ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ-
ನೆನಪುಗಳ ಬ್ಯಾಂಕ್
ನೆನಪುಗಳ ಬ್ಯಾಂಕಿನಲ್ಲಿ
ನಿನದೊಂದು ಖಾತೆ ತೆರೆದಿರುವೆ
ಪ್ರತಿ ದಿನವೂ ಇಂತಿಷ್ಟೆಂದು
ಭಾವನೆಗಳ ಜಮಾಯಿಸುತಿರುವೆ
ಹಲವು ವರುಷ ಕಳೆದರೂ
ಅದು ಶೂನ್ಯ ಖಾತೆಯಾಗಲಿಲ್ಲ
ಸಮಯದ ಅಭಾವವಾದರೂ
ವ್ಯವಹಾರ ನಿಲ್ಲಿಸಲಾಗಲಿಲ್ಲ
ಸಂತಸದ ದಿನವೇ ಇರಲಿ
ಆಯಾಸದ ಹಗಲೇ ಇರಲಿ
ಸುಖ ನಿದ್ರೆಯ ರಾತ್ರಿಯೇ ಇರಲಿ
ಚಿಂತೆಗಳ ರಾಶಿಯೇ ಇರಲಿ
ಒಮ್ಮೆಯಾದರೂ ನಿನ್ಹೆಸರು ಉಸುರುವೆ
ನೆನಪಿನ ಖಾತೆಗೆ ಕೆಲ ಕ್ಷಣಗಳ ಸೇರಿಸುವೆ
ಬಡ್ಡಿಯಂತೆ ನೆಮ್ಮದಿ ಪಡೆಯುತಿರುವೆ
ಲಾಭದಂತೆ ಆನಂದ ಅನುಭವಿಸುತಿರುವೆ
ನೆನಪುಗಳ ಬ್ಯಾಂಕಿನಲಿ
ನಿನದೊಂದು ಖಾತೆ ತೆರೆದಿರುವೆ
ಉಸಿರಿರುವವರೆಗೂ ನಿನ್ನೊಂದಿಗಿರಲು
ಒಲವಿನಾಸರೆ ಪಡೆದಿರುವೆ
ವಾಣಿ ಯಡಹಳ್ಳಿಮಠ