‘ಕವಿತೆ ಹುಟ್ಟಿದ ಸಮಯ’ ವಿಶೇಷ ಲೇಖನ-ವೀಣಾ ಹೇಮಂತ್ ಗೌಡ ಪಾಟೀಲ್

ನಾನು ಬಡವ ಆಕೆ ಬಡವಿ
ಒಲವೇ ನಮ್ಮ ಬದುಕು
ಬಳಸಿಕೊಂಡೆವದನೆ ನಾವು
ಅದಕೂ ಇದಕೂ ಎದಕೂ

ವರಕವಿ ದ.ರಾ. ಬೇಂದ್ರೆಯವರ ಈ ಕವನ ಅವರ ಜೀವನದ ಕುರಿತು ಬಿತ್ತರವಾದ ಮಹತ್ತರ ಸಾಲುಗಳು. ತಮ್ಮ ಜೀವನದ ಕುರಿತು ಅತಿ ಹೆಚ್ಚು ಕವನಗಳನ್ನು ಬರೆದವರು ದ.ರಾ ಬೇಂದ್ರೆ. ತಮ್ಮ ಅನುಭವಕ್ಕೆ ದಕ್ಕಿದ್ದೆಲ್ಲವನ್ನು ಪಡೆದು ಅನುಭಾವಿಯಾದವರು ಬೇಂದ್ರೆಯವರು.ಇಂತಹ ಹಲವಾರು ಕವನಗಳನ್ನು ಅವರು ಬರೆದದ್ದು ಎಲ್ಲಿ, ಯಾವಾಗ ಎಂಬುದು ಬಲು ಸೋಜಿಗದ ವಿಷಯ.

ಅದು ಸ್ವಾತಂತ್ರ್ಯ ಚಳುವಳಿಯ ಉತ್ತುಂಗದ ಕಾಲ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ ಬ್ರಿಟಿಷರನ್ನು ವಿರೋಧಿಸಿ ಹಲವಾರು ಕ್ರಾಂತಿಕಾರಕ ಪ್ರಯತ್ನಗಳು ನಡೆದವು. ಇದೇ ಸಮಯದಲ್ಲಿ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ‘ನರಬಲಿ’ ಎಂಬ ಶೀರ್ಷಿಕೆಯಲ್ಲಿ ಕವನವನ್ನು ಬರೆದರು.

ಬಲಗಾಲಲ್ಲಿ ಬಿಡುಗಡೆಯನ್ನು ಮೆಟ್ಟಿ ನಿಂತಿಹೆ ಎಲೆ ಕಾಳಿ,
ನಿನ್ನೆಡಗಾಲನು ನೆಕ್ಕುತಲಿಹುದು ಶ್ವಾನಸೂಕರಾಳಿ

ಎಂದು ಆರಂಭವಾಗುವ ಈ ಕವನದಲ್ಲಿ ಭಾರತ ಮಾತೆಯು ಕಾಳಿಕಾಮಾತೆಯ ಸ್ವರೂಪವನ್ನು  ಹೊಂದಿದ್ದು ಆಕೆಯ ಎಡಗಾಲನ್ನು ಬ್ರಿಟಿಷರು ನೆಕ್ಕುತ್ತಿದ್ದಾರೆ ಎಂಬರ್ಥವನ್ನು ಹೊಂದಿತ್ತು.
ದಾಸ್ಯದ ಸಂಕೋಲೆಯಲ್ಲಿ ಸಿಲುಕಿರುವ ಭಾರತ ದೇಶವನ್ನು ರಕ್ಷಿಸಲು ಉಕ್ಕಡಗಾತ್ರದ ಆಕೆಯ ಮಕ್ಕಳು ತಯಾರಾಗಿ ನಿಂತಿರುವರು. ತಾಯಿ ಭಾರತಿಯ ಸ್ವಾತಂತ್ರಕ್ಕಾಗಿ ನರಬಲಿ ಆಗಲೇಬೇಕು ಎಂಬ ಅರ್ಥದ ಕವನವನ್ನು ಬರೆದಿದ್ದರು ವರಕವಿ.

ಈ ಕವನವನ್ನು ಓದಿದ ಬ್ರಿಟಿಷ್ ಅಧಿಕಾರಿ ಇದರ ಭಾವಾನುವಾದವನ್ನು ತನ್ನ ಮೇಲಧಿಕಾರಿಗಳಿಗೆ
ಕಳುಹಿಸಿದಾಗ ಅಂದಿನ ಬ್ರಿಟಿಷ್ ಅರಸೊತ್ತಿಗೆಯ ಅಧಿಕಾರಿಗಳು ತಾವು ಓದಿದ ಸರ್ಕಾರಿ ಶಾಲೆ ನಂಬರ್ ಒಂದರಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ  ಬೇಂದ್ರೆ ಅವರಿಗೆ ತಪ್ಪೊಪ್ಪಿಗೆ ಬರೆದುಕೊಡಬೇಕು ಇಲ್ಲವೇ ಕೆಲಸದಿಂದ ವಜಾ ಮಾಡಲಾಗುವುದು ಎಂದು ಬೇಂದ್ರೆಯವರಿಗೆ ನೋಟಿಸ್ ಕಳುಹಿಸಿದರು. ಆದರೆ ಇದಕ್ಕೆ ಬೆದರದ ಬೇಂದ್ರೆಯವರು ನಾನು ಬರೆದದ್ದು ನಿಜವೇ ಇರುವುದರಿಂದ ತಪ್ಪೊಪ್ಪಿಗೆ ಬರೆದು ಕೊಡುವುದಿಲ್ಲ ಎಂದು ಹೇಳಿದರು. ಪರಿಣಾಮವಾಗಿ ಬೇಂದ್ರೆಯವರನ್ನು ಅವರು ಮಾಡುತ್ತಿದ್ದ ಶಿಕ್ಷಕ ಕೆಲಸದಿಂದ ವಜಾ ಮಾಡಿ ಒಂದು ವರ್ಷಗಳ ಕಾಲ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಸೆರೆಯಲ್ಲಿಡಲಾಯಿತು, ಜೊತೆಗೆ ಮುಂದೆ 12 ವರ್ಷಗಳ ಕಾಲ ಅವರಿಗೆ ಯಾವುದೇ ರೀತಿಯ ಸರ್ಕಾರಿ ಚಾಕರಿಯಲ್ಲಿ ಅವಕಾಶ ಕೊಡದೆ ಇರುವಂತೆ ಆರ್ಡರ್ ಮಾಡಲಾಯಿತು.

 ಈ ಸಮಯದಲ್ಲಿ ಅವರಿಗೆ ಸಾಕಷ್ಟು ಜನ ತಪ್ಪೊಪ್ಪಿಗೆ ಪತ್ರ ಬರೆದುಕೊಡಲು ಆಗ್ರಹಿಸಿದರು. ಮತ್ತೆ ಕೆಲವು ಸ್ನೇಹಿತರು ಅವರ ಕೌಟುಂಬಿಕ ಸ್ಥಿತಿ ಅಧೋಗತಿಗಿಳಿಯುತ್ತದೆ ಎಂದು ಕೂಡ ಹೆದರಿಸಿದರು. ಆದರೆ ಇದಾವುದಕ್ಕೂ ಬಗ್ಗದ ಬೇಂದ್ರೆಯವರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟರೆ ನಾನು ಬರೆದ ಕವನ ತಪ್ಪು ಎಂದು ಒಪ್ಪಿಕೊಂಡಂತಾಗುತ್ತದೆ, ಇದು ನಾನು ನನ್ನ ದೇಶಕ್ಕೆ ಮಾಡುವ ದ್ರೋಹವಾಗುತ್ತದೆ. ಇನ್ನು ನನ್ನ ಪತ್ನಿ ಈಗಾಗಲೇ ನನ್ನನ್ನು ಮದುವೆಯಾಗಿ ಸಾಕಷ್ಟು ಬಡತನವನ್ನು ಅನುಭವಿಸಿರುವ ಆಕೆಗೆ ಇನ್ನಷ್ಟು ಬಡತನ ಅಭ್ಯಾಸವಾಗಿಬಿಡುತ್ತದೆ ಆದ್ದರಿಂದ ತಪ್ಪೊಪ್ಪಿಗೆ ಪತ್ರ ಬರೆದು ಕೊಡುವುದಿಲ್ಲ ಎಂದು ಖಡಾ ಖಂಡಿತವಾಗಿ ನಿರಾಕರಿಸಿದರು.

ಅವರು ಮಾಸ್ತರ ಬೇಂದ್ರೆ…. ಸೆರೆಯಲ್ಲಿದ್ದರೇನು!! ಶಾಲೆಯಲ್ಲಿದ್ದರೇನು??. ಸಾಧಾರಣ ಕೈದಿಯಾಗಿದ್ದ ಬೇಂದ್ರೆಯವರು ಅಲ್ಲಿಯೂ ಜೈಲಿನಲ್ಲಿ ಕೈದಿಗಳಿಗೆ ಅಕ್ಷರಾಭ್ಯಾಸ ಮಾಡಿಸುತ್ತಾ, ನೈತಿಕ ಮೌಲ್ಯಗಳನ್ನು ಕಲಿಸುತ್ತಾ ತಮ್ಮ ಶಿಕ್ಷಕ ವೃತ್ತಿಯನ್ನು ಮುಂದುವರಿಸಿದರು. ಆದರೆ ಅತ್ಯಂತ ಕೃಶರಾಗಿದ್ದ ಬೇಂದ್ರೆ ಅನಾರೋಗ್ಯಕ್ಕೆ ಈಡಾದರು. ಜನರಿಗೆ ಬೇಕಾಗಿರುವ ವ್ಯಕ್ತಿ ಬೇಂದ್ರೆ ಎಲ್ಲಿ ಸತ್ತು ಹೋಗು ಬಿಡುತ್ತಾರೋ ಎಂಬ ಭಯದಿಂದ ಅವರನ್ನು ಬೆಳಗಾವಿಯ ಹಿಂಡಲಗಾ ಜೈಲಿನಿಂದ ಮುಗದ ಎಂಬ ಊರಿನ ಮನೆಯೊಂದರಲ್ಲಿ ನಜರ ಕೈದಿಯಾಗಿ ಇಡಲಾಯಿತು. ಅತ್ಯಂತ ಸುಂದರ ಪ್ರಕೃತಿ ಸಂಪತ್ತನ್ನು ಹೊಂದಿದ್ದ ಮುಗದ ಎಂಬ ಊರು ಭಾವನಾ ಜೀವಿ ಬೇಂದ್ರೆಯವರಿಗೆ ಅವರ ಬದುಕಿನ ಅತ್ಯುತ್ತಮ ಕವನಗಳನ್ನು ರಚಿಸಲು ಅನುವು ಮಾಡಿ ಕೊಟ್ಟಿತು.

ಹಕ್ಕಿಹಾರಿತು ನೋಡಿದಿರಾ ಹಕ್ಕಿಹಾರಿತು ನೋಡಿದಿರಾ,

 ನಾನು ಬಡವ ಆಕೆ ಬಡವಿ ಒಲವೇ ನಮ್ಮ ಬದುಕು

ಪಾತರಗಿತ್ತಿ ಪಕ್ಕ ನೋಡಿದೇನಾ ಅಕ್ಕ
ಹಸಿರು ಹಚ್ಚೀ ಚುಚ್ಚಿ ಮೇಲಕ್ಕರಿಸಿನ ಹಚ್ಚಿ
ಹೂವಿಗ್ಹೋಗತಾವ ಗಲ್ಲ ತಿವೀತಾವ

ಮುಂತಾದ ಕವನಗಳು ಹುಟ್ಟಿದ್ದು ಇಲ್ಲಿಯೇ. ಒಂದು ಹೇಳಿಕೆಯಂತೆ ಬೇಂದ್ರೆಯವರ ಗರಿ ಕವನ ಸಂಕಲನದ ಎಲ್ಲ ಕವನಗಳು ಮುಖದ ರಮ್ಯ ಪ್ರಕೃತಿ ತಾಣದಲ್ಲಿ ಸೃಜಿಸಲ್ಪಟ್ಟವು.

ಸ್ನೇಹಿತರೇ …ರವಿ ಕಾಣದ್ದನ್ನು ಕವಿ ಕಾಣುವನು ಎಂದು ಹೇಳುವುದು ಬಹುಶಃ ಇದಕ್ಕೆ ಇರಬೇಕು. ಹಾಡುವ ಹಕ್ಕಿ ಎಲ್ಲಿದ್ದರೂ ಹಾಡುತ್ತದೆ ಎಂಬುದು ವರ ಕವಿ ಬೇಂದ್ರೆಯಂಥವರನ್ನು ನೋಡಿಯೇ ಹೇಳಿರಬೇಕು.


Leave a Reply

Back To Top