ಡಾ.ಜಿ.ಪಿ.ಕುಸುಮಾ ಮುಂಬಯಿ ಕವಿತೆ-ಕತ್ತರಿಸಿ ಬಿಟ್ಟ ಬಳ್ಳಿ

ದೋಣಿಯಲಿ ನಾವಿಬ್ಬರು
ಸುತ್ತ ಕಡಲು
ದೋಣಿಗೀಗ ತೂತು ಬಿದ್ದಿದೆ
ವಿಶ್ವಾಸ ಎಲ್ಲಿಡುವೆ ಗೆಳೆಯ
ಮೋಡ ತುಂಬಿದ ಬಾನಿನತ್ತ
ಯಾಕೆ ನೋಡುತ್ತಿರುವೆ
ಇಳೆಯ ಕರೆಗೆ ಇಳಿದು ಬಿಡುವ
ಮೋಡವ ಎಷ್ಟು ಪ್ರೀತಿಸುವೆ

ಹೆಗಲ ಮೇಲೆ ಕೈಯನಿಟ್ಟು
ಯಾಕೆ ಸಂತೈಸುವೆ
ಸಾವೆಷ್ಟು ಬಾಳುವುದು
ಹೇಳೋ ಗೆಳೆಯ..
ಎರಡು ಕ್ಷಣ
ಅದಕ್ಕೆಷ್ಟು ಬದುಕಬೇಕು
ಒಂದಷ್ಟು ದಿನ



ನಾನು ನನ್ನೊಂದಿಗೆ ಮಾತನಾಡಲೂ
ಸಿಗುತ್ತಿಲ್ಲ …ನನ್ನದೇ
ಸನಿಹವೀಗ ಅಸಹನೀಯ.
ನಮ್ಮವರು ಅಂದರೆ ಯಾರವರು
ಎನ್ನುವುದು ಪ್ರಶ್ನೆ.
ಬಂದು ಹೋಗಿ
ಹಿಂದಿನಿಂದ ನಗುವವರೋ…

ಈ ಆಸೆ ಬಯಕೆಗಳು
ಯಾಕೆ ಹುಟ್ಟುತ್ತವೆ ಮತ್ತು
ಹೇಳದೆ ಸಾಯುತ್ತವೆ?
ನಿನ್ನ ಆಸೆಗಳಿಗೆ ಪುಕ್ಕಟೆ ನೆರಳು ಜಲ
ದೊರೆತಾಗ ಬೆಳೆದು ಹಬ್ಬುತ್ತವೆ
ಹಳ್ಳಿಯಿಂದ ದಿಲ್ಲಿಗೆ
ಎನ್ನುವುದು ನಿಜವಲ್ಲವೇ?

ಸಾಯಲಾರದ ಆಸೆಗಳು
ಅಂಗಲಾಚಿಕೊಂಡರೂ
ನೀರು ಹನಿಸುವ ಕೈಗಳು
ಯಾಕೆ ಮುಂದಾಗುತ್ತಿಲ್ಲ ಗೆಳೆಯ
ಕಡಲ ಮಧ್ಯೆ ಬದುಕಬೇಕೆನ್ನುವ
ಆಸೆಯೊಂದು ಯಾಕೆ
ಬಲಿಯುತ್ತಿದೆ

ಬದುಕು ಬಳ್ಳಿಯಂತೆ ಹಬ್ಬಲೆಂದು
ಬಿಟ್ಟರೆ ಯಾರೋ ಕತ್ತರಿಸಿಬಿಟ್ಟರಲ್ಲೋ

Leave a Reply

Back To Top