ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
ಮೋಡವಿಲ್ಲದ ಬಾನು
ಬಿಸಿಯಾದ ಗಾಳಿಗೆ
ಮರೀಚಿ ಕುಣಿದಿದೆ
ಬಾವಿಯೇ ಬಾಯಾರಿದೆ.
**
ಪ್ರಾಣಿ ಪಕ್ಷಿ ಸಂಕುಲ
ದಾಹದ ವ್ಯಾಕುಲದಿ
ಬಿಸಿಲ್ಗುದುರೆ ನೋಡಿ
ಸೋತು ತತ್ತರಿಸಿವೆ.
*
ಮೇಘ ಸಂಗ್ರಹಣೆಗೆ
ದಹಿಸುವ ಅರುಣ
ನೀರ ಬವಣೆ ಬೇಗ
ನೀಗಿಸಲಿ ವರುಣ.
**
ಧಗೆ ಧಗಿಸೋ ಧರೆ
ಬಾಡಿದ ಬಳ್ಳಿಗಳು,
ತಣಿಸಲು ಭುವಿಯ
ಬೇಗ ಬಾ ಮಳೆರಾಯ.
***
ಜೀವಿಗಳ ದಾಹಕೆ
ಓ ಮೇಘವೇ ಹನಿಸು,
ಬೆತ್ತಲಾದ ಭೂಮಿಗೆ
ಬೇಗ ಹಸಿರುಡಿಸು.
———————————————–
ವ್ಯಾಸ ಜೋಶಿ.