ತೋಟಕ್ಕೆ ಹೋಗಿ ಬಂದು ಒಂದು ವಾರ ಕಳೆಯಿತಾದರೂ

ಅಲ್ಲಿಂದ ತೋಟ ಮಾರುವ ಬಗ್ಗೆ ಯಾವುದೇ ರೀತಿಯ ಸುಳಿವೂ ಸಿಗಲಿಲ್ಲ. ನಾರಾಯಣನ್ ಅವರಿಗೆ ಚಿಂತೆಯಾಯಿತು. ಒಂದು ದಿನ ಬ್ರೋಕರ್ ಬಂದರು ಉಭಯಕುಶಲೋಪರಿ  ವಿನಿಮಯವಾಯ್ತು. ಮಾತನಾಡುತ್ತಾ …. “ತೋಟದ ಮಾಲೀಕರು ತುರ್ತಾಗಿ ಇಂಗ್ಲೆಂಡಿಗೆ ಹೋಗಿರುವರು. ಹಾಗಾಗಿ ಬಂದ ನಂತರ ತೋಟವನ್ನು ಕೊಳ್ಳುವ ವಿಚಾರದಲ್ಲಿ ವಿವರವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ”… ಎಂದರು. ಈ ಮಾತುಗಳು ನಾರಾಯಣನ್ ರವರನ್ನು ಚಿಂತೆಗೀಡು ಮಾಡಿತು. ಯೋಚಿಸುತ್ತಾ ಹೇಳಿದರು…. ಅವರು ಎಂದು ಹಿಂತಿರುಗಿ ಬರುವರೋ ಅಲ್ಲಿಯವರೆಗೂ ನಾನು ಕಾಯಬೇಕಾಗಿದೆಯಲ್ಲ….ಸಂಬಂಧಿಕರ ಮನೆಯಲ್ಲಿ ಎಷ್ಟು ದಿನ ಇರಲು ಆದೀತು…. ಇಲ್ಲಿ ಇರಲು ನಮಗೆ ಬೇರೆ ಮನೆಯಿಲ್ಲ…. ತೋಟವನ್ನು ಬೇಗ ಖರೀದಿಸಬಹುದು ಎಂದು ಕೇರಳದ ಮನೆ ತೋಟ ಎಲ್ಲವನ್ನೂ ಮಾರಿ ಬಂದಾಗಿದೆ… ಹೀಗೆ ತಡ ಮಾಡಿದರೆ ಹೇಗೆ?… ಎಂದು ಕೇಳಿದರು. ಅದಕ್ಕೆ ಬ್ರೋಕರ್ ಹೇಳಿದರು…”ಆದಷ್ಟು ಬೇಗ ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ…. ಬಂದ ನಂತರ ನಿಮ್ಮ ಬಳಿ ಬಂದು ಮಾತನಾಡುವೆ”… ಎಂದು ಹೇಳಿ ಬ್ರೋಕರ್ ಹೊರಟು ಹೋದರು. ಏನು ಮಾಡಬೇಕು ಎಂದು ತೋಚದೆ ನಾರಾಯಣನ್ ಯೋಚಿಸುತ್ತಾ ಕುಳಿತರು…. ತಾನು ದುಡುಕಿ ಕಲ್ಯಾಣಿಯ ಮಾತುಗಳನ್ನು ಕೇಳದೆಯೇ ತಪ್ಪು ಮಾಡಿದೆನೇ? ಎಂದು ಮೊದಲ ಬಾರಿಗೆ ತಾನು ತೆಗೆದುಕೊಂಡ ನಿರ್ಧಾರದ ಬಗ್ಗೆ ಮರು ವಿಮರ್ಶೆ ಮಾಡಿತು ನಾಣುವಿನ ಮನ. ಕಲ್ಯಾಣಿಯ ನೆನಪು ಕಾಡಿತು. ಈಗ ಅವಳು ಜೊತೆಗೆ ಇದ್ದಿದ್ದರೆ ಆಲೋಚಿಸಿ ಏನಾದರೂ ಒಂದು ಉತ್ತಮ ಸಲಹೆ ನೀಡುತ್ತಾ ಇದ್ದಳು.

ಹೀಗೆ ಯೋಚಿಸುತ್ತಾ ಮ್ಲಾನವದನನಾಗಿ ಎಷ್ಟು ಹೊತ್ತು ಕುಳಿತಿದ್ದರೋ ನಾಣು. ಸುಮತಿ ಬಂದು ಎದುರು ನಿಂತು ತನ್ನನ್ನೇ ದಿಟ್ಟಿಸಿ ನೋಡುತ್ತಾ ಇರುವುದು ಕಂಡು ತನಗೇನೂ ಆಗಿಲ್ಲ ಎಂಬಂತೆ ವೃಥಾ ನಟಿಸಲು ಪ್ರಯತ್ನಿಸಿ ಕೇಳಿದರು….”ಏನು ಸುಮತಿ…. ನನ್ನನ್ನು ಏಕೆ ಹಾಗೆ ನೋಡುತ್ತಾ ನಿಂತಿರುವೆ?…. ತಮ್ಮಂದಿರು ಎಲ್ಲೂ ಕಾಣುತ್ತಾ ಇಲ್ಲವಲ್ಲ ಎಂದರು”…. ಸುಮತಿಗೆ ಅರ್ಥವಾಯಿತು ತನ್ನಿಂದ ಅಪ್ಪ ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡುತ್ತಾ ಇರುವರು. ಏನಿರಬಹುದು? ಕೇಳಬೇಕು ಎಂದು ಅನಿಸಿದರೂ ಅಪ್ಪನನ್ನು ಕೇಳಲು ಭಯ ಹಾಗಾಗಿ….”ಏನೂ ಇಲ್ಲ ಅಪ್ಪ….ತಮ್ಮಂದಿರನ್ನು ಹುಡುಕುತ್ತಾ ಬಂದೆ…. ನೀವು ಹೀಗೆ ಯೋಚಿಸುತ್ತಾ ಕುಳಿತಿರುವುದನ್ನು ನೋಡಿ ನಿಮ್ಮ ಎದುರು ನಿಂತೆ”….ಎಂದಳು. ತನ್ನ  ಮನದಲ್ಲಿ ಇರುವ ಆಶಂಕೆಯನ್ನು ಹೇಳದೇ ಅವಳ ಮುಖವನ್ನೇ ನೋಡುತ್ತಾ “ಏನೂ ಇಲ್ಲ ಮಗಳೇ…. ಹೀಗೇ…. ನಿನ್ನ ಅಮ್ಮನ ನೆನಪಾಯ್ತು…. ಹಾಗಾಗಿ ಸುಮ್ಮನೇ ಹೀಗೆ ಕುಳಿತಿದ್ದೆ”….

ಎಂದರು. ಅಪ್ಪ ಹೇಳಿದ ಮಾತನ್ನು ನಂಬಿದಂತೆ ನಟಿಸುತ್ತಾ ಅಲ್ಲಿ ಹೊರಟು ಹೋದಳು ಸುಮತಿ. ನಾಣುವಿಗೆ ಈಗ ಕಳವಳ ಶುರುವಾಯ್ತು. ತೋಟದ ಮಾಲೀಕರು ಇನ್ನು ಯಾವಾಗ ಇಂಗ್ಲೆಂಡಿನಿಂದ ಬರುವುದು? ಆಸ್ತಿಯನ್ನು ಮಾರಿ ತಂದ ಹಣದಿಂದ ಹೀಗೆ ಎಷ್ಟು ದಿನ ಎಂದು ಕುಳಿತು ತಿನ್ನುವುದು? ಹಣ ಖರ್ಚು ಆದರೆ ನಂತರ ತೋಟ ಕೊಳ್ಳಲು  ಹಣ ಸಾಲದೇ ಹೋದರೆ? ಇಲ್ಲಿ ತನಗೆ ಯಾವುದೇ ಕೆಲಸ ಕಾರ್ಯ ಇಲ್ಲ ಹಣ ಸಂಪಾದನೆ ಮಾಡಲು. ಇಲ್ಲಿಯ ಭಾಷೆ ಬೇರೆ ತನಗೆ ಓದಲು ಬರೆಯಲು ಮಾತನಾಡಲು ಬಾರದು. ಹೀಗೇ ಯೋಚನೆ ಮಾಡುತ್ತಾ ಕುಳಿತವರು ಎದ್ದು ಸಕಲೇಶಪುರ ಪಟ್ಟಣವನ್ನು ಒಂದು ಸುತ್ತು ಹಾಕಿ ಬರಲು ಹೊರಟರು. ಇಲ್ಲಿ ಪರಿಚಯ ಆದವರು ಕೂಡಾ ಅವರನ್ನು ನಾಣು ಎಂದೇ ಕರೆಯುತ್ತಾ ಇದ್ದರು.

ತಮ್ಮ ಸಂಬಂಧಿಕರು ಪರಿಚಯಿಸಿದ ಕೆಲವರು ಅವರಿಗೆ ಆಗಲೇ ಸ್ನೇಹಿತರು ಆಗಿ ಬಿಟ್ಟಿದ್ದರು. ನಾಣು ಒಬ್ಬ ಸ್ನೇಹ ಜೀವಿ ಎಲ್ಲರೊಂದಿಗೂ ಬೇಗ ಬರೆಯುವಂತಹ ಗುಣ ಉಳ್ಳವರು ಆಗಿದ್ದರು. ಹೀಗೆ ಮತ್ತೂ ಸ್ವಲ್ಪ ದಿನ ಕಳೆಯಿತು. ತೋಟ ಮಾರುವ ಯಾವುದೇ ಸುದ್ದಿಯಿಲ್ಲ. ಮಳೆಗಾಲ ಪ್ರಾರಂಭ ಆಗುವ ಸೂಚನೆ ಅದಾಗಲೇ ಕಾಣಿಸಿಕೊಂಡಿತು. ಆಕಾಶದಲ್ಲಿ ದಟ್ಟವಾದ ಮೋಡಗಳು ಆವರಿಸಿಕೊಳ್ಳ ತೊಡಗಿತ್ತು. ಗಾಳಿಯ ವೇಗ ಹೆಚ್ಚಾಗುತ್ತಾ ಬಂದಿತು. ಜೊತೆಗೆ ಚಳಿಯೂ ಕೂಡಾ ಶುರುವಾಯಿತು. ಒಂದು ದಿನ ಸಕಲೇಶಪುರ ಪಟ್ಟಣದಲ್ಲಿ ನಾಣುವಿನ ಪರಿಚಿತರ ಅಂಗಡಿಯಲ್ಲಿ ಬ್ರೋಕರ್ ಕಾಣಿಸಿಕೊಂಡರು. ನಾಣು ಕೂಡಲೇ ಉತ್ಸುಕತೆಯಿಂದ ಅವರ ಬಳಿಗೆ ಹೋಗಲು ಅವರು ನುಣುಚಿಕೊಳ್ಳಲು ಪ್ರಯತ್ನ ಮಾಡಿದರು. ಅವರನ್ನು ತಡೆದು ನಿಲ್ಲಿಸಿ ನಾಣು… ” ನಿಮ್ಮನ್ನು ನೋಡಿ ಎಷ್ಟು ದಿನಗಳು ಕಳೆಯಿತು. ತೋಟ ಮಾರುವ ಬಗ್ಗೆ ಹೇಳುತ್ತೇನೆ ಎಂದು ಹೇಳಿ ಹೋದವರು ಬರಲೇ ಇಲ್ಲ…. ಏನಾಯ್ತು? ಈಗ ನೋಡಿದರೆ ನನ್ನ ಕಣ್ಣು ತಪ್ಪಿಸಿ ಹೋಗಲು ಹವಣಿಸುತ್ತಾ ಇರುವಿರಿ… ಏನೇ ಇದ್ದರೂ ನನ್ನಲ್ಲಿ ಹೇಳಿ ಎಂದರು”…. “ಏನಿಲ್ಲಾ ಮಾಲೀಕರು ಬರುವುದು ಸ್ವಲ್ಪ ತಡವಾಗುತ್ತದೆ…. ಹಾಗಾಗಿ ನಿಮಗೆ ಹೇಗೆ ತಿಳಿಸಲಿ ಎಂದು ನಾನು ಹಾಗೆ ಮಾಡಿದ್ದು…. ಎಂದರು. ನಂತರ ಹೇಳಿದರು… ಆದಷ್ಟು ಬೇಗ  ತೋಟದ ಮಾಲೀಕರು ಬರುವ  ಮೊದಲು ಕೆಲವು ಕಾಗದ ಪತ್ರಗಳನ್ನು ತಯಾರು ಮಾಡಿ ನಿಮ್ಮ ಸಹಿ ಪಡೆದುಕೊಳ್ಳಲು ಹೇಳಿದ್ದಾರೆ…. ನಾಳೆ ನಾನೇ ಮನೆಗೆ ಬರುವೆ”…. ಎಂದು ಹೇಳಿ ಅವಸರವಾಗಿ ಅಲ್ಲಿಂದ ಬ್ರೋಕರ್ ಹೊರಟು ಹೋದರು. ನಾಣುವಿನ ಮನಸ್ಸು ಚಡಪಡಿಸಿತು. ಏನು ಮಾಡುವುದು ಎಂದು ಮನಸ್ಸಿಗೆ ಹೊಳೆಯದೇ ಸೋತ ಮುಖ ಹೊತ್ತು ಹಿಂತಿರುಗಿ ಅಕ್ಕನ ಮನೆಗೆ ಬಂದರು.

ಮಾರನೆಯ ದಿನ ಬ್ರೋಕರ್ ಕೆಲವು ಕಾಗದ ಪತ್ರಗಳೊಂದಿಗೆ ಬಂದರು. ನಾಣುವಿಗೆ ಕಾಗದಪತ್ರದಲ್ಲಿ ಏನು ಬರೆದಿದೆ ಎಂದು ತಿಳಿಯಲಿಲ್ಲ. ಓದಿ ಹೇಳಲು ವಿನಂತಿಸಿಕೊಂಡರು. ತೋಟ ಖರೀದಿಸುವ ಬಗೆಗಿನ ಮಾಹಿತಿ ಇತ್ತು ಆ ಕಾಗದ ಪತ್ರಗಳಲ್ಲಿ. ಎಲ್ಲರಿಗೂ ಆ ದಿನ ವಿಶೇಷ ಅಡುಗೆ ಮಾಡಲಾಗಿತ್ತು. ಊಟ ಮಾಡಿದರು. ನಂತರ ಕಾಗದ ಪತ್ರಗಳಿಗೆ ನಾರಾಯಣನ್ ಸಹಿ ಹಾಕಿದರು. ಆಗ ಅವರ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. ಹೇಗಿದ್ದರೂ ತೋಟ ಈಗ ನನ್ನದಾಯಿತು. ಇನ್ನು ತೋಟದ ಮಾಲೀಕರು ಹಿಂತಿರುಗಿ ಬಂದ ನಂತರ ಎಲ್ಲವನ್ನೂ ತನ್ನ ಹೆಸರಿಗೆ ಮಾಡುತ್ತಾರೆ. ತಡವಾದರೂ ಪರವಾಗಿಲ್ಲ ಎಲ್ಲವೂ ಸರಿಯಾಯಿತು ಎಂದು ನಿಡಿದಾದ ಉಸಿರು ಬಿಟ್ಟು ಸಂತೋಷದಿಂದ ಮಕ್ಕಳಿಗೂ ಈ ಸಿಹಿ ಸುದ್ಧಿ ತಿಳಿಸಿದರು. 

ಮಕ್ಕಳಿಗೂ ಸಂತೋಷವಾಯಿತು. ಅವರಿಗೆ ತೋಟಕ್ಕಿಂತ ಅಮ್ಮ ಬರುವರಲ್ಲ ಎನ್ನುವ ಖುಷಿ. ಆದಷ್ಟು ಬೇಗ ಅಮ್ಮ ಬಂದರೆ ಸಾಕು ಸಧ್ಯ ಎಲ್ಲವೂ ಸರಿಯಾಯಿತು ಎನ್ನುವ ಆನಂದ ಸುಮತಿಗೆ. ಒಮ್ಮೆ ಅಮ್ಮನನ್ನು ನೋಡಿದರೆ ಸಾಕಾಗಿದೆ ಎಂದು ಅನಿಸಿತು. ಅಮ್ಮನನ್ನು ನೋಡಲು ಕಣ್ಣುಗಳು ಕಾತರಿಸುತ್ತಿದೆ. ಒಳಗೊಳಗೇ ಅಪ್ಪನೂ ಅಮ್ಮನ ಜೊತೆ ಇಲ್ಲದೇ ಒಂಟಿಯಾಗಿ ಇದ್ದು ಅನುಭವಿಸುತ್ತಾ ಇರುವ ಸಂಕಟ ನೋವು ಕಣ್ಣಾರೆ ಕಂಡಿದ್ದಳು ಸುಮತಿ. ತೋಟದ  ಚೆಂದದ ಮನೆಯಲ್ಲಿ ವಾಸಿಸುವ ಕನಸು ನನಸಾಗುವ ಕಾಲ ಸಮೀಪಿಸುತ್ತಾ ಇದೆ. ಇನ್ನೇನು ಆ ಸುಂದರ ಸಂಪದ್ಭರಿತ ತೋಟ ನಮ್ಮದೇ ಎನ್ನುವ ಸಂತೋಷ ನಾಣುವಿಗೆ. ಹಾಗಾಗಿ ಆ ದಿನ ನಿದ್ರೆ ಬರಲೇ ಇಲ್ಲ . ಇನ್ನು ಕಲ್ಯಾಣಿಯನ್ನು ಹೇಗಾದರೂ ಒಲಿಸಿ ಇಲ್ಲಿಗೆ ಕರೆದುಕೊಂಡು ಬರಬೇಕು. ಅವಳಿಲ್ಲದೆ ಏನೋ ದೊಡ್ಡ ನಿಧಿ ಕಳೆದುಕೊಂಡಂತೆ ಆಗಿದೆ. ತೋಟ ನಮ್ಮದು ಎನ್ನುವುದು ಕಾನೂನಿನ ಪ್ರಕಾರ ತೀರ್ಮಾನ ಆದ ಮೇಲೆ ಖಂಡಿತಾ ತಾನು ಹೋಗಿ ಕರೆದರೆ ಬಾರದೇ ಇರಲಾರಳು ಎನ್ನುವುದು ನಾಣುವಿಗೆ ತಿಳಿದಿತ್ತು.


Leave a Reply

Back To Top