ಬಡಿಗೇರ ಮೌನೇಶ್ ಕವಿತೆ-ಹೊಸವರ್ಷ

ಕಾಲ ನಿಲ್ಲದೆ ಯಾರಿಗೂ ಕಾಯದೆ
ಮತ್ತೊಮ್ಮೆ ಬಂತು ಹೊವರ್ಷ
ಎಲ್ಲೆಲ್ಲೂ ಸಡಗರ
ಪಟಾಕಿ,ಸಿಡಿಮದ್ದುಗಳ ಸಂಭ್ರಮ
ಕತ್ತಲೆಯ ನುಂಗುವಷ್ಟು
ಮತಾಪು ಬೆಳಕು

ಎಲ್ಲೆಡೆ ಕೈಗೆ ಕೈಕುಲುಕಿ
ಶುಭಾಶಯಗಳ ಮಹಾಪೂರ
ಭರಪೂರ ವಿನಿಮಯ
‘ವಿಶ್ ಯು ಹ್ಯಾಪಿ ನ್ಯೂ ಇಯರ್’
ಮುಗಿಲು ಮುಟ್ಟಿತ್ತು
ಹರೆಯದ ಹುಚ್ಚುಕೋಡಿ
ಮನಸುಗಳ ಕೂಗು

ಬೆಳಗಾಯಿತು ಎಂದಿನಂತೆ
ಎಲ್ಲೆಡೆ ಹೊಸವರ್ಷಾಚರಣೆಯ
ಗುಣಗಾನ,ಸಂಭ್ರಮದ ಹೊಸತಾನ
ಜೊತೆಜೊತೆಗೆ
ಹಸಿರು ಬೆಳೆದು ಹಸಿವು ಕಳೆವ
ರೈತರ ನಿತ್ಯ ಕಾಯಕ,
ಬೆಳೆದ ಬೆಳೆಗೆ ಬೆಲೆ ಸಿಗದೆ ಪರದಾಟ
ಗುಡಿ ಗುಂಡಾರ
ಮದುವೆ ಛತ್ರಗಳಲಿ
ಎಂಜಲೆಲೆಗಾಗಿ ಕಾದು ಕುಳಿತ
ಮಕ್ಕಳ ಹಸಿವಿನ ಆಕ್ರಂದನ

ಗಂಡನ ಕಿರುಕುಳಕ್ಕೆ ಬಲಿಯಾದ
ಹೆಣ್ಣಿನ ಗೋಳು
ಜನಾಂಗೀಯ ದ್ವೇಷಕ್ಕೆ, ಗಡಿ ತಂಟೆಗೆ,
ರಾಷ್ಟ್ರಸೇವೆಗೆ ಹೋರಾಡಿ
ವೀರಸ್ವರ್ಗ ಸೇರಿದ ಯೋಧರ
ಪರಿವಾರದ ಅಳಲು
ಮದ್ದು ಗುಂಡಿನ ಸ್ಫೋಟಕ್ಕೆ
ಬಲಿಯಾದ ಅಮಾಯಕರ ಸಾವು,
ಅತ್ಯಾಚಾರಕ್ಕೆ ಒಳಗಾದ
ಹೆಣ್ಣಿನ ಆಕ್ರಂದನ
ಹಾಗೇ ಬಿತ್ತರವಾಗಿದ್ದವು
ಎಂದಿನಂತೆ ಟಿ.ವಿ., ಪತ್ರಿಕೆಗಳಲ್ಲಿ

ಹಳೆ ಬದುಕು ಹೊಸದಾಗದಿದ್ದ ಮೇಲೆ
ಕತ್ತಲೆ ಕಳೆದು ಬೆಳಕು ಮೂಡದಿದ್ದ ಮೇಲೆ
ಹೊಸವರ್ಷ ಬಂದರೇನು? ಹೋದರೇನು?.


5 thoughts on “ಬಡಿಗೇರ ಮೌನೇಶ್ ಕವಿತೆ-ಹೊಸವರ್ಷ

Leave a Reply

Back To Top