ಮಾಲಾ ಚೆಲುವನಹಳ್ಳಿ ಅವರ ಗಜಲ್

ಕಾಲನ ಆಟದ ತುಳಿತಕ್ಕೆ ಸಿಕ್ಕಾಗ ಮೇಲಿನ ದೈವವ ಮರೆಯದಿರು ನೀನು
ಸೋಲು ಹತಾಷೆಗಳಲಿ ಗುರಿ ಸೇರುವ ತವಕವ ತೊರೆಯದಿರು ನೀನು

ವಿಶ್ವಾಸ ಘಾತುಕರ ಸಂಘದಲ್ಲಿ ನಜ್ಜು ಗುಜ್ಜಾಗುತಿದೆ ಈ ಜೀವ
ನಿಶ್ವಾಸದಲ್ಲವಿತು ಬೆರೆತ ಬಂಧಗಳಲಿ ಸಿಲುಕಿ ಬರವ ಕರೆಯದಿರು ನೀನು

ನೀರ ಮೇಲಣ ಗುಳ್ಳೆಯಂತೆ ನಂಬಿಕೆಗಳು ಹುಸಿಯಾಗಿ ಅಣಕಿಸುತ್ತಿವೆ
ಪಾರುಗಾಣುವ ದಾರಿಗಾಣುತ ಭರವಸೆಯ ಮತ್ತೆoದೂ ಜರೆಯದಿರು ನೀನು

ಜಗನ್ನಿಯಾಮಕನ ಚಿತ್ತದಲ್ಲಿರುವುದ ಅರಿತವರು ಯಾರಿಲ್ಲ ಇಲ್ಲಿ
ಅವನಿಯಲಿರುವ ಕಲ್ಮಶ ಮನದವರ ಸ್ನೇಹವ ತಿಳಿದೂ ಪೊರೆಯದಿರು ನೀನು

ನಾಳೆಗಳು ನಮ್ಮವೇ ಎಂದು ಬೀಗಿದ್ದು ಮಾಲಾಳ ಮೂರ್ಖತನವೇ ಸರಿ
ವೇಳೆ ಸರಿದಂತೆ ಅನಿವಾರ್ಯತೆಗೆ  ಒಗ್ಗಿದ ಬದುಕಿಂದ ಸರಿಯದಿರು ನೀನು

———————————————–

Leave a Reply

Back To Top