ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ಅಮಾನವೀಯರು

ಡಾ.ಡೋ.ನಾ.ವೆಂಕಟೇಶ

ಅಮಾನವೀಯರು

ಸಂಸಾರಿ ಆಗಲಿಲ್ಲ
ಸಂಸಾರ ಸುಖ ಕಾಣಲಿಲ್ಲ
ಭೀಷ್ಮ
ಬದುಕಿನುದ್ದಕ್ಕೂ ನ್ಯಾಯವಾಗೇ
ಅನ್ಯಾಯದುದ್ದಕ್ಕೂ ಸನಿಹವಾಗೇ
ಇದ್ದ ವೃದ್ಧ

ಹುಟ್ಟಿದ್ದು ದೇವ ಕನ್ಯೆಗೆ
ಬದುಕು ಕಟ್ಟಿ ಕೊಂಡಿದ್ದು ಅನ್ಯ
ಮಾನವರ ತೆವಲಿಗೆ-
ಅವನಿಗೆ ವಧು, ಇವನಿಗೆ ರಾಜ್ಯ
ಇನ್ಯಾರದೋ ತೀರದ ಹಸಿವಿಗೆ
ಇವನ ತೊಳಲಾಟ ಇವನ ಪ್ರತಿಜ್ಞೆ.



ಬೇಕಿತ್ತ ದೇವದತ್ತ ನಿನಗೆ
ಭೀಷ್ಮನಾಗುವ ಚಿತ್ತ
ಸಾಯಲೂ ಬಿಡದೆ ನಿನ್ನ ಮಲಗಿಸಿ
ಶರಶಯ್ಯೆಯುದ್ದಕ್ಕೂ ನೋಯಿಸುತ್ತ   ನಿನ್ನಿಂದ
ಉಪದೇಶ ಬೇಡಿದರು ,ಕಾಡಿದರು ನಿನ್ನ
ಕಾಡಿ ಬೇಡಿದರು ನಿನ್ನ ಶಿಥಿಲ ದೇಹದಿಂದ!
ಪಿತಾಮಹನಾದೆ ನೀನು
ಆದರೂ ಬಿಡಲಿಲ್ಲ ನಿನ್ನ

ನಿನ್ನ ತೇಜಸ್ಸು ನಿನ್ನ ಓಜಸ್ಸು
ಎಲ್ಲಾ ಬಳಸಿದರು ತಮ್ಮಗಳ
ಲಾಭಕ್ಕೆ ಲೋಲುಪತೆಗೆ
ತಮ್ಮ ಸ್ವಾರ್ಥಗಳಿಗೆ
 
ಮಹಾಭಾರತ ದ ಕಥೆ
ಈಗೆಲ್ಲ ಬರೇ ದಂತಕಥೆ
ಮಾನವರು ದೈವತ್ವಕ್ಕೇರಲೇ ಇಲ್ಲ
ಉಳಿದವರು ಬರೇ
ಮಾನವೀಯತೆ ಮರೆತವರು ಎಲ್ಲ

ಅಮಾನವೀಯರು!


ಡಾ.ಡೋ.ನಾ.ವೆಂಕಟೇಶ

7 thoughts on “ಡಾ.ಡೋ.ನಾ.ವೆಂಕಟೇಶ ಅವರ ಕವಿತೆ-ಅಮಾನವೀಯರು

  1. ಪರಮಪೂಜ್ಯ ಭೀಷ್ಮ ಪಿತಾಮಹರ ದಿವ್ಯವಾದ ಜೀವನ ಸಾರಾಂಶವನ್ನು
    ಅತಿ ಸುಂದರವಾಗಿ ಬರೆದ ನಿಮ್ಮ ಈ
    “ಅಮಾನವೀಯರು” ಕವಿತೆ ಮಾನವ
    ಕುಲಕ್ಕೆ ಅಮೂಲ್ಯವಾದ ಕೊಡಗೆ.
    ಧನ್ಯವಾದಗಳು ವೆಂಕಣ್ಣ.

Leave a Reply

Back To Top