‘ಸಂಚಾರಿ ನಿಯಮ ಪಾಲನೆ ಮತ್ತು ಸಾರ್ವಜನಿಕರ ಜವಾಬ್ದಾರಿ’ ವೀಣಾ ಹೇಮಂತ್ ಗೌಡ ಪಾಟೀಲ್

ಕೆಲ ತಿಂಗಳುಗಳ ಹಿಂದೆ ಟಿವಿಯಲ್ಲಿ ಪ್ರಸಾರವಾಗುವ ತಾಯಿ ಮಕ್ಕಳ ಶೋ ಒಂದರಲ್ಲಿ ಭಾಗವಹಿಸಿದ್ದ ಪುಟಾಣಿ ಮಗು ರಸ್ತೆ ಅಪಘಾತದಲ್ಲಿ ಮೃತವಾಯಿತ್ತು. ಆಗ ಆ ಬಾಲಕಿಯ ದುರ್ಮರಣಕ್ಕೆ ಕಿರುತೆರೆ ಮಾಧ್ಯಮ ಸಂತಾಪ ವ್ಯಕ್ತಪಡಿಸಿತ್ತು. ಜೊತೆ ಜೊತೆಗೆ ರಸ್ತೆಯಲ್ಲಿ ಯಮದೂತನಂತೆ ಬಂದ ಟ್ರಕ್ ನ ಮೇಲೆ ಆರೋಪ ಹೊರೆಸಿತ್ತು. ಅದಾದ ನಂತರ ಮತ್ತೋರ್ವ ಕಿರುತೆರೆ ನಟಿ ಅಪಘಾತಕ್ಕೀಡಾಗಿ ಜೀವನ್ಮರಣ ಹೋರಾಡಿ ಸಾವನ್ನು ಗೆದ್ದು ಬಂದಳು. ಆದರೆ ಎಲ್ಲರೂ ಆಕೆಯಷ್ಟು ಅದೃಷ್ಟವಂತರಿರುವುದಿಲ್ಲ.

ಸೆಲೆಬ್ರಿಟಿಗಳ ಸಾವು ಕಿರುತೆರೆಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವುದರಿಂದ ನಮಗೆ ಗೊತ್ತಾಗುತ್ತದೆ, ಆದರೆ ದೇಶದ ನಾನಾ ಮೂಲೆಗಳಲ್ಲಿ ಪ್ರತಿದಿನ ರಸ್ತೆ ಅಪಘಾತಗಳಲ್ಲಿ ಸಾಯುವವರ ಸಂಖ್ಯೆ ಅದೆಷ್ಟು ಎಂಬುದು ಯಾರಿಗೂ ಗೊತ್ತಿಲ್ಲ. ಎಷ್ಟೋ ಅಪಘಾತಗಳು ಪೊಲೀಸ್ ಇಲಾಖೆಯಲ್ಲಿ ದಾಖಲಾಗುವುದೂ ಇಲ್ಲ. ಸಾಮಾನ್ಯವಾಗಿ ಇಂತಹ ಅಪಘಾತಗಳಿಗೆ ಕಾರಣವೇನು ಎಂದು ಪ್ರಶ್ನಿಸಿದಾಗ ಬರುವ ಉತ್ತರ….  ರಸ್ತೆಗಳ ಶೋಚನೀಯ ಸ್ಥಿತಿ, ಗುಂಡಿಗಳನ್ನು ಹೊಂದಿರುವ ರಸ್ತೆಗಳು,ಅವೈಜ್ಞಾನಿಕ ರಸ್ತೆ ತಡೆಗಳು ಎಂದು ಎಲ್ಲರೂ ಕೈತೋರುವುದು ಆಳುವ ಸರ್ಕಾರಗಳ ಮೇಲೆ.

ಆದರೆ ನಮ್ಮ ತೋರುಬೆರಳು ಆ ರಸ್ತೆಗಳನ್ನು ಮಾಡಿರುವ ಗುತ್ತಿಗದಾರರೆಡೆ, ಸರ್ಕಾರದೆಡೆ ತೋರುತ್ತಿದ್ದರೆ, ಉಳಿದ ನಾಲ್ಕು ಬೆರಳುಗಳು ನಮ್ಮೆಡೆಗೆ ತೋರುತ್ತವೆ ಎಂಬುದು ನಗ್ನ ಸತ್ಯ. ಸರ್ಕಾರದ, ಪೊಲೀಸ್ ಇಲಾಖೆಯ ಪಾಲಿಗೆ ನಾವು ಒಂದು ಸಂಖ್ಯೆ ಆದರೆ ನಮ್ಮ ಕುಟುಂಬದ ಪಾಲಿಗೆ ನಾವು ಸರ್ವಸ್ವ. ರಸ್ತೆ ಗುಂಡಿಗಳ ಮೇಲೆ, ಅವೈಜ್ಞಾನಿಕ ರಸ್ತೆ ತಡೆಗಳ ಮೇಲೆ ತಪ್ಪನ್ನು ಹೊರಿಸುವ ನಾವುಗಳು ಸಂಚಾರಿ ನಿಯಮಗಳ ಪಾಲನೆ ಮಾಡುತ್ತೇವೆಯೇ ಎಂದು ಕೇಳಿದರೆ ಖಂಡಿತವಾಗಿಯೂ ಇಲ್ಲ ಎಂದು ಹೇಳಬಹುದು.

ಸಿಗ್ನಲ್ ಗಳನ್ನು ಜಂಪ್ ಮಾಡುವುದು, ತಲೆಗೆ ಹೆಲ್ಮೆಟ್ ಧರಿಸದೇ ಇರುವುದು, ಸರ್ಕಲ್ ನಲ್ಲಿ ಸುತ್ತು ಹಾಕದೆ ಮತ್ತೊಂದು ರಸ್ತೆಗೆ ತೆರಳುವುದು ಇಂಡಿಕೇಟರ್ಗಳನ್ನು ಬಳಸದೆ ಇರುವುದು, ಲೈಸನ್ಸ್ ಇಲ್ಲದ ಮಕ್ಕಳು ವಾಹನಗಳನ್ನು ಚಲಾಯಿಸಲು ಅವಕಾಶ ನೀಡುವುದು ಇನ್ನೂ ಮುಂತಾದ ಕಾರಣಗಳು ನಮ್ಮ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತವೆ.

ಎಲ್ಲಕ್ಕಿಂತ ಮುಖ್ಯವಾಗಿ ನಾವು ಮಾಡಬೇಕಾಗಿರುವುದು ತಲೆಗೆ ಐ ಎಸ್ ಐ ಗುಣಮಟ್ಟದ ಶಿರಸ್ತ್ರಾಣವನ್ನು ಧರಿಸುವುದು. ಹೇರ್ ಸ್ಟೈಲ್ ಕೆಡುತ್ತದೆ, ಬೆವರುವಿಕೆಯಿಂದ ತಲೆಯಲ್ಲಿ ಗುಳ್ಳೆಗಳಾಗುತ್ತವೆ,ತಲೆಕೂದಲು ಉದುರುತ್ತದೆ, ಎಂಬ ಪಿಳ್ಳೆ ನೆವಗಳು ನಮ್ಮ ಕಳ್ಳ ಮನಸ್ಸಿನ ಕನವರಿಕೆಗಳಾಗಿವೆ. ತಲೆ ಉಳಿದರಲ್ಲವೇ ತಲೆಕೂದಲು ಮತ್ತಿತರ ಸ್ಟೈಲ್ ಗಳ ಬಗ್ಗೆ ಚಿಂತೆ…. ತಲೆಯೇ ಇಲ್ಲದ ಮೇಲೆ!!?? ಏನು ಮಾಡಲು ಸಾಧ್ಯ??

ಇನ್ನು ಈ ಹೆಲ್ಮೆಟ್ ಧರಿಸುವುದು ಕೂಡ ಅರ್ಧಂಬರ್ಧ. ಸಂಪೂರ್ಣವಾಗಿ ತಲೆ ಮತ್ತು  ಕುತ್ತಿಗೆಯನ್ನು ಆವರಿಸಿದ್ದು ಅದರ ಪುಟ್ಟದಾದ ಬೆಲ್ಟನ್ನು ಕಡ್ಡಾಯವಾಗಿ ಕಟ್ಟಿಕೊಂಡಿರಬೇಕು ಎಂಬುದು ರಸ್ತೆ ಸುರಕ್ಷತೆಯ ನಿಯಮಗಳಲ್ಲಿ ಬರುತ್ತದೆ. ಆದರೆ ಕಡಿಮೆ ದರಕ್ಕೆ ಸಿಗುತ್ತದೆ ಎಂದು ಯಾವುದೋ ಕಳಪೆ ಗುಣಮಟ್ಟದ ಹೆಲ್ಮೆಟ್ ಧರಿಸಿ ದರೆ ಅದು ನಮ್ಮ ರಕ್ಷಣೆ ಅಸಾಧ್ಯ.

ಹೆಲ್ಮೆಟ್ ನಮ್ಮ ಮೆದುಳನ್ನು ಸುರಕ್ಷಿತವಾಗಿರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎಲ್ಲಾ ದ್ವಿಚಕ್ರ ವಾಹನಗಳ ಸವಾರರು ಮತ್ತು ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುವವರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಲೇಬೇಕು. ಸಾಮಾನ್ಯವಾಗಿ ಹೆಲ್ಮೆಟ್ ಧರಿಸಿದಾಗ ದೇಹದ ಇತರೆ ಅಂಗಗಳಿಗೆ ಪೆಟ್ಟಾದರೂ ತಲೆಯ ಭಾಗ ಸುರಕ್ಷಿತವಾಗಿ ಇದ್ದು ಮೆದುಳಿಗೆ ಯಾವುದೇ ಹಾನಿಯಾಗುವುದಿಲ್ಲ. ಹಿಂಬದಿ ಸವಾರರು ಇನ್ನೂ ಹೆಚ್ಚಿನ ಕಾಳಜಿವಹಿಸಬೇಕಾಗುತ್ತದೆ. ಏಕೆಂದರೆ ಅಪಘಾತವಾದಾಗ ಮುಂಬದಿ ಸವಾರರು ಬೈಕ್ ನ ಹ್ಯಾಂಡಲ್ ಅನ್ನು  ಹಿಡಿದುಕೊಂಡಿದ್ದರೆ ಹಿಂಬದಿ ಸವಾರರು ಯಾವುದೇ ಆಧಾರವಿಲ್ಲದೆ ಕುಳಿತಿರುವುದರಿಂದ ಅಪಘಾತವಾದ ಕೂಡಲೇ ಗಾಡಿಯಿಂದ ಹಾರಿ ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ, ಅಂತೆಯೇ ಅವರ ತಲೆಗೆ ಪೆಟ್ಟು ಬೀಳುವ ಸಾಧ್ಯತೆಗಳು ಕೂಡ.

ದ್ವಿಚಕ್ರ ವಾಹನಗಳಲ್ಲಿ ಇಬ್ಬರಿಗಿಂತ ಹೆಚ್ಚು ಜನರು ಕೂಡಲು ಅವಕಾಶವಿಲ್ಲ, ಆದರೆ ಇದನ್ನು ಪಾಲಿಸುವವರು ಇಲ್ಲವೇ ಇಲ್ಲ. ದಂಡ ಹಾಕದೆ ಶಿಕ್ಷೆ ನೀಡದೆ ಯಾವುದೇ ಕಾನೂನುಗಳ ಪಾಲನೆ ಎನ್ನು ಜನರು ಮಾಡುವುದಿಲ್ಲ ಎಂದರೆ ಅದು ನಮ್ಮ ಸಾಮಾಜಿಕ ಜವಾಬ್ದಾರಿಯ ನಿರ್ವಹಣೆಯ ಅಧಃಪತನವನ್ನು ತೋರಿಸುತ್ತದೆ.

ಅಲ್ಲೆಲ್ಲೋ ಟ್ರಾಫಿಕ್ ಪೊಲೀಸರು ಹಿಡಿಯುತ್ತಾರೆ ಎಂದಾಗ ಅಲ್ಲಿಯೇ ಸಿಗುವ ಹೆಲ್ಮೆಟ್ ಗಳನ್ನು ಖರೀದಿಸಿ ಹಾಕಿಕೊಂಡು ಹೋಗಿ ಪೊಲೀಸರ ಕಣ್ಣಿಗೆ ಮಣ್ಣೆರಚುವ ಜನರು ಇದ್ದಾರೆ. ನಮ್ಮ ಸುರಕ್ಷತೆಗಾಗಿ ಇರುವ ಸೀಟ್ ಬೆಲ್ಟ್ ಗಳನ್ನು ಕೂಡ ಧರಿಸದೆ ಇರುವ ಜನರಿದ್ದಾರೆ. ಒಂದು ಸಿಗ್ನಲ್ ನಲ್ಲಿ ಸಿಲುಕಿಕೊಂಡರೆ ಮುಂದೆ ಹಲವಾರು ಸಿಗ್ನಲ್ಗಳಲ್ಲಿ ಸಿಲುಕಿಕೊಳ್ಳುತ್ತೇವೆ ಎಂಬ ಭಾವದಿಂದ ವೇಗವಾಗಿ ಗಾಡಿ ಚಲಾಯಿಸುವವರಿದ್ದಾರೆ. ಗಾಡಿಗಳನ್ನು ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸದೆ ಅವುಗಳ ಕಳಪೆ ನಿರ್ವಹಣೆಗೆ ಕೂಡ  ಕಾರಣರಾಗುತ್ತಾರೆ. ಜೀವ ರಕ್ಷಕ ಕಾರ್ಯ ಮಾಡುವ ಆಂಬುಲೆನ್ಸ್ ಗಳಿಗೆ ಜಾಗ ದಾರಿ ಬಿಡದಷ್ಟು ಸಂವೇದನಾಹೀನ ಜನರಿದ್ದಾರೆ. ಇಲ್ಲಿ ಆಂಬುಲೆನ್ಸ್ ಡ್ರೈವರ್ ಗಳ ತಪ್ಪುಗಳು ಕೂಡ ಇವೆ…. ಆಂಬುಲೆನ್ಸ್ ಗಳಲ್ಲಿ ಪೇಷಂಟ್ ಇಲ್ಲದೆ ಇದ್ದಾಗಲೂ ಕೂಡ ಕೆಂಪು ದೀಪವನ್ನು ಉರಿಸಿಕೊಂಡು ಗಂಟೆ ಬಾರಿಸುತ್ತಾ ಸಾಗುವ ಆಂಬುಲೆನ್ಸ್ ಡ್ರೈವರ್ ಗಳು ಸಂಚಾರ ವ್ಯವಸ್ಥೆಯನ್ನು ಅಪಹಾಸ್ಯ ಮಾಡುವಂತೆ ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತದೆ.

ಇನ್ನು ಆಟೋಗಳು, ದ್ವಿಚಕ್ರ ವಾಹನಗಳಂತೂ ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳ ಸಂದಿಗೊಂದಿಗಳಲ್ಲಿ ತೂರಿ ಹೊರಟು ಹೋಗಿಬಿಡುತ್ತಾರೆ. ಅದೃಷ್ಟ ಚೆನ್ನಾಗಿರುವವರು ಇಂತಹ ಸಮಯದಲ್ಲಿ ಯಾವುದೇ ತೊಂದರೆ ಇಲ್ಲದೆ ಪಾರಾದರೆ, ಇನ್ನು ಕೆಲವರು ಆಕಸ್ಮಿಕ ದುರ್ಘಟನೆಗಳಿಗೆ ಈಡಾಗುತ್ತಾರೆ.

ಮನೆಯ ಯಾವುದೇ ಒಬ್ಬ ಸದಸ್ಯನನ್ನು ಕಳೆದುಕೊಂಡರೂ ಆ ಮನೆ ಮತ್ತೆ ಮೊದಲಿನಂತಾಗುವುದು ಸಾಧ್ಯವಿಲ್ಲ, ಪೋಲಿಸ್ ಇಲಾಖೆ ತನ್ನ ಪ್ರಥಮ ಮಾಹಿತಿ ಪ್ರತಿಯನ್ನು ಬರೆದು ಸುಮ್ಮನಾಗಬಹುದು, ಪತ್ರಿಕೆಗಳಲ್ಲಿ ಒಂದು ದಿನ ಸುದ್ದಿ ಆಗಬಹುದು.  ಆ ವರ್ಷದ ಆ ತಿಂಗಳ ಅಪಘಾತದ ಪಟ್ಟಿಯಲ್ಲಿ ಒಂದು ಸಂಖ್ಯೆ ಹೆಚ್ಚಾಗಬಹುದು. ನೆರೆಹೊರೆಯುವರು ಸ್ನೇಹಿತರು ಕೆಲ ದಿನ ಮಾತನಾಡಬಹುದು,ಆದರೆ ನಿಮ್ಮ ಕುಟುಂಬ ಎಂದೂ ಮರೆಯಲಾಗದ ಆಘಾತಕ್ಕೆ ಗುರಿಯಾಗುತ್ತದೆ.

ಆದ್ದರಿಂದಲೇ ಇತ್ತೀಚಿಗೆ ಎಲ್ಲಾ ಚಿಕ್ಕ ಪುಟ್ಟ ಊರುಗಳಲ್ಲಿಯೂ ಕೂಡ ಕಡ್ಡಾಯವಾಗಿ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ತಾಕೀತು ಮಾಡಿದೆ. ನಿಯಮಗಳನ್ನು ಪಾಲಿಸದ ವಾಹನ ಚಾಲಕರಿಗೆ ದಂಡ ಹಾಕುತ್ತಿದ್ದಾರೆ. ಇನ್ನು ಹಲವೆಡೆ ಥರ್ಡ್ ಐ.. ಸಿ ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು ಸುಗಮ ಸಂಚಾರ ಮತ್ತು ರಸ್ತೆ ಸುರಕ್ಷತೆಗಳನ್ನು ಪಾಲಿಸಲು ಜನರಿಗೆ ಆಗ್ರಹಪಡಿಸುತ್ತಿದ್ದಾರೆ.

ಈ ಮಧ್ಯದಲ್ಲಿ ಸಾರ್ವಜನಿಕರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಓಡಾಡುವಾಗ ಹೆಲ್ಮೆಟ್ ಬಳಕೆ ಬೇಡ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದಲ್ಲವೇ ವಿಪರ್ಯಾಸ…. 2 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅವಘಡ ಸಂಭವಿಸುವುದಿಲ್ಲ ಎಂಬ ಗ್ಯಾರಂಟಿಯಾದರೂ ಏನು??

ಕೆಲವು ವರ್ಷಗಳ ಹಿಂದೆ ವಿಘ್ನ ವಿನಾಯಕ ಗಣೇಶ ದೇವ ಎಲ್ಲರಿಗೂ ನನ್ನ ಹಾಗೆ ಬದಲಿ ತಲೆ ಸಿಗುವುದಿಲ್ಲ ಆದ್ದರಿಂದ ನಿಮ್ಮ ನಿಮ್ಮ ತಲೆಗಳನ್ನು ಉಳಿಸಿಕೊಳ್ಳಿ ಎಂದು ಹೇಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು….. ಹೌದಲ್ಲವೇ ಈ ಮಾತು ನಮ್ಮ ಚಿಂತನ ಶೈಲಿಯನ್ನು ಬದಲಾಯಿಸಲೇಬೇಕು.

 ಸುರಕ್ಷತಾ ನಿಯಮಗಳು ನಮ್ಮ ಒಳಿತಿಗಾಗಿಯೇ ಮಾಡಲ್ಪಟ್ಟಿದ್ದು ಅವುಗಳನ್ನು ಪಾಲಿಸುವ ಮೂಲಕ ಭವ್ಯ ಭಾರತದ ಪ್ರಜೆಗಳಾಗಿ ನಮ್ಮ ಕರ್ತವ್ಯವನ್ನು ಪಾಲಿಸೋಣ.


Leave a Reply

Back To Top