ಕಾವ್ಯ ಸಂಗಾತಿ
ಅನಸೂಯ ಜಹಗೀರದಾರ
ಗಜಲ್
ತೊಗಲಿಗಾಗಿ ಬಹು ಬೇಡಿಕೆಯಿದೆ
ದೂರುವುದು ಯಾರನ್ನು
ಮದಾಂಧ ಮೋಹಗಳ ಖರೀದಿಯಿದೆ
ಬಯಸುವುದು ಯಾರನ್ನು
ಸುತ್ತಲೂ ರುಧಿರ ಹೀರುವವರ ಏರು
ಅಟ್ಟಹಾಸ ನಗೆಯಿದೆ
ನೆಮ್ಮದಿ ಬಯಸಿದ ಹನಿ ಪ್ರೀತಿಯಿದೆ
ಕೇಳುವುದು ಯಾರನ್ನು
ಅವರವರ ಮೂಗಿನ ನೇರ ಅವರವರದೇ
ದರ್ಬಾರಿನ ನಿಯಮವಿದೆ
ಇತಿಹಾಸದ ತುಂಬಾ ಕೆನ್ನನ ಕೇಕೇಯಿದೆ
ಕಾಣುವುದು ಯಾರನ್ನು
ಹಿಚುಕಿದಷ್ಟು ಖುಶಿ ಮುಗುಚಿದಷ್ಟೂ
ವಿಕೃತ ಸುಖದ ಹರಿದಾಟವಿದೆ
ಇಂಥದ್ದೇ ದೀಕ್ಷೆಯಲಿ ಕಾಲ ಗತಿಸಿದೆ
ಹುಡುಕುವುದು ಯಾರನ್ನು
ಸೌಂದರ್ಯ ಬಣ್ಣಿಸಿ ಎದೆ ಕನ್ನ ಹಾಕಿ
ಕೊಂದವರೆಷ್ಟೋ ದುನಿಯಾದಲಿ
ರಕುತ ಕಣ್ಣೀರಿನ ಕಾಲುವೆ ಹರಿದಿದೆ
ಬೇಡುವುದು ಯಾರನ್ನು
ಅವನಿಗೆಲ್ಲಿ ಕರುಣೆ ನೆತ್ತರ ಬಸಿಯಲೆಂದೇ
ರೂಪಿಸಿದ ಇವರನು ಅನು
ಸುಂದರ ಸಾಲಭಂಜಿಕೆಗೆ ಮಾತೆಲ್ಲಿದೆ
ಕಾಯುವುದು ಯಾರನ್ನು
ಅನಸೂಯ ಜಹಗೀರದಾರ