ಕಾವ್ಯ ಸಂಗಾತಿ
ಭಾರತಿ ಅಶೋಕ್
ಮಾರಾಟವಾಗದ ವಸ್ತುಗಳು
ನನ್ನದೊಂದು “ಗುಜರಿ”ಅಂಗಡಿ
ಮಾರಾಟವಾಗದ “ಯ್ಯಾಂಟಿಕ್”
ವಸ್ತುಗಳು ಹಾಗೆ ಉಳಿದಿವೆ.
ದೊರೆಯುವ ವಸ್ತುಗಳ ಪಟ್ಟಿ
ಹೀಗಿದೆ ; ಅತೀ ಪುರಾತನ
ಕಲಾವಿದರು ಸೂಕ್ಷ್ಮ ಕುಸುರಿ
ಮಾಡಿದ “ನಂಬಿಕೆ”
ಜಾಯಮಾನ ಕಾಪಿಟ್ಟ “ವಿಶ್ವಾಸ”
ನಿಸ್ವಾರ್ಥ ಪ್ರೇಮ,
ಒಳ ಒಪ್ಪಂದಗಳಿಲ್ಲದ
ನಿರ್ಮಲ ಸಂಬಂಧಗಳು,
ಸರ್ವಸ್ವವನೇ ಬಚ್ಚಿಟ್ಟ “ವಾತ್ಸಲ್ಯ”
ವಂಚನೆ ರಹಿತ ಪ್ರೀತಿ,
ದ್ವೇಷ, ಅಸೂಯೆ, ಕಪಟ,
ದ್ರೋಹವಿರದ “ಅನುಬಂಧಗಳು”
ವಿಕಾರವಿರದ ಪೆಟ್ಟಿಗೆಯಲ್ಲಿ
ಭದ್ರವಾಗಿರಿಸಿಹೆ. ಬೆಲೆ
ನೀವು ಕೇಳಿದಷ್ಟು. ಬೇಕಾದರೆ
ಹೋಲ್ ಸೇಲ್, ರೀಟೇಲ್ ,
ಸಂಪರ್ಕಿಸಿರಿ.ಕೇರ್ ಆಫ್
ಯ್ಯಂಟಿಕ್ ಪೀಸ್. ವಿ ಸೂ
“ನೆಮ್ಮದಿಗೆ” ಬೆಲೆಯಿಲ್ಲ
ಅದನ್ನು ಬೇಕಾದರೆ ಹಾಗೆ
ಒಯ್ಯಬಹುದು….
ಭಾರತಿ ಅಶೋಕ್