ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಹುಟ್ಟಿ ಬರಲಿ ಬುದ್ಧ ಬಸವ

ಆಗ್ರಹಾರದ ರಾಯ ಭಟ್ಟರ
ಊರ ಗೌಡ ಪಟೇಲರ
ಶಾನುಬೊಗ ಶೆಟ್ಟಿ ಮನೆಯ
ಮಲವ ತಲೆಯ ಮೇಲೆ ಹೊತ್ತ
ನಮ್ಮ ಹಿರಿಯರು ಮೂಢರು
ಗೊತ್ತು ಗುರಿ ಇಲ್ಲದವರು

ಭೂ ಒಡೆಯರ ಕಾಮದಾಟ
ಶೀಲ ಒತ್ತೆ ಇಟ್ಟು ನಡೆದರು
ನಮ್ಮ ಕೇರಿಯ ಹೆಣ್ಣು ಮಕ್ಕಳು
ದೈವ ಹೆಸರು ಮುತ್ತು ಕಟ್ಟಿ
ಬೆತ್ತಲೆ ನಡೆದರು ಸಾದ್ವಿಗಳು
ಸೂಳೆಯಾಗಿ ಬದುಕುತಿಹರು

ಯಾರದೋ ತೀಟೆ ಕಳ್ಳ ಬಸಿರು
ಬೀದಿ ಭ್ರೂಣ ರೊಧನ
ಕ್ರೂರ ಹಿಂಸೆ ದರ್ಪ ಧೋರಣೆ
ನಲುಗಿ ಹೋಯಿತು ಜೀವನ
ಜಾತಿ ಕೂಪದಿ ಉಸಿರುಗಟ್ಟಿ
ಧ್ವನಿ ಎತ್ತದೆ ಸತ್ತರು

ಶತಮಾನದ ಮೌನ ಮುರಿಯಲಿ
ವರ್ತಮಾನದ ಕ್ರಾಂತಿಯು
ಅಳಿದು ಹೋಗಲಿ ಮೌಢ್ಯ ಭ್ರಾ0ತಿ
ಮತ್ತೆ ಅರಳಲಿ ಶಾಂತಿಯು
ಹುಟ್ಟಿ ಬರಲಿ ಬುದ್ಧ ಬಸವ
ಬಾಪು ಬಾಬಾರ ಪ್ರೀತಿಯು


4 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ಹುಟ್ಟಿ ಬರಲಿ ಬುದ್ಧ ಬಸವ

  1. ಸಮಾಜದ ಮೂಢ ಕಂದಾಚಾರಗಳ ವ್ಯವಸ್ಥೆಯನ್ನು ನೋವಿನಿಂದ ಅಲ್ಲಗಳೆಯುತ್ತಾ…ಮತ್ತೆ ಹುಟ್ಟಿ ಬರಲಿ ಬುದ್ಧ
    ಬಸವ ಎನ್ನುವ ನಿಮ್ಮ ಸಮಾಜದ ಪ್ರತಿ ಇರುವ ಕಳಕಳಿ ನಿಮ್ಮ ಕವನದಲ್ಲಿ ಎದ್ದು ಕಾಣುತ್ತಿದೆ… ಸರ್

    ಸುಧಾ ಶಿವಾನಂದ

  2. ಶ್ರೇಷ್ಠ ಕವಿ ಸಂಶೋಧಕ ಸಾಹಿತಿ ನೀವು.ಬುದ್ಧ ಬಸವ ತತ್ವ ಪ್ರಚಾರ ಮಾಡುತ್ತಿದ್ದಿರಿ

Leave a Reply

Back To Top