ಮಹಿಳಾ ಸಂಗಾತಿ
ವೀಣಾ ಹೇಮಂತ್ ಗೌಡ ಪಾಟೀಲ್
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
(ಮಾರ್ಚ್ 8),ಯ ಒಂದು ಝಲಕ
ಅದೊಂದು ಬೃಹತ್ತಾದ ವೇದಿಕೆ. ದೊಡ್ಡ ಮಠದ ಸ್ವಾಮೀಜಿಗಳು, ಆ ಭಾಗದ ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರು, ಪುರಸಭೆ ಅಧ್ಯಕ್ಷರು ಮತ್ತಿತರ ಘಟಾನುಘಟಿ ರಾಜಕಾರಣಿಗಳು ತಮಗೆ ಮೀಸಲಾಗಿದ್ದ ಕುರ್ಚಿಗಳಲ್ಲಿ ಆಸೀನರಾಗಿದ್ದರು. ಅದು ಸರ್ಕಾರವು ಪ್ರತಿ ವರ್ಷ ನಡೆಸುವ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವಾಗಿತ್ತು.
ಎಂದಿನಂತೆ ಕಾರ್ಯಕ್ರಮ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಸ್ವಾಮೀಜಿಯವರ ಅಮೃತ ಹಸ್ತದಿಂದ ಕಾರ್ಯಕ್ರಮದ ಉದ್ಘಾಟನೆಯ ನಂತರ ಉದ್ಘಾಟನಾ ಭಾಷಣವನ್ನು ಮಾಡಿದ ಅವರು ಹೆಣ್ಣು ಮಕ್ಕಳ ವ್ಯಕ್ತಿತ್ವವನ್ನು ಘನತೆಯನ್ನು ನಮ್ಮ ಹಲವಾರು ಪುಣ್ಯ ಸ್ತ್ರೀಯರ ಕುರಿತಾಗಿ ವಿವರಗಳ ಸಮೇತ ಹೇಳಿದರು. ನಂತರ ಮುಖ್ಯ ಅತಿಥಿಗಳ ಭಾಷಣ. ಮಹಿಳಾ ಸಮಾನತೆ ಕುರಿತಾಗಿ ಉಪನ್ಯಾಸ ನೀಡಿದ ಮುಖ್ಯ ಅತಿಥಿಗಳು ಅವರ ಉಪನ್ಯಾಸವನ್ನು ಮುಗಿಸುವ ಹೊತ್ತಿಗೆ ಸುಮಾರು ಒಂದು ಗಂಟೆ ಕಳೆದು ಹೋಗಿತ್ತು. ಅದಾದ ನಂತರ ಆ ಭವ್ಯವೇದಿಕೆಯಲ್ಲಿ ಆ ವರ್ಷದ ಮಹಿಳಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ.
ಅಂತೆಯೇ ಆ ವರ್ಷ ಸನ್ಮಾನಿಸಿಕೊಳ್ಳಲಿರುವ ಮಹಿಳೆಯರನ್ನು ವೇದಿಕೆಯ ಮೇಲೆ ಕರೆಯ ತೊಡಗಿದರು. ಅವರ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜನರಿಗೆ ಒದಗಿಸಿದರು.
ಈ ಬಾರಿ ಮಹಿಳಾ ದಿನಾಚರಣೆಯಂದು ಸನ್ಮಾನಗೊಳ್ಳಲಿರುವ ನನ್ನನ್ನು ವೇದಿಕೆಗೆ ಕರೆದಾಗ ಅತ್ಯಂತ ಪುಳಕದಿಂದ ಹೋಗಿ ಕುರ್ಚಿಯ ಮೇಲೆ ಕುಳಿತುಕೊಂಡೆ. ಶಾಲು ಹೊದೆಸಿ ಹಾರ ಹಾಕಿ ಸ್ಮರಣಿಕೆಯನ್ನು ನೀಡಿ ಸುತ್ತಲು ನಿಂತು ಪುಷ್ಪವೃಷ್ಠಿಗರೆಯುತ್ತಿರಲು ಮಂಗಳವಾದ್ಯಗಳು ಮೊಳಗಿದವು. ಅಷ್ಟರಲ್ಲಿ ಯಾರೋ ನನ್ನ ಕೈ ಹಿಡಿದು ಜಗ್ಗಿದಂತಾಗಲು ಕಣ್ತೆರೆದು ನೋಡಿದರೆ ನಾನಿನ್ನು ಹಾಸಿಗೆಯ ಮೇಲೆ ಮಲಗಿದ್ದೆ. ಒಂದು ಕ್ಷಣ ಅಯೋಮಯವೆನಿಸಿತ್ತು. ನನ್ನ ಮೊಬೈಲ್ ಫೋನಿನ ಕರೆಗಂಟೆ ಮಂಗಳವಾದ್ಯದಂತೆ ಗೋಚರಿಸಿದರೆ ಜಗ್ಗಿದ್ದು ಸಾಕ್ಷಾತ್ ನನ್ನ ಪತಿದೇವರು. ಕೂಡಲೇ ಗಡಬಡಿಸಿ ನನ್ನ ಮೊಬೈಲನ್ನು ಎತ್ತಿ ಕರೆ ಸ್ವೀಕರಿಸಿದರೆ
ಅತ್ತಲಿಂದ ಕೆಲಸದಾಕೆ ತನ್ನ ಮಗನಿಗೆ ಹುಷಾರಿಲ್ಲವೆಂದೂ,ತಾನು ಕೆಲಸಕ್ಕೆ ಬರಲಾಗುವುದಿಲ್ಲ ಎಂದೂ ಬಡ ಬಡನೆ ಹೇಳಿ ಫೋನು ಇಟ್ಟಳು. ಕನಸಿನಲ್ಲಿ ಸನ್ಮಾನ ಸ್ವೀಕರಿಸುತ್ತಿದ್ದ ನಾನು ರಸಭಂಗವಾದಂತಾಗಿ ಎದ್ದು ಕೂತರೆ ಇಲ್ಲಿ ಇನ್ನೊಂದು ಆಭಾಸ. ಆದರೂ ಅನಿವಾರ್ಯವಾಗಿ ಎದ್ದು ಕುಳಿತು ನಿತ್ಯ ವಿಧಿಗಳನ್ನು ಪೂರೈಸಿ ಚಹಾ ಕುಡಿದು ಕೈಯಲ್ಲಿ ಕಸಬರಿಗೆ ಹಿಡಿದು ಇಡೀ ಮನೆಯ ಕಸವನ್ನು ಗುಡಿಸಲಾರಂಭಿಸಿದೆ. ಕಸ ಗುಡಿಸಿದ ನಂತರ ಬಕೆಟ್ ನಲ್ಲಿ ನೀರು ತಂದು ಫಿನಾಯಿಲ್ ಹಾಕಿ ಮನೆಯ ಮೂಲೆ ಮೂಲೆಯನ್ನು ಉಜ್ಜಿ ಉಜ್ಜಿ ನೆಲ ವರೆಸುವ ಹೊತ್ತಿಗೆ ಮುಂಜಾನೆಯ ಉಪಹಾರದ ಸಮಯ ಮೀರಿ ಹೋಗಿತ್ತು. ಮೇಲಿನ ತನ್ನ ಕೋಣೆಯಿಂದ ಮಗ ಅಮ್ಮ, ಇವತ್ತಿನ ಟಿಫನ್ ಏನು?? ಎಂಬ ಕೂಗಿಗೆ ‘ನೀನೇ ಬಂದು ಹೋಟೆಲಿನಿಂದ ತಂದು ಕೊಡು’ ಎಂದು ಹೇಳಲಷ್ಟೇ ಸಾಧ್ಯವಾಗಿದ್ದು.
ಕೂಡಲೆ ಕಾರ್ಯ ಪ್ರವೃತ್ತನಾದ ಮಗ ಸ್ನಾನ ಮಾಡಿ ಕೆಳಗಿಳಿದು ಬಂದು ಹೋಟೆಲಿಗೆ ಹೋಗಿ ತಿಂಡಿ ಕಟ್ಟಿಸಿಕೊಂಡು ಬಂದ. ಬಿಸಿ ಬಿಸಿ ಇಡ್ಲಿ, ವಡ ಹೊಟ್ಟೆ ಗಿಳಿದಾಗ ಅಬ್ಬಾ!! ಬಹಳಷ್ಟು ಸಮಾಧಾನವಾಯಿತು. ಮತ್ತೆ ಅಡುಗೆ ಮನೆಗೆ ಹೋಗಿ ಹಿಂದಿನ ದಿನದ ಎಲ್ಲ ಪಾತ್ರಗಳನ್ನು ಹೊರಗೆ ತೆಗೆದುಕೊಂಡು ಹೋಗಿ ಎಲ್ಲವನ್ನು ತಿಕ್ಕಿ, ತೊಳೆದು ಸ್ವಸ್ಥಾನ ಸೇರಿಸುವಷ್ಟರಲ್ಲಿ ಸಾಕಾಗಿ ಹೋಯಿತು. ನಂತರ ಬಟ್ಟೆಯ ಸರದಿ. ಮನೆಯ ಎಲ್ಲಾ ಸದಸ್ಯರ ಬಟ್ಟೆಗಳನ್ನು ನೆನೆ ಹಾಕಿ ಒಗೆದು ಹಿಂಡಿ ಹರವಿದ ನಂತರ ಸ್ನಾನ, ಪೂಜೆ ಪೂರೈಸಿ ಅಡುಗೆ ಮನೆಗೆ ಬಂದರೆ ಹೊಟ್ಟೆ ಸಣ್ಣದಾಗಿ ಚುರುಗುಡುತ್ತಿತ್ತು.
ಪಲ್ಯ, ಕಾಳಿಗೆ ಒಗ್ಗರಣೆ ಹಾಕಿ ಅನ್ನ ಸಾರು ಮಾಡಿ ರೊಟ್ಟಿಗೆ ಹೆಂಚು ಇಟ್ಟು ಎಲ್ಲರಿಗೂ ಬಿಸಿ ಬಿಸಿ ರೊಟ್ಟಿ ಬಡಿದು ಕೊಟ್ಟು ಊಟ ಮಾಡಿ ತುಸು ವಿಶ್ರಾಂತಿ ಪಡೆಯಲು ಮಲಗಿದಾಗ ಮಧ್ಯಾಹ್ನದ ಮೂರೂವರೆ.
ಇದು ನಮ್ಮ ಮಹಿಳೆಯರು ತಿಂಗಳಲ್ಲಿ ಮೂರು ನಾಲ್ಕು ಬಾರಿ ಅನುಭವಿಸುವ ಮಹಿಳಾ ದಿನಾಚರಣೆಯ ಒಂದು ಝಲಕು.
ಈ ವರ್ಷ ನನ್ನ ಮಹಿಳಾ ದಿನಾಚರಣೆ ಹೀಗೆ ಪ್ರಾರಂಭವಾಗಿ ಕೊನೆಯಾಯಿತು…. ಖೇದವೇನಿಲ್ಲ ಆದರೆ ಅಭ್ಯಾಸ ಆಗಿ ಹೋಗಿದೆ. ನಿಮ್ಮ ಮಹಿಳಾ ದಿನಾಚರಣೆ ಹೇಗಿತ್ತು ತಿಳಿಸಿ ಸ್ನೇಹಿತರೆ!?
ವೀಣಾ ಹೇಮಂತ್ ಗೌಡ ಪಾಟೀಲ್