ಅಮ್ಮಾ ಎಂಬ ಬೆಳದಿಂಗಳು
ನಾಗರೇಖಾ ಗಾಂವಕರ
ಅಮ್ಮಾ! ಅಂದ ಕೂಡಲೇ ಅದೇನೋ ಮಧುರವಾದ ಭಾವ ಎದಗೂಡಲ್ಲಿ ಚಕ್ಕನೇ ಸುಳಿದಂತಾಗುತ್ತದೆ. ಆಪ್ತವಾದ ಹೃದಯವೊಂದರ ಬಡಿತ ದೂರದಲ್ಲಿದ್ದರೂ ನಮ್ಮ ಹತ್ತಿರವೇ ಸುಳಿದಾಡುತ್ತಿದೆ ಎಂಬಂತೆ ಭಾಸವಾಗುತ್ತದೆ. ಮಗಳಿಗೆ ಇಷ್ಟವೇನು? ಕಷ್ಟವೇನು ಎಂಬುದನ್ನು ನನ್ನಮ್ಮ ಅರಿತುಕೊಂಡಿದ್ದಳೇ?
ಕೆಲವೊಮ್ಮೆ ಅನ್ನಿಸುತ್ತಿತ್ತು. ಅಮ್ಮನಾಗುವುದೆಂದರೆ ಆ ಪರಿಯ ಜವಾಬ್ದಾರಿಯೇ! ನನ್ನಮ್ಮನೇಕೆ ಸಣ್ಣದಕ್ಕೂ ರೇಗುತ್ತಾರೆ? ಯಾಕೆ ನನ್ನ ಹುಟ್ಟಿಸಿಕೊಳ್ಳಬೇಕಿತ್ತು. ಬೈಯುವುದಾದರೂ ಏಕೆ? ಅಮ್ಮ ಬೈದಾಗ ತಂದೆ ಬೆಂಬಲಿಸುತ್ತಿದ್ದರೂ ಅಮ್ಮ ಅದಕ್ಕೂ ಹುಸಿಮುನಿಸು ತೋರುತ್ತಿದ್ದಾಗ ಅಮ್ಮ ! ನಿನಗೆ ಹೊಟ್ಟೆ ಕಿಚ್ಚು ಅಂತೆಲ್ಲಾ ನಗುತ್ತಿದ್ದ ನನಗೆ ಈಗ ಅದರರ್ಥವಾಗುತ್ತಿದೆ. ಒಳಗೊಳಗೆ ಖುಷಿ ಪಡುತ್ತಿದ್ದ ತಾಯಿ ಹೃದಯ, ಗಂಡನಾದವ ತನ್ನ ಮಕ್ಕಳನ್ನು ಮುದ್ದಿಸುತ್ತಿದ್ದರೆ ತಾಯಿ ತೋರುವ ಹುಸುಮುನಿಸು ವಿಚಿತ್ರ ಖುಷಿಯ ಸಂಭ್ರಮವೆಂದು.
.
ಬದುಕಿನ ಹಲವು ಪಾಠಗಳನ್ನು ಕಲಿಸಿದ್ದು ಹೆತ್ತವರಲ್ಲವೆ? ಆ ಪಾಠಗಳ ಇಂದಿಗೂ ನನ್ನ ಮಕ್ಕಳಿಗೆ ಮುದ್ದಾಂ ಆಗಿ ಹೇಳುವಾಗ ನನಗೆ ನನ್ನಮ್ಮ ನೆನಪಾಗುತ್ತಾರೆ. ಅಮ್ಮನ ಮಾತಿಗೆ ಅಂದು ಸಿಡಿಮಿಡಿಗುಡುತ್ತಿದ್ದ ನಾನು ಇಂದು ಅಮ್ಮನಾದ ಮೇಲೆ ಆ ಮಾತುಗಳನ್ನು, ನಡೆಯನ್ನು ಅನುಕರಿಸುವುದೇಕೆಂದು ಹಲವು ಬಾರಿ ನನ್ನಷ್ಟಕ್ಕೆ ಕೇಳಿಕೊಂಡಿದ್ದೇನೆ. ಕಾರಣ ಆ ಮಾತುಗಳು ಹೊರ ಮನಸ್ಸಿಗೆ ಕಹಿಯಾಗಿದ್ದರೂ, ಒಳಮನಕ್ಕೆ ಹಿತವಾಗಿರಬೇಕು. ಹಾಗಾಗೇ ಅವುಗಳನ್ನು ನನ್ನ ಸುಪ್ತ ಮನ ನೆನಪಿನಲ್ಲಿಟ್ಟುಕೊಂಡಿರಬೇಕು. ಅಲ್ಲವೇ?
ಆಕೆಯ ಒಳಗುದಿ, ಹೆಣ್ಣು ಹೆತ್ತ ಕರುಳಿನ ಜವಾಬ್ದಾರಿ ಎಷ್ಟೆಂಬುದು ಆ ನಂತರವಷ್ಟೇ ನನಗರ್ಥವಾಗಿದ್ದು. ಹುಡುಗಿಯಾದ ತಪ್ಪಿಗೆ ನನಗಿಂತ ಶಿಕ್ಷೆ ಎಂದು ಆಗ ಅನ್ನಿಸುತ್ತಿತ್ತಾದರೂ, ಅಮ್ಮನ ಉಪದೇಶಗಳು ಕಿರಿಕಿರಿಗಳು, ಕೊರೆತದ ಗರಗಸವೆನ್ನಿಸುತ್ತಿತ್ತಾದರೂ ಅದು ನನ್ನನ್ನು ಕೊರೆಯಲಿಕ್ಕಲ್ಲ. ಬದಲಿಗೆ ನನ್ನ ಸುತ್ತ ಇದ್ದ ಮುಳ್ಳು ಹಿಂಡುಗಳನ್ನು ಕತ್ತರಿಸಿ ನನಗೊಂದು ಸುಂದರ ಉಪವನ ನಿಮರ್ಿಸಿಕೊಡುವ ಆಸೆಯಿಂದಾಗಿತ್ತು ಎಂಬುದು ನನಗರ್ಥವಾಗಿದ್ದು ನಾನು ತಾಯಿಯಾಗಿ ಆ ಹೊರೆ ಹೊತ್ತಾಗಲೇ.
ಅಮ್ಮ ನನ್ನ ಎತ್ತಿ ಎತ್ತಿ ಮುದ್ದಿಸಿರಲಿಲ್ಲ. ಹೊಗಳಿ ಹಾಡುತ್ತಿರಲಿಲ್ಲ. ಆದರೆ ತೆಗಳಲು ಹಿಂದೆ ಮುಂದೆ ನೋಡುತ್ತಿರಲಿಲ್ಲ. ಹೀಯಾಳಿಸುವುದು, ನೋಯಿಸುವುದು ಮಾಡಿದಾಗಲೆಲ್ಲ ಅಮ್ಮ ಕ್ರೂರಿಯಂತೆ ಕಾಣುತ್ತಿದ್ದರು. ಮೂದಲಿಕೆ ಮಾಡಿಗೊತ್ತೆ ಹೊರತು ಮುದ್ದಿಸಿ ಗೊತ್ತಿಲ್ಲ ನಿನಗೆ ಎಂದು ದೊಡ್ಡವಳಾದಾಗ ಹೇಳುತ್ತಿದ್ದೆ ಅಮ್ಮನಿಗೆ. ಆಗ ಆಕೆ . ನಾ ಮುದ್ದಿಸ್ತಾ ಕೂತ್ರೆ, ನೀ ಮುದ್ದೆ ತಿನ್ನುಕಾತತೇ ಮಗನೇ? ಎನ್ನುತ್ತಿದ್ದರು. ಅದೂ ನಮಗೂ ಅರಿವಿತ್ತು.
ಆದರೆ ಅಮ್ಮ ಮಕ್ಕಳ ಬಗ್ಗೆ ಅದೆಷ್ಟು ಕಾಳಜಿ ಮಾಡುತ್ತಿದ್ದರು. ಮನೆಯಿಂದ ಹೊರಹೋದ ಮಕ್ಕಳು ಸರಿಯಾದ ಸಮಯಕ್ಕೆ ಬರದಿದ್ದಲ್ಲಿ ಅಮ್ಮ ಕಳವಳ ಪಡುತ್ತಿದ್ದಳು. ಶಾಲೆಗೋ,ಇನ್ನಿತರ ಕೆಲಸಕ್ಕೋ ಹೊರಹೋದ ಮಕ್ಕಳು ಬರುವುದು ಒಂದಿಷ್ಟು ವಿಳಂಬವಾದರೂ ಆಕೆಯ ಮನಸ್ಸು ಪರಿತಪಿಸುತ್ತಿತ್ತು. ಮನೆಯಂಗಳದಲ್ಲಿ ನಿಂತು ಕಣ್ಣು ಹಾಯುವಷ್ಟು ದೂರ ನೋಡುತ್ತಾ ಕಾಯುತ್ತ ಉಳಿದು ಬಿಡುತ್ತಿದ್ದಳು. ದೂರದಲ್ಲಿ ಬರುವ ಮಕ್ಕಳನ್ನು ಕಂಡೊಡನೆ ಆಕೆಗೆ ಸಮಾಧಾನವಾಗುತ್ತಿತ್ತು.
ಅಮ್ಮ ಆಗಾಗ ನನ್ನ ಎಣ್ಣೆಗಪ್ಪು ಮೈಬಣ್ಣವನ್ನು ಲೇವಡಿ ಮಾಡುತ್ತಿದ್ದರು. ಅಕ್ಕಂದಿರ ಬಿಳಿ ಚರ್ಮದೊಂದಿಗೆ ಹೋಲಿಸುತ್ತಿದ್ದರು. ಬಿಸಿಲಿಗೆ ಮುಖ ಕೊಟ್ಟು ನಡೆವ ನನಗೆ ಬೈಯುತ್ತಿದ್ದರು. ಆಗೆಲ್ಲ ನನಗೆ ಅತಿಯಾದ ನೋವು, ಜಿಗುಪ್ಸೆ ಬರುತ್ತಿತ್ತು. ನನಗೂ ಬಂಗಾರದ ಬಣ್ಣವನ್ನು ದೇವರು ಕೊಡಲಿಲ್ಲವೇಕೆಂದು ದೇವರನ್ನು ದೂರುತ್ತಿದ್ದೆ. ಸದಾ ನನ್ನ ಕಾಡುವ ನನ್ನ ಬಣ್ಣವನ್ನು ಹಂಗಿಸುವ ಅಣ್ಣಂದಿರ ಜೊತೆ ಸೇರಿ ತಾನೂ ನನ್ನ ತಮಾಷೆ ಮಾಡುವುದರಲ್ಲಿ ಅದ್ಯಾಕೋ ಅಮ್ಮ ಖುಷಿ ಪಡುತ್ತಿದ್ದಳು. ಎಳೆಯ ಮನಸ್ಸಿಗೆ ನೋವಾಗುವುದೆಂಬ ಕನಿಷ್ಟ ತಿಳುವಳಿಕೆ ಅಮ್ಮನಾದವಳಿಗೆ ಇರಲಿಲ್ಲವೇ? ಎಂಬ ವಿಸ್ಮಯ ನನಗೀಗ ಆಗುತ್ತಿದೆ. ಆಗೆಲ್ಲ ಮಾನಸಿಕವಾಗಿ ನಾನು ಎಷ್ಟು ಕುಗ್ಗಿ ಹೋಗುತ್ತಿದ್ದೆ ಎಂದರೆ ಯಾರೂ ಇಲ್ಲದಾಗ ಮನೆ ಹಿಂದಿನ ಹಳ್ಳದ ಕಡೆ ನಡೆದುಬಿಡುತ್ತಿದ್ದೆ. ನೀರಿನ ಝಳು ಝಳು ನಾದದೊಂದಿಗೆ ನನ್ನ ಆಕ್ರಂದನ ಬೆರೆದು ಹೋಗುತ್ತಿತ್ತು. ಈಗೆಲ್ಲ ನಾವು ಮಕ್ಕಳು ಅತ್ತರೆ ಅದೆಷ್ಟು ಮುದ್ದಿಸುತ್ತೇವೆ. ಆಗ ನಮಗೆ ನೋವನ್ನು ಉಂಟುಮಾಡಿಯೂ ಸಂತೈಸಲು ಇಷ್ಟಪಡದ, ಆ ಪರಿಯ ಪ್ರೀತಿಯನ್ನು ಎಂದೂ ತೋರದ ಹೆತ್ತವರು ಕೆಲವೊಮ್ಮೆ ಕ್ರೂರಿಗಳಂತೆ ಕಂಡಿದ್ದರು. ಪ್ರೀತಿ ಹೃದಯದಲ್ಲಿತ್ತೆಂದು ಈಗ ಅರಿವಾಗುತ್ತದೆ ಅಷ್ಟೇ! ಅದನ್ನು ಪ್ರಕಟಿಸಬಾರದಿತ್ತೇ ಆಗಲೇ ಎಂದೂ ಅನ್ನಿಸುತ್ತದೆ. ಇದೆಲ್ಲ ನಾನು ಪ್ರೌಢೆಯಾಗುತ್ತಾ ಅರಿವಾಗುತ್ತಿದೆ.
ಕಾಲೇಜು ಮುಗಿಯುವವರೆಗೂ ಅಮ್ಮ ನನ್ನನ್ನೆಂದೂ ಪ್ರೀತಿಯಿಂದ ಮುದ್ದಿಸಿರಲಿಲ್ಲ. ಕಾಲೇಜು ಮುಗಿಸಿ ಮನೆಗೆ ಬರುತ್ತಲೇ ನನ್ನ ಅಣ್ಣಂದಿರು ಹಾಗೂ ಎರಡನೇಯ ಅಕ್ಕನಿಗೆ ಅಮ್ಮನ ಕೈ ಅಡುಗೆಯೇ ಆಗಬೇಕಿತ್ತು. ಅಮ್ಮ ಬಡಿಸದಿದ್ದರೆ ಉಣ್ಣದೇ ಉಳಿಯುವ ಜಾಯಮಾನ ಅವರದು. ಆದರೆ ನನಗೆ?
ಅಮ್ಮ ಗಟ್ಟಿಗಾತಿ. ಸ್ವಲ್ಪ ಕೋಪಿಷ್ಟೆ. ಇಪ್ಪತ್ತಾರು ವರ್ಷಕ್ಕೆ ಆರು ಮಕ್ಕಳ ತಾಯಿಯಾಗಿ ಸಂಸಾರದ ನೊಗ ಹೊತ್ತಿದ್ದರು. ಸರಕಾರಿ ನೌಕರನಾದ ತಂದೆ ವಗರ್ಾವಣೆಗೊಂಡಲ್ಲೆಲ್ಲಾ ಊರೂರು ಅಲೆಯುತ್ತಾ ಸುಮಾರು ಹತ್ತು ವರ್ಷ ಹೇಗೋ ಕಾಲ ತಳ್ಳಿದ ಮೇಲೆ ಮಕ್ಕಳ ವಿಧ್ಯಾಭ್ಯಾಸದ ಜೊತೆಗೆ ತನ್ನದೇ ಸ್ವಂತ ಸೂರು, ಬಂಧುಬಾಂಧವರ ಜೊತೆ ಹತ್ತಿರದ ನೆಲೆಯನ್ನು, ಭದ್ರತೆಯನ್ನು ಆಪೇಕ್ಷಿಸಿ ಅಮ್ಮ ಮಕ್ಕಳ ಕಟ್ಟಿಕೊಂಡು ಊರಿಗೆ ಬಂದೇಬಿಟ್ಟರು. ತಂದೆಯನ್ನು ನಾವು ‘ದಾದ’ ಎಂದೇ ಕರೆಯುತ್ತಿದ್ದೆವು. ದಾದ ಊರಲ್ಲಿ ಹತ್ತು ಹದಿನೈದು ಎಕರೆ ಜಮೀನು ಖರೀದಿಸುವಂತೆ ಮಾಡಿ, ಆ ಭೂಮಿಯಲ್ಲಿ ಕೃಷಿಗೆ ನಿಂತರು ಅಮ್ಮ. ಅವರ ಮಹತ್ವಾಕಾಂಕ್ಷೆಯನ್ನು ಮನಗಂಡ ದಾದ ಅದಕ್ಕೆ ಪೂರಕವಾಗಿ ಜಮೀನಿನಲ್ಲಿ ಭತ್ತದ ಜೊತೆ ತೆಂಗು ಕಂಗುಗಳ ಕೃಷಿಯನ್ನು ಮಾಡಿದರು. ಫಸಲು ಬರುವುದಕ್ಕೆ ಇನ್ನೂ ಕಾಲವಿತ್ತು ಎರಡೆರಡು ಬಾವಿಗಳು ತಲೆ ಎತ್ತಿದ್ದವು. ತಂದೆ ಸರಕಾರಿ ನೌಕರಿಯಲ್ಲಿ ತಮ್ಮ ತೊಡಗಿಸಿಕೊಂಡಿದ್ದರು.
ಸದಾ ಸಮಾಜಮುಖಿ ಕೆಲಸದಲ್ಲಿ ಇತರರಿಗೆ ಸಹಾಯ, ಸಹಕಾರ, ಮಾರ್ಗದರ್ಶನ ಅಂತೆಲ್ಲ ತನ್ನನ್ನು ತೊಡಗಿಸಿಕೊಂಡಿದ್ದ ತಂದೆ, ಒಬ್ಬರೇ ಕೆಲಸದ ಸ್ಥಳದಲ್ಲಿ ಉಳಿಯಬೇಕಾಯ್ತು. ಯಾವತ್ತೂ ಕ್ರಿಯಾಶೀಲನಾಗಿರುತ್ತಾ, ಹಣವನ್ನೂ ನೀರಿನಂತೆ ಖರ್ಚು ಮಾಡುತ್ತಿದ್ದ ತಂದೆ ನನ್ನಮ್ಮನ ಮದುವೆಯಾದ ನಂತರವೇ ಒಂದು ಹದಕ್ಕೆ ಬಂದಿದ್ದು ಎಂದು ಅಮ್ಮ ಅವರೆದುರು ಹೇಳುತ್ತಿದ್ದರೆ ತಂದೆ ಸಣ್ಣಗೆ ನಗುತ್ತಿದ್ದರು. ಮತ್ತು ತಮಾಷೆಯಾಗೇ ನನ್ನ ದುಡ್ಡು ತಕ್ಕಂಡೇ ನಂಗೆ ಆರತಿ ಮಾಡ್ತಾಳೇ ನಿಮ್ಮಮ್ಮ ಎನ್ನುತ್ತಿದ್ದರು. ಅಮ್ಮನದು ಒಂದಿಷ್ಟು ಜಾಸ್ತಿಯೇ ಎನ್ನುವ ಹಿಡಿತದ ಕೈ. ಮಕ್ಕಳ ಕುರಿತು ಮುದ್ದಿಗಿಂತ ಅವರ ಮುಂದಿನ ಭವಿಷ್ಯದ ಕುರಿತು ಚಿಂತೆ.
ತಂದೆ ಹೊರ ಊರಲ್ಲಿ ಹೋಟೆಲ್ಲು ಊಟ ಎನ್ನುತ್ತ ಆರೋಗ್ಯವನ್ನು ಕೆಡಿಸಿಕೊಂಡಿದ್ದರು. ನಲವತ್ತೇಳು ವರ್ಷಕ್ಕೆ ಮೊದಲ ಭಾರಿಗೆ ಹೃದಯಬೇನೆಗೆ ಗುರಿಯಾಗಿದ್ದರು. ಗಟ್ಟಿಗಾತಿ ಅಮ್ಮ ಮೊದಲ ಬಾರಿಗೆ ಅತ್ತಿದ್ದನ್ನು ನೋಡಿದ್ದೆ. ಆಕೆ ಕಳವಳಗೊಂಡಿದ್ದಷ್ಟೇ ಅಲ್ಲ ಆರು ಮಕ್ಕಳ ಹೊತ್ತ ಒಡಲು ಅವರನ್ನು ಪೊರೆಯಬೇಕಾಗಿತ್ತಲ್ಲ.
ಹಾಗಾಗಿ ತಂದೆಗೆ ಕಡ್ಡಾಯ ಪೆನಷನ್ ಪಡೆಯಲು ಹೇಳಿ ಮನೆಯಲ್ಲಿ ಆರಾಂ ಆಗಿ ಇರುವಂತೆ ಮಾಡಿದ್ದರು. ಅಂದಿನಿಂದ ತಾವೇ ಹೊಲ ತೋಟ ನೋಡಿಕೊಳ್ಳುತ್ತ ಇರತೊಡಗಿದರು. ಹೊಲದಲ್ಲಿ ಕೆಲಸದವರೊಂದಿಗೆ ತಾವೂ ದುಡಿಯುತ್ತಿದ್ದರು. ಮನೆಯ ಅಡುಗೆ ಕೆಲಸ, ತೋಟದ ಕೆಲಸ ಗದ್ದೆಯ ಕೆಲಸ, ತೋಟಕ್ಕೆ, ಗದ್ದೆಗೆ ಔಷಧಿ ಹೊಡೆಯುವುದು, ಗಂಡು ಆಳುಗಳು ಮಾಡುವ ಕೆಲಸಕ್ಕಿಂತ ಹೆಚ್ಚೆ ಮಾಡುತ್ತಿದ್ದರು. ತನ್ನ ದೈಹಿಕ ಆರೋಗ್ಯದ ಕಡೆ ಕಾಳಜಿ ಮಾಡದೇ ಇರುವ ಕಾರಣವೇ ಇರಬೇಕು. ಅಮ್ಮ ಮೂವತ್ತೊಂಬತ್ತು ವರ್ಷಕ್ಕೆ ಮೊದಲ ಬಾರಿ ವಿಪರೀತ ರಕ್ತಸ್ರಾವಕ್ಕೆ ಗುರಿಯಾಗಿ ಹಾಸಿಗೆ ಹಿಡಿದರು. ಬಂಗಾರದ ಮೈಬಣ್ಣದ ಅಮ್ಮ ಬಿಳಿಚಿಕೊಂಡಿದ್ದರು. ಅಶಕ್ತರಾಗಿದ್ದರು.
ನಾನಾಗ ಎಂಟನೇ ತರಗತಿ ಪಾಸಾಗಿದ್ದೆ. ಅಮ್ಮನಿಗೆ ವಿಪರೀತ ರಕ್ತಸ್ರಾವ ಆಗಿ ಊರಲ್ಲಿಯ ಆಸ್ಪತ್ರೆಗಳಿಗೆ ಎಡತಾಕಿದರೆ, ಅಲ್ಲಿ ಗುಣಕಾಣದೇ ಹುಬ್ಬಳ್ಳಿಗೆ ಪೂರ್ತಿ ತಪಾಷಣೆಗೆ ಕೊಂಡೊಯ್ದರು. ಅಲ್ಲಿ ಅವರನ್ನು ಕಾನ್ಸರ್ ತನ್ನ ಮುಷ್ಟಿಯಲ್ಲಿ ಬಂಧಿಸಿರುವುದು ಗೊತ್ತಾಗುತ್ತಲೇ ನಾವೆಲ್ಲ ಮಾತು ಕಳೆದುಕೊಂಡಂತೆ ಅಸಹಾಯಕರಾಗಿದ್ದೆವು.
ತಂದೆ ಕಣ್ಣಿರಿಟ್ಟಿದ್ದರು. ಎಲ್ಲ ಮಕ್ಕಳು ಕಲಿಯುತ್ತಿರುವ ಹಂತದಲ್ಲಿ, ಯಾರೂ ತಮ್ಮ ಜೀವನದ ಹಾದಿಯನ್ನು ಕಂಡುಕೊಳ್ಳದ ಹೊತ್ತಲ್ಲಿ, ಅಮ್ಮಾ1 ನೀವು ಎಷ್ಟು ನೋವುಂಡಿರಿ? ಅದೆಲ್ಲ ನಮಗೆ ತಾಕಬಾರದೆಂದು ನೀವಿಬ್ಬರೂ ಇರುವಾಗ ನೀವು ತಣೆಯ ಮೇಲೂ ದಾದ ತಣೆಯ ಮೇಲ್ಚಿಟ್ಟೆಯ ಮೇಲೂ ಕೂತು ಮನಸ್ಸನ್ನು ಹಗುರಮಾಡಿಕೊಳ್ಳುತ್ತಿದ್ದದ್ದನ್ನು ಕೊನೆಯವಳಾದ ನಾನು ಗ್ರಹಿಸುತ್ತಿದ್ದೆ. ಆಗ ಬುದ್ದಿ ಇರಲಿಲ್ಲ. ಸುಮ್ಮನೇ ಇಷ್ಟೊಂದು ನೋಯುತ್ತಾರೆ ಎಂದೆಲ್ಲಾ ಅವರಿಗೆ ಉಪದೇಶ ಮಾಡುತ್ತಿದ್ದೆ. ನೀವಾಗ ನಗುತ್ತಿದ್ದಿರಿ.
ಅಮ್ಮ ತಿಂಗಳುಗಟ್ಟಲೇ ಆಸ್ಪತ್ರೆಯಲ್ಲಿ ಉಳಿದರು. ಅರ್ಬುದ ರೋಗಕ್ಕೆ ನೀಡುತ್ತಿದ್ದ ಕರೆಂಟುಗಳು ಅವರ ನರಗಳನ್ನು ನಿರ್ಜೀವ ಮಾಡುತ್ತಿದ್ದವು. ಅಮ್ಮ ಸಾವನ್ನು ಗೆದ್ದು ಬಂದಿದ್ದಳು. ಆದರೆ ಈ ಸಂತೋಷ ಕೂಡಾ ಬಹಳ ದಿನ ಉಳಿಯಲಿಲ್ಲ. ತಂದೆ ಹೃದಯಬೇನೆ ದಿನವೂ ಔಷಧಿ ತಿಂದರೆ ಅಮ್ಮ ಅರ್ಬುದ ರೋಗಕ್ಕೆ. ಮನೆ ಎನ್ನುವದು ಸಣ್ಣ ಔಷಧಾಲಯವಾಗಿತ್ತಲ್ಲ. ಎರಡೇ ವರ್ಷಕ್ಕೆ ಪುನಃ ಅಮ್ಮನ ಮೈ ಮತ್ತೆ ಕ್ಯಾನ್ಸರ್ಗೆ ಬಲಿಯಾಗಿತ್ತು. ಆಗ ಮನೆ ಜನರೆಲ್ಲ ಆಶಾವಾದವನ್ನೆ ಕಳೆದುಕೊಂಡಿದ್ದರು. ಅಲ್ಲವೇ ಅಮ್ಮ?
ತಂದೆ ಕೂಡಾ ಆಗ ಅತ್ತಿದ್ದರು. ಹಿರಿಯಣ್ಣ ಮನದಲ್ಲೆ ಸಂಕಟ ಪಟ್ಟಿದ್ದ. ಅಮ್ಮನ ಹಿಂದೆ ಯಾವಾಗಲೂ ಇರುತ್ತಿದ್ದ ಎರಡನೇಯ ಅಣ್ಣ ಕಳವಳಪಟ್ಟಿದ್ದ. ಹಿರಿಯಕ್ಕ ಕಿರಿಯರಾದ ನಮಗೆ ಅಮ್ಮನಂತೆ ಸಾಂತ್ವನ ಹೇಳುವುದು, ಮೊದಲಿಗಿಂತ ಹೆಚ್ಚು ಪ್ರೀತಿ ತೋರುವುದು ಮಾಡಲಾರಂಭಿಸಿದಳು. ಕಿರಿಯಣ್ಣ ಮೌನಿಯಾಗಿದ್ದ. ಒಟ್ಟು ದಿನಕ್ಕೆರಡು ಕರೆಂಟುಗಳನ್ನು ಕೊಡಿಸಿಕೊಳ್ಳುತ್ತಾ ತಿಂಗಳಾನುಗಟ್ಟಲೆ ಅಮ್ಮ ಹುಬ್ಬಳ್ಳಿ ಕಾನ್ಸರ್ ಆಸ್ಪತ್ರೆಯಲ್ಲಿ ಜನರಲ್ ವಾಡರ್ಿನ ಹಾಸಿಗೆಯಲ್ಲಿ ಮಲಗಿರುತ್ತಿದ್ದರು. ಸ್ವಚ್ಛತೆಯನ್ನು ಇಷ್ಟ ಪಡುತ್ತಿದ್ದ ಅಮ್ಮ ಹುಬ್ಬಳ್ಳಿ ಜನರ ಹಚ್ಚಿಕೊಳ್ಳುವ ಗುಣವನ್ನು ಇಷ್ಟ ಪಡುತ್ತಿದ್ದರೂ, ಅವರ ಸ್ವಚ್ಛವಲ್ಲದ ಜೀವನ ಶೈಲಿಗೆ ಕಷ್ಟ ಪಡುತ್ತಿದ್ದರು. ಬಾತರೂಮುಗಳು, ಟಾಯ್ಲೆಟ್ಗಳು ಎಲ್ಲರೂ ಬಳಸುತ್ತಿದ್ದರಿಂದ ಅಲ್ಲಿಯ ವ್ಯವಸ್ಥೆಯನ್ನು ಕಣ್ಣುಮುಚ್ಚಿ ಬಾಯಿ ಮುಚ್ಚಿ ಸಹಿಸಿಕೊಂಡಿದ್ದರು. ಕಾರಣವಿಷ್ಟೇ, ಖಚರ್ುಮಾಡಲು ಹಣವಿರಲಿಲ್ಲ. ಒಂದಿಷ್ಟು ಇದ್ದರೂ ಮುಂದೆ ಮೂರು ಹೆಣ್ಣು ಮಕ್ಕಳು, ಮೂವರು ಗಂಡು ಮಕ್ಕಳ ಭವಿಷ್ಯ ನೆಲೆಯಾಗಬೇಕಿತ್ತಲೇ? ಅಮ್ಮನೊಂದಿಗೆ ಆಸ್ಪತ್ರೆ ವಾಸಕ್ಕೆ ನಾನೂ ಜೊತೆಯಾಗಿದ್ದೆ. ಒಂದೊಂದು ಅನುಭವವೂ ನನ್ನ ಮಿತಿಯನ್ನು ವಿಸ್ತರಿಸುತ್ತಲೇ ಇದ್ದವು. ಸಹನೆಯನ್ನು, ಸಂಕಟಗಳನ್ನು ಎದುರಿಸುತ್ತಾ ಬೆಳೆದೆ. ಆಸ್ಪತ್ರೆಯಲ್ಲಿ ಅಕ್ಕಪಕ್ಕದ ಜನರ ಜೊತೆ ಮಾತನಾಡುತ್ತಾ, ಅಮ್ಮ ಒಮ್ಮೊಮ್ಮೆ ಕಣ್ಣಲ್ಲಿ ನೀರು ತಂದುಕೊಳ್ಳುತ್ತಿದ್ದರು. ನನಗೂ ಅಳು ಬರುತ್ತಿತ್ತು.
ಅಂತೂ ಎರಡನೇ ಬಾರಿಯೂ ಸಾವಿನೊಡನೆ ಹೋರಾಡಿ ಗೆದ್ದು ಮನೆಗೆ ಬಂದಳು ಅಮ್ಮ. ಅಕ್ಕನ ಮದುವೆ ಮಾಡುವ ನಿಧರ್ಾರಕ್ಕೆ ಬಂದರು. ಮದುವೆಯೂ ಆಯಿತು. ಅಣ್ಣನಿಗೆ ಆಗಷ್ಟೇ ನೌಕರಿ ಸಿಕ್ಕಿತು. ಎರಡು ಮೂರು ವರ್ಷಗಳಲ್ಲಿ ಎರಡನೇ ಅಕ್ಕನ ಮದುವೆಯೂ ಆಗಿ ಸಮಾಧಾನ ಎಂದುಕೊಳ್ಳುತ್ತಿರುವಾಗ ಅಮ್ಮನಿಗೆ ಸಕ್ಕರೆ ಕಾಯಿಲೆ ಗಂಟುಬಿದ್ದಿತ್ತು. ಸಿಹಿ ಎಂದರೆ ಪ್ರಾಣವಾಗಿದ್ದ ಅಮ್ಮ ಸಿಹಿಯನ್ನು ಬಿಟ್ಟೆ ಬಿಟ್ಟರು. ಕಟ್ಟು ನಿಟ್ಟಾಗಿ ಪಥ್ಯ ಮಾಡತೊಡಗಿದರು. ಡಯಾಬೀಟಿಸ್ ಮಹಾಶಯ ಕ್ಯಾನ್ಸರ್ಗೆ ಕೊಟ್ಟ ಕರೆಂಟ್ನ ಬಳುವಳಿಯಾಗಿ ಬಂದಿದ್ದ.
ಮತ್ತೇ ಶೋಕ! ತಂದೆ ಮೂರನೇ ಬಾರಿ ಹೃದಯಾಘಾತಕ್ಕೆ ಒಳಗಾದಾಗ ಮತ್ತೆ ಬದುಕಲಿಲ್ಲ. ಆ ಒಂದು ಕೆಟ್ಟ ಮುಂಜಾನೆ ಬೆಳಿಗ್ಗೆಯ ನಾನೇ ಕೊಟ್ಟ ಚಹಾ ಲೋಟ ಕೈಯಲ್ಲಿ ಹಿಡಿದಿದ್ದರಷ್ಟೇ! ಮರುಕ್ಷಣ ಮಂಚದ ಮೇಲಿನ ಹಾಸಿಗೆಯಿಂದ ಕೆಳಗೆ ಬಿದ್ದವರು ಹೊರಟೇ ಹೋಗಿದ್ದರು.
ಅಮ್ಮ ಈಗ ಒಂಟಿಯಾಗಿದ್ದರು. ಮಕ್ಕಳನ್ನು ಇನ್ನೂ ಜಾಸ್ತಿ ಜಾಸ್ತಿ ಪ್ರೀತಿಸತೊಡಗಿದರು. ಎಲ್ಲರ ಮದುವೆಯೂ ಆಯಿತು. ಅಮ್ಮ ಅದೆಷ್ಟು ನಿರಾಶೆ, ನೋವು, ಮೂದಲಿಕೆಗಳನ್ನು ಮಾಡಿ ನನ್ನ ತಿದ್ದುವ ಪ್ರಯತ್ನ ಮಾಡುತ್ತಿದ್ದರೋ, ಅಷ್ಟೇ ಪ್ರೀತಿ,ವಿಶ್ವಾಸ, ಕರುಣೆಯನ್ನೂ ಬಡಿಸಿದ್ದರು. ಒಂದಿಷ್ಟು ಹೇಳಿದ್ದನ್ನು ಕೇಳದ ಅಧಿಕಪ್ರಸಂಗಿ ಎಂದು ಬೈಯುತ್ತಿದ್ದರೋ ಅವರೇ ನನ್ನ ಹಚ್ಚಿಕೊಳ್ಳತೊಡಗಿದರು. ಅದೂ ಅತಿಯಾಗಿ ಪ್ರೀತಿಸಿದ್ದ ಅಕ್ಕ ಮದುವೆಯಾಗಿ ಹೋದ ಮೇಲೆ. ಎರಡನೇಯ ಅಣ್ಣನ ಮದುವೆಯಾದ ಮೇಲೆ. ಅಮ್ಮ ನನ್ನ ಪ್ರೀತಿಸತೊಡಗಿದ್ದರು. ನಾನು ಅಮ್ಮನ ಮಗಳಾಗಿದ್ದೆ.
ಆದರೆ ಮಗಳನ್ನು ಮದುವೆಮಾಡಿಕೊಡಲೇಬೇಕಿತ್ತು. ನನ್ನ ವಿವಾಹ ಆಗುತ್ತಲೇ ಅಮ್ಮ ಇನ್ನಷ್ಟು ಏಕಾಂಗಿಯಾದರು. ಸುಮ್ಮನೇ ನವೆಯುತ್ತಿದ್ದರು. ತಂದೆಯನ್ನು ನೆನೆದು ಕೊರಗುತ್ತಿದ್ದರು. ಹಳಹಳಿಸುತ್ತಿದ್ದರು.
ಅಮ್ಮಾ ಅದೆಷ್ಟು ಕಷ್ಟದ ಜೀವನ ನಡೆಸಿದರು. ಕೈಯಲ್ಲಿ ಹಣವಿದ್ದಾಗಲೂ ಐಶಾರಾಮಿಯಾಗಿ ಬದುಕುವಂತಿದ್ದರೂ, ಮೊಮ್ಮಕ್ಕಳ ನೆನೆದು, ತನ್ನ ಸ್ವಾರ್ಥ ಬಿಟ್ಟು, ಅವರಿಗಾಗಿ ಉಳಿಸಿಟ್ಟರು. ಯಾಕಮ್ಮಾ ! ನೀನು ಹೀಗೆ ಮಾಡುತ್ತೀ! ಈಗ ಯಾರಿಗಾಗಿ ಉಳಿಸಬೇಕು ನೀನು. ಅನುಭವಿಸಬೇಕಲ್ಲದೇ ಎಂದರೆ ನಿಮ್ಮ ದಾದೋರ ಇರುವಾಗ ನಾನು ಅನುಭವಿಸಲಿಲ್ಲ. ನಿಮ್ಮ ಭವಿಷ್ಯದ ಚಿಂತೆಯಲ್ಲಿ ಅವರಿಗೂ ಅನುಭವಿಸಲು ಕೊಡಲಿಲ್ಲ. ಈಗ ನಾನೊಬ್ಬಳೇ ಏನು ಅನುಭವಿಸಲಿ. ನಿಮಗಾದೀತು ಉಳಿದರೆ ಎನ್ನುತ್ತಿದ್ದರು.
ಹೆತ್ತವರೆಂದರೆ ಹಾಗೇ ಏನು? ಮಕ್ಕಳು ಸುಖವಾಗಿ ಇರುವುದು ತಿಳಿದರೂ ಇನ್ನು ಸುಖಕಾಣಲಿ ಎಂಬ ಹೆಬ್ಬಯಕೆ. ಅಮ್ಮ ಕೂಡಾ ದಾದನಂತೆ ಹಾಸಿಗೆ ಹಿಡಿಯದೇ, ಯಾರಿಂದಲೂ ಸೇವೆ ಮಾಡಿಸಿಕೊಳ್ಳದೇ, ಒಂದು ದಿನ ಹೇಳದೇ ಕೇಳದೆ ಹೃದಯಾಘಾತಕ್ಕೆ ಗುರಿಯಾಗಿ ಹೊರಟೇ ಹೋದರು. ಬದುಕಿಗೆ ಬೆಳದಿಂಗಳಿನಂತಹ ಅಮ್ಮ ಇನ್ನಿಲ್ಲವಾದರು.
ನಿರಂತರ ಕಾಡುವ ನೆನಪಾಗಿ ಉಳಿದುಹೋದರು…
*********
ಚೆನ್ನಾಗಿದೆ