ಧಾರಾವಾಹಿ-ಅಧ್ಯಾಯ –17
ಒಬ್ಬ ಅಮ್ಮನ ಕಥೆ
ರುಕ್ಮಿಣಿ ನಾಯರ್
ಅಮ್ಮ ಜೊತೆಯಿರದ ಸಂಕಟ
ಅಮ್ಮನನ್ನು ಬಿಟ್ಟು ಬಂದ ಮಕ್ಕಳ ಸಂಕಟ ಹೇಳತೀರದು.
ಈಗ ಅಕ್ಕಂದಿರೇ ತಮ್ಮಂದಿರನ್ನು ಅಮ್ಮನ ಹಾಗೆ ಆರೈಕೆ ಮಾಡುತ್ತಾ ಸಂತೈಸುತ್ತ ಇರುವರು. ಇಲ್ಲಿ ಎಲ್ಲವೂ ಅವರಿಗೆ ಹೊಸತು. ಸಕಲೇಶಪುರಕ್ಕೆ ಬಂದು ಎರಡು ದಿನ ಕಳೆದ ನಂತರ ಅಪ್ಪನ ಜೊತೆ ಮಕ್ಕಳೆಲ್ಲರೂ ತೋಟ ನೋಡಲು ಜೀಪಿನಲ್ಲಿ ಹೊರಟರು. ದಾರಿಯಲ್ಲಿ ಹೋಗುವಾಗ ಸುತ್ತಲಿನ ಸುಂದರ ಪರಿಸರದ ನೋಟ ಎಲ್ಲರ ಗಮನ ಸೆಳೆಯಿತು. ಸಕಲೇಶಪುರದ ಪರಿಸರ ಅವರನ್ನು ಕೂಡಾ ಮಂತ್ರ ಮುಗ್ದರನ್ನಾಗಿಸಿತು. ಜುಳು ಜುಳು ಎಂದು ವೈಯಾರದಿಂದ ಬಳುಕಿ ಹರಿವ ಹೇಮಾವತಿ ನದಿ. ಎತ್ತ ನೋಡಿದರೂ ಬೆಟ್ಟ ಗುಡ್ಡಗಳ ಸಾಲು. ಪ್ರಕೃತಿ ಮಾತೆ ಹಸಿರು ಸೀರೆ ಉಟ್ಟು ಕಂಗೊಳಿಸುವಂತೆ ಕಾಣುತ್ತಿತ್ತು ಸುತ್ತಲಿನ ದಟ್ಟ ಹಸಿರು ಕಾಡುಗಳು. ನದಿಯ ಇಕ್ಕೆಲಗಳಲ್ಲಿ ಹಸಿರು ಹೊದ್ದ ಭತ್ತದ ಗದ್ದೆಗಳು. ಅಲ್ಲಲ್ಲಿ ಕಂಪು ಬೀರುವ ಹೂ ಬಿಟ್ಟ ಸುಂದರವಾದ ಸಣ್ಣ ದೊಡ್ಡ ಕಾಫಿ ತೋಟಗಳು ನೋಡಲು ಮನೋಹರವಾಗಿತ್ತು. ರಸ್ತೆಯ ಅಕ್ಕ ಪಕ್ಕದಲ್ಲಿ ಸಣ್ಣದಾದ ನೀರಿನ ತೊರೆಗಳು ಹರಿಯುತ್ತಿದ್ದವು. ಅವರು ಪ್ರಯಾಣಿಸುತ್ತಿದ್ದ ಜೀಪಿನ ಮೇಲಿಂದ ಸುಂದರವಾದ ನವಿಲೊಂದು ಹಾರಿ ಹೋಯ್ತು. ಸುಮತಿ ಅದರ ಅಂದವನ್ನು ಕಂಡು ಬೆರಗಾಗಿ ಅಕ್ಕನ ಭುಜ ಹಿಡಿದು ” ನೋಡು ಅಕ್ಕಾ …. ಎಷ್ಟು ಸುಂದರ ನವಿಲು”… ಎಂದಳು. ಅವಳ ತಮ್ಮಂದಿರು ಕೂಡಾ ಬೆರಗಾಗಿ ನವಿಲನ್ನು ನೋಡಿದರು. ಕೆಂಬೂತವೊಂದು (ಮಲೆನಾಡಿನಲ್ಲಿ ಕಾಣ ಸಿಗುವ ಒಂದು ಜಾತಿಯ ಕಾಗೆಗಿಂತ ಸ್ವಲ್ಪ ದೊಡ್ಡ ಪಕ್ಷಿ) ತನ್ನ ಕೆಂಪಗಿನ ಕಣ್ಣು ಬಿಟ್ಟು ಆಚೀಚೆ ನೋಡುತ್ತಾ ವೈಯಾರದಿಂದ ಗುಂಪಾಗಿ ಬೆಳೆದಿದ್ದ ಕಾಡುಗಿಡಗಳ ನಡುವೆ ನುಸುಳಿ ಮರೆಯಾಯಿತು. ಜೀಪು ನಿಧಾನವಾಗಿ ಹೋಗುತ್ತಾ ಇರುವುದರಿಂದ ಸುತ್ತ ಮುತ್ತ ನೋಡಲು ಅನುಕೂಲವಾಗಿತ್ತು.
ಬೇಸಿಗೆಯಾದರೂ ತಂಪಾದ ವಾತಾವರಣ. ಹಗಲಲ್ಲಿ ಸೆಕೆ ಇದ್ದರೂ ಕೇರಳದಷ್ಟು ಸೆಕೆ ಅನಿಸಲಿಲ್ಲ. ಸುಮತಿ ಮೊದಲೇ ಪರಿಸರ ಪ್ರೇಮಿ. ತನ್ನ ನೋವನ್ನು ಗಿಡ ಬಳ್ಳಿಗಳ ಜೊತೆ ಹಂಚಿಕೊಂಡಳು. ಪತ್ತನಮ್ ತಿಟ್ಟದಲ್ಲಿ ಇರುವಾಗ
ಅಪ್ಪ ಅಮ್ಮನ ಜೊತೆ ಹೊರಗೆ ಹೋಗುತ್ತಾ ಇದ್ದ ನೆನಪಾಯಿತು ಸುಮತಿಗೆ. ಈಗ ಅಮ್ಮ ಜೊತೆ ಇದ್ದಿದ್ದರೆ ಎಂದು ಅನಿಸದೇ ಇರಲಿಲ್ಲ ಅವಳಿಗೆ. ಅಮ್ಮನ ನೆನಪು ಬಂದ ಕೂಡಲೇ ಅವಳ ಕಣ್ಣು ಮಂಜಾಯಿತು. ಮಲೆನಾಡಿನ ತಿರುವುಗಳಿಂದ ಕೂಡಿದ ರಸ್ತೆಗಳ ಪ್ರಯಾಣ ಮಕ್ಕಳಿಗೆ ಮೋಜೆನಿಸಿತು. ಅತ್ತಿಂದ ಇತ್ತ ಓಲಾಡುತ್ತಾ ಜೀಪು ಸಾಗುತ್ತಿದ್ದರೆ ಒಬ್ಬರನ್ನೊಬ್ಬರು ಭದ್ರವಾಗಿ ಹಿಡಿದು ಕುಳಿತಿದ್ದರು. ರಸ್ತೆಯ ಎರಡೂ ಕಡೆಗಳಲ್ಲಿ ಹಚ್ಚ ಹಸಿರು ಕಾಡುಗಳು ಹಾಗೂ ಕಾಫಿ ತೋಟ ವಾತಾವರಣವನ್ನು ತಂಪು ಮಾಡಿತ್ತು. ಕೆಲವೆಡೆಯಂತೂ ಸೂರ್ಯನ ಬೆಳಕು ಬೀಳುತ್ತಲೇ ಇರಲಿಲ್ಲ. ಜೀಪಿನ ಸದ್ದು ಬಿಟ್ಟರೆ ಆಗಾಗ ಕೆಲವು ಲಾರಿಗಳು ಹಾಗೂ ಸರಕಾರಿ ಬಸ್ಸುಗಳು ಓಡಾಡುವ ಶಬ್ಧ . ತಿರುವುಗಳಲ್ಲಿ ವಾಹನಗಳು ಬರುವಾಗ ಜೀಪು ಪಕ್ಕಕ್ಕೆ ಸರಿದರೆ ಮಕ್ಕಳು ಹೆದರುತ್ತಿದ್ದರು. ಏಕೆಂದರೆ ಕೆಳಗೆ ನೋಡಿದರೆ ದೊಡ್ಡ ಪ್ರಪಾತಗಳು ರಸ್ತೆಯ ಪಕ್ಕದಲ್ಲಿ ಇದ್ದವು. ನೀರು ಹರಿಯುವುದು ಕಾಣದಿದ್ದರೂ ಜುಳು ಜುಳು ಶಬ್ಧ ಕೇಳಿ ಬರುತ್ತಿತ್ತು. ಅಲ್ಲಲ್ಲಿ ತೊರೆ ಝರಿಗಳು ಮನೋಹರ ಕಾಡು ಹೂಗಳು ಕಣ್ಣಿಗೆ ಮುದ ನೀಡುತ್ತಿದ್ದವು.
ಅಲ್ಲಲ್ಲಿ ಹಾರಾಡುವ ಬಣ್ಣಬಣ್ಣದ ಪಕ್ಷಿಗಳು ಹಳದಿ ಕೇಸರಿ ಬಿಳಿ ಹಸಿರು ಕಂದು ಅತೀ ಪುಟ್ಟ ಹಕ್ಕಿಗಳಿಂದ ಹಿಡಿದು ದೊಡ್ಡ ಹಕ್ಕಿಗಳು ಹಾರುವುದನ್ನು ನೋಡುವುದೇ ಮಕ್ಕಳಿಗೆ ಸಂತಸ. ದಾರಿಯುದ್ದಕ್ಕೂ ಸುಂದರ ದೃಶ್ಯಗಳನ್ನು ನೋಡುತ್ತಾ ದಾರಿ ಸಾಗಿದ್ದೇ ಮಕ್ಕಳಿಗೆ ತಿಳಿಯಲಿಲ್ಲ. ಸಕಲೇಶಪುರದಿಂದ 12 ಕಿಲೋಮೀಟರ್ ದೂರದಲ್ಲಿ ಇರುವ ತೋಟದ ಗೇಟಿನ ಮುಂದೆ ಜೀಪ್ ನಿಂತಿತು.
ದೊಡ್ಡ ಎತ್ತರವಾದ ಗೇಟ್ ಪಕ್ಕದಲ್ಲಿ ಕಾವಲುಗಾರ ನಿಂತಿದ್ದ.
ಜೀಪ್ ಬಂದು ನಿಂತಿದ್ದು ನೋಡಿ ಹತ್ತಿರ ಬಂದು…ಸ್ವಾಮಿ ಯಾರು ನೀವು? ಯಾರನ್ನು ನೋಡಬೇಕಿತ್ತು”…. ಎಂದು ಕನ್ನಡದಲ್ಲಿ ಕೇಳಿದ. ನಾಣುವಿಗೆ ಕನ್ನಡ ಮಾತನಾಡಲು ಬಾರದೇ ಇದ್ದ ಕಾರಣ ತೋಟವನ್ನು ತೋರಿಸಲು ಜೊತೆಗೆ ಬಂದಿದ್ದ ಬ್ರೋಕರನ್ನು ಪ್ರಶ್ನಾರ್ಕವಾಗಿ ನೋಡಿದರು. ಅವರು ಜೀಪಿಂದ ಇಳಿದು ಒಳಗೆ ಕುಳಿತಿರುವ ಎಲ್ಲರೂ ಕೇರಳದಿಂದ ಈ ತೋಟದ ಮಾಲೀಕರನ್ನು ಹಾಗೂ ತೋಟವನ್ನು ನೋಡಲು ಬಂದವರು ಎಂದು ಹೇಳಲು ಕಾವಲುಗಾರ ಗೇಟನ್ನು ತೆರೆದ. ದೊಡ್ಡದಾದ ಗೇಟ್ ಕಿರ್ರ್ ಎನ್ನುವ ಶಬ್ದದೊಂದಿಗೆ ತೆರೆದುಕೊಂಡಿತು. ಜೀಪು ಒಳ ಪ್ರವೇಶಿಸಲು ಮತ್ತೆ ಗೇಟನ್ನು ಕಾವಲುಗಾರ ಮುಚ್ಚಿದ. ತೋಟದ ಒಳಗೆ ಹೋಗುವ ದಾರಿ ಬಹಳ ಸುಂದರವಾಗಿತ್ತು. ದಾರಿಯ ಎಡಬಲವು ಸುಂದರವಾದ ವರ್ಣರಂಜಿತ ಗಿಡಗಳಿಂದ ಕೂಡಿದ್ದು ತೋಟಕ್ಕೆ ವಿಶೇಷ ಶೋಭೆಯನ್ನು ತಂದಿತ್ತು. ಅದಾಗಲೇ ಬೇಸಿಗೆಯ ಮಳೆ ಬಂದಿದ್ದರಿಂದ ಕಾಫಿ ಗಿಡಗಳು ಪರಿಮಳ ಭರಿತ ಹೂಗಳನ್ನು ಬಿಟ್ಟು ಕಂಗೊಳಿಸುತ್ತಿದ್ದವು. ಗಿಡಗಳ ರೆಂಬೆಗಳ ಮೇಲೆ ಮಲ್ಲಿಗೆ ಮಾಲೆ ಪೋಣಿಸಿ ಇಟ್ಟಂತೆ ಕಾಣುತ್ತಾ ಇದ್ದವು ಕಾಫಿ ಹೂವುಗಳು. ಹೂಗಳ ಮೇಲೆ ಜೇನು ಹೀರಲು ಹಲವು ಜಾತಿಯ ಜೇನು ನೊಣಗಳು ಹಾರಾಡುತ್ತಿದ್ದವು. ಮಕ್ಕಳು ಮೊದಲಬಾರಿ ಕಾಫಿ ಗಿಡಗಳನ್ನು ನೋಡುತ್ತಾ ಇರುವುದರಿಂದ ಕಣ್ಣರಳಿಸಿ ರೆಪ್ಪೆ ಮಿಟುಕಿಸದೆ ನೋಡುತ್ತಾ ಕುಳಿತಿದ್ದರು. ಜೊತೆಗೆ ರಸ ಭರಿತ ಕಿತ್ತಳೆ ಹಣ್ಣಿನ ಗಿಡಗಳು ಹಣ್ಣಿನ ಭಾರಕ್ಕೆ ಬಾಗಿ ನೆಲಕ್ಕೆ ತಾಗುವಂತೆ ಇದ್ದವು. ಹಸಿರು ಗಿಡದಲ್ಲಿ ಕೆಲವು ಕಾಯಿ ಕಿತ್ತಳೆ ಮತ್ತು ಆಗತಾನೆ ಹಣ್ಣಾಗ ತೊಡಗಿದ್ದ ಕಾಯಿಗಳು ಸ್ವಲ್ಪ ಕೇಸರಿ ಬಣ್ಣಕ್ಕೆ ತಿರುಗಿದ್ದವು. ಕೆಲವು ಕಳಿತು ಹಣ್ಣಾಗಿ ಗಾಢ ಕೇಸರಿ ಬಣ್ಣಕ್ಕೆ ತಿರುಗಿದ್ದವು.
ಕೆಲವು ಹಣ್ಣುಗಳನ್ನು ಮಂಗಗಳು ಅರೆ ತಿಂದು ಕೆಳಗೆ ಬೀಳಿಸಿದ್ದವು.
ಸ್ವಲ್ಪ ದೂರ ಕ್ರಮಿಸಿದ ನಂತರ ದೊಡ್ಡದಾದ ಬಂಗಲೆಯ ಮುಂದೆ ಮತ್ತೊಂದು ಸಾಮಾನ್ಯ ದೊಡ್ಡದು ಎನಿಸುವ ಗೇಟು ಕಾಣಿಸಿತು. ಜೀಪಿನ ಸದ್ದು ಕೇಳಿ ಮನೆಯ ಮುಂದಿನ ಹೂತೋಟದಲ್ಲಿ ಕೆಲಸ ಮಾಡುತ್ತಾ ಇದ್ದ ಮಾಲಿ ಬಂದು ಗೇಟು ತೆರೆಯಲು ಜೀಪ್ ಒಳಗೆ ಪ್ರವೇಶಿಸಿ ಅಲ್ಲಿಯೇ ಇದ್ದ ಕಾರ್ ಶೆಡ್ ನಲ್ಲಿ ನಿಂತಿತು. ಬ್ರೋಕರ್ ಕೆಳಗೆ ಇಳಿದು ಮಾಲೀಕರು ಇದ್ದಾರೆಯೇ ಎಂದು ಮಾಲಿಯನ್ನು ಕೇಳಲು ಹೌದು ಎಂಬಂತೆ ತಲೆ ಅಲ್ಲಾಡಿಸಿ ತನ್ನ ಕೆಲಸದಲ್ಲಿ ಮಗ್ನನಾದನು. ಮಕ್ಕಳ ದೃಷ್ಟಿಯನ್ನು ಮನೆಯ ಮುಂದಿನ ಹೂತೋಟ ಬಹುವಾಗಿ ಸೆಳೆಯಿತು. ಅಲ್ಲಿ ಹಲವಾರು ತರಹದ ಹೂವಿನ ಗಿಡಗಳನ್ನು ಕಂಡರು. ಬೇಲಿಯ ಸುತ್ತ ಆವರಿಸಿದ್ದ ಚೀಟಿ (ಬೋಗನ್ವಿಲ್ಲ) ಹೂಗಳು ಅವರಿಗೆ ಹೊಸತು. ಕಾಗದವನ್ನು ಕತ್ತರಿಸಿ ಅಂಟಿಸಿರುವ ಹಾಗೆ ಕಂಡಿತು. ಅವುಗಳಲ್ಲಿ ಹಲವಾರು ಬಣ್ಣದ ಹೂಗಳು ಇದ್ದವು ಬಿಳಿ, ಅಚ್ಚ ಕೆಂಪು, ಗುಲಾಬಿ, ಅಚ್ಚ ಗುಲಾಬಿ,ಹಳದಿ ಬಣ್ಣದ ಚೀಟಿ ಹೂವುಗಳ ಗಿಡಗಳನ್ನು ಹೂತೋಟದ ಮಾಲಿಯು ಅತ್ಯಾಕರ್ಷಕವಾಗಿ ಹಲವಾರು ಬಗೆಯ ಆಕಾರಗಳಲ್ಲಿ ಕತ್ತರಿಸಿದ್ದು ನೋಡಲು ಬಹಳ ಸುಂದರವಾಗಿದ್ದವು. ಹಲವು ಬಣ್ಣದ ಗುಲಾಬಿ ಹೂವಿನ ಗಿಡಗಳು ಇದ್ದವು. ಬಟನ್ ರೋಸ್ ಗಿಡಗಳ ತುಂಬೆಲ್ಲಾ ಹೂವುಗಳು ತುಂಬಿದ್ದವು .ಬಣ್ಣಗಳಂತು ಎಣಿಸಲು ಲೆಕ್ಕ ಬಾರದಷ್ಟು. ದಾಸವಾಳ ಹೂವುಗಳು ಹಲವು ಬಗೆಯವು. ನೋಡುತ್ತಾ ನಿಂತಷ್ಟು ಇನ್ನೂ ನೋಡುತ್ತಾ ಇರಬೇಕು ಅನಿಸುವಷ್ಟು ಆಸೆ ಹುಟ್ಟಿಸಿದವು. ಅಷ್ಟು ಹೊತ್ತಿಗೆ ತೋಟದ ಮಾಲೀಕರು ಬಂದರು. ಅವರು ಒಬ್ಬ ಇಂಗ್ಲೆಂಡ್ ಪ್ರಜೆಯಾಗಿದ್ದರು. ಇಲ್ಲಿ ಬಂದು ಸಾವಿರ ಎಕರೆಯಷ್ಟು ದೊಡ್ಡ ಕಾಡನ್ನು ಒಂದು ಸುಂದರ ಕಾಫಿ ತೋಟವನ್ನಾಗಿ ಮಾರ್ಪಡಿಸಿದ್ದರು. ದೊಡ್ಡದಾದ ನಗುವಿನೊಂದಿಗೆ ನಾರಾಯಣನ್ ರವರನ್ನು ಅಪ್ಪಿಕೊಂಡು ಮಕ್ಕಳ ತೋಳುಗಳನ್ನು ತಟ್ಟುತ್ತಾ ಆ ದೊಡ್ಡ ಬಂಗಲೆಯೊಳಗೆ ಕರೆದುಕೊಂಡು ಹೋದರು.
ರುಕ್ಮಿಣಿ ನಾಯರ್
ಕೇರಳ ಮೂಲದವರಾದ ರುಕ್ಮಿಣಿ ನಾಯರ್ (ರುಕ್ಮಿಣಿ ಎ.ವಿ),ಹುಟ್ಟಿದ್ದುಹಾಸನ ಜಿಲ್ಲೆಯ ಸಕಲೇಶಪುರದಲ್ಲಿ.ಸುಮತಿ ಪಿ.ಎಸ್. ಮತ್ತು ವೇಲಾಯುಧನ್ ನಾಯರ್ ಅವರ ಎರಡನೆಯ ಮಗಳಾಗಿ.ನಂತರ ಶ್ರೀದರ್ ಬಿ.ಎಂ.ರವನ್ನು ಮದುವೆಯಾಗಿ ಬೆಂಗಳೂರಲ್ಲಿನೆಲೆಸಿದ್ದಾರೆ..ಕೆಲಕಾಲ ಶಿಕ್ಷಕಿಯಾಗಿಕೆಲಸ ಮಾಡಿದವರೀಗ ಪೂರ್ಣಪ್ರಮಾಣದ ಗೃಹಿಣಿಯಾಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪುಸ್ತಕ ಓದುವುದು-ಬರೆಯುವುದು, ಚಿತ್ರ ಬಿಡಿಸುವುದು. ಗಿಡಗಳನ್ನು ಬೆಳೆಸುವುದು ಇವರ ಹವ್ಯಾಸಗಳು