ಅವರು ಆರಾಮವಾಗಿ ಕುಳಿತು ಊಟ ಮಾಡುತ್ತಿದ್ದಾರೆ. ಹೊಟ್ಟೆಯ ಹಸಿವು ತೀರಿತೆಂಬ ತೃಪ್ತಿ ಅವರಿಗೆ. ಊಟ ಬಡಿಸಿದೆವೆಂಬ ಆತ್ಮ ತೃಪ್ತಿ ಅಂಗಡಿಯ ಮಾಲಿಕರಿಗೆ.

ಈ ಮೇಲಿನ ಸನ್ನಿವೇಶ ಆಗಾಗ ನಾವು ಅನುಭವಿಸುತ್ತೆವೆ.

ಹೆಂಡತಿ ತವರಿಗೆ ಹೋದರೆ ನಮ್ಮ ಬದುಕು ಅಸ್ತವ್ಯಸ್ತತೆ ಯ ಆಗರವಾಗಿರುತ್ತದೆ. ಮಡದಿಯಿಲ್ಲದ ದಿನಗಳಲ್ಲಿ ಊಟಕ್ಕೂ ಪರದಾಡುವ ದು:ಸ್ಥಿತಿ ಬರುತ್ತದೆ. ದಿನಾಲು ಹೆಂಡತಿ ಆರೈಕೆಯಿಂದ ಮೀನುಗುತ್ತಿದ್ದ ನಾವುಗಳು..!! ಅವಳು ತವರಿಗೆ ಹೋದ ದಿನದಂದು ಮನೆಯ ಕೆಲಸ ಮಾಡದೆ, ಹೇಗೆ ಸಾಮಾನುಗಳು ಬಿದ್ದಿರುತ್ತವೆಯೋ ಹಾಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತವೆ. ಮುಂಜಾನೆಯಾದರೂ ಕಸ ಒಡೆಯದೆ, ರಂಗೋಲಿ ಹಾಕದೆ, ಕೆಲವು ಸಲ ರಾತ್ರಿ ಹಾಸಿದ ಹಾಸಿಗೆಯಲ್ಲಿಯೇ ಹೊರಳಾಡುತ್ತಾ, ಸೋಮಾರಿತನದ ಪರಮಾನಂದವನ್ನು ಅನುಭವಿಸುವ ನಮ್ಮಂತಹ ಪುರುಷರ ಆಲಸ್ಯತನಕ್ಕೆ ಸಾಕಷ್ಟು ಸಲ ನಾವು ಉದಾಹರಣೆಯಾಗುತ್ತೇವೆ.

ದಿನಾಲು ಇದ್ದಲ್ಲಿಗೆ ಕಾಫಿ, ಟೀ, ಊಟ ಬಂದು ಕೊಡುತ್ತಿದ್ದ ಅವರ ಶ್ರಮ ಮೈ ಮರೆತು ಹೇಗೆ ಬೇಕೋ ಹಾಗೇ ಅವರಿಗೆ ಗದರಿಸುತ್ತೇವೆ. ಯಾವ ಬಗ್ಗೆಯೂ ಅವರಿಗೆ ನಾವು ಕನಿಕರ ಪಡುವುದಿಲ್ಲ. ಅವರ ನಿಜವಾದ ಶ್ರಮ ಅರ್ಥವಾಗುವುದು ಅವರ ತವರೂರಿಗೆ ಹೋದಾಗಲೇ..!!

ಆ ಸಮಯದಲ್ಲಿ ಹಸಿವಿನಿಂದ ಚುರುಗುಡುವ ಹೊಟ್ಟೆಯು ಮೆದುಳಿನೊಂದಿಗೆ ಜಗಳವಾಡುತ್ತದೆ. ನಾಟ್ಯ ಮಾಡುತ್ತವೆ. ಆಗ ಹೊಟ್ಟೆ ತುಂಬಿಸಲು ನಮಗೆ ತಟ್ಟನೆ ನೆನಪಾಗುವ ಭೋಜನಾಲಯಗಳು ಅರ್ಥಾತ್‌ ಖಾನಾವಳಿಗಳು…!!

ದುಡ್ಡು ಇರುತ್ತದೆ. ಆದರೆ ಅಡುಗೆ ಮಾಡಿಕೊಂಡು ಉಣ್ಣುವ ಶ್ರಮ, ಮುಸುರಿ ತಿಕ್ಕುವ, ಶ್ರಮದ ಬೆವರಿನ ಕೆಲಸ ನಮಗೆ ಬೇಡವಾಗಿರುತ್ತದೆ. ಇಂತಹ ಸಮಯದಲ್ಲಿ ನಮ್ಮ ಕಷ್ಟಗಳಿಗೆ ನೆರವಾಗುವ ಅನ್ನದಾತರು ಅರ್ಥಾತ್‌ ಹಸಿವನ್ನು ತಣಿಸುವ ಖಾನಾವಳಿಗಳು..!!

ಖಾನಾವಳಿಗಳೆಂದರೆ ಮದುವೆಯಾಗದ ಬ್ರಹ್ಮಚಾರಿಗಳಿಗೆ, ಮದುವೆಯಾಗಿಯೂ ಹೆಂಡತಿಗೆ ತವರಿಗೆ ಕಳಿಸಿದ ಸಂಸಾರಿಗಳಿಗೆ ಈ ಖಾನಾವಳಿಗೆ ಆಧಾರ. ಸರಿಯಾದ ಸಮಯಕ್ಕನುಗುಣವಾಗಿ ಪ್ರಾರಂಭವಾಗುವ ಖಾನಾವಳಿಗಳು ಸಮಯಕ್ಕೆ ಸರಿಯಾಗಿ ಹೋದರೆ, ಬಗೆ ಬಗೆಯ ಭಕ್ಷ್ಯ ಭೋಜನಗಳು ನಮಗಾಗಿ ಕಾದಿರುತ್ತವೆ. ನಾವು ಹೊಟ್ಟೆ ತುಂಬ ಊಟ ಮಾಡಿ ನಂತರ ಬಿಲ್ಲನ್ನು ಕೊಟ್ಟು ಖುಷಿ ಖುಷಿಯಾಗಿ ನಗುತ್ತಾ ಬರುತ್ತೇವೆ. ನಮ್ಮ ಈ ಖುಷಿಗೆ ಕಾರಣವಾದ ಖಾನಾವಳಿ ಮಾಲೀಕರ ಕಷ್ಟಗಳು ಹತ್ತು ಹಲವಾರು. ಆದರೂ “ಉದ್ಯೋಗಂ ಮನುಷ್ಯ( ಪುರುಷ) ಲಕ್ಷಣಂ” ಎನ್ನುವ ಮಾತಿನಂತೆ ಯಾವುದಾದರೂ ಉದ್ಯೋಗ ಮಾಡಲೇಬೇಕು ಎನ್ನುವ ಬದುಕಿನ ಅನಿವಾರ್ಯತೆಗೆ ಖನಾವಳಿಯನ್ನು ಸ್ಥಾಪಿಸಿಕೊಂಡಿರುತ್ತಾರೆ. ಹಸಿದು ಬಂದವರಿಗೆ ಹೊಟ್ಟೆ ತುಂಬಿಸಿ ಅವರ ಪ್ರೀತಿಯ ಹಾರೈಕೆಯ ಆಶೀರ್ವಾದವಾದರೂ ನಮ್ಮ ಮಕ್ಕಳಿಗೆ ಒಳ್ಳೆಯ ಬದುಕನ್ನು ಕಟ್ಟಿಕೊಡಲಿ ಎನ್ನುವ ಆಲೋಚನೆ. ನಿಜವಾಗಿಯೂ ಮಾಲೀಕರಿಗೆ ಕಷ್ಟಗಳು ಸಾಕಷ್ಟಿವೆ. ಲೋಕಾಭಿರಾಮವಾಗಿ ಅವರನ್ನು ಮಾತನಾಡಿಸಿದಾಗ, “ಅನಿವಾರ್ಯ ಸರ್ ಬದುಕು ಹೆಂಗ್ ಬರುತ್ತೋ ಹಾಗೆ ಮಾಡಬೇಕು. ಲಾಭ ಅಂತ ಏನು ದೊಡ್ಡದಿಲ್ಲ ಸರ್, ಬರೋಸ್ಟ್ ಬರ್ಲಿ ನಮಗೆ ಗಿರಾಕಿಗಳೇ ದೇವರು ದುಡ್ಡಿಂದು ಆಮೇಲೆ ಮಾತು…” ಎನ್ನುವ ಅವರ ದೊಡ್ಡ ಗುಣ ಮೆಚ್ಚುವಂತಹದ್ದು.

ಇಂದು ಪೈಪೋಟಿಯ ಸ್ಪರ್ಧಾತ್ಮಕ ಯುಗ. ಅದು ಬೆಲೆಗಳು ಗಗನಕ್ಕೆರುವ ಮೇಲಾಟದಲ್ಲಿಯೂ ಕೂಡ ಅವರಿಗೆ ಬೀಳುವ ಹೊಡೆತಗಳು ಒಂದೋ ಎರಡೋ. ದಿನದಿಂದ ದಿನಕ್ಕೆ ಹೆಚ್ಚೆಚ್ಚು ಬೆಲೆ ಗಗನಕ್ಕೆ ಹಾರುವ ಈ ಸಮಯದಲ್ಲಿ ತರಕಾರಿಗಳ ರೇಟುಗಳು, ಹಾಗೆಯೇ ಕಿರಾಣಿ ದಿನಸಿ ಸಾಮಾನುಗಳ ರೇಟ್ ಗಳು, ಆಕಾಶ ಮುಟ್ಟುವಂತೆ ಇರುತ್ತವೆ.

ಇಲ್ಲಿ ಖಾನಾವಳಿಗೆ ಬರುವ ಗಿರಾಕಿಗಳಿಗೂ ಹೊರೆಯಾಗದಂತೆ ಬೆಲೆಯನ್ನು ನಿಗದಿಪಡಿಸಬೇಕು. ತನ್ನ ನಿತ್ಯ ಬದುಕಿನ ಮಾರುಕಟ್ಟೆಯ ವ್ಯವಸ್ಥೆ ಒಳಗಡೆ ಬೆಲೆಯನ್ನು ನಿಗದಿ ಪಡಿಸುವ ಚಡಪಡಿಕೆ ಹೇಳುತೀರದು,

ಆದರೂ

ಅನಿವಾರ್ಯ ಗಿರಾಕಿಗಳನ್ನು ಬಿಡುವಂತಿಲ್ಲ. ಉದ್ಯೋಗಗಳನ್ನು ದೊರೆಯುವಂತಿಲ್ಲ, ಇವೆರಡರ ಮಧ್ಯದಲ್ಲಿ ಅವರು ಬದುಕು ಕಟ್ಟಬೇಕಾಗಿದೆ. ಸಿಗುವ ಸ್ವಚ್ಛವಾದ, ಶುಭ್ರವಾದ ತಾಜಾ ತಾಜಾ ತರಕಾರಿಗಳನ್ನು ತರಬೇಕಾಗುತ್ತದೆ. ರುಚಿಕರವಾದ ಅಡುಗೆಗಳನ್ನು ತಯಾರಿಸಿ ಸಮಯಕ್ಕನುಗುಣವಾಗಿ ಬರುವ ಗಿರಾಕಿಗಳನ್ನು ಸ್ವಾಗತಿಸಿ, ಊಟವನ್ನು ಬಡಿಸಲೇಬೇಕು. ಈ ಕಾರ್ಯಕ್ಕೆ ಒಬ್ಬರಿಂದ ಸಾಧ್ಯವಿಲ್ಲ.

ಖಾನಾವಳಿ ಅಥವಾ ಹೋಟೆಲ್ ನಡೆಸುವುದು ಎಂದರೆ ಕನಿಷ್ಠ ಮೂರರಿಂದ ಐದು ಜನ ಕೆಲಸಗಾರರು ಬೇಕೇ ಬೇಕು. ಅಡುಗೆ ಮಾಡುವ, ಸ್ವಚ್ಛಗೊಳಿಸುವ, ಗಿರಾಕಿಗಳನ್ನು ನಿಭಾಯಿಸುವ, ಗಿರಾಕಿಗಳಿಗೆ ಊಟ ಬಡಿಸುವ…ಹೀಗೆ ಕೆಲಸಗಾರರು ಹೆಚ್ಚು ಹೆಚ್ಚು ಇದ್ದಂತೆ ಎಲ್ಲಾ ಗಿರಾಕಿಗಳ ಸೇವೆ ಸರಿಯಾಗಿ ಮಾಡಲು ಸಾಧ್ಯವಾಗುತ್ತದೆ. ಕೆಲವು ಸಲ ಕೆಲಸಗಾರರು ಮಾಲೀಕರಿಗೆ ಹೇಳದೆ ಕೇಳದೆ ಊರಿಗೆ ಹೋದರಂತೂ ಮಾಲೀಕರೇ ಅಡಿಗೆಯವರೂ ಆಗುತ್ತಾರೆ. ಸ್ವಚ್ಛಗೊಳಿಸುವ ಕೆಲಸದವರೂ ಆಗುತ್ತಾರೆ. ಊಟ ನೀಡುವ ಮಾಣಿಯೂ ಆಗುತ್ತಾರೆ ಇವರೆಲ್ಲರ ಕಾರ್ಯಗಳಿಗೆ ಸದಾ ಜೊತೆಯಾಗಿ ಮಾಲಿಕನೆಂಬ ಹಮ್ಮು ಬಿಮ್ಮಿಲ್ಲದೆ ಆತ ಕೆಲಸಗಾರರೊಡನೆ ಪ್ರೀತಿ ಸ್ನೇಹದಿಂದ ಇರಬೇಕಾಗುತ್ತದೆ. ಒಂದು ವೇಳೆ ದಾಷ್ಟ್ಯತನದ ಉತ್ತರ ಕೊಟ್ಟರೆ ನಾಳೆಯಿಂದಲೇ ಕೆಲಸಗಾರರೇ ಬರುವುದಿಲ್ಲ. ಇದ್ದ ಕೆಲಸಗಾರರು ಹೇಳದೆ ಕೇಳದೆ ಓಡಿ ಹೋಗುತ್ತಾರೆ. ಇವತ್ತಿನ ಪರಸ್ಥಿತಿಯ ಹಾಗಿದೆ.

ಒಂದು ಕಾಲದಲ್ಲಿ ಮಾಲೀಕರೆಂದರೆ ನಮಗೆ “ಅನ್ನ ಹಾಕುವ ಧಣಿ” ಎನ್ನುವ ಪ್ರೀತಿ, ವಿಶ್ವಾಸವಿತ್ತು. ಆದರೆ ಇವತ್ತು “ಸಂಬಳಕ್ಕಾಗಿ ಮಾತ್ರ ಮಾಲೀಕ” ಎನ್ನುವ ವ್ಯಾಪಾರಿ ಬುದ್ಧಿ ಅವರಲ್ಲಿ ಬಂದಿದೆ. ಹಾಗೆಯೇ ಮಾಲೀಕರಾದವರು ತಾವು ಈ ಖಾನಾವಳಿಯ ಮಾಲೀಕರಾದರೂ ಇಲ್ಲಿಯ “ಕೆಲಸ ಮಾಡುವವರು ನನ್ನ ಕುಟುಂಬದ ಸದಸ್ಯರು ಅವರು ಕೆಲಸ ಮಾಡುವುದರಿಂದಲೇ ನನಗೆ ಅಲ್ಪಸ್ವಲ್ಪವಾದರೂ ಜೀವನ ಸಾಗಿಸಲು ಸಾಧ್ಯವಾಗುತ್ತದೆ” ಎನ್ನುವ ಸತ್ಯ ಅವರಿಗೆ ಗೊತ್ತಿದ್ದರೆ ಕೆಲಸಗಾರರನ್ನು ಪ್ರೀತಿಯಿಂದ ಮಾತನಾಡಿಸುತ್ತಾರೆ.

ಖಾನಾವಳಿಗೆ ಹೋಗುವ ಗಿರಾಕಿಗಳು ಅಷ್ಟೇ, ಖಾನಾವಳಿಯವರಿಂದ ಊಟದ ರುಚಿಯನ್ನು ಬಯಸಿದಷ್ಟೇ ಅವರಿಂದ ಸ್ನೇಹ ಪೂರ್ವಕವಾಗಿ, ಸೌಹಾರ್ದಯುತವಾಗಿ, ಸಂಭಾಷಣೆಯ ನಡತೆಯನ್ನು ನಿರೀಕ್ಷೆ ಮಾಡುತ್ತಾರೆ. ಸರಿಯಾದ ಸಮಯಕ್ಕೆ ಸೇವೆ ಮಾಡುವ ಖಾನಾವಳಿಯವರ, ಕೆಲಸಗಾರರು ಕೆಲವು ಸಲ ಗಿರಾಕಿಗಳೊಂದಿಗೆ ಅನುಚಿತವಾಗಿ ವರ್ತಿಸಿದರೆ ಗಿರಾಕಿಗಳಿಗೆ ಕಿರಿಕಿರಿಯಾಗುತ್ತದೆ. ಕೆಲವು ಗಿರಾಕಿಗಳು ಅಷ್ಟೇ ತಮಗನಿಸಿದ್ದನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಾರೆ. ಅವೆಲ್ಲವನ್ನು ಖಾನಾವಳಿಯವರು ಸಹಿಸಿಕೊಳ್ಳಲೇಬೇಕು. ಗಿರಾಕಿಗಳು ಕೊಡುವ ಸಲಹೆ, ಸೂಚನೆಗಳನ್ನು ಸ್ವೀಕರಿಸಿ, ಮುಂದೆ ಆಗಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಗಿರಾಕಿಗಳಿಗೆ ನೀಡಬೇಕು. ಖಾನಾವಳಿ ನಿರಂತರವಾಗಿ ನಡೆಯುವಂತಾಗಲು ಇಂತಹ ಸೌಹಾರ್ದತವಾದ ಸಂಬಂಧ ಮುಖ್ಯ.

ಊಟ ಬಡಿಸುವಾಗ ಕೇವಲ ವ್ಯಾಪಾರ ಎನ್ನುವ ಮನೋಭಾವದಿಂದ ಬಡಿಸದೆ, ಗಿರಾಕಿಗಳು ಕೂಡ ನಮ್ಮ ಮನೆಯವರೆನ್ನುವ ಕಕ್ಕುಲತೆಯಿರಬೇಕು. ಗಿರಾಕಿ ಬಯಸುವ ಆಹಾರವನ್ನು ಅವರಿಗೆ ತೃಪ್ತಿಯಾಗುವವರೆಗೂ ಬಡಿಸಿದಾಗ, ಹೊಟ್ಟೆ ತುಂಬ ಊಟ ಮಾಡಿದವರು, ನಾಲಿಗೆ ತುಂಬಾ ರುಚಿ ಸವಿದವರು ಯಾವತ್ತೂ ಕೂಡ ಹರಸದೆ ಇರಲಾರರು. ಮನಸ್ಸಿನಲ್ಲಾದರೂ ಶುಭ ಹಾರೈಸುತ್ತಾರೆ.

ಖಾನಾವಳಿಯ ಮಾಲೀಕರ, ಕೆಲಸಗಾರರ ಪ್ರೀತಿಯು ಭೋಜನವು ಶುಚಿ, ರುಚಿಯಾಗಿರಲಿ, ಸಾರ್ವಜನಿಕರಾದವರು ನಾವು ಖಾನಾವಳಿರಲಿ, ಸಾರ್ವಜನಿಕ ಸೇವೆ ಮಾಡುವ ಇತರ ಸೇವಾ ಸಂಸ್ಥೆಯಿರಲಿ ಎಲ್ಲರೊಂದಿಗೆ ನಾವು ವಿನಯದಿಂದ ವರ್ತಿಸಬೇಕು. ಏಕೆಂದರೆ ಅವರು ನಮ್ಮಂತೆ ಮನುಷ್ಯರು ಎನ್ನುವ ಮನುಷ್ಯತ್ವ ನಮ್ಮೊಳಗಿರಬೇಕು. ಅವರಿಗೂ ಕಷ್ಟಗಳುಂಟು. ಅದನ್ನು ತಿಳಿದು ಖಾನಾವಳಿಯ ಮಾಲೀಕರ, ಕೆಲಸಗಾರರ ಪ್ರೀತಿಯ ಋಣದಲ್ಲಿ ಇರುವ ನಾವುಗಳು ಅವರನ್ನು ಪ್ರೀತಿಯಿಂದ ಹಾರೈಸೋಣ. ಅವರಿಗೂ ಒಳಿತಾಗಲೆನ್ನುವ ಶುಭ ಹಾರೈಕೆಗಳು ಸದಾ ಇರಲಿ.


One thought on “

  1. ಹಸಿದವರೊಡಲ ತುಂಬಿಸುವವರ ಹಸಿವಿನ ಸಂಕಟಗಳು – ತುಂಬಾ ಅರ್ಥಪೂರ್ಣವಾಗಿ ಮೂಡಿಬಂದಿದೆ. ಖಾನಾವಳಿ ನಡೆಸುವವರ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿರುವಿರಿ. ನಾನೂ ಉದ್ಯೋಗದಲ್ಲಿ ಅನಿವಾರ್ಯ ಪ್ರಸಂಗಗಳಲ್ಲಿ ಅದೆಷ್ಟೋ ಸಾರೆ ಖಾನಾವಳಿ, ಹೊಟೇಲುಗಳಲ್ಲಿ ಊಟಮಾಡಿದ್ದುಂಟು. ಆದರೆ ಸತತವಾಗಿ ಊಟಮಾಡುವ ಖಾನಾವಳಿಗಳು, ಖಾನಾವಳಿಯ ಮಾಲೀಕರು, ಅವರ ಕುಟುಂಬದ ಸದಸ್ಯರು, ಕೆಲಸ ಮಾಡುವ ಜನರೊಡನೆ ಬಹಳಷ್ಟು ಕಡೆಗೆ ಅವಿನಾಭಾವ ಬೆಸುಗೆ ಬೆಳೆಯುತ್ತವೆ. ಈಗಲೂ ಕೆಲವೊಬ್ಬರು ನೆನಪಿನಲ್ಲಿ ಮೊದಲಿನಂತೆಯೇ ಉಳಿದಿದ್ದಾರೆ, ನಾವೂ ಅವರ ಮನಗಳಲ್ಲಿ ಉಳಿದಿದ್ದೇವೆ. ಅವರ ಕುಟುಂಬದ ಸದಸ್ಯರ ಮದುವೆ-ಮುಂಜುವೆಗೆ ಹೋಗಿ ಬಂದಿದ್ದೇವೆ. ಅವರೂ ನಮ್ಮ ಕುಟುಂಬದ ಸಮಾರಂಭಗಳಿಗೆ ಬಂದು ಹೋಗಿದ್ದಿದೆ.
    ಓದುಗರಿಗೆ ಒಂದೊಳ್ಳೆಯ ವಿಷಯದ ಬಗ್ಗೆ ಪ್ರಸ್ತಾಪಿಸಿದ್ದೀರಿ.
    ಅಭಿನಂದನೆಗಳು.

Leave a Reply

Back To Top