ಸಮಾಜದ ಶಕ್ತಿ ಹೆಣ್ಣು-ಡಾ.ಸುಮತಿ ಪಿ

ಹೆಣ್ಣು ಆದಿಮಾಯೆ, ಜಗನ್ಮಾತೆ, ದೇವಿ ಸ್ವರೂಪಿಣಿಯೆಂದಿದ್ದಾರೆ ಹಿರಿಯರು. ಹೆಣ್ಣನ್ನು ಕ್ಷಮಯಾಧರಿತ್ರಿ,ಮಹಾಮಾತೆ, ಸೌಭಾಗ್ಯಲಕ್ಷ್ಮಿ,ಸಂಸ್ಕಾರದ ರಾಯಭಾರಿ,ಒಲಿದರೆ ನಾರಿ,ಮುನಿದರೆ ಮಾರಿ ಎಂದೆಲ್ಲ ಹೇಳುತ್ತಾರೆ.
ಜಗಜ್ಜನನಿ ಮಾತೆ ಅವಳೇ ಸೃಷ್ಟಿಕರ್ತೆ ಎಂದು ನಂಬಿದವರು ನಾವು. ಎಲ್ಲಾ ಜೀವಿ ಸಂಕುಲವನ್ನು ಪ್ರೀತಿಸುವ ,ರಕ್ಷಿಸುವ,ಶಿಕ್ಷಿಸುವ,ಪಾಲಿಸುವ ಹೊಣಿಗಾರಿಕೆ ನಿಭಾಯಿಸುವುದಕ್ಕಾಗಿ ಕಾಲಕಾಲಕ್ಕೆ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾಳೆ.ಅಂತೆಯೆ ಅವಳನ್ನು ವೈವಿಧ್ಯ ರೂಪದಲ್ಲಿ ನಾವು ಪೂಜಿಸುತ್ತೇವೆ, ಆರಾಧಿಸುತ್ತೇವೆ.
ಇಂಥಹ ಪೂಜ್ಯನೀಯವಾದ ಸ್ಥಾನದಲ್ಲಿ ಇರಿಸಿದ್ದಾರೆ ಹೆಣ್ಣನ್ನು.ಕೇವಲ ಸ್ಥಾನವನ್ನು ಅಲಂಕರಿಸುವುದರಲ್ಲಿ ಹಿರಿತನ ವಿಲ್ಲ.ಆ ಸ್ಥಾನದಲ್ಲಿ ಕುಳಿತು ತನ್ನ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವುದರಲ್ಲಿದೆ ಮಹಿಳೆಯರ ಹಿರಿತನ.

ಇಂದು ಮಾರ್ಚ್  ಎಂಟು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಾವು ಆಚರಿಸುತ್ತಿದ್ದೇವೆ.
ಅಂತರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸುವುದು ಯಾಕಾಗಿ ? ಅದರಿಂದ ಆಗುವ ಪ್ರಯೋಜನಗಳಾದರು ಏನು? ಎಂಬ ಪ್ರಶ್ನೆಗೆ ನಮಗೆ ಸಿಗುವ ಉತ್ತರ ಇಷ್ಟೇ. ಸಮಾಜ  ಕಾಳಜಿ ವಹಿಸಬೇಕಾದ ಅಥವಾ ಗಮನಿಸಬೇಕಾದ ವಿಷಯಗಳ ಬಗ್ಗೆ ಶಿಕ್ಷಣವನ್ನು ಅಥವಾ ಅರಿವನ್ನು ನೀಡುವುದು.
ಈ ನಿಟ್ಟಿನಲ್ಲಿ ನಾವೇನು ಮಾಡುತ್ತೇವೆ.ಒಂದಿಷ್ಟು ಸಾಧನೆ ಮಾಡಿದ ಮಹಿಳೆಯರನ್ನು(ಬೆಳಕಿಗೆ ಬಂದವರನ್ನು,ಪ್ರಚಾರದಲ್ಲಿರುವವರನ್ನು )ಕರೆದು ,ಸಾಧನೆಯನ್ನು ಹೊಗಳಿ , ಸನ್ಮಾನಮಾಡಿ  ಮಹಿಳಾ ದಿನಾಚರಣೆ ಆಚರಿಸುತ್ತೇವೆ.ಇಲ್ಲಿ ಇನ್ನಷ್ಟು ಸಾಧಕರಿಗೆ ಪ್ರೇರಣೆಯಾಗುವ ಆಶಯ.ಇಲ್ಲಿಗೆ ಇದು ಮುಗಿಯಬಾರದು.ಸನ್ಮಾನ ಸ್ವೀಕರಿಸಿದ ಮಹಿಳೆ ಮುಂದೆಂದೂ ಆ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡರೆ ಮಾತ್ರ ಸನ್ಮಾನಕ್ಕೆ ಒಂದು ಗೌರವ, ಅರ್ಥ ಬರುತ್ತದೆ.
ಇನ್ನು ಈ ಮಹಿಳಾ ದಿನಾಚರಣೆ
ಪ್ರತಿ ವರ್ಷ ವಿಶಿಷ್ಟವಾದ  ಧ್ಯೇಯೋದ್ದೇಶದೊಂದಿಗೆ ಆಚರಿಸಲ್ಪಡುತ್ತದೆ .ಅಂತೆಯೇ 2024 ನೇ ವರ್ಷದ ಅಂದರೆ ಪ್ರಸಕ್ತ ವರ್ಷ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು” ಮಹಿಳೆಯರಿಗೆ ಹೂಡಿಕೆ -ಪ್ರಗತಿಯನ್ನು ವೇಗಗೊಳಿಸಿ”ಎಂಬ ಧ್ಯೇಯವಾಕ್ಯ.ಜೊತೆಗೆ “inspire- inclusion ” ಅಂದರೆ ಮಹಿಳೆ ಯಾರನ್ನು ಅರ್ಥೈಸಿಕೊಂಡು  ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸಬೇಕು.ಈ ನಿಟ್ಟಿನಲ್ಲಿ ಬಹಳಷ್ಟು ಪ್ರಯತ್ನಗಳು, ಕಾನೂನುಗಳು,ಕಾರ್ಯಕ್ರಮಗಳು ನಡೆಯುತ್ತಿರುವುದು ಮೆಚ್ಚತಕ್ಕಂತದ್ದು.ಮಹಿಳೆ ಇಂದು ಎಲ್ಲ ವಿಧದಲ್ಲೂ ಸಬಲಳಾಗಬೇಕೆಂಬ ಆಶಯದೊಂದಿಗೆ ಮಹಿಳಾ ಸಬಲೀಕರಣದ ಕೂಗು ಕೇಳಿ ಬರುತ್ತಿದೆ.ಮಹಿಳೆ ಇವತ್ತು ಖಂಡಿತಾ ಅಬಲೆಯಲ್ಲ .ಸಬಲಳಾಗಿದ್ದಾಳೆ ,ಆಗುತ್ತಿದ್ದಾಳೆ ಇದರಲ್ಲಿ ಎರಡು ಮಾತಿಲ್ಲ.
ಆದರೆ ಇಲ್ಲಿ ಗಮನಿಸಬೇಕಾದ ಒಂದಷ್ಟು ವಿಚಾರಗಳಿವೆ ಅಂತ ನನಗನ್ನಿಸುತ್ತಿದೆ.ಹಿಂದೆ ಎಲ್ಲ ಮಹಿಳೆಯರು ಅಡಿಗೆ ಮನೆಯ ಮೂದೇವಿಯಾಗಿದ್ದಾಗ “ಒಬ್ಬ ಯಶಸ್ವಿ ಪುರುಷನ ಹಿಂದೆ ಸ್ತ್ರೀ ಇರುತ್ತಾಳೆ”ಎಂದಿತ್ತು.ಆಗ ಮಹಿಳೆ ಮನೆಗಷ್ಟೇ ಸೀಮಿತವಾಗಿದ್ದರೂ ಸಹ ಮನೆಯ ಪುರುಷರ ಯಶಸ್ಸಿನ ಹೊಣೆಗಾರಿಕೆ ಅವಳು ಹೊತ್ತಿದ್ದಳೆಂದೇ ಅರ್ಥ.ಇಂದು ಬದಲಾವಣೆಯಾಗಿದೆ. ಮಹಿಳೆ ಮನೆಗಷ್ಟೇ ಸೀಮಿತ ಅಲ್ಲ.”ಮನೆಯ ಮೂದೇವಿಯಾಗಿರದೇ ಆರ್ಯವರ್ತದ ಮಹಾದೇವಿಯಂತಾಗಿದ್ದಾಳೆ” ಹಾಗಾಗಿ ಇಲ್ಲಿ ಮಹಿಳೆಯ ಯಶಸ್ಸಿನಲ್ಲಿ ಮನೆಯ ಪುರುಷರ ಹೊಣೆಗಾರಿಕೆ ಹಿರಿದಾಗಿದೆ.”ಇಂದು ಯಶಸ್ವಿ ಮಹಿಳೆಯ ಹಿಂದೆ ಪುರುಷನಿರುತ್ತಾನೆ”ಎಂದು ಬದಲಿಸಬೇಕಾಗಿದೆ.
ಸ್ತ್ರೀ ಸಮಾನತೆಯ ಬಗ್ಗೆ ಅನೇಕ ವರುಷಗಳಿಂದ ಹೋರಾಟ ನಡೆಯುತ್ತಾ ಬಂದು,ಇಂದು ಸ್ತ್ರೀ -ಪುರುಷರು ಸಮಾನರು ಎಂಬ ಸ್ಥಿತಿ ತಲುಪುವಂತಾಗಿದೆ.ಸಾಮಾಜಿಕವಾಗಿ, ರಾಜಕೀಯವಾಗಿ,ಆಡಳಿತದಲ್ಲಿ ಎಲ್ಲಾ ರೀತಿಯಲ್ಲೂ ಮುಖ್ಯವಾಗಿ ಆರ್ಥಿಕವಾಗಿ ಸ್ವತಂತ್ರಳು ಎಂದು ಹೇಳಬಹುದೇನೊ .ಆದರೆ ಸ್ವಾಭಿಮಾನದ ಬದುಕು ಸಿಕ್ಕಿದೆಯೇ? ಸಹಜವಾಗಿ ಬದುಕುವ ಸ್ವಾತಂತ್ರ್ಯ ಬೇಕು ಎಂದಾಗ ಅವಳ ಹೊಣೆಗಾರಿಕೆ ನಿಭಾಯಿಸಲು ಸಾಧ್ಯವಾಗುತ್ತಿದೆಯೇ ಇದು ಚಿಂತಿಸಬೇಕಾದ ವಿಚಾರ.

ನನ್ನ ದೃಷ್ಟಿಕೋನದಲ್ಲಿ ಮಹಿಳೆ ಪುರುಷನಿಗೆ ಸಮಾನ ಮಾತ್ರವಲ್ಲ,ವಿಶಿಷ್ಟಳು ಕೂಡ.ಒಂದು ದಾಂಪತ್ಯಅಥವಾ ಕುಟುಂಬ ಸರಿದೂಗಿಸಿಕೊಂಡು ಹೋಗಬೇಕಾದರೆ,ಗಂಡ- ಹೆಂಡತಿ ಜೋಡೆತ್ತುಗಳಾಗಿ  ಸಮಾನ ಮನಸ್ಸಿನಿಂದ ಸಾಗಬೇಕು .ಇದೇ ರೀತಿ ಸಮಾಜದ ವಿಚಾರದಲ್ಲೂ ಸ್ತ್ರೀ-ಪುರುಷರ ಪರಸ್ಪರ ಹೊಂದಾಣಿಕೆ ಪ್ರಗತಿಗೆ ಪೂರಕವಾಗುತ್ತದೆ.

 ಈ ದಿನ ಮಹಿಳೆಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಕ್ಷೇತ್ರಗಳಲ್ಲಿನ ಅವರ ಸಾಧನೆ, ಸಮಾಜಕ್ಕೆ ಅವರ ಕೊಡುಗೆಗಳನ್ನು ಸಂಭ್ರಮಿಸುವ ದಿನ
ಜೊತೆಗೆ ಮಹಿಳೆಯ ಹೊಣೆಗಾರಿಕೆಯನ್ನೂ ಕೂಡ ಎಚ್ಚರಿಸುವಂತಿರಬೇಕು.ಮಹಿಳೆ ತನ್ನ ಕರ್ತವ್ಯ ಬದ್ಧತೆ ಅರಿಯುವಂತೆ ಇರಬೇಕು.ಲಿಂಗ ಆಧಾರಿತ ಹಿಂಸೆ ಮತ್ತು ತಾರತಮ್ಯದಿಂದ ಸವಾಲುಗಳು ಎದುರಾಗುತ್ತವೆ.ಈ ನಿಟ್ಟಿನಲ್ಲಿ ಮಹಿಳೆಯರ ಧ್ವನಿಯನ್ನು ವರ್ಧಿಸಲು ಮತ್ತು ಜಾಗತಿಕವಾಗಿ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ
ಮಹಿಳೆಯರು ವಹಿಸುವ ಅಮೂಲ್ಯವಾದ ಪಾತ್ರಗಳನ್ನು ಮತ್ತು ಸಮಾಜದ ಮೇಲೆ ಆಗುವ ಅದರ ಪರಿಣಾಮಗಳ ಬಗ್ಗೆ ಚಿಂತಿಸಬೇಕಾಗಿದೆ.ಎಲ್ಲ ಕ್ಷೇತ್ರಗಳಲ್ಲಿ ಮಹಿಳೆ ಉನ್ನತ ಸ್ಥಾನವನ್ನು ಅಲಂಕರಿಸಿರುವುದು ನಿಜವಾದರೂ ವಸ್ತುಸ್ಥಿತಿ ಹೇಗಿದೆ?
ಮಹಿಳೆಯರು ಇದುವರೆಗೆ ಸಾಧಿಸಿದ್ದೇನು? ಸಾಧಿಸಿರಬೇಕಾಗಿರುವುದೇನು,? ಸಾಧಿಸಲು ಹೊರಟಾಗ ಎದುರಾಗುವ ಸವಾಲುಗಳೇನು?
ಈ ಎಲ್ಲ ವಿಚಾರಗಳ ಪುನರ್ಮನನ ಮಾಡಬೇಕಾಗಿದೆ.

ಮಹಿಳೆ ಆರ್ಥಿಕವಾಗಿ, ಸಾಮಾಜಿಕವಾಗಿ ,ಔದ್ಯೋಗಿಕವಾಗಿ ಸ್ವಾವಲಂಬಿಯಾದರೆ ಅದನ್ನು ಸಬಲೀಕರಣ ಎಂದು ಹೇಳಲು ಸಾಧ್ಯವಿಲ್ಲ .ಸಬಲೀಕರಣವೆಂದರೆ
ಸರಿ ತಪ್ಪುಗಳನ್ನು ಅರ್ಥ ಮಾಡಿಕೊಂಡು, ವೈಯಕ್ತಿಕವಾಗಿ ಹಾಗೂ ಸಾಮಾಜಿಕ ಜೀವನದಲ್ಲಿ ಒಳಿತಾಗುವ ರೀತಿಯಲ್ಲಿ ಸರಿಯಾದ ಮಾರ್ಗದಲ್ಲಿ ನಡೆಯುವುದಾಗಿದೆ.

ಆದರೆ ಸ್ವಾತಂತ್ರ್ಯ,ಸಬಲೀಕರಣದ ಹೆಸರಿನಲ್ಲಿ ಇವತ್ತು ಕೆಲವು ಮನೆಗಳಲ್ಲಿ ಮಕ್ಕಳಿಗೆ ಒಂದು ಹೊತ್ತಿನ ಊಟವನ್ನೂ ಮಾಡಿ ಹಾಕಲಾಗದೆ, ನಿರ್ಲಕ್ಷ ಮಾಡಿ ಸಮಾಜ ಸೇವೆಗೆ ತೊಡಗಿಸಿಕೊಳ್ಳುತ್ತಿರುವ ಕೆಲವೊಂದು ಸನ್ನಿವೇಶಗಳು ನಮಗೆ ಕಾಣಸಿಗುತ್ತವೆ.ಇದು ಸಬಲೀಕರಣವಲ್ಲ .ಮಹಿಳೆ ನಿರ್ವಹಿಸಬೇಕಾದ ಜವಾಬ್ದಾರಿ ಜೀವನ ರೂಪಿಸುವ ಜವಾಬ್ದಾರಿ. ಮೊದಲು ತನ್ನ ಕುಟುಂಬವನ್ನು ಚೆನ್ನಾಗಿಡಲು ಪ್ರಯತ್ನಿಸಬೇಕು. ಮತ್ತು ಸಮಾಜ ಸುಧಾರಣೆಯ ಸಮಾಜ ಸೇವೆಗೆ ತೊಡಗಿಸಿಕೊಳ್ಳಬೇಕು.ಇದು ನಿಜವಾದ ಸಬಲೀಕರಣ.
ಇಂದು ಸಮಾಜದಲ್ಲಿ ವಿಚ್ಛೇದನಗಳ ಸಂಖ್ಯೆ ಜಾಸ್ತಿ ಆಗುತ್ತಾ ಇರುವುದನ್ನು ಕಾಣುತ್ತೇವೆ. ಇದು ಸಬಲೀಕರಣವಲ್ಲ ಅಥವಾ ಸ್ತ್ರೀ ಸ್ವಾತಂತ್ರ್ಯದ ಸಂಕೇತವಲ್ಲ.
ಇವತ್ತು ಎಷ್ಟೋ ಮನೆಗಳಲ್ಲಿ ಮಕ್ಕಳ ಪರಿಸ್ಥಿತಿ ಚಿಂತಾಜನಕ.ತಂದೆಯಿದ್ದರೆ ತಾಯಿಯಿಲ್ಲ,ತಾಯಿಯಿದ್ದರೆ ತಂದೆಯಿಲ್ಲ.ಬೇಕಾದ ಪ್ರೀತಿ ಸಿಗುವುದಿಲ್ಲ.ಪ್ರೀತಿಯನ್ನು ಅರಸಿ ಅಲೆದು ಹಾಳು ದಾರಿ ತುಳಿಯುವ ಪರಿಸ್ಥಿತಿ.ಮಕ್ಕಳು
ತಮ್ಮ ಸ್ವಾತಂತ್ರ್ಯವನ್ನು  ದುರ್ಬಳಕೆ ಮಾಡುತ್ತಿರುವಂತಹ,ತಪ್ಪು ದಾರಿ ಹಿಡಿಯುವಂತಹ ಅನೇಕ ಘಟನೆಗಳ ಬಗ್ಗೆಯೂ ನಾವು ಕೇಳುತ್ತೇವೆ.ಇದು ನಡೆಯಬಾರದು.

ಹೆಣ್ಣು ಮಕ್ಕಳಿಲ್ಲದೆ ಜೀವನವಿಲ್ಲ ಇದು ಎಲ್ಲರೂ ಒಪ್ಪಿಕೊಳ್ಳಬೇಕಾದ ವಿಚಾರ. ಹೆಣ್ಣು ಮನೆಯಲ್ಲಿ ಅಕ್ಕನಾಗಿಯೂ ,ತಾಯಿಯಾಗಿಯೂ ಹೆಂಡತಿಯಾಗಿಯೂ ಕರ್ತವ್ಯ ನಿಭಾಯಿಸುತ್ತಾಳೆ ಹೊರಗಡೆ ಬಂದರೆ ಉತ್ತಮ ಸ್ನೇಹಿತಳಂತೆ ವ್ಯವಹರಿಸುತ್ತಾಳೆ. ಅದೇ ಉದ್ಯೋಗದ ವಿಷಯಕ್ಕೆ ಬಂದಾಗ ಅಷ್ಟೇ ಪರಿಪೂರ್ಣವಾಗಿ ಕೆಲಸ ಮಾಡುತ್ತಾಳೆ ತನಗೆ ಯಾವುದೇ ಸಮಸ್ಯೆಗಳಿದ್ದರೂ ಸ್ವಾವಲಂಬಿಯಾಗಿ
ನಿಂತು ಕೆಲಸ ಮಾಡುತ್ತಾಳೆ.
ಮಹಿಳೆಯರಿಗೆ ಎಷ್ಟು ಶಿಕ್ಷಣ ಕೊಡುತ್ತೇವೆಯೋ, ಅದನ್ನು ಅವಳು ಸಮಾಜದ ಒಳಿತಿಗಾಗಿ ವಿನಯೋಗಿಸುತ್ತಾಳೆ.
ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಸ್ಥಿತಿಯನ್ನು ಆಸ್ಮಿತೆಯನ್ನು ಬಲಗೊಳಿಸುತ್ತಾ ಗುರಿಯನ್ನು ಈಡೇರಿಸಿಕೊಳ್ಳಲು ಶ್ರಮವಹಿಸಿ ದುಡಿಯುತ್ತಿರುತ್ತಾಳೆ
ಈಗೀಗ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಪುರುಷರಿಗಿಂತ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು  ನಾವು ಮಹಿಳೆಯರು ನಮ್ಮ ಬೆನ್ನು ತಟ್ಟಿಕೊಳ್ಳಬೇಕಾದ ವಿಷಯ.
ಉತ್ತಮ ಶಿಕ್ಷಣವನ್ನು ಪಡೆದ ಮಹಿಳೆಯರಿಗೆ ಆತ್ಮವಿಶ್ವಾಸ ತುಂಬಲು ಅವಕಾಶ ಸಿಗುವಷ್ಟು ಅನಕ್ಷರಸ್ಥ ಗ್ರಾಮೀಣ ಮಹಿಳೆಯರಿಗೆ ದೊರಕತದೆ ಇದ್ದರೂ  ಸಹ ತಮ್ಮ ಇಚ್ಛಾ ಶಕ್ತಿ ಹಾಗೂ ಪ್ರಯತ್ನದಿಂದ ಗ್ರಾಮೀಣ ಮಹಿಳೆಯರೂ ಮುಂದೆ ಬರುತ್ತಾ ಇದ್ದಾರೆ.

ಇಷ್ಟೆಲ್ಲಾ ಸಾಧನೆ ಮಾಡಿದ ಮಹಿಳೆ ಬಹಳ ಮುಖ್ಯವಾಗಿ ಚಿಂತಿಸಬೇಕಾದ ವಿಚಾರ.ತಾಯಿಯೇ ಮೊದಲ ಗುರು ಎಂಬುದನ್ನು ಒಪ್ಪಿರುವಾಗ ಮಕ್ಕಳಲ್ಲಿ ಜೀವನ ಮೌಲ್ಯಗಳನ್ನು ಬಿತ್ತುವ .ತಮ್ಮ ಮಕ್ಕಳು ಜೀವನವನ್ನು ಧೈರ್ಯವಾಗಿ ಎದುರಿಸುವ,ನಮ್ಮ ದೇಶದ ಭವಿಷ್ಯ ರೂಪಿಸುವ ನಮ್ಮ ಮಕ್ಕಳು ದಾರಿ ತಪ್ಪದಂತೆ ಮಾರ್ಗದರ್ಶನ ಮಾಡುವ  
ಹೊಣೆಗಾರಿಕೆಯನ್ನು ಅಗತ್ಯವಾಗಿ ನಿಭಾಯಿಸಬೇಕಾಗಿದೆ.ಈ ನಿಟ್ಟಿನಲ್ಲಿ ಗಂಡಸರ ನೆರವಿನಿಂದ ಒಗ್ಗಟ್ಟಾಗಿ ತಮ್ಮ ಮಕ್ಕಳ ಕಡೆಗೂ ಒಂದಿಷ್ಟು ಗಮನಹರಿಸುವಂತೆ ಆಗಬೇಕು.ಇದಕ್ಕೆ ಹೆಣ್ಣಿಗೆ ಸಾಕಷ್ಟು ಸಮಯ, ಅವಕಾಶಗಳು ಸಿಗುವಂತಾಗಬೇಕು. ಇದಕ್ಕೆ ಹೆಣ್ಣನ್ನು ವಿಶಿಷ್ಟ ಎನ್ನುವುದು. ಪ್ರೀತಿ,ಮಮತೆಯ ಪ್ರತೀಕವಾದ ತಾಯಿ ,ಸಂಸ್ಕಾರದ ಪ್ರತಿರೂಪವಾಗಬೇಕು.ಇತರರಲ್ಲಿ ಸಂಸ್ಕಾರ ಮೈಗೂಡಿಸಲು, ತಿಳಿಹೇಳಲು ಬೇಕಾದ ನೈತಿಕತೆಯನ್ನು ಮಹಿಳೆ ತಾನು ಮೈಗೂಡಿಸಿಕೊಂಡಾಗ ಮಾತ್ರ .ಸ್ತ್ರೀ ಸಮಾಜದ ಶಕ್ತಿಯಾಗುತ್ತಾಳೆ.ಎಲ್ಲಿ ಇಂತಹ ಸ್ತ್ರೀಯರು ನೆಲೆಸಿರುತ್ತಾರೋ ಅಲ್ಲಿ ಖಂಡಿತಾ ದೇವ ಸಾನಿಧ್ಯವಾಗುತ್ತದೆ.


Leave a Reply

Back To Top