ಪ್ರೇಮಾ ಟಿ.ಎಂ.ಆರ್. ಕವಿತೆ ಶಾಲ್ಮಲಿಯ ಹರಿವು ಬಿನ್ನಾಣದಂತಿತ್ತು

ಲೈಟರ್ ಇಲ್ಲದೇ
ಒತ್ತಿದರೆ ಹೊತ್ತಿಕೊಂಡ ಒಲೆಮೇಲೊಂದು
ಕೊಫಿ ಕಾಸಿಕೊಂಡರೆ
ಅಮ್ಮನ ಕೆಂಡದೊಲೆ
ಊದಂಡೆ ಹಾರುವ ಬೂದಿ
ಮುಖದೆದುರು ದಿಮಿಕಿಟ

ವಾರ್ಡರೋಬಿನ ಸೀರೆಗಳನೆಲ್ಲ ಎಳೆದುಹಾಕಿ
ಹೊಸಸೀರೆಯೊಂದ
ಮೈಮೇಲೆಳೆದುಕೊಂಡರೆ
ಚಿಮಣಿಬುಡ್ಡಿ ಬೆಳಕಲ್ಲಿ ಅಮ್ಮ
ಕಂಕುಳು ಹರಿದ ಪೊಲ್ಕ ಹೊಲಿಯುತ್ತಿದ್ದಾಳೆ
ಹೊಸದಾಗಿ ಹೊಲಿಸಿದ
ಫ್ಯಾಶನ್ ಬ್ಲೌಸನ ನೆಕ್ ಇನ್ನೂ
ಒಂಚೂರು ಡೀಪ್ ಇರ್ಬೇಕಿತ್ತು ಮೇಲುಡುಪಿಲ್ಲದೇ ನಮ್ಮೂರಗೌಡತಿ
ಎಷ್ಟೊಂದು ಚಂದಾಗಿ ಸೆರಗು ಕಟ್ಟುತ್ತಾಳೆ
ಕಂಡವರಲ್ಲಿ ಕಾಮನೆಹುಟ್ಟದ ಹಾಗೆ

ಶವರ್ ಕೆಳಗಿನ ಹದಬೆಚ್ಚಗೆ ನೀರು
ಬಾತ್ ಟಬ್ನೊಳಗೆ ಘಮ್ಮದ ಬುರುಗು
ಒಲವಿನವನ ನೇವರಿಕೆಯ ಉನ್ಮತ್ತೆ
ಮೀಯುವದಕ್ಕೂ ಪುರುಸೊತ್ತಿಲ್ಲದೇ
ಬೆನ್ನಮೇಲಷ್ಟು ಅಡ್ಡನೀರು
ಹೊಯ್ದುಕೊಳ್ಳುವ ಹೆಣ್ಣುಗಳು
ಪೂರ್ತಿ ತಣ್ಣಗಾಗಿಸಿಬಿಟ್ಟಿದ್ದಾರೆ ಬಿಸಿಮೈ

ಬೆಳಗಿನ ತುಳಸಿಪೂಜೆಯ ಹೊತ್ತಿಗೆ
ಎದುರುಮನೆಯವಳು ನಾನು
ಮುಖಾಮುಖಿಯಾಗುತ್ತೇವೆ
ಅವಳು ನಗುವದಿಲ್ಲ ಮತ್ತೆ ನಾನ್ಯಾಕೆ
ಶಾಲೆಯಿಂದ ಬರುವಾಗ
ಮಿಸಳಭಾಜಿ ಪುಕ್ಷಟೆ ಕಟ್ಟಿಕೊಡುವ
ದೊಡ್ಡಪ್ಪನ ಚಡ್ಡಿದೋಸ್ತ ಜನಿವಾರದಭಟ್ರ ಹೆಣ್ತಿ ನಮ್ಮ ನಡುವಿನ ಅವಕಾಶದಲ್ಲಿ
ಆಕಾಶಕ್ಕೇರಿಬಿಟ್ಟಿದ್ದಾರೆ

ಯಪ್ಪಾ ಹೆಣ್ಮಕ್ಕಳೇ ವಿಚ್ಛೇಧನಕ್ಕೆ
ಅರ್ಜಿ ಗುಜರಾಯಿಸುತ್ತಿದ್ದಾರಂತೆ…ಪರವಾಗಿಲ್ಲ
ಬೆಳಬೆಳಗ್ಗೇನೆ ಜಗಳ ಕಾಯುವವರೆಲ್ಲ
ಅಂದು ಉಂಡು ಮಲಗುವದರೊಳಗೆ
ಒಂದಾಗಿಬಿಟ್ಟಿರುತ್ತಿದ್ದರು
ಅವ ಭುವಿಯೊಡಲೆಡೆ ಬಾಗುವ ಆಗಸ
ಅವಳು ಮಳೆ ಹನಿಹನಿಯನ್ನೂ
ಹರಿಬಿಡದೇ ಸೆರಗು
ತುಂಬಿಕೊಂಬ ನೆಲದಗಲ

ಅಂಗಳದ ಕಾರಂಜಿಯಲ್ಲಿ
ಕಣ್ಮುಚ್ವಿ ಕಾಲಿಳಿಸಿಕೂತರೆ
ಬುಸುಗುಟ್ಟು ಕೊಡವೆಳೆದ
ನೆಲದಂಡಿಗೆ ಗಡಗಡೆಯ ಕಿರ್ರಕಿರ್ರ
ನಾವೂ ಇದ್ದೆವಲ್ಲ ಹುಡುಗಿ ಎನ್ನುತ್ತವೆ
ಹಸಿರು ಹುಲ್ಲುಮೆತ್ತೆಯ ಮೇಲೆ
ಹೆಜ್ಜೆಯಾಡುವಾಗ ಪ್ರಿಯ ಸಖ
ಟ್ರಿಮ್ ಮಾಡಿದ ಗಡ್ಡಮೀಸೆಯನೊತ್ತಿ
ಕಚಗುಳಿಯಿಟ್ಟ ಸುಖ
ಅಂಗಳದಲ್ಲಿ ಗುಲಾಬಿಗಿಡ
ಮೊಗ್ಗು ಕಚ್ಚುವದೇ ಇಲ್ಲ
ಅಮ್ಮನ ಗೊಜ್ಜು ಮೆಟ್ಟಿ ನಡೆದ
ಬಿರುಕು ಹಿಮ್ಮಡಿಯಲ್ಲಿ ನದಿ ಹರಿಯುತ್ತದೆ
ಅವಳಂಗಳ ಮೂಲೆಯಲ್ಲಿ
ಪರಮಾಳವಿಲ್ಲದ ಮೋತಿಮಲ್ಲಿಗೆಯ ಪೊತ್ತೆಪೊತ್ತೆ

ದುಂಡಗಿನ ಕುಂಕುಮ ಅಡ್ಡಾಗಿಲ್ಲ ತಾನೇ?
ಕನ್ನಡಿಯೆದುರು ನಿಲ್ಲುವದೆಂದರೆ
ಇನ್ನಿಲ್ಲದ ಪ್ರೀತಿ
ಬೆವರೇ ಹನಿಯದ ಹಣೆಗೆ
ಸ್ಟಿಕ್ಕರಿನ ಚೂರು ಅಣಕಿಸುತ್ತದೆ
ಮುಖದ ಮುಂದೆ ಎಂದೂ
ಇಲ್ಲದ ಮಸುಮಸುಕು
ಮಬ್ಬಾಗಿದ್ದು ಕಣ್ಣು ಕನ್ನಡಿಯೋ
ಬದಲಿಸಿ ಬದಲಿಸಿ ಉಜ್ಜುತ್ತೇನೆ
ತನಗೆ ನೂರಾಯಿತೆಂದು
ಬೊಮ್ಡಾಹೊಡೆವ ಅಜ್ಜಿ
ಊರೆಲ್ಲ ಸುತ್ತಿಬಂದಿದ್ದಾಳೆ ಬರಿಗಣ್ಣಲ್ಲಿ
ಅವಳ ಸುಕ್ಕುಗಳಿಗೂ ಅದೆಷ್ಟು ಸೊಕ್ಕು

ನಟ್ಟಿರುಳ ಚುಮುಚುಮು
ಪ್ರೀತಿಯ ತುಂಬು ತೋಳೊಳಗೆ ಹುದುಗಿ
ನಲ್ಲನಿಗೊತ್ತೊತ್ತಿಕೊಂಡು ಕಣ್ಮುಚ್ಚಿದರೆ
ಜಡೆಎಳೆದು ಬೆನ್ನಿಗೆ ಗುದ್ದುತ್ತಿದ್ದ
ನೆರಮನೆಯ ಹುಡುಗ ಎದುರಿಗೆ ನಿಲ್ಲುತ್ತಾನೆ
ಗೋಡೆಗೊತ್ತಿಹಿಡಿದು
ಕೆನ್ನೆಗಿಲ್ಲಿ ಕಣ್ಣಲ್ಲಿ ಕಣ್ಣಿಟ್ಟಿದ್ದ ಇದ್ದಕ್ಕಿದ್ದಂತೆ ಲಂಗಧಾವಣಿಯುಟ್ಟ ಮೊದಲದಿನ
ಅವನ ಭಿನ್ನ ನೋಟದಲ್ಲಿ
ಏನಿತ್ತೋ ಗೊತ್ತಾಗಲೇ ಇಲ್ಲವಾದರೂ
ಎದೆಯೊಳಗೇನೋ ಬಿರಿದಂಗಿತ್ತು
ಶಾಲ್ಮಲಿಯ ಹರಿವೂ ಬಿನ್ನಾಣದಂತಿತ್ತು

ಹೊದ್ದ ಚದ್ದರದೊಳಗೆ
ಬೆನ್ನು ತಣ್ಣಗೆ ಕೊರೆಯುತ್ತದೆ
ಗೋಡೆಮೇಲಿನ ಹಲ್ಲಿ
ಲೊಚಗುಟ್ಟುತ್ತದೆಯೇಕೋ


Leave a Reply

Back To Top