ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಬರಡಾದ ಹೃದಯದಿ ಪ್ರೇಮದೀಪ ಉರಿಸಿದವನು ನೀನು
ಒಣಗಿದ ಎದೆಬನದಿ ಪ್ರೀತಿಯಾ ಬಳ್ಳಿ ಹಚ್ಚಿದವನು ನೀನು

ಗಾಳಿಗಂಧದಲಿ ಪ್ರೇಮ ಸಂದೇಶಗಳು ಸುಳಿಸುಳಿದು ಬಂದವು
ಕೊರಗಿದ ಮನದಂಗಳದಿ ರಂಗೋಲಿ ಬಿಡಿಸಿದವನು ನೀನು

ಉಸಿರುಸಿರಲಿ ಒಲವ ಸರಿಗಮನ ನುಡಿಸಿ ಹದಮಾಡಿದೆ
ಕರಗಿದ ಕನಸನೆಲ್ಲ ಕೆದಕಿ ಚಿಗುರಿಸಿ ಹಸಿರಾಗಿಸಿದವನು ನೀನು

ನೆನಪಿನಾಳದಲ್ಲುದುಗಿದ ಬಯಕೆಗಳಿಗೆ ನೀರೆರೆದು ಹಸಿಮಾಡಿದೆ
ಅಳಿಸಿಹಾಕಿದ ಚಿತ್ರಗಳಿಗೆ ಬಣ್ಣ ಬಳಿದು ಹೊಳೆಸಿದವನು ನೀನು

ಒಡಲಾಳದಲಿ ಬಚ್ಚಿಟ್ಟಿದ್ದ ಹಂಬಲಗಳ ನವಿರಾಗಿ ಹದಮಾಡಿದೆ
ಮಂಪರಿಸಿ ಮುತ್ತಮಳೆಗರೆದು ಬಿಗಿದಪ್ಪಿ ಮುದ್ದಾಡಿದವನು ನೀನು

ಸೊರಗಿದ ಸರಸ ಸಲ್ಲಾಪ ಸಂತೈಸಿ ನಾನಿರುವೆ ಎಂದು ಸಾರಿದೆ
ಹೊತ್ತು ಗೊತ್ತಿಲ್ಲದೆ ಬಳಿಬಂದು ಮರುಳಾಗಿಸಿದವನು ನೀನು

ಮಳೆ ಮೋಡದಂತೆ ತಂಗಾಳಿ ಸೂಸುತ ಬೀಸುತ ತಂಪೆರೆದೆ
ಸಾಕುಬಿಡು ಚಿಂತೆ ಮೈಮರೆತು ಒಂದಾಗೋಣ ಎಂದವನು ನೀನು

ಅನುಳ ಗೋಳು ಕೇಳಿ ಮರುಕಪಟ್ಟು ತಲೆಸವರಿ ಸಮಾಧಾನಿಸಿದೆ
ಗೊಂದಲಗಳ ಸರಿಸಿ ಬಾನ ಹಕ್ಕಿಯಂತಿರೋಣ ಎಂದವನು ನೀನು

ಹಿಂದು ಮುಂದಿನ ಕಷ್ಟಗಳ ಜಾಡಿಸಿ ಇಂದು ಸುಖಿಸಿ ಬಿಡು
ನಿನ್ನೆಗಳ ಕೊಂದುಬಿಡು ಸ್ವರ್ಗಸುಖ  ಹೊಂದು ಎಂದವನು ನೀನು

——————————

3 thoughts on “ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

Leave a Reply

Back To Top