ತಿಮ್ಮಯ್ಯ,  ಡಿ ಜಿ ಸಾಗರ್, ಲಕ್ಷ್ಮಿನಾರಾಯಣ ನಾಗವಾರ, ಹೆಬ್ಬಾಳ ವೆಂಕಟೇಶ್, ಮಾವಳ್ಳಿ ಶಂಕರ್, ಗೋಪಾಲ್ ಹಲವಾರು ನಾಯಕರು ದಲಿತರ ಧ್ವನಿಯಂತೆ ಹೋರಾಡಿದರು.

ನಾನು ಇಷ್ಟೆಲ್ಲಾ ಪೀಠಿಕೆ ಯಾಕೆ ಹಾಕಿದನೆಂದರೆ ನಾನು ಓದಲು ತೆಗೆದುಕೊಂಡ ಪುಸ್ತಕ “ಅಂಗುಲಿಮಾಲ” ಇದು ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯನವರ ಆತ್ಮಕಥನ. ಇದನ್ನು ನಿರೂಪಣೆ ಮಾಡಿದವರು ಗುರು ಪ್ರಸಾದ್ ಕಂಟಲಗೆರೆ. ನನಗೆ ಲೇಖಕರು ಪರಿಚಯ ಇಲ್ಲ, ಕುಂದೂರು ತಿಮ್ಮಯ್ಯನವರು ಪರಿಚಯ ಇಲ್ಲ. ಅಂಗುಲಿಮಾಲ ಪುಸ್ತಕ ಒಂದೇ ಪರಿಚಯ. ಒಂದಷ್ಟು  ಮಾಹಿತಿಗಾಗಿ ಈ ಪುಸ್ತಕವನ್ನು ತರಿಸಿಕೊಂಡೆ. ಈ ಪುಸ್ತಕವನ್ನು ತರಸಿಕೊಳ್ಳಲು ಹರಸಾಹಸವೇ ಪಡಬೇಕಾಯಿತು.

ಈ ಆತ್ಮಕಥನ ಒಬ್ಬ ದಲಿತ ಹೋರಾಟಗಾರನ ಜೀವನ ಚರಿತ್ರೆಯಾಗಿರುವುದರಿಂದ ಈ ಆ ಪುಸ್ತಕದೊಳಗಿನ ಅವರ ಜೀವನ ಹೋರಾಟದ ಬದುಕನ್ನು ಪರಿಚಯ ಮಾಡುವೆ. ಈ ಕೃತಿಯನ್ನು ಕಾರುಣ್ಯ ಪ್ರಕಾಶನ ಕುಂದೂರು ತುಮಕೂರು ಜಿಲ್ಲೆ ಇವರು ಹೊರತಂದಿದ್ದಾರೆ. ಪ್ರಕಾಶಕರು ತಮ್ಮ ನುಡಿಯಲ್ಲಿ ಹೇಳುತ್ತಾರೆ ” ಇದು ಕೇವಲ ಒಬ್ಬ ವ್ಯಕ್ತಿಯ ಆತ್ಮಕಥನವಲ್ಲ. ಒಂದು ಹೋರಾಟದ ಶಕ್ತಿ ಹುಟ್ಟಿದ ಬಗೆ, ಅದು ತನ್ನನ್ನು ತನ್ನನ್ನು ತಾನು ಆಸ್ವೋಟಿಸಿಕೊಂಡು ಸಿಡಿದು ಧಮನಿತರ ಎದೆಯಲ್ಲಿ ದೀಪ ಹಚ್ಚಿದ ಸ್ವರೂಪ ಎಂದು ಹೇಳುತ್ತಾರೆ.

ಆಂಗುಲಿಮಾಲ ಪುಸ್ತಕದ ನಿರೂಪಕರಾದಂತಹ ಗುರುಪ್ರಸಾದ್ ಕಂಟಲಗೆರೆ ಇವರು ಹೇಳುತ್ತಾರೆ. ಕುಂದೂರು ತಿಮ್ಮಯ್ಯ ನವರು ನಿಸ್ವಾರ್ಥ ದಲಿತ ಸಂಘರ್ಷ ಸಮಿತಿಯ ಕಟ್ಟಾಳು. ಹಿಂದಿನ ಕಾಲದಲ್ಲಿ ಅಕ್ಷರ ಕಾಣದ, ತಾವು ಬದುಕಿನೂದ್ದಕ್ಕೂ ಕೌಶಲ್ಯಗೊಳಿಸಿಕೊಳ್ಳದ ನಮ್ಮವರು ಬಂಡೆಯಂತೆ ಬದುಕಿದ್ದಾರೆ. ಇವರ ಬದುಕನ್ನು ಅಕ್ಷರ ಬಲ್ಲ ನಮ್ಮಂತಹ ಹೊಸ ತಲೆಮಾರು ಈಗ ಅಳಿದುಳಿದ್ದನ್ನಾದರೂ ದಾಖಲಿಸದಿದ್ದರೆ ನಮಗೆ ನಾವೇ ಮಾಡಿಕೊಳ್ಳುವ ಮತ್ತು ಚರಿತ್ರೆಗೆ ಎಸಗುವ ಘೋರ ಅಪಚಾರ ಅಂತ. ನಿಜ ಇವರ ಮಾತುಗಳನ್ನು ಒಪ್ಪಲೇಬೇಕಾಗುತ್ತದೆ. ಅಸ್ಪೃಶ್ಯಯತೆಯ ವಿರುದ್ಧ, ಬಡಜನರ ಶೋಷಣೆಯ ವಿರುದ್ಧ, ಈ ದೇಶದ ಬ್ರಾಹ್ಮಣ್ಯದ ಕಂಧಾಚಾರ ಮೂಢನಂಬಿಕೆಗಳ ವಿರುದ್ಧ, ನಿಸ್ವಾರ್ಥವಾಗಿ ಹೋರಾಡಿದ ತಮ್ಮ ಬದುಕನ್ನೇ ಹೋರಾಟದ ರೂಪವಾಗಿಸಿದ ಹಲವಾರು ದಲಿತ ಹೋರಾಟಗಾರರು ಈ ಕನ್ನಡದ ನಾಡಿನ ಮಣ್ಣಿನಲ್ಲಿ ಜನಿಸಿದ್ದಾರೆ. ಅವರ ನಿಸ್ವಾರ್ಥ ಬದುಕು ಹೋರಾಟ ಅವರ ಸಾವಿನಲ್ಲಿ ಕೊನೆಯಾಗಬಾರದು. ಅವರ ನಂತರವೂ ಕೂಡ ಅವರ ಜೀವನದ ಶೈಲಿ ಅವರು ತಮ್ಮವರ ಬದುಕಿಗಾಗಿ ನಡೆಸಿದ ಅವಿಶ್ರಾಂತ ಹೋರಾಟ ಮುಂದಿನ ಯುವ ಪೀಳಿಗೆಗೆ ಗೊತ್ತಾಗಬೇಕು. ಆ ಪ್ರಯತ್ನದಲ್ಲಿ ಯಶಸ್ವಿಯಾದ ನಿರೂಪಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

 ಅಸ್ಪೃಶ್ಯರೆಂದು ಈಗಲೂ ಕರೆಸಿಕೊಳ್ಳುವ ಜನರು ಹೆಚ್ಚು ಹೆಚ್ಚು ವಿದ್ಯಾವಂತರಾಗಿ ನವ ಬ್ರಾಹ್ಮಣರಂತೆ ತಮ್ಮ ಬದುಕಿನ ಶೈಲಿ ಜೀವನವನ್ನು ಬದಲಾಯಿಕೊಂಡರೂ ಕೂಡ, ಅವರನ್ನು ಇನ್ನೂ ಶತಮಾನಗಳು ಕಳೆದರೂ ಈ ಸಮಾಜ ಅಸ್ಪೃಶ್ಯರಂತೆ ಕಾಣುತ್ತದೆ. ಅದರೆ ನಾವು ಈಗ ಈ ಒಂದಷ್ಟು ಉತ್ತಮ ಸ್ಥಿತಿಯಲ್ಲಿ ಇರಲು ಕಾರಣ ಯಾರೆಂದು? ತಿಳಿಯುವ ಸಾಮಾಜಿಕವಾದ ಸಾಮಾನ್ಯ ಪ್ರಜ್ಞೆ ಕೂಡ ಈ ದಲಿತ ಸಮುದಾಯದ ಯುವಕರಲ್ಲಿ ವಿದ್ಯಾವಂತ ಯುವ ಜನಾಂಗದಲ್ಲಿ ಇತ್ತೀಚೆಗೆ ಕಾಣುತ್ತಿಲ್ಲ. ಪೂರ್ಣ ವಿದ್ಯಾವಂತರು ತಾವು ತಮ್ಮ ಮನೆತನದ ಎಳಿಗೆಗಾಗಿ ಗುಡಿಗೋಪುರಗಳನ್ನು ಸುತ್ತುವ ಕೆಲಸದಲ್ಲಿ ತೊಡಗಿದರೆ, ಅಲ್ಪಸ್ವಲ್ಪ ವಿದ್ಯಾಭ್ಯಾಸ ಮಾಡಿದ ಯುವಕರು ಗಲ್ಲಿಗೊಂದು ಅಂಬೇಡ್ಕರ್ ಹೆಸರಿನಲ್ಲಿ ಸಂಘಟನೆ ಮಾಡಿಕೊಂಡು ರಾಜ್ಯಾಧ್ಯಕ್ಷರಾಗಿ ಜೀವನ ನಿರ್ವಹಣೆಗೆ ತೊಡಿಗಿದ್ದಾರೆ. ಸಮಾಜ ಸಮುದಾಯದ ಎಳಿಗೆಗಾಗಿ ತಮ್ಮವರ ಶೋಷಣೆಗಾಗಿ ರೂಪಿಸುತ್ತಿದ್ದ  ಹೋರಾಟದ ಶಕ್ತಿ ಕುಂದಿದೆ ಅದು ಚೈತನ್ಯವನ್ನು ಕಳೆದುಕೊಳ್ಳುತ್ತಿದೆ.

ಆಂಗುಲಿ ಮಾಲ ಕೃತಿಯು ದಲಿತ ಹೋರಾಟಗಾರ ಕುಂದೂರು ತಿಮ್ಮಯ್ಯಯ ಜೀವನ ಚರಿತ್ರೆಯಾಗಿದೆ ಅದು ಇವರ ವಿಧ್ಯಾಭ್ಯಾಸದ ದಿನಗಳು, ನಂತರದ ಹೋರಾಟದ ದಿನಗಳನ್ನು ಅವರ ಮಾತುಗಳಗೆ  ಕೃತಿಯಾಗಿ ರೂಪಗೊಂಡಿದೆ.

ಈ ಕೃತಿಯಲ್ಲಿ ಬರುವ ಅಧ್ಯಾಯವೇ ದಾಸಪ್ಪನ ಹಾಸ್ಟೆಲ್  ಕುಂದೂರು ತಿಮ್ಮಯ್ಯ ನವರ ಹುಟ್ಟು ಬಾಲ್ಯ ಎಲ್ಲಾ ತಾಯಿಯವರ ತವರೂರಾದ ಕಂಟಲಗೆರೆಯಲ್ಲಿ ಮುಗಿಯುತ್ತದೆ. ಇವರು ಕ್ರೀಡಾಪಟು ಆಗಿರುತ್ತಾರೆ. ವಿದ್ಯಾಭ್ಯಾಸ ಮುಂದುವರಿಸಲು ದಾಸಪ್ಪನ ಹಾಸ್ಟಲ್ ಸೇರುತ್ತಾರೆ. ದಾಸಪ್ಪ ಒಂದು ಶಾಲೆಯಲ್ಲಿ ಫೀಟಿ ಮಾಸ್ಟರ್ ಆಗಿರುತ್ತಾರೆ. ಇವರು ಶಿಸ್ತಿನ ಮನುಷ್ಯ. ಪಾನ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದು .ರಜಾ ದಿನಗಳಲ್ಲಿ ಹಳ್ಳಿಯ ಜನರಲ್ಲಿ ಜಾಗೃತಿ ಮೂಡಿಸಲು ವಿಧ್ಯಾರ್ಥಿಗಳನ್ನು ಕಳಿಸುತ್ತಿದ್ದರು. ಹಾಸ್ಟೆಲ್ ನಲ್ಲಿ ವಿಧ್ಯಾರ್ಥಿ ಸಂಸತ್ ಕೂಡ ಮಾಡುತ್ತಿದ್ದರು ಹಿರಿಯ ವಿಧ್ಯಾರ್ಥಿಗಳು ಇದ್ದರೂ ತಿಮ್ಮಯ್ಯ ನವರನ್ನು ರಕ್ಷಣಾ ಮಂತ್ರಿಯನ್ನು ಮಾಡಿದ್ದರು. ತಪ್ಪು ಮಾಡಿದರವನ್ನು ಆವನು ಎಷ್ಟೇ ದೊಡ್ಡವನಾದರೂ ಕೂಡ ಹೊಡೆದು ಬಿಡುತ್ತಿದ್ದರು. ಹಾಸ್ಟೆಲ್ ನಲ್ಲಿ ತಿಮ್ಮಯ್ಯನ ಕಂಡ್ರೆ ಎಲ್ಲಾ ಭಯಪಡುತ್ತಿದ್ದರು.  ಇಂತಹ ಘಟನೆಗಳಿಂದಲೇ ಕೊನೆಯಲ್ಲಿ ಅವರು ಬಿಡಬೇಕಾಗುತ್ತದೆ.

ಸಂತ್ರಸ್ತ ಹೆಣ್ಣಿಗೆ ನ್ಯಾಯ ಅಧ್ಯಾಯದಲ್ಲಿ  ತನ್ನ ಸಹಪಾಠಿ ಬಾಲಕೃಷ್ಣನ ತಂಗಿಯನ್ನು ಕ್ಯಾಸ್ಟ್ ಸರ್ಟಿಫಿಕೇಟ್ ಕೊಡುತ್ತಿದ್ದ ಇನ್ಸಪೇಕ್ಟ್ ಕೆಡೆಸಿಬಿಟ್ಟಿದ್ದ ಆಗ ಆ ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲು ತಿರ್ಮಾನಿಸಿ  ನೀನು ಹಾಸ್ಟೆಲ್ ಹತ್ತಿರ ಬಂದು ಗಲಾಟೆ ಮಾಡಮ್ಮ ಅಂತ ತಿಳಿಸಿ ಆ ಹೆಣ್ಣು ಮಗಳು ಗಲಾಟೆ ಮಾಡಿದಾಗ ವಿಧ್ಯಾರ್ಥಿಗಳು ಘೋಷಣೆ ಕೂಗಿದ್ದಾಗ ಇನ್ಸಪೆಕ್ಟರ್ ಓಟ ಕೀಳುತ್ತಿದ್ದ, ಅವನು ಬಂದಾಗ ಕಡೆಯಲ್ಲಾ ಘೋಷಣೆ ಕೂಗುತ್ತಾ ಹೋದಾಗ ಕೊನೆಗೆ ಪೋಲಿಸ್ ಸ್ಟೇಶನ್ ಸೇರಿಕೊಳ್ಳತ್ತಾನೆ ಅದರೂ ಬೆಂಬಿಡದೇ ಆ ಹುಡುಗಿಯನ್ನು ಕೊನೆಗೆ ಇನ್ಸಪೆಕ್ಟರ್ ಗೆ ಮದುವೆ ಮಾಡಿಸುತ್ತಾರೆ.

ನಂತರದಲ್ಲಿ ಕುಂದೂರು ತಿಮ್ಮಯ್ಯ ನವರದು ಎಸ್ ಎಸ್ ಎಲ್ ಸಿ ಯ ಪರೀಕ್ಷೆಯಲ್ಲಿ ಒಂದು ಸಬ್ಜಟ್ ಫೇಲ್ ಆಗುತ್ತದೆ. ಅವರಣ್ಣ ಬೆಂಗಳೂರಿಗೆ ಕರೆದುಕೊಂಡು ಹೋಗಿ ಟ್ಯೂಷನ್ ಸೇರಿಸುತ್ತಾರೆ ಶ್ರೀರಾಮ್ ಪುರಂ ನಲ್ಲಿ ಅಗ ಈ ಪ್ರದೇಶದ ಕೆಲವು ರೌಡಿಗಳು ಗರಡಿ ಮನೆಯಲ್ಲಿ ಪರಿಚಯ ಆಗುತ್ತಾರೆ. ನಂತರ ಶ್ರೀರಾಮ್ ಪುರದ ಕಿಟ್ಟಿ ಎಂಬ ಪ್ರಖ್ಯಾತ ರೌಡಿಯ ಗ್ಯಾಂಗ್ ಸೇರಿ ಹಲವು ಆಟ್ಯಾಕ್ ಮಾಡುತ್ತಾರೆ. ಟ್ಯೂಷನ್ ಸ್ಥಳಕ್ಕೆ ಬಂದ  ಪೋಲಿಸರು ಸ್ಟೇಷನ್ ಕರೆದುಕೊಂಡು ಹೋಗಿ ಧಮಕಿ ಹಾಕಿ ಕಳಿದ್ದರು ಈಗೇ ಇವರು ಭೂಗತ ಲೋಕವನ್ನು ಕೂಡ ಪರಿಚಯ ಮಾಡಿಕೊಂಡವರು.

ನಂತರದಲ್ಲಿ ತುಮಕೂರಿನ ಕೆ.ಬಿ ಸಿದ್ದಯ್ಯರವರನ್ನು ನೋಡಲು ಹೊರಟಿದ್ದು ಪರಿಚಯ ಮಾಡಿಕೊಳ್ಳಲು ಹರಸಾಹಸಪಟ್ಟಿದ್ದು, ಕೊನೆಗೆ ಸಿದ್ದಯ್ಯನವರ ಮಾತುಗಳು ವಿಚಾರವಂತಿಕೆ ಮನಸ್ಸಿನ ಮೇಲೆ ಪರಿಣಾಮ ಬೀರಿ ಕೊನೆಯಲ್ಲಿ ರೈಲಿನಲ್ಲಿ ಪರಿಚಯ ಗಾಢವಾಗಿದ್ದು,ನಿರೂಪಣೆಯಾದರೆ  ಮತ್ತೊಂದು ಅಧ್ಯಾಯದಲ್ಲಿ ಹೇಳುತ್ತಾರೆ.  ಮೇಲ್ಜಾತಿಯ ಜನರ ಜೊತೆಯಲ್ಲಿ ಸೇರಿ ಪುಂಡಾಟಿಕೆ ಮಾಡಿಕೊಂಡಿದ್ದ ನನಗೆ ಭದ್ರಾವತಿಯಲ್ಲಿ ಪ್ರೊ. ಬಿ ಕೃಷ್ಣಪ್ಪನವರು ಅಯೋಜಿಸಿದ್ದ ಮೂರು ದಿನಗಳ ಶಿಬಿರದಲ್ಲಿ  ಅಸ್ಪೃಶ್ಯತೆ ಅಂದರೇನು? ಮೀಸಲಾತಿ ಅಂದರೇನು? ಯಾಕಾಗಿ ದೌರ್ಜನ್ಯಗಳು ನಡೆಯುತ್ತವೆ. ಅಂಬೇಡ್ಕರ್ ಅಂದರೆ ಯಾರು? ಮುಂತಾದ ವಿಷಯವನ್ನು ತಿಳಿದುಕೊಂಡೆ ಅಲ್ಲಿಂದಲೇ ನನ್ನ ರೊಚ್ಚು ಕಿಚ್ಚು ಎಲ್ಲಾವು ಕೂಡ ಸಮಾಜದಲ್ಲಿನ ಜಾತಿ ವ್ಯವಸ್ಥೆ, ಅಸ್ಪೃಶ್ಯತಾ ಆಚರಣೆಯ ಕಡೆಗೆ ತಿರುಗಿತು. ನನ್ನನ್ನು ನಿಜವಾಗಿಯೂ ಮನುಷ್ಯನನ್ನಾಗಿಸಿದ್ದು ನನ್ನ ಕಣ್ ತೆರೆಸಿದ್ದು ಭದ್ರಾವತಿಯಲ್ಲಿ ನಡೆದ ಮೂರು ದಿನಗಳ ಪ್ರಥಮ ದಲಿತ ಶಿಬಿರ ಎನ್ನುತ್ತಾರೆ.

ಒಡೆದ ಬಾಡಿನ ಮಡಿಕೆ ಅಧ್ಯಾಯದಲ್ಲಿ ಅಂದಿನ ಕಾಲದಲ್ಲಿ ದಲಿತರಿಗೆ ಕೆಲಸವಿರಲಿಲ್ಲ ಬಡತನ ಆವರಿಸಿತ್ತು. ಹೊಟ್ಟೆ ಹಸಿವನ್ನು ನೀಗಾಲಾಡಿಸಿಕೊಳ್ಳುವುದೇ ಹರಸಾಹಸವಾಗಿತ್ತು. ಇನ್ನೂ ಮಾಂಸ ಊಟವೆಲ್ಲಿ? ಮಾಂಸದ ತಿಳಿಸಾರಿಗಾಗಿ ಮೈಲುಗಟ್ಟಲೆ ಹೋದ ನಿದರ್ಶನಗಳನ್ನು ನಾವು ಕೇಳಿದ್ದೇವೆ ಈ ಅಧ್ಯಾಯದಲ್ಲಿ ಒಂದು ಉದಾಹರಣೆಯನ್ನು ಕೊಡುತ್ತಾರೆ. ಅವರ ಹಟ್ಟಿಯಲ್ಲಿ ಯಾರೋ ಒಬ್ಬ ಹರಿಸೇವೆ ಮಾಡಿ ಕುರಿಯನ್ನು ಕಡಿದು ಊರವರಿಗೆಲ್ಲಾ ಊಟ ಹಾಕುವೆ ಎಂದು ಸಾರಿದ್ದ. ಆದಿನ ಊರಿನ ಜನರೆಲ್ಲಾ ಒಂದು ಕಡೆ ಸೇರುತ್ತಾರೆ. ಸೇರಿರುವುದು ಹರಿಸೇವೆಗೆ ಭಕ್ತಿಯಿಂದ ಅಲ್ಲಾ, ಅವರೆಲ್ಲರೂ ಬಂದಿರುವುದು ಬಾಡನ್ರೆಸಿಗೆ. ಕುರಿ ಕುಯ್ದು ಮಡಿಕೆಯ ಬೇಯಲು ಹಾಕಿದಾಗ ಬಂದವೆರಲ್ಲಾ ಓಲೆಯ ಮೇಲಿರುವ ಮಡಿಕೆಯ ಸುತ್ತಲೇ ತಿರುಗುತ್ತಿರುತ್ತಾರೆ. ಮಾಂಸ ಬೇಯುತ್ತಿದ್ದ ಮಡಿಕೆ ಬೆಂಕಿಯಲ್ಲಿ ಬೆಂದು ಬೆಂದು ಹೋಗಿರುತ್ತದೆ. ಮಾಂಸವನ್ನು ತಿರುವ ಸಮಯದಲ್ಲಿ ಮಡಿಕೆಯು ಓಲೆಯ ಪಾಲಾಗುತ್ತದೆ. ಆಗ ಸಮಯದಲ್ಲಿ ಅಲ್ಲಿ ಸೇರಿದ್ದ ಜನರಿಗೆ ಆಗಸವೇ ಮೇಲೆ ಬಿದ್ದಂತೆ, ಜೀವನದಲ್ಲಿ ಎನೋ ಕಳೆದುಕೊಂಡವರಂತೆ ರೋಧಿಸುತ್ತಾರೆ. ಕೆಲವು ಆ ಬೂದಿಯೊಳಗೆ ಬಿದ್ದ ಮಾಂಸವನ್ನು ಎತ್ತಿ ತೊಳೆದುಕೊಂಡು ನೀರಾಕಿ ತೊಳೆದು ಕೊಂಡು ಉಳಿದಿದ್ದ ಕಾರವನ್ನು ಹಾಕಿಕೊಂಡು ತಿಂದರಂತೆ ಮತ್ತು ಕೆಲವರು ಬೈದುಕೊಂಡು ಮನಸ್ಥಾಪ ಮಾಡಿಕೊಂಡು ಹೋದರಂತೆ. ಈ ಅಧ್ಯಾಯದಿಂದ ತಿಳಿಯುವುದೇನಂದರೆ ದಲಿತ ಪರಿಸ್ಥಿತಿ ಅಂದಿನ ಕಾಲದಲ್ಲಿ ಹೇಗಿತ್ತು. ಒಂದೊತ್ತಿನ ಊಟಕ್ಕಾಗಿ ಹೇಗೆ ಪರಿತಪಿಸುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ನಂತರದ ಅಧ್ಯಾಯಗಳಲ್ಲಿ ಕೆ ಬಿ ಸಿದ್ದಯ್ಯ ನವರ ಆದರ್ಶ ವಿವಾಹ ಮಾಡಿದ್ದು ಈ ವಿವಾಹದಿಂದ ಅಸ್ಪೃಶ್ಯ ಕೆಳಜಾತಿಗಳೆರಡು ಮಾದಿಗ ಹೊಲೆಯ ಜಾತಿಗಳಲ್ಲಿ ವಿವಾಹವಾಗಿ ಇತರರಿಗೆ ಮಾದರಿಯಾದ ಸಿದ್ದಯ್ಯನವರ ವಿವಾಹದಲ್ಲಿ ನಡೆದ ಘಟನೆಗಳು. ತಿಪಟೂರಿನಲ್ಲಿ ದಲಿತ ವಿಧ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸ್ಥಾಪನೆ ಹೋರಾಟ ಮಾಡಿ ಯಶಸ್ವಿಯಾಗಿದ್ದು. ಬಿದರೆಳ್ಳಿ ಕಾವೇಲ್ ಭೂ ಹೋರಾಟದಲ್ಲಿ ದ ಸಂ ಸ ಹೋರಾಟ ಮಾಡದೆ ಇದ್ದಿದ್ದರೆ ಅಲ್ಲಿ ವಾಸಿಸುತ್ತಿದ್ದ ದಲಿತರು ತಮ್ಮ ಬದುಕನ್ನು ಕಳೆದು ಕೊಳ್ಳಬೇಕಾಗಿತ್ತು. ಮೊದಲ ದಲಿತ ಸಂಘರ್ಷ ಸಮತಿಯ ಶಾಖೆ ತಿಪಟೂರಿನಲ್ಲಿ ಉದ್ಘಾಟನೆಯಾಗಿದ್ದು,ಕಿಬ್ಬನಳಿ ತಾಲ್ಲೂಕು ಪಂಚಾಯಿತಿಯ ಮೀಸಲು ಕ್ಷೇತ್ರದಿಂದ ತಾಲ್ಲೂಕು ಪಂಚಾಯಿತಿ ಚುನಾವಣೆ ಸ್ವರ್ಧೆ ಮಾಡಿದ್ದು

ಕೊನೆಯ ಅಧ್ಯಾಯದಲ್ಲಿ ತನ್ನಿಂದ ಸಹಾಯವಾಗಿದ್ದ ಹೆಣ್ಣು ಮಗಳು ತನ್ನ ವಿರೋಧಿಗಳೇ ಹೆಚ್ಚಾಗಿರುವ ಊರಿನಲ್ಲಿ ನಾನು ತಾಲ್ಲೂಕು ಪಂಚಾಯಿಯ ಸದಸ್ಯನಾಗಿ ಅಯ್ಕೆದಾಗ ಪಟಾಕಿ ಸಿಡಿಸಿ ಸಂಭ್ರಮಿಸಿದ್ದು. ಹೀಗೆ ಕುಂದೂರು ತಿಮ್ಮಯ್ಯನವರ ಬದುಕು ಈ ಕೃತಿಯಲ್ಲಿ ಅನಾವರಣವಾಗಿದೆ. ಈ ಕೃತಿಯಲ್ಲಿನ ಎಲ್ಲಾ ಅಧ್ಯಾಯಗಳನ್ನು ಪರಿಚಯ ಮಾಡಲು ಹೋದರೆ ಕೃತಿಯ ಬಗೆಗಿನ ಓದುವ ತಿಳಿದುಕೊಳ್ಳುವ ಉತ್ಸಾಹ ಓದುಗರಿಗೆ ಕಡಿಮೆ ಯಾಗಬಹುದೆಂಬ ಕಾರಣದಿಂದ ಒಂದಷ್ಟು ಅಧ್ಯಾಯಗಳನ್ನು ಪರಿಚಯ ಮಾಡಿರುವೆ.

ಈ ನಾಡಿನಲ್ಲಿರುವ ಪ್ರಗತಿಪರ ಚಿಂತನೆಯುಳ್ಳ, ಅದರಲ್ಲೂ ಮುಖ್ಯವಾಗಿ ಇತ್ತೀಚೆಗೆ ದಲಿತ ಸಂಘಟನೆಗಳನ್ನು ಕಟ್ಟಿಕೊಂಡು ಹೋರಾಟದ ಹಾದಿಯಲ್ಲಿ ಸಾಗುತ್ತಿರುವ ಯುವ ದಲಿತ ನಾಯಕರು ದಲಿತ ವಿಧ್ಯಾರ್ಥಿ ಯುವಜನಾಂದ ಪ್ರತಿಯೊಬ್ಬ ಓದುಗನು ಕೂಡ ಕೃತಿಯನ್ನು ಓದಬೇಕಾಗುತ್ತದೆ ಮತ್ತು ಇಂದಿನ ಯುವ ದಲಿತ ನಾಯಕರು ಕುಂದೂರು ತಿಮ್ಮಯ್ಯನವರ ಬದುಕನ್ನ ಅವರು ರೂಪಿಸುತ್ತಿದ್ದ ಹೋರಾಟವನ್ನು, ಅವರು ಜನರನ್ನು ಸಂಘಟಿಸುತ್ತಿದ್ದ ರೀತಿಯನ್ನ, ತನ್ನ ಸಮಾಜಕ್ಕಾಗಿ ಅವರು ಮಾಡಿದ ನಿಸ್ವಾರ್ಥದ ಹೋರಾಟದ ಬದುಕನ್ನು  ಬರಹದ ಮೂಲಕ ಓದಿಕೊಂಡು ಹೋರಾಟವನ್ನು ಮುನ್ನೆಡೆಸಿದ್ದಾದರೆ ಆ ಹೋರಾಟವೊಂದು ಸಾರ್ಥಕತೆಯತೆಯನ್ನು ಪಡೆಯಬಹುದೆಂದು ನನ್ನ ವೈಯಕ್ತಿಕ ಭಾವನೆ.

ನಿರೂಪಕರಾದಂತಹ ಗುರುಪ್ರಸಾದ್ ಕಂಟಲಗೆರೆ ರವರು ದಲಿತ ಹೋರಾಟಕ್ಕಾಗಿ, ದಲಿತರ ಉದ್ದಾರಕ್ಕಾಗಿ ಹೋರಾಟ ಮಾಡಿದ, ಸಮಾಜಕ್ಕೆ ಯುವ ಜನಾಂಗಕ್ಕೆ  ಪರಿಚಯವಿರದೇ ಇರುವ ಹೋರಾಟಗಾರರನ್ನು ಗುರುತಿಸಿ, ಅವರ ಜೀವನ ಹೋರಾಟವನ್ನು ದಾಖಲಿಸಿ ಅವರು ಶಾಶ್ವತವಾಗಿ ಅಕ್ಷರ ರೂಪದಲ್ಲಿ ಉಳಿಯುವಂತೆ ಮಾಡಲಿ ಮತ್ತು ದಲಿತ ಚಿಂತನೆಯ ಇನ್ನಷ್ಟು ಬರಹಗಳು ಬರಲಿ ಎಂದು ಈ ಮೂಲಕ ಹಾರೈಸುತ್ತೇನೆ.


Leave a Reply

Back To Top