ಮನೆಯ ನಂದಾದೀಪ ಮಹಿಳೆ-ಪ್ರತಿಮಾ ಕೋಮಾರ ಈರಾಪುರ

ಮಹಿಳಾ ದಿನಾಚರಣೆ ಎಂದಾಕ್ಷಣ
ಮನೆ ಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?

ಎಂಬ ಜಿ .ಎಸ್ .ಶಿವರುದ್ರಪ್ಪರವರ ಸಾಲು ನೆನಪಾಗುತ್ತದೆ.ಮನೆಯ ಅಂಗಳದಲ್ಲಿ ರಂಗೋಲಿ ಮಿನುಗಲು,ಒಳಗಡೆ ದೀಪ ಉರಿಯುತಿರಲು ಅಲ್ಲಿ ಮಹಿಳೆಯ ಉಪಸ್ಥಿತಿ ಕಾಣದಿರದು.ಅಂಗಳದಲ್ಲಿ ಒಂದು ಕಸವಿಲ್ಲ,ಮನೆಯ ಎದುರಿಗೆ ತೊಳೆದ ಬಟ್ಟೆಗಳು ಬಿಸಿಲಿಗೆ ಹಾರಾಡುತ್ತಿವೆ.ಕಾಲ್ಗೆಜ್ಜೆಯ,ಕೈ ಬಳೆಯ ಶಬ್ದ ಕಿವಿಗೆ ತಾಕುತ್ತಿದೆ ಎಂದರೆ ಅದು  ಆ ಮನೆಯ ಶೋಭೆಯ ಸಂಕೇತವಾಗಿದೆ.

    ಸಮಯಕ್ಕೆ ಸರಿಯಾಗಿ ಮನೆಯಲ್ಲಿ ರುಚಿ ರುಚಿಯಾದ ಅಡುಗೆ,ತಿನಿಸು ಸಿದ್ಧವಾಗಿ,ಹೊರಗಡೆ ದುಡಿಯಲು ಹೋಗುವ ಗಂಡ ಸಮಯಕ್ಕೆ ಖುಷಿಯಿಂದಲೇ ಹೋಗುತ್ತಾನೆ,ಮಕ್ಕಳು ಸರಿಯಾದ ಸಮಯಕ್ಕೆ ನಗು ಮೊಗದಿಂದ ಶಿಸ್ತಾಗಿ ಶಾಲೆಗೆ ಹೋಗುತ್ತಾರೆ ಎಂಥಾದರೆ ಆ ಮನೆಯ ಹೆಣ್ಣಿನ ಜವಾಬ್ದಾರಿಯುತ ಕುಟುಂಬ ನಿವ೯ಹಣೆ ಅಥ೯ವಾಗದಿರದು.

   ಗಂಡ ದುಡಿಯದಿದ್ದರೂ,ಅಸಾಹಯಕನಾದರೂ ಸಂಸಾರದ ಬಂಡಿ ಚಲಿಸುತ್ತಲೇ ಇದೆ.ಎಲ್ಲರೂ ಉಂಡು ,ಬಟ್ಟೆ ಬರೆಯೊಂದಿಗೆ ಜೀವನ ನಿರ್ವಹಣೆ ಮಾಡುತ್ತಲೇ ಇದ್ದಾರೆ ಎಂಥಾದರೆ ಆ ಮಹಿಳೆ ಆರ್ಥಿಕತೆಗಾಗಿ ಹೊರಗಡೆಯೂ ಕಷ್ಟಪಟ್ಟು ದುಡಿಯುತ್ತಾಳೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಮನೆಗೆ ಅತಿಥಿಗಳು ,ಸಂಬಂಧಿಕರು ಆಗಾಗ ಬರುತ್ತಾರೆ. ಕಷ್ಟ ಸುಖಗಳಲ್ಲಿ ಪಾಲ್ಗೊಳ್ಳುತ್ತಾರೆ.ಹಬ್ಬ ಹರಿದಿನಗಳ ಸಂಭ್ರಮಾಚರಣೆಗಳು ಮನೆಯಲ್ಲಿ ನಡೆಯುತ್ತಲೇ ಇದೆ ಎಂಥಾದರೆ ಆ ಮನೆಯಲ್ಲಿ ಮಹಿಳೆ ಇದ್ದಾಳೆ ಎಂಥಲೇ ಅರ್ಥ.ಯಾವ ಮನೆಗೆ ಅಸಾಹಯಕರು ,ಭಿಕ್ಷುಕರು ,ಸನ್ಯಾಸಿಗಳು ಇಂದಿಗೂ ಹೋಗುತ್ತಾರೆ ಅಂತಾದರೆ ಅಲ್ಲಿ ನೀಡುವ ,ಪ್ರೀತಿ ತೋರುವ,ಮಾತನಾಡಿಸುವ ಮಹಿಳೆಯು ಇದ್ದಾಳೆ ಎನ್ನುವುದು ಸ್ಪಷ್ಟ.

    ಒಂದು ಮನೆಯ ಮಕ್ಕಳು ಸಂಸ್ಕಾರವಂತರು,ಉತ್ತಮ ಶಿಕ್ಷಣವಂತರು,ಭಾವನಾಪೂರಿತರು, ಇತರರ ಕಷ್ಟಗಳಿಗೆ ಸ್ಪಂದಿಸುವಂತವರು ಎಂತಾದರೆ ಆ ಮಕ್ಕಳ ತಾಯಿಯ ಸ್ಥಾನ ನಿಭಾಯಿಸುವ ಮಹಿಳೆಯು ಸಮಾಜಕ್ಕೆ ನೀಡುತ್ತಿರುವ ಕೊಡುಗೆಯ ಪ್ರಾಮುಖ್ಯತೆಯ ಅರಿವಾಗದಿರದು.

   ಮನೆಯ ಎಲ್ಲಾ ಕೆಲಸಗಳು ಸರಿಯಾದ ಸಮಯಕ್ಕೆ ನಡೆಯುತ್ತಿದೆ.ಮನೆಯ ಹಿರಿಯರು ಸುಖವಾಗಿ ಬದುಕುತ್ತಿದ್ದಾರೆ.ಮನೆಯ ಗಂಡಸರು ಕಾಲಕಾಲಕ್ಕೆ ತಮ್ಮ ಜವಾಬ್ದಾರಿಯನ್ನು ಸರಿಯಾಗಿಯೇ ನಿಭಾಯಿಸುತ್ತಿದ್ದಾರೆ ಎಂಥಾದರೆ ಆ ಮನೆಯ ಮಹಿಳೆ ತನ್ನ ಜೀವನ ನಿರ್ವಹಣೆಯನ್ನು ಅತ್ಯುತ್ತಮವಾಗಿ ಮಾಡುತ್ತಿದ್ದಾಗ ಮಾತ್ರ ಸಾಧ್ಯ.

  ಅಪ್ಪನೇ ಸರ್ವಸ್ಯ.ಅಪ್ಪನಿಗೆ ತುಸು ತೊಂದರೆಯಾದರೂ ಹೃದಯ ಮಿಡಿಯುವ ಮಗಳು,ತನ್ನ ಅಣ್ಣನ ಬಳಿ ಆಗಾಗ ಜಗಳವಾಡುತ್ತಾ,ತಮಾಷೆ ಮಾಡುತ್ತಾ ,ಅಣ್ಣನ ಮಾರ್ಗದರ್ಶವನ್ನು ಸದಾ ಪಡೆಯುತ್ತಾ,ಶಾಲೆಯಲ್ಲಿ ತನ್ನ ಸ್ನೇಹಿತರೊಂದಿಗೆ ಜಗಳವಾಡುವಾಗ ನಾನು ನನ್ನ ಅಣ್ಣನ ಬಳಿ ಅಥವಾ ಅಪ್ಪನ ಬಳಿ ಹೇಳಿ ಕೊಡುತ್ತೇನೆ ನೋಡು ಎನ್ನುತ್ತಾ ಅಣ್ಣ, ಅಪ್ಪನ ಬಗ್ಗೆ ಹೆಮ್ಮೆ ಮತ್ತು ಬಧ್ರತೆಯ ಭಾವ ವ್ಯಕ್ತಪಡಿಸುವ ,ಮನೆಯಲ್ಲಿ ಸದಾ ಎಲ್ಲ ಕಡೆಗೂ ಓಡಾಡಿಕೊಂಡು ತನ್ನದೇ ಜವಾಬ್ದಾರಿಯನ್ನು ನಿಭಾಯಿಸುವ ಮನೆಯಲ್ಲಿ ನಗುವಿನ ಸಾಮ್ರಾಜ್ಯವನ್ನೇ ಕಟ್ಟುವ ಅಪ್ಪ,ಅಣ್ಣ ಎನ್ನುವ ಸ್ಥಾನಕ್ಕೆ ಅರ್ಥ ಕಲ್ಪಿಸಿಕೊಡುವ ಮಹಿಳೆಯ ಸ್ಥಾನಕ್ಕೆ ಸರಿ ಸಮವಾದುದಾದರೂ ಯಾವುದು?

   ಮನೆಯಲ್ಲಿ ಪದೇ ಪದೇ ಎಲ್ಲ ವಿಷಯದ ಕುರಿತು ಹೇಳುತ್ತಾ,ನೆನಪಿಸುತ್ತಾ, ತನ್ನದೇ ಸಾವಿರ ಕೆಲಸದ ಹೊರೆ ಇದ್ದರೂ ಮನೆಯ ಎಲ್ಲರ ಕೆಲಸಗಳಲ್ಲೂ ಸಹಾಯ ಮಾಡುತ್ತಾ ಬೆನ್ನು ಬಾಗಿದರೂ,ಸೊಂಟ ನೊಂದರೂ,ದೇಹ ದಣಿದರೂ,ಮನಸ್ಸು ಸೋತರೂ ಯಾವುದನ್ನು ತೋಪ೯ಡಿಸದೇ ತನ್ನ ಆಸೆ,ಬಯಕೆಗಳನ್ನು ಬಲಿಕೊಟ್ಟು ತನ್ನ ಮನೆಯವರ ಖುಷಿಯನ್ನು ತನ್ನದೆಂದು ಸಂಭ್ರಮಿಸುವ ಇಳೆಯಂಥವಳೆಂದರೆ ಅವಳು ಹೆಂಡತಿ ಹಾಗೂ ತಾಯಿಯ ಪಾತ್ರವನ್ನು  ನಿಭಾಯಿಸುವ ಮಹಿಳೆ ಮಾತ್ರ.

   ಉತ್ತಮ ಶಿಕ್ಷಣವನ್ನು ಹೊಂದಿ ಹೊರಗಡೆ ಉದ್ಯೋಗಕ್ಕೆ ಹೋಗುವ ಅಥವಾ ಇನ್ನಾವುದೇ ಸಾವ೯ಜನಿಕ ಕೆಲಸದಲ್ಲಿ ತೊಡಗಿಸಿಕೊಂಡರೂ,ಸಾಧನೆಯ ಬೇರೆ ಬೇರೆ ಕ್ಷೇತ್ರಗಳನ್ನು ತುಳಿದರೂ ಮನೆ ಹಾಗೂ ಮನೆಯ ಹೊರಗಡೆ ಎರಡನ್ನು ತುಸುವು ಲೋಪವಿಲ್ಲದೇ,ಸರಿಯಾಗಿ ಬೆಲೆನ್ಸ ಮಾಡುವ ಸಾಮಥ್ರ್ಯ ವಿರುವುದು ಮಹಿಳೆಗೆ ದೇವರು ಕೊಟ್ಟ ವರ.

   ಕೇವಲ 10% ಮಹಿಳೆಯರು ಇದಕ್ಕೆ ಅಪವಾದ ಎಂಬಂತೆ ಇದ್ದರೂ 90% ಮಹಿಳೆಯರೂ ಸವ೯ಸ್ವವನ್ನು ಮನೆಗಾಗಿ,ತನ್ನವರಿಗಾಗಿ ಮುಡಿಪಾಗಿಡುವವರು.ಹಾಗಿದ್ದಾಗಿಯೂ ಹೆಣ್ಣಿನ ಮೇಲೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯಗಳು
ಇಂದಿಗೂ ನಡೆಯುತ್ತಲೇ ಇರುವುದನ್ನು ನೋಡಿದರೆ ಬಹಳ ಬೇಸರವಾಗುವುದಂತೂ ಸತ್ಯ.ಕುಟುಂಬದ ನಿವ೯ಹಣೆಗಾಗಿ ತನ್ನನ್ನೇ ಮುಡುಪಾಗಿಟ್ಟರೂ ಬೇರೆ ಬೇರೆ ಕಾರಣಕ್ಕೆ ಪ್ರೀತಿ,ಗೌರವದ ಬದಲಾಗಿ ಹಿಂಸೆಗಳು ನಡೆಯುತ್ತಿರುವುದನ್ನು ಗಮನಿಸಿದರೆ ಮಹಿಳೆಯ ಪ್ರಮುಖ್ಯತೆ ಅಥ೯ವಾಗಿಲ್ಲವೇನೋ ಅನ್ನಿಸದಿರದು.

        ಶೋಷಣೆಯ ವಿರುದ್ಧ ಹೋರಾಡಲು,ಹೆಚ್ಚುವರಿ ಸಂಬಳ ಹಾಗೂ ಮತಚಲಾವಣೆಯ ಹಕ್ಕಿಗಾಗಿ ಬಂದ ಈ ಮಾಚ್೯ 8 ವಿಶ್ವ ಮಹಿಳಾ ದಿನಾಚರಣೆಯ ಎಲ್ಲಾ ಉದ್ದೇಶಗಳು ಇನ್ನು ಇಡೇರಿಲ್ಲ.ದೈಹಿಕ ಅಸಮತೆಯ ಹೊರತಾಗಿ ಬೇರೆಲ್ಲದರಲ್ಲೂ ಪುರುಷನಿಗೆ ಸಮಾನವಾಗಿದ್ದರೂ ಇಂದಿಗೂ ಅವಳನ್ನು ಕಾಮದ ಹೆಸರಲ್ಲಿ,ಹಣಕ್ಕಾಗಿ ಇನ್ನೂ ಅನೇಕ ಕಾರಣಕ್ಕೆ ಹಿಂಸಿಸುತ್ತಲೇ ಇದ್ದಾರೆ.

  ತನ್ನ ಮನೆಯಲ್ಲಿ ತಂಗಿ,ತಾಯಿ ಇದ್ದಾಗಿಯೂ ಬೇರೆಯವರನ್ನು ಮಾತ್ರ ಕೆಟ್ಟ ಭಾವನೆಯಿಂದ ನೋಡುವ ಪುರುಷ ಸಮಾಜ ಇಂದಿಗೂ ಇರುವುದು ತುಂಬಾ ಬೇಸರದ ಸಂಗತಿ.ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:”
ಎಲ್ಲಿ ಸ್ತ್ರೀ ಯನ್ನು ಪೂಜಿಸಲಾಗುವುದೋ ಅಲ್ಲಿ ದೇವತೆಗಳು ನೆಲೆಸುತ್ತಾರೆ ಎಂಬ ಮಾತು ಸಭೆಯಲ್ಲಿ,ಬಾಯಲ್ಲಿ ಜೊತೆಗೆ ಪುಸ್ತಕಕ್ಕೆ ಮಾತ್ರ ಸೀಮಿತವಾಗಿದೆ.

   ಈ ಮಹಿಳಾ ದಿನಾಚರಣೆ ಆಚರಿಸುತ್ತಿರುವ ಸಂದಭ೯ದಲ್ಲಾದರೂ ಮಹಿಳೆಯ ಮಹತ್ವ ಅರಿವಾಗಲಿ.ಆಕೆಯು ಮನೆಯ ಕತ್ತಲನ್ನು, ಸಮಾಜದ ಅಂಧಕಾರವನ್ನು ಅಳಿಸುವ ನಂದಾದೀಪ ಎಂಬ ತಿಳುವಳಿಕೆ ಎಲ್ಲರಲ್ಲೂ ಮೂಡಲಿ.


One thought on “ಮನೆಯ ನಂದಾದೀಪ ಮಹಿಳೆ-ಪ್ರತಿಮಾ ಕೋಮಾರ ಈರಾಪುರ

  1. ಪ್ರಸ್ತುತ ಲೇಖನ ಚೆನ್ನಾಗಿ ಮೂಡಿಬಂದಿದೆ….ಪ್ರಸ್ತುತಿಗೆ ಹಾರೈಕೆ ಇದೆ…ಶುಭಾಶಯ.

Leave a Reply

Back To Top