ಇದೀಗ ತಾನೇ ಕ್ರಿಸ್ಮಸ್ ಹಬ್ಬವನ್ನು ಮುಗಿಸಿದ ಕ್ರೈಸ್ತ ಬಾಂಧವರು ತಮ್ಮ ದೊಡ್ಡ ಹಬ್ಬ ಮುಗಿಯಿತೆಂದು ಸ್ವಲ್ಪ ಬೇಸರಗೊಂಡರೂ ಹೊಸ ವರ್ಷಕ್ಕೆ ಅಣಿಯಾಗುತ್ತಿದ್ದಾರೆ. ಅದೇ ಮುಸ್ಲಿಂ ಬಾಂಧವರು ಇನ್ನೊಂದೆರಡು ತಿಂಗಳಲ್ಲಿ ರಂಜಾನ್ ತಿಂಗಳ ಬರುವಿಕೆಗಾಗಿ ಸಿದ್ಧತೆಗಳನ್ನು ಬರದಿಂದ ಪ್ರಾರಂಭಿಸಿಕೊಳ್ಳುತ್ತಿದ್ದಾರೆ. ಜಾತಿ, ಮತ, ಧರ್ಮದ ಹೊರತಾಗಿ ಪ್ರಪಂಚದ ಎಲ್ಲಾ ಜನರು ಕೂಡ ಹೊಸ ವರ್ಷದ ಬರುವಿಕೆಗಾಗಿ ಕಾಯುತ್ತಿದ್ದಾರೆ. ಇದು  ಆಂಗ್ಲರ ಹೊಸ ವರ್ಷವೇ ಆದರೂ ಕೂಡ ಹೆಚ್ಚಿನ ಎಲ್ಲಾ ದೇಶಗಳಲ್ಲೂ ಇದನ್ನೇ ಅನುಸರಿಸಲಾಗುತ್ತದೆ. ಆದರೆ ನಡು ನಡುವೆ ಕೊರೋನ ಸ್ವಲ್ಪ ಅಡ್ಡಿ ಉಂಟು ಮಾಡುತ್ತಿದೆ. ನಾನು ಅಲ್ಲಲ್ಲಿ ಇದ್ದೇನೆ ಏನು ಅಂತ ಮುಖವನ್ನು ತೋರಿಸಿಕೊಂಡು ಹಲವಾರು ಜನರ ಜೀವಕ್ಕೆ ಕುತ್ತು ತರುತ್ತಲೇ ಇದೆ. ಈ ಕೊರೊನ ಮಹಾಮಾರಿಯ ನಡುನಡುವಲ್ಲಿ ಹೊಸ ವರ್ಷದ ಆರಂಭಕ್ಕೆ ಸಿದ್ಧತೆಗಳು ಕೂಡ ತಯಾರಾಗಿವೆ. ಕೊರೋನ ಬರಲಿ ಅಥವಾ ಇನ್ನೇನಾದರೂ ಬರಲಿ ಜನ ತಮ್ಮ ಆನಂದದ ಕ್ಷಣವನ್ನು ಮರೆತು ಬಿಡಲು ಅಥವಾ ತ್ಯಜಿಸಲು ತಯಾರಿಲ್ಲ. ಎಂದರೆ ಮಾನವರು ಪ್ರಕೃತಿ ಸಹಜವಾಗಿ ಖುಷಿಯನ್ನು ಅನುಭವಿಸುವ ಜೀವಿಗಳು.

       ಒಂದಾದ ಮೇಲೆ ಒಂದು ಅದರ ನಂತರ ಮತ್ತೊಂದು ಹೊಸ ವರ್ಷ ನಮ್ಮ ಬದುಕಿನಲ್ಲಿ ಬರುತ್ತಲೇ ಇರುತ್ತವೆ. ಪ್ರತಿಯೊಂದು ಹೊಸ ವರುಷತ್ವ ಹೊಸದಾದ ಒಂದೊಂದು ಗುರಿಯನ್ನು ಇಟ್ಟುಕೊಳ್ಳುವುದು ಒಳಿತು. ಈ ವರ್ಷ ನಾನು ಇಂತಹ ಗುರಿಯನ್ನು ಸಾಧಿಸುತ್ತೇನೆ ಎಂದು ಮೊದಲೇ ಬರೆದಿಟ್ಟುಕೊಂಡು ಜನವರಿಯಿಂದ ಡಿಸೆಂಬರ್ ವರೆಗೂ ಆ ಗುರಿಯನ್ನು ಸಾಧಿಸಲು ಅಥವಾ ಯಾವ ತಿಂಗಳಲ್ಲಿ ಸಾಧಿಸಬೇಕು ಆ ತಿಂಗಳಿಗೆ ನಿಖರವಾದ ಗುರಿಯಿಟ್ಟು ಅದನ್ನು ಸಾಧಿಸಿ ಗೆದ್ದಿರಬೇಕು ಇಲ್ಲದಿದ್ದರೆ ಜೀವನದಲ್ಲಿ ಅಂದುಕೊಂಡಂತೆ ಆಗುವುದಿಲ್ಲ. ಯಾವಾಗಲೂ ಇಡುವ ಗುರಿಗಿಂತ ಸ್ವಲ್ಪ ಎತ್ತರದಲ್ಲಿಯೇ ಇರಬೇಕು. ಡಾಕ್ಟರ್ ಎ. ಪಿ. ಜೆ . ಅಬ್ದುಲ್ ಕಲಾಂ  ಅವರು ಹೇಳುವ ಹಾಗೆ ಸಣ್ಣ ಸಣ್ಣ ಗುರಿಗಳು ಗುರಿಗಳೇ ಅಲ್ಲ ಮತ್ತು ಸಣ್ಣ ಸಣ್ಣ ಗುರಿಗಳಲ್ಲಿಟ್ಟುಕೊಂಡವ ಮನುಷ್ಯರು ಆಶಾವಾದಿಗಳಲ್ಲ . ಬದಲಾಗಿ ಜೀವನದ ಗುರಿಯು ತುಂಬಾ ದೊಡ್ಡದಿರಬೇಕು ಮತ್ತು ಆ ಗುರಿಯನ್ನು ಸಾಧಿಸಲು ರಾತ್ರಿ ಮಾತ್ರವಲ್ಲ , ಹಗಲು ಕೂಡ ಕನಸನ್ನು ಕಾಣಬೇಕು ಕನಸು ಕಂಡರೆ ಸಾಲದು , ಆ ಕನಸಿನತ್ತ ಹೋಗಲು ಹಗಲು – ರಾತ್ರಿ ನಿದ್ದೆ ಇಲ್ಲದೆ ಯೋಚಿಸಬೇಕು ಮತ್ತು ಕಾರ್ಯ ಪ್ರವೃತ್ತರಾಗಬೇಕು.  ಆಗ ಮಾತ್ರ ನಾವು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯ ಕಠಿಣ ಪರಿಶ್ರಮವೇ ಸಾಧನೆಯ ಯಶಸ್ಸಿನ ಅಡಿಗಲ್ಲು.

           ಹೊಸ ವರ್ಷ ಬಂತು ಎಂದು ಹೊಸದಾದ ಆಚರಣೆಗೆ ಶುರು ಮಾಡಿ ಒಂದು ವರ್ಷವಿಡಿ ಬದುಕನ್ನು ಯಾವುದೇ ಕನಸುಗಳಿಂದ ಸಿಂಗರಿಸದೆ ಮತ್ತೊಂದು ಹೊಸ ವರ್ಷ ಬರುವವರೆಗೂ ಕಾದು ಅದನ್ನು ಆಚರಿಸುತ್ತಾ ಹೀಗೆ ವರ್ಷದಿಂದ ವರ್ಷದಿಂದ ವರ್ಷ ಕಳೆಯುತ್ತಾ ಹೋದರೆ ಬದುಕಿನಲ್ಲಿ ಯಾವ ಗುರಿಯನ್ನು ಕೂಡಾ ತಲುಪಲು ಸಾಧ್ಯವಿಲ್ಲ. ಬದುಕಿನಲ್ಲಿ ಪ್ರತಿ ವರ್ಷವೂ ವಿಭಿನ್ನವಾಗಿರಬೇಕು ಅದರ ಜೊತೆಗೆ ಪ್ರತಿ ವರ್ಷದಲ್ಲೂ ನಮ್ಮ ಧೈರ್ಯ ಪುಟಗಳಲ್ಲಿ ಬರೆದಿಡುವಂತಹ ಹೊಸ ಹೊಸ ಗುರಿಗಳಲ್ಲಿಟ್ಟುಕೊಂಡು ಅವುಗಳನ್ನು ಸಾಧಿಸಲು ಪ್ರಯತ್ನಿಸಬೇಕು ಕೆಲವೊಮ್ಮೆ ಕೆಲವೊಂದು ಗುರಿಗಳನ್ನು ನಾವು ಸಾಧಿಸಬಹುದು ಇನ್ನು ಕೆಲವೊಮ್ಮೆ ನಮ್ಮ ಗುರಿಗಳು ಗುರಿಗಳಾಗಿಯೇ ಉಳಿದು ಹೋಗುತ್ತವೆ ಅವುಗಳನ್ನು ಮುಂದಿನ ವರ್ಷವಾದರೂ ಸಾಧಿಸುವುದು ನಮ್ಮ ಛಲವಾಗಲೇ ಬೇಕು.
ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧಿಸುವ ಛಲ ಮತ್ತು ಗುರಿ ನಮ್ಮಲ್ಲಿರಬೇಕು ಆಗ ಮಾತ್ರ ಸಾಧನೆಗೆ ಒಲಿಯುತ್ತದೆ ಇಲ್ಲದೆ ಹೋದರೆ ಅವು ಕನಸುಗಳಾಗಿಯೇ ಮನದೊಳಗೆ ಕುಳಿತುಬಿಡುತ್ತವೆ. ಪ್ರಪಂಚದಲ್ಲಿ ಮುಖ್ಯವಾಗಿ ಬದುಕಿಗೆ ಬೇಕಾಗಿರುವುದು ನೆಮ್ಮದಿ ಮತ್ತು ಆರೋಗ್ಯ ಯಾರು ನೆಮ್ಮದಿಯಿಂದ ಆರೋಗ್ಯಯುತವಾಗಿತ್ತು ಬದುಕುತ್ತಾನೆಯೋ ಅವನ ಜೀವನ ಸಂತಸಮಯವಾಗಿಯೂ ಇರುತ್ತದೆ. ನಾವು ನೆಮ್ಮದಿಯನ್ನು ಪಡೆಯುವ ಸಲುವಾಗಿ ಆಸ್ತಿ ಅಂತಸ್ತು ಧನ ಕನಕ ಸಂಬಂಧಗಳ ಮೊರೆ ಹೋಗುತ್ತೇವೆ. ಕೆಲವೊಮ್ಮೆ ಇದು ಯಾವುದರಿಂದಲೂ ನೆಮ್ಮದಿ ಸಿಗದೇ ಒಂಟಿಯಾಗಿ ಬದುಕುವ ನಿರ್ಧಾರ ಮಾಡುತ್ತೇವೆ. ಆಗ ನಮ್ಮ ಧೈರ್ಯವೇ ನಮ್ಮ ಗೆಳೆಯನಾಗುತ್ತದೆ ಮತ್ತು ನಮ್ಮ ಬುದ್ಧಿಯೇ ನಮ್ಮ ಗುರುವಾಗುತ್ತದೆ . ನಾವು ನಡೆದದ್ದೇ ದಾರಿಯಾಗುತ್ತದೆ ಮತ್ತು ನಮ್ಮ ದಾರಿಗೆ ದಾರಿಹೋಕರು ಮತ್ತು ದಾರಿ ತೋರುವವರು ನಾವೇ ಆಗಿರುತ್ತೇವೆ. ಸರಿಯಾದ ದಾರಿಯಲ್ಲಿ ಹೋದವನಿಗೆ ಮಾತ್ರ ತನ್ನ ಗುರಿಯನ್ನು ತಲುಪಲು ಸಾಧ್ಯ ಬೇರೆ ಬೇರೆ ಯಾವುದೋ ದಾರಿಯಲ್ಲಿ ಹೋಗಿ ಗುರಿ ತಲುಪಲು ಸಾಧ್ಯವೇ ಇಲ್ಲ. ಆ ಸರಿಯಾದ ದಾರಿಯನ್ನು ಕಂಡುಕೊಳ್ಳುವ ನಮ್ಮ ಉದಾತ ಕೆಲಸವು ನಮ್ಮಲ್ಲಿ ಇರಬೇಕು. ನಾವು ಸಾಗುತ್ತಿರುವ ದಾರಿಯ ಯಾವುದೋ ಆಗಿದ್ದು ಬದುಕು ನಮ್ಮನ್ನು ಇನ್ನು ಯಾವುದೋ ದಾರಿಯತ್ತಕೊಂಡು ಹೋಗಬಹುದು.  ಅಲ್ಲಿ ನಮಗೆ ಗೆಳೆಯರು ಹಾಗೆಯೇ ಬಂಧುಗಳು ಅಥವಾ ಪರಿಚಯವೇ ಇಲ್ಲದ ಇನ್ಯಾರೋ ಸಹಾಯ ಮಾಡಬಹುದು.          

         ಒಟ್ಟಿನಲ್ಲಿ ಅದ್ಯಾವುದಾದರೂ ಒಳ್ಳೆಯ ದಾರಿಯನ್ನು ಹಿಡಿದು ಬದುಕಿನ ಗುರಿಯನ್ನು ತಲುಪಿದಾಗ ಆನಂದ ಹೊಂದಿ ಬದುಕು ಸರಳವೆನಿಸುತ್ತದೆ . ಆಗ ನಮಗೆ ನಮ್ಮ ಜೀವನದ ಗುರಿ ಮತ್ತು ಉದ್ದೇಶ ಅರ್ಥವಾಗುತ್ತದೆ. ಅದೇ ಜ್ಞಾನದ ಅರಿವು ಇಲ್ಲದೆ ಸಿಕ್ಕಿದಂತೆ ಬದುಕಿ ನಮ್ಮೊಂದಿಗೆ ಬದುಕಿನಲ್ಲಿ ಜೊತೆ ಸೇರಿದವರಿಗೂ ಕಷ್ಟವನ್ನೇ ಕೊಟ್ಟು ಬದುಕಿನಲ್ಲಿ ಯಾವುದೇ ಕನಸುಗಳಿಲ್ಲದೆ ಯಾವುದೇ ಗುರಿಗಳಿಲ್ಲದೆ ಬದುಕುತ್ತಾ ಇತರರಿಗೂ ತೊಂದರೆಯನ್ನು ಕೊಡುತ್ತಾ ಬಾಳಿ ಬದುಕಿದವನ ಬದುಕು ಶೂನ್ಯ ಮತ್ತು ಪ್ರಾಣಿಗಳ ಹಾಗೆ ಅಲ್ಲವೇ? ಪ್ರಾಣಿಗಳಾದರೂ ತಿಂದು ಏನೂ ಇಲ್ಲ ಅಂದರೂ ಗೊಬ್ಬರವನ್ನಾದರೂ ಕೊಡುತ್ತವೆ. ಮಾನವರಿಗಿಂತ ಎಷ್ಟೋ ಮೇಲು ಬಿಡಿ ಅವು. ಪರೋಪಕಾರ, ಪರಹಿಂಸೆ ಕೊಡದೆ ಇರುವಲ್ಲಿ.

        ಮರವು ಕೂಡ ಹುಟ್ಟಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಚಲಿಸದೆ ಇದ್ದರೂ ಸಹ ಹಲವಾರು ಜನರಿಗೆ ಹೂ,  ಹಣ್ಣು,  ನೆರಳು,  ಕಟ್ಟಿಗೆ, ಕಾಯಿ, ಹಾಗೂ ಹಲವಾರು ಪ್ರಾಣಿಗಳಿಗೆ ಮತ್ತು ಪಕ್ಷಿಗಳಿಗೆ ಆಸರೆಯಾಗಿ ಬದುಕುತ್ತದೆ. ಆ ವೃಕ್ಷಕಿಂತಲೂ ಕಡೆ ನಮ್ಮ ಬದುಕು ಎಂದು ಆಗಬಾರದು ಅಲ್ಲವೇ? ಅದಕ್ಕಾಗಿ ಸಾಧನೆ ಬೇಕು ಸಾಧನೆಗಳನ್ನು ದಾಖಲಿಸಿಕೊಳ್ಳಬೇಕು. ಸಾಧನೆಗೆ ಬೆನ್ನ ಹಿಂದೆ ಹತ್ತಿ ಸಾಧಿಸುವುದು ಕೂಡ ಮುಖ್ಯ. ಸಾಧಕನನ್ನು ಯಾರು ಕೂಡಾ ಹಿಡಿಯಲಾರರು. ಸಾಧನೆಯ ಹಿಂದೆ ಹೊರಟವನನ್ನು ಸಾಧನೆಯೂ ಅಪ್ಪಿಕೊಳ್ಳುತ್ತದೆ. ಬದುಕಿನಲ್ಲಿ ಹೆದರಿ ಓಡಿದವನನ್ನು ಸಾವು ಅಪ್ಪಿಕೊಳ್ಳುತ್ತದೆ. ಯಾರ ಅಪ್ಪುಗೆಯಲ್ಲಿ ಬಂಧಿತರಹಾಗಬೇಕು ಎಂಬುದನ್ನು  ನಮ್ಮ ಬದುಕಲ್ಲಿ ನಿರ್ಧರಿಸುವವರು ನಾವೇ.

       ಇಂದು ಇಲ್ಲೇ ಇರುತ್ತೇವೆ ನಾಳೆ ಮತ್ತೆ ಇನ್ನು  ಎಲ್ಲಿಗೋ ಹೋಗುತ್ತೇವೆ. ನಮ್ಮದು ನಿರಂತರ ಪಯಣದ ಬದುಕು. ಬದುಕಿನ ಬಂಡಿಯನ್ನು ಎಳೆಯುತ್ತಿರುವಾಗ ಹಲವಾರು ಜನರು ಹತ್ತಿ ಕೊಳ್ಳುತ್ತಾರೆ ಮತ್ತೆ ಹಲವಾರು ಜನರು ತಮ್ಮ ತಮ್ಮ ನಿಲ್ದಾಣ ಬಂದಾಗ ಇಳಿದುಕೊಳ್ಳುತ್ತಾರೆ. ಆದರೆ ನಮ್ಮ ಬದುಕು ತನ್ನದೇ ಆದ ಗುರಿಯಲ್ಲಿ ಸಾಗುತ್ತಿರುತ್ತದೆ. ಹೀಗೆ ನಮ್ಮ ಬದುಕು ತನ್ನದೇ ಗುರಿಯಲ್ಲಿ ಸಾಗುತ್ತಿರುವಾಗ ಹಲವಾರು ಜನರಿಗೆ ಸಹಾಯ ಹಸ್ತವನ್ನು ಕೂಡ ನೀಡುವಂತಾಗಬೇಕು. ನಾಲ್ಕಾರು ಜನರು ನಮ್ಮ ಹೆಸರನ್ನು ಕರೆದು ನೆನಪಿಟ್ಟುಕೊಳ್ಳುವ ಹಾಗೆ ಆಗಬೇಕು. ಇದನ್ನೆಲ್ಲ ಕನಸು ಕಾಣುವವರು ಮತ್ತು ಆ ಕನಸನ್ನು ನನಸಾಗಿಸುವವರು ನಾವೇ. ಹೊಸ ವರ್ಷಕ್ಕೆ ಹೊಸದಾದ ಕನಸುಗಳು ಬರಲಿ ಆ ಕನಸುಗಳು ಈಡೇರಲಿ ನಮ್ಮ ಕನಸಿನಿಂದ ಹಲವಾರು ಜನರಿಗೆ ಸಹಕಾರ ಸಹಾಯ ಸಿಗಲಿ ಅವರ ಬದುಕಿಗೆ ಅದು ಅಡಿಪಾಯವಾಗಲಿ, ಉತ್ತಮ ಜೀವನನ ಮಗು ಸಿಗಲಿ ಮತ್ತು ನಮ್ಮೊಂದಿಗೆ ಇದ್ದವರಿಗೂ ಸಿಗಲಿ ಎಂಬ ಆಶಾ ಭಾವನೆಯೊಂದಿಗೆ ಸರ್ವರಿಗೂ ಹೊಸ ವರ್ಷದ ಶುಭಾಶಯಗಳನ್ನು ಕೋರುತ್ತೇನೆ. ಇದೀಗಲೇ ಹೊಸ ಗುರಿಯನ್ನು ಹೊಸ ವರ್ಷಕ್ಕೆ ಇಟ್ಟುಕೊಂಡಿದ್ದೀರಲ್ಲ? ನಿಮ್ಮ ಜೀವನದ ಗುರಿಯು ಆದಷ್ಟು ಬೇಗನೆ ನೆರವೇರಲಿ ಎಂದು ನಮ್ಮೆಲ್ಲರ ಪ್ರಾರ್ಥನೆ. ನೀವೇನಂತೀರಿ?

—————————-

Leave a Reply

Back To Top