ನಾಗರಾಜ ಹರಪನಹಳ್ಳಿ,ನಿಮಗೆ ಬೇಕಿಲ್ಲ ವೀಸಾ

ಹಾರುತ್ತಿರಿ ಹಕ್ಕಿಗಳೇ
ನಿಮಗೆ ಬೇಕಿಲ್ಲ ವೀಸಾ
ದೇಶ ದೇಶಗಳ ದಾಟಲು
ನಮ್ಮೂರ ನದಿ ದಂಡೆಯ
ಹಳೆಯ ಮರದ ತುದಿಗೆ ಗೂಡು ಕಟ್ಟಲು
ಬೇಕಿಲ್ಲ ನಗರಾಭಿವೃದ್ದಿ ನಿಗಮದ ಅನುಮತಿ

ಹಾರುತ್ತಿರಿ ಹಕ್ಕಿಗಳೇ
ಮುಗಿಲ ಕಡೆಗೆ ನೆಲದ ಕಡೆಗೆ
ಹಳ್ಳಕೊಳ್ಳಗಳ ಕಡೆಗೆ
ಕಟ್ಟು ಪಾಡುಗಳಿಲ್ಲ ಸಂಪ್ರದಾಯದ ಗಡಿರೇಖೆಗಳಿಲ್ಲ
ನಾನು ನನ್ನದೆಂಬ ಎತ್ತರದ ಗೋಡೆ ಬೇಲಿಗಳಿಲ್ಲ

ಹಾರುತ್ತಿರಿ ಹಕ್ಕಿಗಳೇ ರಂಗನತಿಟ್ಟಿಗೆ
ನ್ಯೂಜಿಲ್ಯಾಂಡ್ ನಿಂದ ನೇತ್ರಾಣಿ ದ್ವೀಪಕೆ
ಹೆಜ್ಜೆಮೂಡದ ಹಾದಿಯಲಿ
ಹಂಚುತಿರಿ ಸ್ನೇಹದ ಸಿಂಚನವ
ನಿಮ್ಮನ್ನ ಯಾರು ತಡೆಯುವುದಿಲ್ಲ
ಪಾಸ್ ಪೋರ್ಟ್ ಲೈಸೆನ್ಸ ಕೇಳುವುದಿಲ್ಲ

ಹಾರುತ್ತಿರಿ ಹಕ್ಕಿಗಳೇ
ದೇಶ ದೇಶಗಳ ಭಾಷೆ ಬೆಸೆದು ಬಿಡಿ
ಮುಳುಗುತ್ತಿರುವ ದೇಶಕೆ ಸ್ನೇಹದ ಹಸ್ತವ ಚಾಚಿ
ಹಸಿದ ಗಡಿಗಳಿಗೆ ಹಂಚಿ ಬಿಡಿ ಅನ್ನವ
ಗುಂಡಿನ ಸದ್ದಿನ ಕಣಿವೆಗಳಿಗೆ
ಚೆಲ್ಲಿಬಿಡಿ ಶಾಂತಿಯ ಕಾಳ
ಹಾರುತ್ತಿರಿ ಹಕ್ಕಿಗಳೇ
ನಿಲ್ಲದಿರಿ ಎಲ್ಲೂ ಮನುಷ್ಯರ ಗೋರಿಗಳ ಕಂಡು

—————————————-

Leave a Reply

Back To Top