ಕಾವ್ಯ ಸಂಗಾತಿ
ಡಾ. ಅರಕಲಗೂಡು ನೀಲಕಂಠ ಮೂರ್ತಿ
ಮುಪ್ಪು.
ಮುಪ್ಪು
ನಗರ ಕೇಂದ್ರ ಬಸ್ ನಿಲ್ದಾಣದಲಿ
ಇನ್ನೇನು ಹೊರಡಲನುವಾಗಿ
ಕೇವಲ ಸೀಟಿಯ ಸದ್ದಿಗಾಗಿ
ಕಾಯ್ದಿರುವ ಬಸ್ಸು!
ಇದ್ದರು ಇಲ್ಲದೆ ಇದ್ದರು
ಲೆಕ್ಕಕ್ಕಿಲ್ಲದೆ ದೂರದಲೆಲ್ಲೊ
ನಿರ್ಗಮನದ ಹಾದಿಯಲಿ ನಿಂತ
ಡಕೋಟ ಪ್ಯಾಸೆಂಜರ್ ಬಸ್ಸು!
ಎಲ್ಲ ನಿಲ್ದಾಣಗಳಲು ಅಂಥ ಬಸ್ಸುಗಳು
ನಿರಂತರ ಸಾಲುಗಳು
ಬಸ್ಸುಗಳ ಸುತ್ತಮುತ್ತ ಎಲ್ಲೆಲ್ಲು
ಸಂದಣಿ ಓಡಾಟ ದಾಂಧಲೆ
ಕಾತರ ಆತುರ ಭರಾಟೆಯುಯ್ಯಾಲೆ
ಮುಪ್ಪು ಮುಗಿದೆ ಹೋದಂತಲ್ಲ
ಮುಂದೆ ಚಿಕಿತ್ಸೆಗು ಇವೆ ನಿಲ್ದಾಣಗಳು
ಒಂದರ ನಂತರ ಮತ್ತೊಂದು
ಆದರೂ ಬೀಳ್ಕೊಡುಗೆಗೆ ಬಂದ ಒಲವಿನ
ಕಣ್ಣುಗಳಲಿ ದುಗುಡದ ನೀರ ತುಳುಕು
ಹೊಟ್ಟೆ ತುಂಬಿ ತುಳುಕಿದ ತೃಪ್ತಿಯಲಿ
ಭಾರಕ್ಕು ಮಣಿಯದೆ ನಿಂತ ಬಸ್ಸು ಕೆಲವು
ಅರ್ಧಂಬರ್ಧ ತುಂಬಿದ್ದೆ ವೇಳೆ ಮುಗಿದು
ನಿರ್ಗಮನದ ಅನಿವಾರ್ಯತೆಯಲಿ
ತುದಿಗಾಲಲಿ ನಿಲ್ಲದೆ ನಿಂತ ಹಲವು
ಖಾಲಿ ಖಾಲಿ ಪೇವಲ ಸ್ಥಿತಿಯಲು
ವೇಳೆಗೆ ತಲೆ ಬಾಗಿ ಹೊರಟೆಬಿಟ್ಟ ಇನ್ನುಳಿಕೆ
ನಿರ್ಗಮನದ ನಿಷ್ಠುರ ಸೀಟಿ ಊದುವ ಆಸಾಮಿ ಯಾರಿಗು ಬಂಧು ಬಳಗ
ಅಲ್ಲವೆ ಅಲ್ಲ ಎಂದೆಂದೂ!
ಡಾ. ಅರಕಲಗೂಡು ನೀಲಕಂಠ ಮೂರ್ತಿ
‘ಮುಪ್ಪು ಹೊರಡಲನುವಾಗಿರುವ ಬಸ್ಸು’
ನಿಮ್ಮ ವಾರ್ಧಕ್ಯ ಮತ್ತು ಅದರ ಅಂತ್ಯ
ಸುಂದರ ಮತ್ತು ವಾಸ್ತವ!
ಚೆನ್ನಾಗಿದೆ!!congrats Murthy!
ಧನ್ಯವಾದ ವೆಂಕಟೇಶ್. ನಿಮ್ಮ ಕಾಮೆಂಟ್ ಎಲ್ಲಕ್ಕಿಂತ ನನಗೆ ಮುಖ್ಯ.